ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಾಂಗಿ ಹಾದಿ.. ಅನುಭೂತಿಯ ಗಾದಿ.. | ನಿಷ್ಕಾರಣ ಪ್ರೀತಿಯ ಹುಡುಕುತ್ತಾ...

Published 8 ಡಿಸೆಂಬರ್ 2023, 23:30 IST
Last Updated 8 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ನಿರಂತರವಾಗಿ ಬೈಕ್‌ ಓಡಿಸುವುದು ಸುಲಭವಂತೂ ಅಲ್ಲ. ಈಚೆಗೆ ದಶಮಿರಾಣಿ ಅವರು ತಮಿಳುನಾಡು ಹಾಗೂ ಕೇರಳದ ಮೂಲಕ ಹಾದುಹೋಗುವ ಹೊಸದೊಂದು ಯಾತ್ರೆಯನ್ನು ಮುಗಿಸಿ ಬಂದಿದ್ದಾರೆ.

ಇಡೀ ಬೆಂಗಳೂರು ಕತ್ತಲೆಯಲ್ಲಿ ಮುಳುಗಿ, ಜನರೆಲ್ಲ ಸಕ್ಕರೆ ನಿದ್ದೆಯ ಸುಖವನ್ನು ಸವಿಯುತ್ತಿದ್ದರು. ಸಮಯ ಸರಿಯಾಗಿ ಮೂರು ಗಂಟೆ. ರಾತ್ರಿಯೂ ಅಲ್ಲದ, ಬೆಳಗೂ ಅಲ್ಲದ ಆ ನಸುಕಿನ ನಿಶ್ಯಬ್ದ ಗಳಿಗೆಯಲ್ಲಿ ಬುಡ್ ಬುಡ್ ಬುಡ್ ಎಂಬ  ಸೌಂಡು..

ಬೈಕ್‌ ಇನ್ನೇನು ಹೊರಡಲು ಅಣಿಯಾಯ್ತು. ಹೆಲ್ಮೆಟ್ ಒಳಗಿನಿಂದ ಕಂಡ ಕಂಗಳು, ದೂರದೂರಿನ ಅವಿರತ ಪಯಣ ಹಾಗೂ ಅದನ್ನು ಸಾಧ್ಯವಾಗಿಸುವ ವಿಶ್ವಾಸದಿಂದ ಬೆಳಗುತ್ತಿದ್ದವು.

ಬೆಂಗಳೂರಿನ ಬೈಕರ್ ದಶಮಿ ರಾಣಿ ಈ ಬಾರಿ ಮತ್ತೊಂದು ಜೈತ್ರಯಾತ್ರೆಗೆ ಹೊರಟರು. ಲೇಹ್ ಲಡಾಕ್, ಈಶಾನ್ಯ ಭಾರತಗಳನ್ನು ಏಕಾಂಗಿಯಾಗಿ ಸುತ್ತಿ ಸೈ ಎನಿಸಿಕೊಂಡಿರುವ ಅವರ ಪಯಣ ದಕ್ಷಿಣದ ರಾಜ್ಯಗಳತ್ತ ಸಾಗಿತು.

ಇಲ್ಲೇ ಪಕ್ಕದ ರಾಜ್ಯವಾದರೂ ತಲುಪುವ ಗಮ್ಯ ಹತ್ತಿರದ್ದಾಗಿರಲಿಲ್ಲ. ಉದಯವಾಗಲಿದ್ದ ಸೂರ್ಯನನ್ನು ಇನ್ನಷ್ಟು ಬೇಗ ಎದುರುಗೊಳ್ಳುವ ತವಕದಲ್ಲಿ ಮೂಡಣ ದಿಕ್ಕಿನೆಡೆಗೆ ಅವರ ಪ್ರಯಾಣ ಶುರುವಾಯಿತು.

‘ಬೆಳಿಗ್ಗೆ ಎದ್ದು ಹಲ್ಲುಜ್ಜಲು ಬ್ರಷ್‌ಗೆ ತಡಕಾಡುವ ಹೊತ್ತಿಗೆ, ನಾನು 600 ಕಿಲೋಮೀಟರ್ ದೂರದ ತಮಿಳುನಾಡಿನ ಮಧುರೈ ನಗರ ತಲುಪಿದ್ದೆ. ಅಂದು ನಾನು ಮತ್ತೆ ವಿಶ್ರಾಂತಿ ಅಂತ ಪಡೆದಿದ್ದು ಕನ್ಯಾಕುಮಾರಿಯಲ್ಲಿ. ಅದೂ ರಾತ್ರಿ ಒಂಬತ್ತು ಗಂಟೆಗೆ. 24 ಗಂಟೆಯ ಪೈಕಿ 18ಗಂಟೆಗಳನ್ನು ನಾನು ಬೈಕ್‌ನಲ್ಲಿ ಕಳೆದಿದ್ದೆ... ಅದೂ ಒಬ್ಬೊಂಟಿಯಾಗಿ...’ ಎಂದು ಹೇಳುವಾಗ ಅವರ ಗಂಟಲು ಉಬ್ಬಿಬಂತು.

ಒಬ್ಬ ಮಹಿಳೆಯಾಗಿ ನಿರಂತರವಾಗಿ ಬೈಕ್‌ ಓಡಿಸುವುದು ಸುಲಭವಂತೂ ಅಲ್ಲ. ಈಚೆಗೆ ಅವರು ತಮಿಳುನಾಡು ಹಾಗೂ ಕೇರಳದ ಮೂಲಕ ಹಾದುಹೋಗುವ ಹೊಸದೊಂದು ಯಾತ್ರೆಯನ್ನು ಮುಗಿಸಿ ಬಂದಿದ್ದಾರೆ. ತಮ್ಮ ‘ಸೋಲೊ ಬೈಕ್ ಜರ್ನಿ’ಯನ್ನು ವಿವರಿಸುತ್ತಿದ್ದ ದಶಮಿ, ಪಯಣದ ಹಾದಿಯ ಆಯಾಸದ ಸೆಳಕನ್ನು ಮಾತಿನಲ್ಲಿ ಒಂದಿನಿತೂ ಬಿಟ್ಟುಕೊಡಲಿಲ್ಲ.

‘ನಸುಕಿನಲ್ಲಿ ಬೈಕ್ ಹತ್ತಿ ಹೊರಟರೆ, ಸೂರ್ಯನನ್ನು ಎದುರುಗೊಳ್ಳುತ್ತಾ, ಅವನ ಜತೆ ಊರೂರು ಸುತ್ತುತ್ತಾ, ಇಡೀ ದಿನ ಜೊತೆಯಾಗಿದ್ದ ಅವನಿಗೆ ಸಂಜೆ ಒಂದು ವಿದಾಯ ಹೇಳಿ, ಪಯಣದ ಮಧ್ಯದಲ್ಲಿ ಸೇರಿಕೊಳ್ಳುವ ಚಂದಿರನ ಜೊತೆ ಹರಟುತ್ತಾ, ಗೊತ್ತಿಲ್ಲದ ಊರಿನ ಜನಸಂಸ್ಕೃತಿಯ ಸಿರಿವಂತಿಕೆಯನ್ನು ಅರಿಯುತ್ತಾ, ಹೀಗೆ ಇಡೀ ದಿನ ದೊರೆತ ಎಲ್ಲ ಅನುಭವ ಮೆಲುಕುಹಾಕುತ್ತಾ ರಾತ್ರಿ ಹಾಯಾಗಿ ನಿದ್ದೆಗೆ ಜಾರುವ ಸುಖವೇ ಬೇರೆ’ ಎನ್ನುತ್ತಾರೆ ದಶಮಿ.

ಪ್ರವಾಸ ಎಂದರೆ ಪ್ರಸಿದ್ಧ ಸ್ಮಾರಕಗಳನ್ನು ನೋಡಿ ಬರುವವರೇ ಹೆಚ್ಚು. ಅವುಗಳಾಚೆಗೂ, ಮುಖ್ಯರಸ್ತೆಗಳಿಂದ ಬಿಡಿಸಿಕೊಂಡು, ಒಳರಸ್ತೆಗಳಲ್ಲಿ ಸಿಗುವ ಅದೆಷ್ಟೋ ಪುಟ್ಟ ಹಳ್ಳಿಗಳ ಒಡಲಲ್ಲಿ, ಕಾಡಿನ ಮಡಿಲಲ್ಲಿ ಎಲೆಮರೆಯ ಕಾಯಿಯಂತೆ ಅಡಗಿ ಕೂತಿರುವ ಸ್ಮಾರಕಗಳು ಕುತೂಹಲಿಗರಿಗಷ್ಟೇ ದರ್ಶನ ನೀಡುತ್ತವೆ.

ಕಾಪರ್‌ ಪ್ಲೇಟ್‌ ಸರ್ಕ್ಯೂಟ್‌ ನಕ್ಷೆ

ಕಾಪರ್‌ ಪ್ಲೇಟ್‌ ಸರ್ಕ್ಯೂಟ್‌ ನಕ್ಷೆ

ನಿರ್ಲಕ್ಷಿತ ಸ್ಮಾರಕಗಳ ಐತಿಹಾಸಿಕ ಮಹತ್ವ, ಅವುಗಳ ಭವ್ಯತೆ, ಅವುಗಳಿಂದ ದೊರೆಯುವ ದಿವ್ಯಾನುಭೂತಿಯನ್ನು ಪ್ರವಾಸಿಗರಿಗೆ ಕಾಣಿಸುವ ಮಹತ್ವಾಕಾಂಕ್ಷೆಯ ‘ಕಾಪರ್‌ಪ್ಲೇಟ್ ಸರ್ಕ್ಯೂಟ್‌’ ಯೋಜನೆ ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ಜನ್ಮತಳೆದಿದೆ. ಈ ವಿನೂತನ ಯೋಜನೆಯನ್ನು ರಾಜ್ಯದ ಸೊಲೊ ಬೈಕರ್ ಒಬ್ಬರಿಂದ ಆರಂಭಿಸಲು ರವಿಜ್ ಹೋಟೆಲ್ ಆ್ಯಂಡ್ ರೆಸಾರ್ಟ್‌ ಸಂಸ್ಥೆ ಇಚ್ಛಿಸಿದ್ದಾಗ, ಅವರ ಮೊದಲ ಆಯ್ಕೆ ದಶಮಿ ಆಗಿದ್ದರು.

ದಶಮಿ ಅವರಿಗೆ ಎರಡೂ ರಾಜ್ಯಗಳ ಸುಪ್ತ ಸ್ಮಾರಕ, ದೇಗುಲ, ಕೋಟೆಗಳನ್ನು ಅನ್ವೇಷಿಸುತ್ತಾ, ಅವುಗಳ ಮಹತ್ವವನ್ನು ವಿವರಿಸುತ್ತಾ ಸಾಗುವ ಮಹತ್ವದ ಜವಾಬ್ದಾರಿ ನೀಡಲಾಗಿತ್ತು.

ಪ್ರವಾಸಿ ಜಗತ್ತಿಗೆ ನಿಗೂಢವೇ ಎನಿಸಿರುವ ತಿರುಚಂಡೂರ್, ತೆಂಕಾಶಿ, ಶ್ರೀವಿಲ್ಲಿ ಪುತ್ತೂರು ಮೊದಲಾದ 46 ಸ್ಥಳಗಳನ್ನು ಕೇವಲ ಮೂರು ದಿನಗಳಲ್ಲಿ ಅನ್ವೇಷಿಸುವ ಸವಾಲನ್ನು ಅವರು ಯಶಸ್ವಿಯಾಗಿ ಮಾಡಿ ಮುಗಿಸಿದರು. ಮೂರು ದಿನಗಳಲ್ಲಿ ಅವರು ಸಾವಿರಕ್ಕೂ ಹೆಚ್ಚು ಕಿಲೋಮೀಟರ್‌ ಪಯಣಿಸಿ, ಕಡಲತಡಿ, ಜಲಧಾರೆ, ಕೋಟೆ, ದೇಗುಲಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯಿಸುತ್ತಾ ಹೋದರು.

‘ಈ ಪಯಣ ದಾರಿಯಲ್ಲಿ ಸಿಗುವ ಹಳ್ಳಿಗಳಲ್ಲಿ ಒಂದಿಷ್ಟು ಹೊತ್ತು ಕಾಲಕಳೆದೆ. ಮಹಿಳೆಯಾಗಿ ಒಬ್ಬರೇ ಬೈಕ್‌ನಲ್ಲಿ ಸುತ್ತುವ ಪರಿಗೆ ಹಲವರು ಬೆರಗಾದರು. ಕೆಲವರು ಸುರಕ್ಷತೆಯ ಪಾಠ ಹೇಳಿದರು. ಹಿರಿಯರು ಆಶೀರ್ವದಿಸಿದರು. ನಿಷ್ಕಾರಣ ಪ್ರೀತಿ ತೋರಿದವರಿಗೆ ಲೆಕ್ಕವಿಲ್ಲ. ಹಳ್ಳಿಗರ ಪ್ರೀತಿ, ಕಾಳಜಿ, ಅಭಿಮಾನದ ಸುಖವುಣ್ಣುತ್ತಾ ಬೆಂಗಳೂರಿಗೆ ವಾಪಸಾದೆ’ ಎನ್ನುವಾಗ ಅವರ ಕಂಗಳಲ್ಲಿ ದಿವ್ಯ ಅನುಭೂತಿಯನ್ನೊಂದನ್ನು ಸಾಕ್ಷಾತ್ಕರಿಸಿಕೊಂಡ ಧನ್ಯತೆ ಕಾಣುತ್ತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT