ಶುಕ್ರವಾರ, ನವೆಂಬರ್ 27, 2020
22 °C

ಕನ್ನಡದಲ್ಲಿ ಅರಳುತ್ತಿದೆ ‘ತೆನೆ’

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

‘ಮಾತೃಭಾಷೆಯಲ್ಲಿ ಶಿಕ್ಷಣ ಪಡೆದರೆ ಆಳವಾದ ಗ್ರಹಿಕೆ ಇರುತ್ತದೆ. ತಾಯಿ ಭಾಷೆಯ ಮೂಲಕ ಬೋಧಿಸುವ ಎಲ್ಲ ಸಂಗತಿಗಳೂ ನಮ್ಮ ಅನುಭವಕ್ಕೆ ಬರುತ್ತದೆ. ಈ ಕಾರಣಕ್ಕಾಗಿ ಕನಿಷ್ಠ ಪ್ರಾಥಮಿಕ ಹಂತದವರೆಗೆಯಾದರೂ ಮಕ್ಕಳಿಗೆ ಮಾತೃಭಾಷೆಯಲ್ಲೇ ಶಿಕ್ಷಣ ಕೊಡಬೇಕು’ 

– ರೈತಚೇತನ ದಿವಂಗತ ಪ್ರೊ. ಎಂ.ಡಿ.ನಂಜುಂಡಸ್ವಾಮಿ ಅವರ ಮಗಳು, ಸ್ವತಃ ರೈತನಾಯಕಿಯಾಗಿರುವ ಹಾಗೂ ಸುಸ್ಥಿರ, ವಿಷಮುಕ್ತ ಕೃಷಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಚುಕ್ಕಿ ನಂಜುಂಡಸ್ವಾಮಿ ಅವರ ದೃಢ ಮಾತು ಇದು. 

ಇದು ಬರೀ ಮಾತಲ್ಲ; ಅದನ್ನು ಕೃತಿಗೂ ಇಳಿಸಿದ್ದಾರೆ ಅವರು. ಇಟಲಿಯ ಲೂಕಾ ಮೊಂತನಾರಿ ಅವರನ್ನು ವರಿಸಿರುವ ಚುಕ್ಕಿ ಅವರು, ತಮ್ಮ ಮಗ ತೆನೆ ಕೊಸ್ಮೊನನ್ನು ಕನ್ನಡ ಮಾಧ್ಯಮ ಶಾಲೆಗೆ ಸೇರಿಸಿದ್ದಾರೆ.

ತೆನೆ ಕೊಸ್ಮೊ, ಚಾಮರಾಜನಗರದಲ್ಲಿ ಪ್ರೊ. ಜಿ.ಎಸ್‌.ಜಯದೇವ ಅವರು ನಡೆಸುತ್ತಿರುವ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದುತ್ತಿದ್ದಾನೆ. ಸದ್ಯ ಆರನೇ ತರಗತಿಯಲ್ಲಿದ್ದಾನೆ. ಒಂದನೇ ತರಗತಿಯಿಂದಲೂ ಕನ್ನಡ ಭಾಷೆಯಲ್ಲಿಯೇ ಜ್ಞಾನಾರ್ಜನೆ ಮಾಡುತ್ತಿರುವ ತೆನೆಗೆ ಕನ್ನಡದ ಜೊತೆಗೆ ಹಿಂದಿ, ಇಂಗ್ಲಿಷ್‌, ಇಟಲಿ ಭಾಷೆಗಳೂ ಈಗ ಕರಗತ. 

ಕನ್ನಡ ರಾಜ್ಯೋತ್ಸವ ತಿಂಗಳಲ್ಲಿ ‘ಪ್ರಜಾ ಪ್ಲಸ್’‌ನೊಂದಿಗೆ ಮಾತನಾಡಿರುವ ಚುಕ್ಕಿ ನಂಜುಂಡಸ್ವಾಮಿ ಅವರು, ಮಾತೃಭಾಷೆಯ ಶಿಕ್ಷಣದ ಮಹತ್ವ ಹಾಗೂ ಕನ್ನಡ ಮಾಧ್ಯಮದಲ್ಲೇ ಮಗನನ್ನು ಸೇರಿಸಲು ಕಾರಣ ಏನೆಂಬುದನ್ನು ವಿವರಿಸಿದ್ದಾರೆ. 

‘ಕನ್ನಡ ನನ್ನ ಭಾಷೆ. ನಾನು ಇದೇ ನೆಲದಲ್ಲಿ ಹುಟ್ಟಿ ಬೆಳೆದಿದ್ದೇನೆ. ನೆಲದ ಭಾಷೆಯಲ್ಲೇ ಶಿಕ್ಷಣ ಪಡೆಯಬೇಕು ಎಂಬ ಬಗ್ಗೆ ತಂದೆಯವರಿಗೆ ಸ್ಪಷ್ಟತೆ ಇತ್ತು. ನನ್ನನ್ನು ಮತ್ತು ತಮ್ಮನನ್ನು ಕನ್ನಡ ಮಾಧ್ಯಮ ಶಾಲೆಗೇ ಸೇರಿಸಿದ್ದರು. ಏಳನೇ ತರಗತಿವರೆಗೆ ನಾವು ಕನ್ನಡ ಭಾಷೆಯಲ್ಲೇ ಶಿಕ್ಷಣ ಪಡೆದೆವು. ಎಂಟನೇ ತರಗತಿಗೆ ಹೋದಾಗ ಕಷ್ಟವಾಯಿತು. ಮನೆಯವರಿಂದ ಸ್ವಲ್ಪ ಬೆಂಬಲವೂ ಬೇಕಾಯಿತು. ಆಗ ತಂದೆಯವರ ಬಗ್ಗೆ ಬೇಜಾರು ಆಗಿತ್ತು. ತಮ್ಮ ಸಿದ್ಧಾಂತಕ್ಕಾಗಿ ನಮ್ಮನ್ನು ಬಲಿಪಶು ಮಾಡಿದ್ದಾರೆ ಎಂದು ಅನಿಸಿದ್ದು ನಿಜ. ಆದರೆ, ಈಗ ಅದರ ಬಗ್ಗೆ ಯೋಚಿಸುವಾಗ ತಂದೆ ತೆಗೆದುಕೊಂಡ ನಿರ್ಧಾರ ಸರಿ ಎಂದೆನಿಸುತ್ತದೆ. ನಾನು ಕೂಡ ಅದೇ ನಿರ್ಧಾರವನ್ನು ಕೈಗೊಂಡೆ’ ಎಂದು ಹೇಳುತ್ತಾರೆ ಚುಕ್ಕಿ.

ಕನ್ನಡ ಶಾಲೆಗೆ ಮಗನನ್ನು ಸೇರಿಸುವ ವಿಚಾರದಲ್ಲಿ ಪತಿಯ ಅಭಿಪ್ರಾಯ ಏನಿತ್ತು ಎಂದು ಕೇಳಿದ್ದಕ್ಕೆ, ‘ಶಿಕ್ಷಣ ಮಾಧ್ಯಮ ಯಾವುದಾಗಿರಬೇಕು ಎಂಬುದು ನಮಗೆ ವಿಷಯವೇ ಆಗಿರಲಿಲ್ಲ. ನನ್ನ ಪತಿ ಕೂಡ ಇಟಲಿಯಲ್ಲಿ ಅವರ ಮಾತೃಭಾಷೆಯಲ್ಲೆ ಓದಿದವರು. ಅವರ ನಿಲುವು ಕೂಡ ಇದೇ ಆಗಿತ್ತು. ನನ್ನ ಮಗನಿಗೆ ಪ್ರಾಥಮಿಕ ಶಾಲೆಯಿಂದಲೇ ಇಂಗ್ಲಿಷ್‌ನಲ್ಲಿ ಕಲಿಸಬೇಕು ಎಂದು ನಮಗೆ ಅನಿಸಲಿಲ್ಲ. ಉತ್ತಮ ಕನ್ನಡ ಮಾಧ್ಯಮ ಶಾಲೆ ಸಿಕ್ಕಿದರಷ್ಟೇ ಸಾಕು ಎಂಬುದು ನಮ್ಮ ನಿಲುವಾಗಿತ್ತು. ಅಂತಹ ಶಾಲೆ ಸಿಕ್ಕಿತು’ ಎಂದು ಉತ್ತರಿಸುತ್ತಾರೆ ಅವರು.

‘ಕನ್ನಡ ಮಾಧ್ಯಮದಲ್ಲಿ ಓದುತ್ತಿದ್ದರೂ, ಮಗ ಹೊರ ಜಗತ್ತಿಗೆ ತೆರೆದುಕೊಳ್ಳುತ್ತಿದ್ದಾನೆ. ಅವನಿಗೆ ಹಿಂದಿ, ಇಂಗ್ಲಿಷ್‌ ಇಟಲಿ ಭಾಷೆ ಬರುತ್ತದೆ. ನಾನು ಕನ್ನಡದಲ್ಲಿ ಮಾತನಾಡಿದರೆ, ಅವನ ತಂದೆ ಇಟಲಿ ಭಾಷೆಯಲ್ಲಿ ಮಾತನಾಡುತ್ತಾರೆ. ನನ್ನ ತಾಯಿ ಭಾಷೆ ಮರಾಠಿಯನ್ನೂ ಕಲಿಸುತ್ತಿದ್ದೇನೆ. ಫ್ರೆಂಚ್‌ ಭಾಷೆ ಕಲಿಯುವ ಪ್ರಯತ್ನವನ್ನೂ ಮಾಡುತ್ತಿದ್ದಾನೆ’ ಎಂದು ಹೇಳುತ್ತಾರೆ ಅವರು. 

‘ಏಳನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಮಗನನ್ನು ಓದಿಸುತ್ತೇನೆ. ಆ ಬಳಿಕ ಮೈಸೂರಿನಲ್ಲಿ ನಮಗೆ ಹೊಂದಿಕೆಯಾಗುವ ಯಾವುದಾದರೂ ಶಿಕ್ಷಣ ಸಂಸ್ಥೆಗೆ ಸೇರಿಸುವ ಯೋಚನೆ ಇದೆ’ ಎಂದು ಮಾತಿಗೆ ವಿರಾಮ ಹಾಕಿದರು ಚುಕ್ಕಿ ನಂಜುಂಡಸ್ವಾಮಿ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು