ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿವ ಸಂಪುಟ ಸಭೆ: ಎತ್ತಿನ ಹೊಳೆ ವೆಚ್ಚ ₹23,251 ಕೋಟಿಗೆ ಏರಿಕೆ

ಪರಿಷ್ಕೃತ ವೆಚ್ಚಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ
Last Updated 8 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ವೆಚ್ಚವನ್ನು ₹23,251.66 ಕೋಟಿಗೆ ಪರಿಷ್ಕರಿಸಿದ್ದು, ಗುರುವಾರ ನಡೆದ ಸಚಿವ ಸಂಪುಟ ಸಭೆ ಪರಿಷ್ಕೃತ ಮೊತ್ತಕ್ಕೆ ಅನುಮೋದನೆ ನೀಡಿದೆ.

ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.

2012 ರಲ್ಲಿ ಯೋಜನೆಯ ಆರಂಭಿಕ ವೆಚ್ಚ ₹8,323.50 ಕೋಟಿ ಇತ್ತು. ಬಳಿಕ ₹12,912.36ಕೋಟಿಗೆ ಪರಿಷ್ಕರಿಸಲಾಗಿತ್ತು. ಯೋಜನೆಯ ವೆಚ್ಚ ಹೆಚ್ಚಳವಾಗಲು ಸಿವಿಲ್‌ ಕಾಮಗಾರಿಗಳ ಸಾಮಗ್ರಿಗಳಾದ ಸಿಮೆಂಟ್‌, ಉಕ್ಕು, ಮರಳು ಮುಂತಾದವುಗಳ ದರ ಹೆಚ್ಚಾಗಿರುವುದು ಒಂದು ಕಾರಣವಾದರೆ, ಭೂಸ್ವಾಧೀನಕ್ಕಾಗಿ ಕೊಡಬೇಕಾದ ಪರಿಹಾರ ಮೊತ್ತವೂ ಮಾರ್ಗಸೂಚಿ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚಾಗಿದೆ. ಇದೇ ಬಹು ದೊಡ್ಡ ಹೊರೆಯಾಗಿದೆ. 2013 ರಲ್ಲಿ ಭೂಸ್ವಾಧೀನ ಕಾಯ್ದೆ ಬಂದ ನಂತರ ಸ್ವಾಧೀನ ವೆಚ್ಚ ಮೂರು ಪಟ್ಟು ಹೆಚ್ಚಾಯಿತು ಎಂದರು.

ಅಲ್ಲದೆ, ದೊಡ್ಡಬಳ್ಳಾಪುರ ಮತ್ತು ಕೊರಟಗೆರೆಗಳಲ್ಲಿ ಭೂಸ್ವಾಧೀನ ವೆಚ್ಚ ವ್ಯತ್ಯಾಸ ಇರುವುದರಿಂದ ಭೂಮಿ ಕೊಡಲುರೈತರು ಒಪ್ಪುತ್ತಿಲ್ಲ. ತಮಗೂ ಅದೇ ಮೊತ್ತ ನೀಡಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ ಎಂದು ಮಾಧುಸ್ವಾಮಿ ಹೇಳಿದರು.

ಯಾವುದೇ ಯೋಜನೆಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸಾಧ್ಯವಾಗದೇ ಇದ್ದರೆ ಯೋಜನಾ ವೆಚ್ಚವೂ ಹೆಚ್ಚಾಗುತ್ತಾ ಹೋಗುತ್ತದೆ. ಅಂದಿನ ಖರ್ಚು–ವೆಚ್ಚಕ್ಕೆ ಅನುಗುಣವಾಗಿ ಪರಿಷ್ಕರಣೆ ಮಾಡಲೇಬೇಕಾಗುತ್ತದೆ. 2013 ರ ಭೂಸ್ವಾಧೀನ ಕಾಯ್ದೆಯ ಪರಿಹಾರವನ್ನು ಕೊಟ್ಟು, ನಾವು ಎಷ್ಟೇ ತ್ವರಿತಗತಿಯಲ್ಲಿ ಕಾರ್ಯ ನಿರ್ವಹಿಸಿದರೂ ಸ್ವಾಧೀನಕ್ಕೆ ಆರರಿಂದ ಏಳು ತಿಂಗಳು ಬೇಕಾಗುತ್ತದೆ. ಇವೆಲ್ಲ ಕಾರಣಗಳಿಂದ ಯೋಜನಾ ವೆಚ್ಚ ಸಹಜವಾಗಿ ಹೆಚ್ಚಾಗುತ್ತದೆ. ಈ ಬಗ್ಗೆ ಸಿದ್ದರಾಮಯ್ಯ, ಯಡಿಯೂರಪ್ಪ, ಕುಮಾರಸ್ವಾಮಿ ಯಾರು ಏನೇ ಮಾತನಾಡಿದರೂ ಅಷ್ಟೇ ಎಂದರು.

6 ಟಿಎಂಸಿ ನೀರು ಸಂಗ್ರಹ ಮಾಡುವ ಜಲಾಶಯ ನಿರ್ಮಾಣಕ್ಕೆ ತೊಡಕು ಉಂಟಾಗಿರುವುದರಿಂದ ರೈತರ ಜತೆ ಮಾತುಕತೆ ಮಾಡುವ ಉದ್ದೇಶ ಸರ್ಕಾರಕ್ಕಿದೆ. ಮಾತುಕತೆಯ ಬಳಿಕವೇ ಜಲಾಶಯ ನಿರ್ಮಾಣದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮಾಧುಸ್ವಾಮಿ ತಿಳಿಸಿದರು.

ಶಾಶ್ವತ ಹಂಚಿಕೆ:

ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳ ದರ್ಜೆ–3 ಮೇಲ್ವಿಚಾರಕ ಸಿಬ್ಬಂದಿ, ದರ್ಜೆ–2 ಮತ್ತು ದರ್ಜೆ–1 (ಕಿರಿಯ ಶ್ರೇಣಿ) ಅಧಿಕಾರಿಗಳನ್ನು ಆಯಾ ಸಾರಿಗೆ ಸಂಸ್ಥೆಗಳಿಗೆ ಶಾಶ್ವತ ಹಂಚಿಕೆ ಮಾಡಿ, ದರ್ಜೆ–1 (ಹಿರಿಯ ಶ್ರೇಣಿ) ಮತ್ತು ಮೇಲ್ಪಟ್ಟ ವೃಂದಗಳ ನಿರ್ವಹಣೆಯನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ ಮುಂದುವರಿಸಲು ತೀರ್ಮಾನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT