ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡದ ಕೋಟೆಯ ನಿಸರ್ಗದ ಸೊಬಗು

Last Updated 31 ಅಕ್ಟೋಬರ್ 2018, 16:10 IST
ಅಕ್ಷರ ಗಾತ್ರ

‘ಸರ್, ಇಂಥ ಕ್ಲೈಮೆಟ್‌ನಲ್ಲಿ ಗಜೇಂದ್ರಗಡ ಬೆಟ್ಟದಲ್ಲಿ ಕಳೆದು ಹೋಗಬೇಕು ಅನ್ನಸ್ತಿದೆ ಹೋಗೋಣ್ವಾ..’ ಹನುಮಸಾಗರದ ಮಹಾಂತೇಶನ ಮಾತಿಗೆ ಕಬ್ಬರಗಿಯ ಶಶಿಧರನೂ ಧ್ವನಿಗೂಡಿಸಿದ. ‘ಅಲ್ಲೇನಿದಿಯೋ ಕೋಟೆ ಬಿಟ್ಟರೆ..’ ಎಂದು ನಿರಾಸಕ್ತಿ ತೋರಿದೆ. ‘ಮೊದಲು ಬನ್ನಿ, ನಂತರ ವಾಪಸಾಗುವ ಮನಸ್ಸಾದರೆ ಕೇಳಿ..!’ ಎನ್ನುತ್ತಾ, ನನ್ನನ್ನು ಪ್ರವಾಸಕ್ಕೆ ಪ್ರಚೋದಿಸಿದರು. ಸರಿ, ಹುಂ ಅಂದೆ. ಮಾರನೆ ದಿನ ಬೆಳಕು ಹರಿಯುವಷ್ಟರಲ್ಲಿ ಕೋಟೆ ನೆಲ ಮುಟ್ಟಲು ನಿರ್ಧರಿಸಿದೆವು.

ಅಂದುಕೊಂಡಂತೆ ಬೆಳ್ಳಂಬೆಳಿಗ್ಗೆಯೇ ಮೂವರು ಹನುಮಸಾಗರದಿಂದ ಬೈಕ್‌ನಲ್ಲಿ ಹೊರಟೆವು. ಗಜೇಂದ್ರಗಡದ ವೀರಭದ್ರೇಶ್ವರ ದೇಗುಲ ಪಕ್ಕದ ಕಣವಿ ಕಚ್ಚಾರಸ್ತೆ ಬಳಸಿ, ಫಸ್ಟ್ ಗೇರ್‌ನಲ್ಲಿ ಸೊಳ್ಳಂಬಳ್ಳ ರಸ್ತೆಯಲ್ಲಿ ಬೆಟ್ಟ ಏರುತ್ತಿದ್ದರೆ ಜೀವ ಅಂಗೈಗೆ ಬರುತ್ತಿತ್ತು!. ರಸ್ತೆ ಏರುತ್ತಾ, ಅಕ್ಕಪಕ್ಕದಲ್ಲಿ ನೋಡಿದರೆ, ‘ಇದು ನಿಸರ್ಗ ಸೌಂದರ್ಯದ ಗಣಿ’ ಎಂದು ಖಾತ್ರಿ ಆಯಿತು. ದಾರಿ ಮಧ್ಯೆ ಪವನ ವಿದ್ಯುತ್ ಕಂಪನಿಯ ಚೆಕ್‍ಪೋಸ್ಟ್ ಸಿಕ್ಕಿತು. ಅಲ್ಲಿ ನಮ್ಮ ಹೆಸರು ವಿಳಾಸ ಬರೆದುಕೊಂಡರು. ಬಾಯಾರಿಕೆಗೆ ನೀರು ಕೇಳಿದರೆ ವಾಚ್‍ಮ್ಯಾನ್ ಫಕ್ಕಿರಪ್ಪ, ಪಕ್ಕದಲ್ಲಿದ್ದ ನೀರಿನ ಒರತೆ ತೋರಿದ. ಬಿರು ಬಿಸಿಲಿನಲ್ಲೂ ಅಲ್ಲಿ ಕಾಣುತ್ತಿದ್ದ ನೀರಿನ ಒರತೆಗಳು ಅಚ್ಚರಿ ಮೂಡಿಸಿದವು. ಹೀಗೆಂದುಕೊಳ್ಳುತ್ತಿದ್ದಾಗ, ‘ಒರತೆಯಷ್ಟೇ ಅಲ್ಲ ಗವಿಸಂಗಪ್ಪ ಗುಡಿ ಹತ್ತಿರ ಸಣ್ಣ ಜಲಪಾತವೂ ಇದೆ ನೋಡಿ ಹೋಗಿ’ ಎಂದು ಫಕೀರಪ್ಪ ಗೈಡ್ ಮಾಡಿದರು.

ಹೊರನೋಟಕ್ಕೆ ಕಲ್ಲನ್ನೇ ಹಾಸಿ ಹೊದ್ದು ಮಲಗಿರುವ ವಿಶಾಲ ಬೆಟ್ಟ. ಬಂಡೆಯ ಮೇಲೆ ಹರಿದ ನೀರಿನ ಹೆಜ್ಜೆ ಗುರುತು ಆಕರ್ಷಿಸಿತು. ಅಲ್ಲಿ ಮಹಾಂತೇಶನ ಮಾತು ಉತ್ಪ್ರೇಕ್ಷೆಯಲ್ಲ ಅನಿಸತೊಡಗಿತು. ಅರ್ಧ ದಾರಿಯಲ್ಲಿಯೇ ಇಷ್ಟು ರೋಚಕತೆ. ಇನ್ನು ಬೆಟ್ಟದ ನೆತ್ತಿಯ ಮೇಲೆ ಹೇಗಿರಬಹುದು. ಊಹಿಸಿಯೇ ಪುಳಕಿತನಾದೆ.

ಬೈಕ್ ಮೇಲೆಯೇ ಬೆಟ್ಟ ಏರಿದೆವು. ಬೆಟ್ಟದ ಮೇಲೆ ಕಣ್ಣು ಹಾಯಿಸಿದಷ್ಟು ದೂರ ಸಮತಟ್ಟಾದ ಪ್ರದೇಶ. ನೂರಾರು ವಿಂಡ್ ಪವರ್ ಫ್ಯಾನ್‌ಗಳು. ಫ್ಯಾನ್‌ ಕೆಳಗೆ ತಿರುಗಾಡುತ್ತಿದ್ದರೆ ಎಲ್ಲಿ ರೆಕ್ಕೆಗಳು ಕತ್ತರಿಸಿ ಬೀಳುತ್ತವೋ ಎನ್ನುವ ಭಯ ಮಿಶ್ರಿತ ಖುಷಿ. ಬೆಟ್ಟದಲ್ಲಿ ಸುತ್ತಾಡುತ್ತಿದ್ದರೆ, ಬಾನಲ್ಲಿ ಕಪ್ಪು ಬಿಳುಪಿನ ಮೋಡಗಳ ದ್ರಶ್ಯಕಾವ್ಯ. ಕೆಳಭಾಗದಲ್ಲಿ ಮಣ್ಣು ಹದಗೊಳಿಸಿ ಬಿತ್ತಿದ ಹೊಲಗಳು ಹಸಿರು ರಂಗೋಲಿಯಂತೆ ಕಾಣುವ ಸಾಲು. ತಂಗಾಳಿ, ಚುಮುಚುಮು ಚಳಿ, ಆಗಾಗ್ಗೆ ಬರುತ್ತಿದ್ದ ಜಿಟಿ ಜಿಟಿ ಮಳೆ, ನಡುವೆ ಬೀಳುತ್ತಿದ್ದ ಬಿಸಿಲು.. ವಾರೆವಾಹ್... ಅಷ್ಟೇ ಹೇಳೋಕೆ ಆಗುತ್ತಿತ್ತು. ಹೀಗೆ ಮನಸ್ಸಿನಲ್ಲಿ ರಮ್ಯತೆ ತುಂಬಿಕೊಂಡ ನಾವು ದಾರಿ ತಪ್ಪಿದೆವು. ಕೋಟೆ ರೂಟ್ ಬಗ್ಗೆ ಫರ್ಫೆಕ್ಟ್ ಆಗಿದ್ದ ಮಹಾಂತೇಶನೂ ಎಡವಿದ. ರೈತರು ಜಮೀನನ್ನು ಉಳುಮೆ ಮಾಡಿದ್ದರಿಂದ ದಾರಿಗಳು ಕವಲಾದವು. ಕವಲು ದಾರಿಯಲ್ಲಿ ನಮ್ ದಾರಿ ಯಾವುದು ಗೊತ್ತಾಗಲಿಲ್ಲ. ಸಹಾಯ ಕೇಳಲಿಕ್ಕೆ ಅಲ್ಲಿ ಯಾರೂ ಇಲ್ಲ. ಮಹಾಂತೇಶ ಗೆಸ್ ಮಾಡುತ್ತಲೇ ಬೆಟ್ಟದ ತುಂಬಾ ತಿರುಗಿಸಿದ. ಕೋಟೆ ದೂರದಲ್ಲಿ ಕಾಣುತ್ತಿತ್ತು. ಆದರೆ ಸರಿ ದಾರಿ ಸಿಕ್ಕಿರಲಿಲ್ಲ. ದಾರಿ ತಪ್ಪಿದರೂ ನಮಗೆ ಧೋಖಾ ಆಗ್ಲಿಲ್ಲ. ಕೋಟೆ ಬದಲಿಗೆ ಸಿರಿವಂತ ಪ್ರಕೃತಿ, ಮನಮೋಹಕ ನಿಸರ್ಗ ಮಾತೆಯ ದಿವ್ಯ ದರ್ಶನವಾಯಿತು. ಅದಕ್ಕೆ ಮಹಾಂತೇಶನಿಗೆ ಥ್ಯಾಂಕ್ಸ್ ಹೇಳಿದೆ. ದೂರದಲ್ಲಿ ಕಲ್ಲು ಒಡೆಯುವರು ಕಣ್ಣಿಗೆ ಬಿದ್ದರು. ಶಶಿ ಸರಸರನೆ ಹೋಗಿ ವಿಂಡ್ ಫ್ಯಾನ್, ಲೊಕೇಷನ್ ಪಾಯಿಂಟ್‍ಗಳ ಗುರುತು ಕೇಳಿ ಬಂದ. ಫಲವಾಗಿ ಸೀದಾ ಕೋಟೆಯ ಒಡಲಲ್ಲಿ ನಿಂತೆವು.

ಕೋಟೆಯ ತುದಿಯಲ್ಲಿ ನಿಂತು ಕೆಳಗೆ ನೋಡಿದರೆ ದೊಡ್ಡ ಪ್ರಪಾತ. ಮೈ ಕೂದಲುಗಳು ನೆಟ್ಟಗೆ ನಿಂತವು. ಸುತ್ತಲೂ ಕಾಣುತ್ತಿದ್ದ ಕೆರೆ-ಕಟ್ಟೆಗಳು ಪ್ರಾಕೃತಿಕ ಸೊಬಗನ್ನು ಹೆಚ್ಚಿಸಿದ್ದವು. ಬೆಟ್ಟಗಳ ಹೊರಮೈ ಕಲಾತ್ಮಕ ಕೆತ್ತನೆಯಂತೆ ಕಾಣುತ್ತಿತ್ತು. ಅಕ್ಕ-ತಂಗಿ ಮಂಟಪ, ವೀಕ್ಷಣಾ ಗೋಪುರದಿಂದ ಇಡೀ ಊರು, ಅದರಾಚೆಯ ಹೊಲಗಳು, ಬೆಟ್ಟಗುಡ್ಡಗಳು, ಒಂದೇ ನೋಟಕ್ಕೆ ದಕ್ಕಿದವು!. ಪ್ರವೇಶ ದ್ವಾರ, ಸುಬ್ರಹ್ಮಣ್ಯ ದೇವರ ಕೆತ್ತನೆ, ಬಾಳಜಿ ಬಾಜಿರಾವ್ ಪೇಶ್ವೆಯರ ಚಿತ್ರ, ಅರಸರ ಲಾಂಛನ, ಬೃಹತ್ ನಂದಿ ಮೂರ್ತಿ, ಮದ್ದಿನ ಮನೆ, ತೊಟ್ಟಿಲು ಹುಡೆ, ನಾಮಾವಶೇಶಗೊಂಡ ಬೇಸಿಗೆ ಅರಮನೆ, ಹಾಲು-ಮೊಸರು, ದರ್ಗಾ.. ಹೀಗೆ ಕೋಟೆಯನ್ನೆಲ್ಲಾ ನೋಡಿದ್ದಾಯ್ತು.

ಅಚ್ಚರಿ ಪುಳಕದೊಂದಿಗೆ ಹಿರಿ ಹಿರಿ ಹಿಗ್ಗಿದ ಮನಸ್ಸು ಶಿಥಿಲಾವಸ್ಥೆ ತಲುಪಿದೆ ಕೋಟೆಯ ತಾಣಗಳನ್ನು ಕಂಡು ಮೂಕವಾಯಿತು. ಕೋಟೆಯ ಒಡಲಲ್ಲಿ ಅಕ್ರಮ ಕಲ್ಲು ಗಣಿಕಾರಿಕೆಯ ಘಾಟು, ಅಸಹ್ಯ ಹುಟ್ಟಿಸುವ ಕಿಡಿಗೇಡಿಗಳ ಬರಹ, ಭಗ್ನಗೊಂಡ ಕೆತ್ತನೆಗಳು, ನಿಧಿಚೋರರ ದುಷ್ಕೃತ್ಯಗಳು ಮನಸ್ಸನ್ನು ಘಾಸಿಗೊಳಿಸಿದವು. ಕಾಲಗರ್ಭ ಸೇರುವ ಮುನ್ನ ಕೋಟೆಗೆ ತುರ್ತು ಕಾಯಕಲ್ಪ ಬೇಕಾಗಿದೆ ಎನ್ನಿಸಿತು.

ಕೋಟೆಯ ಬುಡದಲ್ಲಿಯ ವಾಡೆ ಘೋರ್ಪಡೆ ವಂಶಸ್ಥರ ಮನೆ ಪ್ರವೇಶಿಸಿದೆವು. ಹುಲಿ ಚರ್ಮ ಹೊದಿಸಿದ ಕೃತಕ ಹುಲಿ ಆಕರ್ಷಿಸಿತು. ಮಂಗಳಾ ಘೋರ್ಪಡೆ ತಮ್ಮ ಮಾತಿನ ಉದ್ದಕ್ಕೂ ಆಡಳಿತ ಯಂತ್ರದ ಉಪೇಕ್ಷೆ ಬಗ್ಗೆ ಅಸಮಾಧಾನ ಹೊರ ಹಾಕಿದರು. ಸುಣ್ಣ ಬಣ್ಣ ಕಾಣದ ವಾಡೆ ಅವರ ಪಾಡನ್ನು ಬಿಚ್ಚಿಟ್ಟಿತು. ಭಾರ ಮನಸ್ಸಿನಿಂದ ಹೊರಬಂದೆ. ಅಷ್ಟರಲ್ಲಿ ಕತ್ತಲು ಆವರಿಸಿತು.**

ಕನಿಷ್ಠ ಸೌಲಭ್ಯ ಬೇಕು..

ಕಣಿವೆ ರಸ್ತೆ ಬಳಸಿ ಕೋಟೆಗೆ ಬರುವುದು ಕಠಿಣ. ಕಚ್ಚಾ ರಸ್ತೆಯಲ್ಲಿ ಸರ್ಕಸ್ ಮಾಡಬೇಕು. ದಾರಿ ತೋರುವ ಫಲಕಗಳಿಲ್ಲ. ಅಲ್ಲಲ್ಲಿ ವಿರಮಿಸಲು, ಮಳೆ ಬಿಸಿಲಿನಿಂದ ರಕ್ಷಣೆಗೆ ತಂಗುದಾಣಗಳಿಲ್ಲ, ಕುಡಿಯಲು ನೀರಿಲ್ಲ. ಇಂಥ ಕನಿಷ್ಠ ಸೌಲಭ್ಯಗಳನ್ನು ಒದಗಿಸಿದರೆ ಇದು ಜನಪ್ರಿಯ ಪ್ರವಾಸಿ ತಾಣವಾಗುತ್ತದೆ.

**

ನೀವೂ ಹೋಗಬಹುದು...

ಬೈಕ್‌, ಬೊಲೆರೊ ಮಾದರಿ ವಾಹನಗಳಿದ್ದರೆ, ನೀವೂ ನಮ್ಮ ಹಾಗೆ ಪ್ರಯಾಣಿಸಬಹುದು. ಕಡಿದಾದ ಹಾದಿಯನ್ನು ನಿರಾಯಾಸವಾಗಿ ಏರಬಹುದು. ಆದರೆ, ನೆನಪಿರಲಿ. ಅಲ್ಲಿ ಗೈಡ್‍ಗಳು ಇಲ್ಲ. ಸ್ಥಳೀಯರು ಅಥವಾ ಪುಸ್ತಕ, ಅಂತರ್ಜಾಲ ನೆರವಿನೊಂದಿಗೆ ಮಾಹಿತಿ ಪಡೆಯಬಹುದು.

ಬೇಸಿಗೆಯಲ್ಲಿ ಕೋಟೆ ಏರುವುದು ಕಷ್ಟ. ಮಳೆಗಾಲವೂ ಸಂಕಷ್ಟವೇ. ಆದರೆ ಆಗ ಕಿರು ಜಲಪಾತಗಳು ಸೃಷ್ಟಿ ಆಗುತ್ತವೆ. ನೋಡೋದಕ್ಕೆ ಬಹಳ ಮಜವಾಗಿರುತ್ತದೆ. ಅಲ್ಲಿ ಜಲಪಾತಗಳಿಗೆ ಮೈ ಒಡ್ಡಲು ಸದವಕಾಶ. ಒಟ್ಟಿನಲ್ಲಿ ಹದವಾದ ವಾತಾವರಣ ಗಜೇಂದ್ರಗಡ ಪ್ರವಾಸಕ್ಕೆ ಸೂಕ್ತ. ಬೆಳ್ಳಂಬೆಳಿಗ್ಗೆ ಬೆಟ್ಟ ಹತ್ತಿದರೆ ನೆತ್ತಿ ಮೇಲೆ ಸೂರ್ಯ ಬರುವಷ್ಟರಲ್ಲಿ ಬೆಟ್ಟ ಇಳಿಯಬಹುದು. ಪ್ರವಾಸದ ವೇಳೆ ನೀರು, ಆಹಾರ, ಉಪಹಾರ ಜೊತೆಯಲ್ಲಿ ಇರಲಿ.

**

ಸಿನಿಮಾ ಶೂಟಿಂಗ್ ತಾಣ

ವೀರ ಮದಕರಿ, ಬೃಂದಾವನ, ರಾಟೆ, ಜಾನು, ರ‍್ಯಾಂಬೋ-2, ಬಹುಪರಾಕ್, ಭೀಮಾ ತೀರದಲ್ಲಿ, ಭರ್ಜರಿ, ಅವನೇ ಶ್ರೀಮನ್ನಾರಾಯಣ... ಹೀಗೆ ಸಾಲು ಸಾಲು ಕನ್ನಡ ಸಿನಿಮಾಗಳನ್ನು ಚಿತ್ರೀಕರಿಸಿದ ಜಾಗ ಇದು. ಡಮರುಗಮ್, ಅಲ್ಲುಡು ಸೀನು, ಬೃಂದಾವನಮ್, ಬಲುಪು ಭರ್ಜರಿಯಂತಹ ತೆಲುಗು ಪಿಕ್ಚರ್‌ಗಳೂ ಇಲ್ಲೇ ಚಿತ್ರೀಕರಣಗೊಂಡಿವೆ. ಹೀಗಾಗಿ ಇದು ಸಿನಿಮಾ ಶೂಟಿಂಗ್‍ಗೆ ಫೇವರೇಟ್ ಪ್ಲೇಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT