ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ: ಮಹಾಬಲಿಪುರಂನ ಶಿಲ್ಪ ಸಾಕ್ಷ್ಯ

Published 4 ನವೆಂಬರ್ 2023, 15:44 IST
Last Updated 4 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಅರಬ್ಬೀ ಸಮುದ್ರದ ತಟದಲ್ಲಿ ಬಾಲ್ಯ ಕಳೆದ ನನಗೆ ಕಡಲು ಹೊಸತಲ್ಲ. ಆದರೆ, ಅದರ ಸಾಂಗತ್ಯ ಎಂದೂ ಸಾಕೆನಿಸಿದ್ದಿಲ್ಲ. ಹೀಗಾಗಿ ಸಮುದ್ರದೆಡಿಗಿನ ಪಯಣಕ್ಕೆ ಯಾವಾಗಲೂ ಜೈ. ಈಗಂತೂ ಎರಡೂ ಬಾಹುಗಳನ್ನು ಚಾಚಿದರೆ ಒಂದು ಅರಬ್ಬಿಗೂ, ಇನ್ನೊಂದು ಬಂಗಾಳಕೊಲ್ಲಿಗೂ ಸ್ಪರ್ಶಿಸುವಂತಿರುವ ಕೇಂದ್ರಬಿಂದು ಬೆಂಗಳೂರು ಎನಿಸುತ್ತದೆ. ಇಲ್ಲಿ ನೆಲೆಕಂಡ ಮೇಲೆ ಯಾವುದಾದರೂ ತೀರಕ್ಕೆ ಐದಾರು ಗಂಟೆಗಳಲ್ಲಿ ಮುಟ್ಟಬಹುದೆಂಬುದು ನನ್ನ ಪಾಲಿನ ಸುಕೃತ ಎಂದುಕೊಂಡಿದ್ದೇನೆ.

ಮೊನ್ನೆ ನವರಾತ್ರಿಯ ವಾರದ ರಜೆಗೆ ಹೊರಟಿದ್ದು ಬಂಗಾಳಕೊಲ್ಲಿ ತೀರದ ಮಹಾಬಲಿಪುರಂಗೆ. ಕಂಚಿ ಕಾಮಾಕ್ಷಿಯ ದರ್ಶನ ಮಾಡಿಕೊಂಡು ನಾವು ಹೋಗುವಾಗ ಭೋಜನದ ಸಮಯ ದಾಟಿದ್ದರಿಂದ ಟೊಮೆಟೋ ಅನ್ನ, ಮೊಸರನ್ನ ಪ್ರಸಾದವನ್ನು ಎರಡೆರಡು ಸಲ ಹಾಕಿಸಿಕೊಂಡು ಹೊಟ್ಟೆ ತಂಪಾಗಿಸಿಕೊಂಡೆವು. ಕಂಚಿಗೆ ಬಂದಮೇಲೆ ಸೀರೆ ವ್ಯಾಪಾರ ಮಾಡದೇ ಇರುವುದುಂಟೇ ಎಂದು ಕನ್ನಡದಲ್ಲಿಯೇ ಚೌಕಾಸಿ ಮಾಡಿ ಸೀರೆಯೊಂದನ್ನು ಖರೀದಿಸಿದ್ದಾಯಿತು. ಅಲ್ಲಿಂದ ಮಹಾಬಲಿಪುರಂನತ್ತ ಹೊರಟಾಗ ಸಂಜೆ ನಾಲ್ಕು ದಾಟಿತ್ತು. ಎರಡು ಗಂಟೆಯೊಳಗಿನ ದಾರಿ. ‘ಅಪ್ಪಾ ಸನ್ ಸೆಟ್‌ ಆಗುವುದರೊಳಗೆ ಹೋಗಬೇಕು’ ಎಂದು ಮಗ ಪೀಡಿಸಲಾರಂಭಿಸಿದ್ದ. ಅಜ್ಜನ ಊರಿನಲ್ಲಿ ನೋಡಿದಂತೆ ಇಲ್ಲಿನ ಸಮುದ್ರದಲ್ಲಿ ಸೂರ್ಯ ಕಂತುವುದು ಅಂದುಕೊಂಡಿದ್ದ ಅಮಾಯಕ. ‘ಎಲವೋ ಮೂಢ. ಬಂಗಾಳಕೊಲ್ಲಿ ಯಾವ ದಿಕ್ಕಿನಲ್ಲಿದೆ ಎಂದು ಮ್ಯಾಪ್‌ ನೆನಪಿಸಿಕೋ. ಸಮುದ್ರ ಇರುವಲ್ಲೆಲ್ಲ ಸನ್‌ಸೆಟ್‌ ಆಗದು. ಇಲ್ಲಿ ಸನ್‌ರೈಸ್‌ ನೋಡಬೇಕು’ ಎಂಬ ತಿಳಿವಳಿಕೆ ಹೇಳಿದಳು ಮಗಳು. ಅಚ್ಚರಿ ತಂದ ಈ ವಿಷಯ ಅವನಿಗೆ ಅರಗಿಸಿಕೊಳ್ಳಲು ಸ್ವಲ್ಪ ಸಮಯಬೇಕಾಯಿತು.

ಹುಲಿಗುಹೆಯ ಚಿತ್ತಾಕರ್ಷಕ ರಚನೆ

ಹುಲಿಗುಹೆಯ ಚಿತ್ತಾಕರ್ಷಕ ರಚನೆ

ರಜಾಕಾಲವಾಗಿದ್ದರಿಂದ ಸಾಗರಕ್ಕೇ ಸಡ್ಡು ಹೊಡೆಯುವಂತಹ ಜನಸಾಗರ ಸೇರಿತ್ತು ಅಲ್ಲಿ. ಮಕ್ಕಳನ್ನು ಸೆಳೆಯುವ ಮೋಜಿನ ಆಟಗಳು, ಕುದುರೆ/ಒಂಟೆ ಸವಾರಿ ಇದ್ದವು. ಕಸ ಮತ್ತು ಮಾಲಿನ್ಯದಿಂದ ನೀರಿಗಿಳಿಯುವ ಮನಸ್ಸಾಗಲಿಲ್ಲ. ಸ್ವಚ್ಛತೆಯ ಕುರಿತಾಗಿ ಅನೇಕ ಫಲಕಗಳು ಇದ್ದರೂ ತಮ್ಮದೂ ಒಂದಿರಲಿ ಎಂದು ಕೊಡುಗೆ ನೀಡುತ್ತಲೇ ಇದ್ದರು. ಸೂರ್ಯೋದಯ ನೋಡುವ ಹುಮ್ಮಸಿನೊಂದಿಗೆ ವಾಪಸಾದರೆ ರಾತ್ರಿ ಸುರಿದ ಜೋರುಮಳೆಯಿಂದ ಸೂರ್ಯ ಬೆಳಿಗ್ಗೆ ಎಂಟರವರೆಗೂ ಮೋಡದ ಮರೆಯಲ್ಲಿಯೇ ಉಳಿದ. ಬಾಲಸೂರ್ಯನನ್ನು ನೋಡುವ ಆಸೆ ಅಲ್ಲಿದ್ದ ಎರಡೂ ದಿನಗಳಲ್ಲಿ ಪೂರೈಸಲಿಲ್ಲ.

ಪಲ್ಲವರು ಕಂಚಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರೆ, ಮಹಾಬಲಿಪುರಂನನ್ನು ಪ್ರಮುಖ ವ್ಯಾಪಾರಕೇಂದ್ರವನ್ನಾಗಿಸಿಕೊಂಡಿದ್ದರು. ಚೀನಾದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರುವ ಕುರಿತಾಗಿ ಇಲ್ಲಿನ ಸೀಶೋರ್‌ ದೇವಸ್ಥಾನದಲ್ಲಿ ಸಾಕ್ಷ್ಯಸಿಗುತ್ತದೆ (ಇಂಥದ್ದೇ ಆರು ದೇವಾಲಯಗಳು ಸಮುದ್ರದಲ್ಲಿ ಮುಳುಗಿವೆ ಎಂಬುದು ವಿದೇಶೀ ಯಾತ್ರಿಕರ ಅಭಿಪ್ರಾಯ). ಪಗೋಡಾ ಮಾದರಿಯ ರಚನೆ, ಡ್ರ್ಯಾಗನನ್ನು ಹೋಲುವ ಕೆತ್ತನೆಗಳು ಆಗ ವಿದೇಶೀ ಆಕರ್ಷಣೆಯ ಮಂತ್ರವಾಗಿತ್ತು, 2019ರಲ್ಲಿ ಚೀನಾದ ಅಧ್ಯಕ್ಷ ಷಿ ಜಿನ್‌ಪಿಂಗ್‌ ಇಲ್ಲಿಗೆ ಭೇಟಿಕೊಟ್ಟಿದ್ದು ಈ ದೃಷ್ಟಿಯಲ್ಲಿ ಗಮನಾರ್ಹ.‌ ಇವಿಷ್ಟು ನಮ್ಮ ಗೈಡಿನ ವಿವರಣೆ.

ಮಹಾಬಲಿಪುರಂಗೆ ಶಿಖರಪ್ರಾಯದಂತಿರುವುದು ಪಂಚರಥಗಳು. ಮಹಾಭಾರತದ ಪಂಚಪಾಂಡವರು ಮತ್ತು ದ್ರೌಪದಿಯ ಹೆಸರಿನಲ್ಲಿರುವ ರಥಗಳು ಏಕಶಿಲಾ ಮಾದರಿಯಲ್ಲಿ ರಚನೆಯಾದವುಗಳು. ಆದರೆ, ಇಲ್ಲಿನ ಯಾವ ಕೆತ್ತನೆಗಳಿಗೂ ಮಹಾಭಾರತದೊಂದಿಗೆ ಏನೂ ಸಂಬಂಧವಿಲ್ಲ ಎಂಬುದು ಅಚ್ಚರಿಯ ವಿಷಯ. ಹಾಗೆಯೇ ಕೆಲವೊಂದು ರಥಗಳು ಅಪೂರ್ಣವಾಗಿಯೇ ಉಳಿದಿರುವುದರ ಹಿಂದಿನ ಕಾರಣ ನಿಗೂಢವಾಗಿದೆ. ಹಾಗೆಯೇ ಕಾಣಲು ಉರುಟು ಹಾಗೂ ನುಣುಪಾಗಿರುವ ಕೃಷ್ಣನ ಬೆಣ್ಣೆ ಚೆಂಡಿಗೂ (ಬಟರ್‌ ಬಾಲ್), ಅದರ ಹೆಸರಿಗೂ ಸಂಬಂಧವಿಲ್ಲ. 20 ಅಡಿ ಎತ್ತರ, 5 ಮೀಟರ್‌ ಅಗಲ ಹಾಗೂ ಸುಮಾರು 250 ಟನ್‌ ತೂಗುವ ಬಂಡೆ ಬೆಟ್ಟದ ಇಳಿಜಾರಿನಲ್ಲಿ ಮಳೆ, ಗಾಳಿ ಸುನಾಮಿ ಮುಂತಾದವುಗಳಿಗೆ ಜಗ್ಗದೆ ನಿಂತಿರುವುದು ವಿಜ್ಞಾನಕ್ಕೆ ಸವಾಲು. ಅನೇಕರು ಇದನ್ನು ಸರಿಸಲು ಪ್ರಯತ್ನಿಸಿ ಸೋತ ಕತೆಯೂ ಇದರಲ್ಲಿ ಅಡಗಿದೆ. ಈ ಬಟರ್‌ ಬಾಲ್‌ನಿಂದ ನಡಿಗೆ ಆರಂಭಿಸಿದರೆ ವಿಶಾಲವಾದ ಎರಡು–ಮೂರು ಕಿ.ಮೀ.ನ ಹರಹಿನಲ್ಲಿ ಮಹಿಷಮರ್ದಿನಿ ಗುಹೆ, ವರಾಹ ಗುಹೆ, ಈಶ್ವರ ದೇವಸ್ಥಾನ, ಕೃಷ್ಣನ ಮಂಟಪಗಳಿವೆ. ಅದರಲ್ಲಿ ಅರ್ಜುನನ ತಪಸ್ಸು ಎಂಬ ಕಲಾಸೃಷ್ಟಿ ಮನಮೋಹಕ. ಅರ್ಜುನನಿಗೆ ಶಿವನು ಪಾಶುಪತಾಸ್ತ್ರ ಕೊಡುವ ದೃಶ್ಯ ಕೆತ್ತಿದೆಯಾದರೂ ಅದರಲ್ಲಿ ಭಗೀರಥನು ಗಂಗೆಯನ್ನು ಭೂಮಿಗೆ ತಂದ ವಿವರಣೆ ಇದೆ. ದೇವತೆಗಳು, ಗಂಧರ್ವರು, ಆನೆಗಳು, ಋಷಿಗಳು, ಪ್ರಾಣಿಗಳ ರಚನೆಗಳನ್ನು ಇಲ್ಲಿ ಕೆತ್ತಲಾಗಿದೆ. ಇವೆಲ್ಲವೂ ಪಲ್ಲವರ ಶಿಲ್ಪಕಲಾ ವೈಭವಕ್ಕೆ ಸಾಕ್ಷಿಯಾಗಿ ನಿಂತಿವೆ.

ಇಲ್ಲಿ ನೋಡಬೇಕಾದ ಮತ್ತೊಂದು ಶಿಖರಪ್ರಾಯದ ರಚನೆ ಹುಲಿಗುಹೆ (ಟೈಗರ್‌ ಕೇವ್)‌. ಪ್ರವೇಶ ದ್ವಾರದ ಸುತ್ತಲೂ ಹನ್ನೊಂದು ಹುಲಿಗಳ ತಲೆಗಳನ್ನು ಕೆತ್ತಿರುವುದರಿಂದ ಈ ಹೆಸರು ಬಂದಿದೆ. ಸ್ವಲ್ಪ ದೂರದಲ್ಲಿಯೇ ನೆಲಮಟ್ಟದಿಂದ ಸ್ವಲ್ಪ ತಗ್ಗಿನಲ್ಲಿ ಶಿವಲಿಂಗ ಮತ್ತು ನಂದಿಯ ದೇವಾಲಯವಿದೆ. ಇಲ್ಲಿನ ಹೆಚ್ಚಿನ ರಚನೆಗಳು ನರಸಿಂಹವರ್ಮನ್‌ ಹಾಗೂ ಅವನ ಮಗನ ಕಾಲದಲ್ಲಿ ಆದವುಗಳು. ಕೆಲವೊಂದು ಭಗ್ನಗೊಂಡ ರಚನೆಗಳು, ಅಪೂರ್ಣ ಶಿಲ್ಪಕಲೆಗಳು, ಖಾಲಿ ಗರ್ಭಗುಡಿ ನಮ್ಮ ಬಾದಾಮಿ ಮತ್ತು ಹಂಪಿಯನ್ನು ನೆನಪಿಸಿದವು.

ಹದಿನಾರು ವರ್ಷ ಮೇಲ್ಪಟ್ಟವರಿಗೆ ನೂರು ರೂಪಾಯಿಯ ಟಿಕೆಟ್ ಕೊಂಡರೆ ಯುನೆಸ್ಕೊ ಮತ್ತು ಭಾರತದ ಪುರಾತತ್ವ ಇಲಾಖೆಯಿಂದ ಮಾನ್ಯತೆ ಪಡೆದ ಎಲ್ಲಾ ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವೇಶ ಸಿಗುತ್ತದೆ. ಹಾಗೆಯೇ ಇಲ್ಲಿನ ಸರ್ಕಾರಿ ಸ್ವಾಮ್ಯದ ಜಾಗಗಳಲ್ಲಿ ಪಾರ್ಕಿಂಗ್‌ ಉಚಿತವಿದೆ. ಇನ್ನು ಖಾಸಗಿ ಒಡೆತನದಲ್ಲಿರುವ ಕಪ್ಪೆಚಿಪ್ಪುಗಳ ಮ್ಯೂಸಿಯಂ, ಡೈನೊಸಾರ್‌ ಪಾರ್ಕ್‌, ಮೊಸಳೆ ಪಾರ್ಕ್‌ಗಳನ್ನೂ ಇವುಗಳೊಂದಿಗೆ ನೋಡಬಹುದು.

ಪ್ರವಾಸಿಗರು ಹೆಚ್ಚು ಸಂಖ್ಯೆಯಲ್ಲಿ ಇರುವ ಜಾಗಗಳಲ್ಲಿ ಮಳಿಚಿಪ್ಪಿನ ಆಭರಣಗಳು, ಬಣ್ಣದ ಕಲ್ಲುಗಳ, ಮುತ್ತುಗಳ ಸರವನ್ನು ಮಾರುವ ಪುಟ್ಟ ಹುಡುಗಿಯರು ಸಮುದ್ರರಾಜನ ಕುವರಿಯರಂತೆ ಕಂಡುಬಂದರು. ಸುಂದರವಾಗಿ ಕಂಡದ್ದರಿಂದ ಪ್ರೀತಿಪಾತ್ರರಿಗೆ ಕೊಡುವ ನೆಪದಲ್ಲಿ ಕೆಲವು ಮಾಲೆಗಳನ್ನು ಕೊಂಡಿದ್ದಾಯಿತು. ತಮಗಿಷ್ಟ ಬಂದಂತೆ ದರ ಏರಿಸಿ, ಇಳಿಸುವ ವ್ಯಾಪಾರದಲ್ಲಿ ಚತುರಮತಿಗಳಾಗಿರುವ ಈ ಹುಡುಗಿಯರು ನೀವು ಸ್ವಲ್ಪ ಆಸಕ್ತಿತೋರಿದರೆ ಸಾಕು ಬೆಂಬಿಡದೆ ಬೆನ್ನು ಹತ್ತುತ್ತಾರೆ. ಇವರಿಂದ ಪಾರಾಗಲು ಅವರಿಗಿಂತ ಚತುರರಾಗಿರಬೇಕು.

ದೇಗುಲದ ಗೋಡೆಗಳಲ್ಲಿನ ಕೆತ್ತನೆ
ದೇಗುಲದ ಗೋಡೆಗಳಲ್ಲಿನ ಕೆತ್ತನೆ
ಕೆತ್ತನೆಯ ಸಮೃದ್ಧಿ ಸಾರುವ ಚಿತ್ರ
ಕೆತ್ತನೆಯ ಸಮೃದ್ಧಿ ಸಾರುವ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT