ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗೆ ಹೋಗಿ ಸಮಸ್ಯೆ ಬಗೆಹರಿಸಿ: ಸವರಾಜ ಬೊಮ್ಮಾಯಿ ಸೂಚನೆ

ಜಿ.ಪಂ– ಸಿಇಒಗಳ ಕಾರ್ಯ ನಿರ್ವಹಣೆಗೆ ಶ್ರೇಯಾಂಕ: ಮುಖ್ಯಮಂತ್ರಿ ಬೊಮ್ಮಾಯಿ
Last Updated 30 ಡಿಸೆಂಬರ್ 2021, 17:58 IST
ಅಕ್ಷರ ಗಾತ್ರ

ಬೆಂಗಳೂರು: ‘ಜಿಲ್ಲಾ ಪಂಚಾಯಿತಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು(ಸಿಇಒ) ಇನ್ನು ಮುಂದೆ ಹಳ್ಳಿ– ಹಳ್ಳಿಗಳಿಗೂ ಹೋಗಿ ಅಲ್ಲಿನ ಸಮಸ್ಯೆಗಳನ್ನು ತಿಳಿದುಕೊಂಡು ಅಲ್ಲೇ ಬಗೆಹರಿಸಬೇಕು. ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ಭಾವನೆ ತಾಳುವಂತಿಲ್ಲ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾಕೀತು ಮಾಡಿದ್ದಾರೆ.

ವಿಧಾನಸೌಧದಲ್ಲಿ ಗುರುವಾರ ನಡೆದ ಜಿಲ್ಲಾ ಪಂಚಾಯಿತಿಗಳ ಸಿಇಒಗಳ ಸಭೆಯಲ್ಲಿ ಮಾತನಾಡಿ, ಸಿಇಒಗಳು ಹಳ್ಳಿ ಕಡೆಗೆ ಹೆಚ್ಚಿನ ಪ್ರವಾಸ ಮಾಡಬೇಕು. ಇದಕ್ಕೆ ಪೂರಕವಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ ಇಲಾಖೆಯಲ್ಲಿ ಆಮೂಲಾಗ್ರ ಬದಲಾವಣೆ ತರಲು ಉದ್ದೇಶಿಸಿರುವುದಾಗಿ ತಿಳಿಸಿದರು. ಈ ಸಭೆ ಸುಮಾರು ಐದೂವರೆ ತಾಸು ನಡೆಯಿತು.

‘ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಮತ್ತು ಸಿಇಒಗಳ ಕಾರ್ಯ ನಿರ್ವಹಣೆಗೆ ಜಿಲ್ಲಾವಾರು ಶ್ರೇಯಾಂಕ ನೀಡಲಾಗುವುದು. ಜನೋಪಯೋಗಿ ಸರ್ಕಾರ ಆಗಬೇಕಾದರೆ ಜಿಲ್ಲಾ ಪಂಚಾಯಿತಿಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವುದು ಅತಿ ಮುಖ್ಯ. ನಿಮ್ಮ ಜಿಲ್ಲೆಯಲ್ಲಿ ಉತ್ತಮ ಕಾರ್ಯಶೈಲಿಯ ಮೂಲಕ ನಿಮ್ಮದೇ ಛಾಪು ಮೂಡಿಸಿ’ ಎಂದು ಬೊಮ್ಮಾಯಿ ಸಲಹೆ ನೀಡಿದರು.

‘ತಳ ಹಂತದಲ್ಲಿ ಯೋಜನೆಗಳ ಅನುಷ್ಠಾನ ಅತಿಮುಖ್ಯ. ವಿಕೇಂದ್ರೀಕರಣದ ಮೂಲಕ ಹೆಚ್ಚಿನ ಅಧಿಕಾರ ನೀಡಲಾಗಿದೆ. ನಿಮ್ಮ ವಿವೇಚನಾಧಿಕಾರವನ್ನು ಜಾಗರೂಕತೆಯಿಂದ ಜನರ ಹಿತಕ್ಕಾಗಿ ಬಳಕೆ ಮಾಡಬೇಕು. ಬಡವರ ಅನುಕೂಲಕ್ಕಾಗಿ ಅಧಿಕಾರಿಗಳು ಕೈಗೊಳ್ಳುವ ತೀರ್ಮಾನಗಳಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ’ ಎಂದರು.

‘ಅಧಿಕಾರಿಗಳು ಸ್ಪಷ್ಟ ನಿರ್ಣಯ ತೆಗೆದುಕೊಳ್ಳಬೇಕು. ಅನಿಶ್ಚಿತತೆ ಪ್ಲೇಗ್‌ ಇದ್ದಂತೆ. ವಿಳಂಬ ಧೋರಣೆ ಅತ್ಯಂತ ದುಬಾರಿ. ಅಧಿಕಾರಿಗಳ ವಿಳಂಬ ಧೋರಣೆ ಜನರನ್ನು ಸಂಕಷ್ಟಕ್ಕೆ ಈಡು ಮಾಡುತ್ತದೆ. ಜನರ ಸುತ್ತ ಅಭಿವೃದ್ಧಿ ಆಗಬೇಕೇ ಹೊರತು ಅಭಿವೃದ್ಧಿ ಸುತ್ತ ಜನ ಓಡಾಡಬಾರದು. ಜನರು ಹೆಚ್ಚಿನ ಸಂಖ್ಯೆಯಲ್ಲಿ ನಿಮ್ಮ ಹತ್ತಿರ ಬರುತ್ತಾರೆ ಎಂದರೆ ತಳಹಂತದಲ್ಲಿ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದೇ ಅರ್ಥ ಮಾಡಿಕೊಳ್ಳಬೇಕಾಗುತ್ತದೆ’ ಎಂದರು.

ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿನವರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ
ಮೇಲಕ್ಕೆತ್ತುವುದು, ಎಸ್‌ಸಿ–ಎಸ್‌ಟಿ ಸಮುದಾಯ ಯೋಜನೆಗಳು ತಲುವುವಂತೆ ನೋಡಿಕೊಳ್ಳುವುದು, ಶಾಲಾ–ಕಾಲೇಜುಗಳ ಸ್ಥಿತಿಗತಿ ಸುಧಾರಿಸುವುದು, ಆರೋಗ್ಯ, ಕೋವಿಡ್‌, ಕೋವಿಡ್‌ ಲಸಿಕೆ ನೀಡಿಕೆ ಬಗ್ಗೆ ಚರ್ಚಿಸಲಾಯಿತು ಎಂದರು.

ಗ್ರಾಮಗಳ ನಲ್ಲಿಗಳಿಗೆ ಮೀಟರ್ ಅಳವಡಿಕೆಗೆ ಸಲಹೆ

ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆಗೆ ನಲ್ಲಿ ಅಳವಡಿಕೆ ಮತ್ತು ಮೀಟರ್‌ ಅಳವಡಿಕೆಯಿಂದ ನೀರು ವ್ಯರ್ಥವಾಗುವುದನ್ನು ತಪ್ಪಿಸುವುದರ ಜತೆಗೆ ಪಂಚಾಯಿತಿಗಳಿಗೆ ಆದಾಯವೂ ಸಿಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒಗಳ ಸಭೆಯಲ್ಲಿ ಜಲಜೀವನ್‌ ಮಿಷನ್ ಕುರಿತು ಪ್ರಗತಿ ಪರಿಶೀಲನೆ ಸಂದರ್ಭದಲ್ಲಿ ಅವರು ಈ ವಿಷಯ ತಿಳಿಸಿದರು.

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಹಲಗಲಿ ಗ್ರಾಮದಲ್ಲಿ ಕಳೆದ 7–8 ವರ್ಷ ಹಿಂದೆ ಪ್ರತಿ ನಿತ್ಯವೂ 15 ಲಕ್ಷ ಲೀಟರ್‌ ನೀರು ಬಳಕೆಯಾಗುತ್ತಿತ್ತು. ಅಲ್ಲಿ ನಲ್ಲಿ ಸಂಪರ್ಕ ಮತ್ತು ಮೀಟರ್‌ ಅಳವಡಿಕೆ ಮಾಡಿದ ಬಳಿಕ 5 ಲಕ್ಷ ಲೀಟರ್‌ ನೀರು ಮಾತ್ರ ಬಳಕೆಯಾಗುತ್ತಿದೆ. ಗ್ರಾಮಪಂಚಾಯಿತಿಗೆ ಮೀಟರ್‌ನಿಂದ ₹10 ಲಕ್ಷ ಆದಾಯ ಸಿಗುತ್ತಿದೆ ಎಂದು ಕಾರಜೋಳ ವಿವರಿಸಿದರು.

ನಿರ್ಲಕ್ಷ್ಯ ತೋರಿದರೆ ಕಠಿಣ ಕ್ರಮ: ಸಿಎಂ ಎಚ್ಚರಿಕೆ

‘ಸರ್ಕಾರ ಹಲವು ಕಾರ್ಯಕ್ರಮಗಳು ಆರು–ಏಳು ತಿಂಗಳಾದರೂ ಜನರಿಗೆ ತಲುಪುತ್ತಿಲ್ಲ ಎಂಬ ದೂರುಗಳು ಇವೆ. ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸದೇ ನಿರ್ಲಕ್ಷ್ಯ ತೋರಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದರು.

‘ನಾವು ಜನರ ಹಿತಕ್ಕಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತೇವೆ. ಅದನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸುವುದು ನಿಮ್ಮ ಕರ್ತವ್ಯ. ನಾವು ಕಠಿಣ ಕ್ರಮ ತೆಗೆದುಕೊಳ್ಳುವುದಕ್ಕೆ ಅವಕಾಶ ನೀಡಬಾರದು. ಕೃಷಿ, ಜಲ್‌ ಜೀವನ್‌ ಮಿಷನ್‌, ಬೆಳೆ ಪರಿಹಾರ ವಿತರಣೆಯಲ್ಲಿ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ. ಮುಂದಿನ ಸಭೆಯ ವೇಳೆಗೆ ಪ್ರಗತಿ ಕಂಡಿಲ್ಲ ಎಂದರೆ ನಾನು ಸುಮ್ಮನಿರುವುದಿಲ್ಲ’ ಎಂದು ಚಾಟಿ ಬೀಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT