ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುತ್ತಾಟ | ಚಾರಣಿಗರ ಸ್ವರ್ಗ... ವಿಸ್ಮಯದ ತಾಣ ಸಿದ್ಧರಬೆಟ್ಟ

Published 3 ಆಗಸ್ಟ್ 2024, 0:55 IST
Last Updated 3 ಆಗಸ್ಟ್ 2024, 0:55 IST
ಅಕ್ಷರ ಗಾತ್ರ

ಬದುಕಿಗಾಗಿ ಬಿಡುವಿಲ್ಲದ ದುಡಿಮೆ... ಗುರಿ ಸಾಧಿಸಲೇಬೇಕಿರುವ ಒತ್ತಡ... ರಸ್ತೆಯಲ್ಲೇ ತಾಸುಗಟ್ಟಲೇ ಸಮಯ ಕಳೆಯಬೇಕಾದ ಅನಿವಾರ್ಯತೆ... ಸಿಲಿಕಾನ್‌ ಸಿಟಿಯ ಬಹುತೇಕರ ದೈನಂದಿನ ತೊಳಲಾಟವಿದು.

ಕಾಯಕದ ಜಂಜಾಟದಲ್ಲಿ ಮುಳುಗಿ ವಾರ, ತಿಂಗಳುಗಳ ಕಾಲ ಸೂರ್ಯೋದಯ–ಸೂರ್ಯಾಸ್ತವನ್ನು ನೋಡದವರ ಸಂಖ್ಯೆಯೇ ಇಲ್ಲಿ ದೊಡ್ಡದಿದೆ. ಇದೆಲ್ಲದರ ನಡುವೆಯೂ ಹಸಿರನ್ನು ಕಣ್ತುಂಬಿಕೊಳ್ಳಬೇಕು, ಒಂದು ದಿನವಾದರೂ ಮನಸ್ಸಿಗೆ ಪ್ರಶಾಂತ ಎನ್ನುವಂತಹ ಪರಿಸರದಲ್ಲಿರಬೇಕು ಎಂದು ಹಪಹಪಿಸುವವರು ಹಲವರಿದ್ದಾರೆ.

ವಾರಾಂತ್ಯ ಹಾಗೂ ರಜೆ ದಿನಗಳಲ್ಲಿ ಸ್ನೇಹಿತರು, ಕುಟುಂಬ ವರ್ಗದವರೊಡನೆ ಹೋಗಿ ಬರಬಹುದಾದಂತಹ ಸ್ಥಳಗಳಲ್ಲಿ ತುಮಕೂರು ಜಿಲ್ಲೆಯ ಸಿದ್ಧರಬೆಟ್ಟವೂ ಒಂದಾಗಿದೆ. ಬೆಂಗಳೂರಿನಿಂದ 110 ಕಿ.ಮೀ. ದೂರದಲ್ಲಿದೆ. ತುಮಕೂರು, ಕೊರಟಗೆರೆ, ತೋವಿನಕೆರೆಯಿಂದ ಬಸ್ ಸಂಪರ್ಕವಿದ್ದರೂ ಅಷ್ಟಕ್ಕಷ್ಟೇ. ಸ್ವಂತ ವಾಹನದಲ್ಲಿ ಹೋಗಿ ಬರುವುದು ಉತ್ತಮ.

ವಿಸ್ಮಯ...

ಇದು ಪ್ರಕೃತಿ ಆರಾಧಕರ ಮೆಚ್ಚಿನ ತಾಣ. ಅಚ್ಚ ಹಸಿರನ್ನೇ ಹೊದ್ದ ಬೆಟ್ಟಗಳ ಸಾಲು. ಚಾರಣಿಗರ ಪಾಲಿನ ಸ್ವರ್ಗ. ಆಸ್ತಿಕರ ಪಾಲಿಗೆ ಯಾತ್ರಾ ಸ್ಥಳ. ಆಯುರ್ವೇದದ ಆಸಕ್ತರಿಗೆ ಗಿಡಮೂಲಿಕೆಗಳ ಕಣಜ. ಪುರಾಣದ ನಂಟು ಇದಕ್ಕಿದೆ. ಇತಿಹಾಸದ ಶ್ರೀಮಂತ ಪರಂಪರೆಯ ಹಿನ್ನೆಲೆಯೂ ಇದರೊಟ್ಟಿಗೆ ಥಳಕು ಹಾಕಿಕೊಂಡಿದೆ.

ಸಿದ್ಧರಬೆಟ್ಟದ ಪರಿಸರ ಹಲವು ವಿಸ್ಮಯಗಳನ್ನು ತನ್ನೊಡಲಲ್ಲಿಟ್ಟುಕೊಂಡಿದೆ. ಇಲ್ಲಿರುವ ಗುಹೆಗಳಲ್ಲಿ ಸಂತರು, ಸಿದ್ಧರು ತಪ್ಪಸ್ಸು ಮಾಡುತ್ತಿದ್ದರು ಎಂಬ ಐತಿಹ್ಯವಿದೆ. ಗುಡ್ಡದ ತಪ್ಪಲಿನಲ್ಲಿ ಮಠವಿದೆ. ಬೆಟ್ಟದ ಮೇಲಿರುವ ಗುಹೆಯೊಂದು ವಿಸ್ಮಯದ ತಾಣವಾಗಿದೆ. 

ಸಣ್ಣ ಕಿಂಡಿಯೊಂದರ ಮೂಲಕ ಈ ಗುಹೆಯನ್ನು ಪ್ರವೇಶಿದರೆ ಪ್ರಕೃತಿಯ ವಿಸ್ಮಯ ತೆರೆದುಕೊಳ್ಳಲಿದೆ. ಬೇಸಿಗೆಯಿರಲಿ, ಮಳೆಯಿರಲಿ, ಚಳಿಯಿರಲಿ... ಎಲ್ಲ ಸಮಯದಲ್ಲೂ ಇಲ್ಲಿ ತಂಪು ತಂಪು. ಈ ಗುಹೆಯೊಳಗಿನ ಪಯಣ ಎಂದೆಂದಿಗೂ ಮರೆಯಲಾರದ ಅನುಭವ ನೀಡುತ್ತದೆ. ಆದರೆ ಸ್ಥಳೀಯರ ಮಾರ್ಗದರ್ಶನವಿಲ್ಲದೆ ಗುಹೆಯ ಒಳಗೆ ಹೋಗುವುದು ಒಳ್ಳೆಯದಲ್ಲ.

ಸುತ್ತಲೂ ಬಂಡೆಗಳ ರಾಶಿ. ಇದರೊಳಗೆ ಹಲವು ಮೀಟರ್‌ ದೂರ ನಡೆದು ಹೋಗಬಹುದು. ಇನ್ನೂ ಒಂದಷ್ಟು ದೂರ ಕಿರಿದಾದ ಸ್ಥಳದಲ್ಲಿ ತೆವಳುತ್ತಾ ಹೋಗಬೇಕು. ಈ ಸ್ಥಳದಲ್ಲಿ ಕಗ್ಗತ್ತಲು ಆವರಿಸಿರುತ್ತದೆ. ಮತ್ತೆ ನಡೆದು ಹೋಗಬಹುದಾದ ದಾರಿ ಸಿಗಲಿದೆ. ಬೆಳಕು–ಕತ್ತಲೆ ಎರಡನ್ನೂ ಗುಹೆಯೊಳಗೆ ನೋಡಬಹುದಾಗಿದೆ. ಕೆಲವೆಡೆ ಮರಗಳ ಬೇರಿನ ಬಿಳಲು ಜೋತು ಬಿದ್ದಿರುವುದನ್ನು ಕಾಣಬಹುದು.

ಒಂದಷ್ಟು ದೂರ ಸಾಗಿದ ಬಳಿಕ ಮತ್ತೊಂದು ಮಾರ್ಗದಿಂದ ಗುಹೆಯ ಹೊರಗೆ ಬರುತ್ತೇವೆ. ಇಲ್ಲಿಂದ ಎತ್ತ ನೋಡಿದರೂ ಹಸಿರು ಗೋಚರಿಸುತ್ತದೆ. ಪಯಣದ ದಣಿವಾರಿಸಿಕೊಳ್ಳಲು ತಂಗಾಳಿಯು ಸಾಥ್ ನೀಡಲಿದೆ. ದೂರದಲ್ಲಿ ಕೆರೆಗಳು, ಹಳ್ಳಿಗಳು ಕಾಣುತ್ತವೆ. ಇಲ್ಲಿಂದಲೇ ಬೆಟ್ಟದ ಮೇಲ್ಭಾಗದಲ್ಲಿರುವ ಸಿದ್ಧೇಶ್ವರನ ಸನ್ನಿಧಿಗೂ ತೆರಳಬಹುದು.

ತಣ್ಣೀರ ಝಳಕ... ಮೈಮನ ಪುಳಕ...

ಬೆಟ್ಟದ ಮೇಲಿರುವ ಮತ್ತೊಂದು ಗುಹೆಯಲ್ಲಿ ಸಿದ್ಧೇಶ್ವರನ ಸನ್ನಿಧಾನವಿದೆ. ಇದೂ ಸಹ ಪ್ರಕೃತಿದತ್ತವಾಗಿ ಬಂಡೆಗಳಿಂದಲೇ ನಿರ್ಮಾಣಗೊಂಡಿದೆ. ಒಳಭಾಗದಲ್ಲಿ ವಿಶಾಲ ಆವರಣವಿದ್ದು, ಇಲ್ಲಿಯೇ ಎಂದೆಂದಿಗೂ ಬತ್ತದ ಕೊಳವೊಂದಿದೆ. ಸುವರ್ಣಮುಖಿ ನದಿಯ ಉಗಮ ಸ್ಥಾನವಿದು.

ಮೆಟ್ಟಿಲುಗಳ ಮೂಲಕ ಬೆಟ್ಟ ಹತ್ತಿ ಬರುವ ಪ್ರತಿಯೊಬ್ಬ ಚಾರಣಿಗ, ನಿಸರ್ಗ ಪ್ರೇಮಿ, ಪ್ರವಾಸಿಗ, ಯಾತ್ರಿಕ, ಭಕ್ತ... ಎಲ್ಲರೂ ಈ ಗುಹೆಗೆ ಭೇಟಿ ನೀಡುತ್ತಾರೆ. ಇಲ್ಲಿರುವ ಕೊಳದ ತಣ್ಣೀರನ್ನು ತಮ್ಮ ಮೈಮೇಲೆ ಸುರಿದುಕೊಂಡು ವಿಶೇಷ ಅನುಭೂತಿ ಹೊಂದುತ್ತಾರೆ. ಈ ತಣ್ಣನೆಯ ನೀರು ಮೈಮೇಲೆ ಬಿದ್ದೊಡನೆ ಬೆಟ್ಟ ಹತ್ತುವಾಗ ಆದ ಆಯಾಸವೆಲ್ಲಾ ಇನ್ನಿಲ್ಲದಂತಾಗುತ್ತದೆ. ನಂತರವೇ ಸಿದ್ಧೇಶ್ವರನ ದರ್ಶನ.

ಗಿಡಮೂಲಿಕೆಗಳ ತಾಣ...

ತಪ್ಪಲಿನಿಂದ ಹಿಡಿದು ತುದಿಯವರೆಗೂ ಹಸಿರನ್ನೇ ಹೊದ್ದಿರುವ ಸಿದ್ಧರಬೆಟ್ಟ ಗಿಡಮೂಲಿಕೆಗಳ ತಾಣ. ಇಲ್ಲಿ ಸಿಗುವ ನಾನಾ ತರಹದ ಬೇರು, ಬಳ್ಳಿ, ನಾರು, ಎಲೆಗಳ ಸಂಗ್ರಹಕ್ಕಾಗಿ ಆಯುರ್ವೇದದ ಪಂಡಿತರು ಇಂದಿಗೂ ಭೇಟಿ ನೀಡುತ್ತಾರೆ. ತಮಗೆ ಬೇಕಾದ ವನೌಷಧಿಯನ್ನು ಪತ್ತೆ ಹಚ್ಚಿ ಕೊಂಡೊಯ್ಯುತ್ತಾರೆ.

ಸ್ಥಳೀಯರು ಹಾಗೂ ಭಕ್ತರು ಸಹ ಇಲ್ಲಿನ ಗಿಡಗಳ ಎಲೆಗಳನ್ನು ಬಳಸುತ್ತಾರೆ. ಬೆಟ್ಟ ಹತ್ತುವಾಗ ಹಾಗೂ ಇಳಿಯುವಾಗ ಮೆಟ್ಟಿಲುಗಳ ಪಕ್ಕದಲ್ಲಿರುವ ಗಿಡಗಳ ಎಲೆಗಳನ್ನು ಕಿತ್ತುಕೊಳ್ಳುತ್ತಾರೆ. ಇವನ್ನು ತಮ್ಮ ಮನೆಗಳಿಗೆ ಕೊಂಡೊಯ್ದು ಸಾಂಬಾರು ಮಾಡಿಕೊಂಡು ಊಟ ಮಾಡುತ್ತಾರೆ. ಈ ಎಲೆಗಳಿಗೆ ಔಷಧೀಯ ಗುಣವಿದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ ಎಂಬುದು ಇಲ್ಲಿನವರ ನಂಬಿಕೆ.

ಬೆಟ್ಟದ ಮೇಲ್ಭಾಗ ಹಾಗೂ ತಪ್ಪಲಿನಲ್ಲಿ ಮಾಡುವ ದಾಸೋಹದ ಅಡುಗೆಯಲ್ಲೂ ಇಲ್ಲಿನ ಗಿಡಗಳ ಎಲೆಗಳು ಸೊಪ್ಪಾಗಿ ಬಳಕೆಯಾಗುತ್ತವೆ.

ಪ್ರಯಾಣದ ಮಾರ್ಗ: ಬೆಂಗಳೂರಿನಿಂದ ದಾಬಸ್‌ಪೇಟೆ ಮಾರ್ಗವಾಗಿ ಕೊರಟಗೆರೆ, ತುಂಬಾಡಿ ಮೂಲಕ ಸಿದ್ಧರಬೆಟ್ಟದ ತಪ್ಪಲು ತಲುಪಬಹುದು. ತುಮಕೂರು–ತೋವಿನಕೆರೆ ಮೂಲಕವೂ ಬೆಟ್ಟಕ್ಕೆ ಹೋಗಬಹುದು. ⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT