ಮೈ ಒದ್ದೆಯಾಗಿಸಿಕೊಂಡು ಮನಸು ಚಿಗುರಿಸಿಕೊಳ್ಳುವ ಮಳೆಗಾಲ, ರಮಣೀಯ ತಾಣಗಳೆಲ್ಲ ಪ್ರವಾಸಿಗರಿಂದ ತುಂಬಿ ತುಳುಕುವ ಸಮಯ. ರಸ್ತೆ ಬದಿಯ ಬಿಸಿ ಬಿಸಿ ಮುಸುಕಿನ ಜೋಳ ಹಾಗೂ ಕ್ರಿಸ್ಪಿ ಪಕೋಡದ ಹೊಗೆ ಬಗೆಬಗೆಯ ವಿನ್ಯಾಸದಿಂದ ಆಕಾಶ ಮುಟ್ಟುತ್ತದೆ. ಜಲಧಾರೆಗಳ ಬುಡದಲ್ಲಿ ಭೋರ್ಗರೆತವನ್ನೂ ಮೀರಿಸುವ ಹರ್ಷೋದ್ಗಾರಗಳು ಮೊಳಗುತ್ತವೆ. ಮಳೆಗಾಲ ಪ್ರವಾಸೋದ್ಯಮದ ಸುಗ್ಗಿ ಕಾಲ. ಆದರೆ ಈ ವರ್ಷದ ಪ್ರವಾಸ ಸುಗ್ಗಿಗೆ ಕೊರೊನಾ ಬರೆ ಬಿದ್ದಿದೆ. ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದ ಸಾವಿರಾರು ಜನರ ಬದುಕಿನಲ್ಲಿ ಬರದ ನೆರಳು. ಪ್ರಸ್ತುತ ಕೊರೊನಾ ಬಿಕ್ಕಟ್ಟಿನೊಂದಿಗೆ ಜನ ಹೊಂದಿಕೊಳ್ಳಲು ಶುರು ಮಾಡಿರುವಂತೆ, ಪ್ರವಾಸಿ ಸ್ಥಳಗಳಲ್ಲಿ ಸ್ವಲ್ಪ ಮಟ್ಟಿಗಿನ ಜೀವಂತಿಕೆ ಕಾಣಿಸುತ್ತಿದೆ. ಕಳೆದ ಆರೇಳು ತಿಂಗಳ ಗೃಹಬಂಧನದಿಂದ ಉಂಟಾದ ಕ್ಲೇಶಕ್ಕೆ ಪ್ರವಾಸ ಮದ್ದಾಗಬಲ್ಲದು. ಕರ್ನಾಟಕದ ಪ್ರವಾಸಿತಾಣಗಳಲ್ಲಿ ಮೆಲ್ಲಮೆಲ್ಲನೇ ಹೆಚ್ಚುತ್ತಿರುವ ಮಾಸ್ಕ್ಧಾರಿ ಪ್ರವಾಸಿಗರ ಸಂಖ್ಯೆಯೇ ಇದಕ್ಕೆ ಪುರಾವೆ. ರಾಜ್ಯದ ಪ್ರಸಿದ್ಧ ಪ್ರವಾಸಿತಾಣಗಳಲ್ಲಿನ ಪರಿಸ್ಥಿತಿಯನ್ನು ಅವಲೋಕಿಸುವ ಈ ಪ್ರಯತ್ನ ಪ್ರವಾಸಪ್ರಿಯರಿಗೆ ಕೈಪಿಡಿಯೂ ಆಗಬಲ್ಲದು.

ಸೂರ್ಯನ ಬಿಸಿಲನನ್ನು ಸೋಸಿ ಮಂದ ಬೆಳಕನ್ನು ಹೊರಸೂಸುವ ದಟ್ಟ ಮೋಡಗಳು. ತಣ್ಣಗೆ ಬೀಸುವ ಕುಳಿರ್ಗಾಳಿ. ಕಣ್ಣು ಹಾಯಿಸಿದಷ್ಟೂ ದೂರ ಹಸಿರೇ ಹಸಿರು. ಕಾಲಿಟ್ಟಲ್ಲೆಲ್ಲ ನೀರು ಜಿನುಗಿಸುವ ಮಿದು ನೆಲ. ಒಂದೇ ಒಂದು ಸೂರ್ಯ ರೇಕುವಿನ ಸ್ಪರ್ಶಮಾತ್ರದಿಂದ ಮುತ್ತಾಗಿ ಹೊಳೆಯಲು ಹವಣಿಸಿ, ಎಲೆಗಳ ಮೇಲೆ, ಹೂಗಳ ಒಳಗೆ ತಪಸ್ಸಿಗೆ ಕೂತಿರುವ ಹನಿಗಳು. ಆಹಾ! ಬಿಸಿಲು ಬಂತು ಬಿಸಿಲು ಎಂದು ಮೈಯೊಡ್ಡುವ ಹೊತ್ತಿಗೆ ಜಿನಿ ಜಿನಿ ಜಿನುಗುತ್ತ ಕಚಗುಳಿ ಇಡುವ ಮಳೆ. ಈ ಎಲ್ಲದಕ್ಕೂ ಹೊಸದೇ ಗಾಂಭೀರ್ಯ ಕೊಟ್ಟು ಧುಮ್ಮಿಕ್ಕುವ ಜಲಪಾತ. ಮಳೆಗಾಲವೆಂದರೆ ಮಮತೆಯ ಮಾಯಿ; ಮುಗಿಯದ ಮೋಹದ ಮಾಯೆ; ಸ್ವರ್ಗದ ಸಿರಿಯ ಜೀವಂತ ಛಾಯೆ.

ಬಿಸಿಲಿನ ಧಗೆಗೆ ದೂಳಾಗಿ ನಿತ್ರಾಣಗೊಂಡಿದ್ದ ಭೂಮಿ, ಸುದೀರ್ಘ ವಿರಹದ ನಂತರ ಬರುತ್ತಿರುವ ಇನಿಯನಿಗಾಗಿ ಸಡಗರ ಸಂಭ್ರಮದ ಹಸಿರು ಹೊದ್ದು ಹಸಿಮೈಯ ಹುಡುಗಿಯಾಗಿ ನಾಚುತ್ತ ನಿಲ್ಲುವ ಕಾಲ ಮಳೆಗಾಲ. ಭೂಮಿಗೇ ಇಷ್ಟೊಂದು ಸಂಭ್ರಮವಿರಬೇಕಾದರೆ ಭೂಮಿಯ ಮಕ್ಕಳು ನಾವು; ನಮಗೆಷ್ಟು ಸಂಭ್ರಮವಿರಬೇಡ?

ಮಳೆಗಾಲ ಪ್ರವಾಸೋದ್ಯಮದ ಸುಗ್ಗಿ ಕಾಲ. ಆದರೆ ಈ ವರ್ಷದ ಈ ಪ್ರವಾಸ ಸುಗ್ಗಿಗೆ ಕೊರೊನಾ ಬರೆ ಬಿದ್ದಿದೆ. ಪ್ರವಾಸೋದ್ಯಮವನ್ನೇ ನಂಬಿಕೊಂಡಿದ್ದ ಸಾವಿರಾರು ಜನರ ಬದುಕಿನಲ್ಲಿ ಬರ ಬಿದ್ದಿದೆ. ಈ ವರ್ಷ ಮಾರ್ಚ್ ತಿಂಗಳಲ್ಲಿ ಶುರುವಾದ ಲಾಕ್ಡೌನ್ನಿಂದ ದೇಶವೇ ಸ್ತಬ್ಧಗೊಂಡಿತ್ತು. ಇದೀಗ ಲಾಕ್ಡೌನ್ನ ಬಹುತೇಕ ನಿರ್ಬಂಧಗಳು ತೆರವಾಗಿದ್ದರೂ, ಕೊರೊನಾ ಪ್ರಕರಣಗಳು ದಿನದಿಂದ ಹೆಚ್ಚುತ್ತಲೇ ಇವೆ. ಹೀಗಿರುವಾಗ, ಮನುಷ್ಯ ಮನೆಯ ಗೂಡಿನೊಳಗೇ ಸೇರಿಕೊಂಡುಬಿಟ್ಟಿರುವಾಗ, ಪ್ರವಾಸದ ಹುಮ್ಮಸ್ಸು ಎಲ್ಲಿರುತ್ತದೆ?

ಈ ವರ್ಷ ಮಳೆ ಚೆನ್ನಾಗಿ ಸುರಿದಿದೆ. ಕೆಲವೆಡೆ ಮಳೆಯಿಂದ ಸಾಕಷ್ಟು ಅನಾಹುತಗಳೂ ಆಗಿವೆ. ಆದರೆ ಕಳೆದ ವರ್ಷದ ವಿಕೋಪಕ್ಕೆ ಹೋಲಿಸಿದರೆ ಈ ವರ್ಷದ ಮಳೆಋತು ಸಾಧುವೆಂದೇ ಹೇಳಬಹುದು. ಆದರೆ ಕಳೆದ ವರ್ಷಕ್ಕೂ ಭೀಕರವಾಗಿ ಕೊರೊನಾ ಕರಿನೆರಳು ಪ್ರವಾಸೋದ್ಯಮ ಮೇಲೆ ಕವಿದಿದೆ. ರೋಗಭೀತಿಯ ಮುಂದೆ ಪ್ರವಾಸದ ಮೋಜು ಗೆಲ್ಲಬಲ್ಲದೇ?

ನಿಜ. ರೋಗದ ಭೀತಿಯ ಮುಂದೆ ಪ್ರವಾಸದ ಮೋಜು ಗೆಲ್ಲಲಾರದು. ಆದರೆ ಕಳೆದ ಆರೇಳು ತಿಂಗಳ ಗೃಹಬಂಧನದಿಂದ ಉಂಟಾದ ಕ್ಲೇಶಕ್ಕೆ ಪ್ರವಾಸ ಮದ್ದಾಗಬಲ್ಲದು. ನಾಲ್ಕು ಗೋಡೆಗಳ ನಡುವೆಯೇ ಬದುಕುತ್ತ, ಹೊರಗೆ ಹೋದರೆ ಮನುಷ್ಯರನ್ನು ಕಂಡರೆ ಮಾರು ದೂರ ಸರಿಯುತ್ತ, ನೆಗಡಿಯಾದರೂ ಕೆಮ್ಮಿದರೂ, ಸಣ್ಣ ಜ್ವರ ಬಂದರೂ ಒಳಗೊಳಗೇ ನಡುಗುತ್ತ, ವೃತ್ತಪತ್ರಿಕೆಗಳಲ್ಲಿ, ಟೀವಿ ವಾಹಿನಿಗಳಲ್ಲಿ, ಅಂತರ್ಜಾಲದಲ್ಲಿ ಎಲ್ಲೆಲ್ಲೂ ಕೊರೊನಾ ಎಂಬ ರಕ್ಕಸನ ಕುಣಿದಾಟವನ್ನೇ ನೋಡುತ್ತ ರೋಸಿಹೋದವರಿಗೆ ಹಸಿರ ಮಡಿಲು, ಮಳೆಯ ಒಡಲು ಖುಷಿಕೊಡದೇ ಇದ್ದೀತೆ? ಈ ಮನುಷ್ಯರ ಸಹವಾಸವೇ ಸಾಕು; ಒಂದಿಷ್ಟು ಹೊತ್ತು ಪ್ರಕೃತಿಯ ಮಡಿಲಲ್ಲಿ ನೆಮ್ಮದಿಯಿಂದ ಕಳೆದು ಬರೋಣ ಎಂದು ಅನಿಸದೇ ಇರದೆ?

ಕೆಲವರಿಗಾದರೂ ಹೀಗನಿಸುತ್ತಿದೆ. ಕರ್ನಾಟಕದ ಪ್ರವಾಸಿತಾಣಗಳಲ್ಲಿ ಮೆಲ್ಲಮೆಲ್ಲನೇ ಹೆಚ್ಚುತ್ತಿರುವ ಮಾಸ್ಕ್ಧಾರಿ ಪ್ರವಾಸಿಗರ ಸಂಖ್ಯೆಯೇ ಇದಕ್ಕೆ ಪುರಾವೆ. ಹಾಗೆಂದು ಜನರಲ್ಲಿ ರೋಗಭೀತಿ ಪೂರ್ತಿ ಹೋಗಿಲ್ಲ. ಪ್ರವಾಸದ ಉಲ್ಲಾಸಕ್ಕೆ ಮನಸ್ಸು ಸಂಪೂರ್ಣ ತೆರೆದುಕೊಂಡಿಲ್ಲ. ಕಳೆದ ವರ್ಷಗಳಿಗೆ ಹೋಲಿಸಿದರೆ ಎಲ್ಲ ಪ್ರವಾಸಿ ತಾಣಗಳೂ ಭಣಗುಡುತ್ತಲೇ ಇವೆ. ಈ ಕೊರತೆಯ ನಡುವೆಯೂ ನಿಧಾನಕ್ಕೆ ಜನರ ಹರಿವು ಹೆಚ್ಚುತ್ತಿರುವುದು ಏಕಾಂತರೋಗದ ವ್ಯಾಕುಲತೆಗೆ ನಿಸರ್ಗದ ಮಡಿಲಲ್ಲಿ ಮದ್ದುಹುಡುಕುವ ಮನುಷ್ಯನ ಜೀವನಪ್ರೀತಿಯ ಒರತೆಯನ್ನು ಸೂಚಿಸುವಂತಿದೆ.

ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿಯಲ್ಲಿ ಪ್ರವಾಸಿಗರ ದಂಡು.

ಕರೆಯುತಿದೆ ಕಾಫಿನಾಡು

ಕಾಫಿನಾಡು ಪ್ರವಾಸಿ ತಾಣಗಳ ಬೀಡು. ತಂಪು ಹವೆ, ದಟ್ಟ ಕಾನನ, ವನ್ಯ ಜೀವಿ ಸಂಕುಲ, ರಮಣೀಯ ಜಲಧಾರೆ, ಮಹೋನ್ನತ ದೇಗುಲಗಳು, ಐತಿಹಾಸಿಕ ಸ್ಥಳಗಳ ವಿಸ್ಮಯದ ನೆಲೆವೀಡು. ಕಾಫಿ ಘಮಲು, ಪಶ್ಚಿಮ ಘಟ್ಟದ ಬೆಟ್ಟಗಳ ಸಾಲು, ಮಲೆನಾಡಿನ ಪರಿಸರ ಸೊಬಗು ಇಲ್ಲಿನ ಪ್ರಮುಖ ವೈಶಿಷ್ಟ್ಯಗಳು. ಸರ್ವಋತು ಪ್ರವಾಸದ ಜಿಲ್ಲೆ ಚಿಕ್ಕಮಗಳೂರು. ಪ್ರವಾಸೋದ್ಯಮ ಇಲಾಖೆಯ ಅಂಕಿಅಂಶ ಪ್ರಕಾರ ವಾರ್ಷಿಕ ಸರಾಸರಿ ಎಂಟು ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುತ್ತಾರೆ.

ಜಿಲ್ಲೆಯಲ್ಲಿ ಪ್ರವಾಸಿ ಸ್ಥಳಗಳ ಸರಮಾಲೆಯೇ ಇದೆ. ಮುಳ್ಳಯ್ಯನ ಗಿರಿ, ಶ್ರೀಗುರುದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ, ಕುದುರೆಮುಖ, ಶಿಶಿಲ ಬೆಟ್ಟ ಶ್ರೇಣಿ, ದೇವರಮನೆ ಗುಡ್ಡ, ಕೆಮ್ಮಣ್ಣುಗುಂಡಿ, ಶೃಂಗೇರಿ, ಹಿರೇಮಗಳೂರು, ಕಳಸ, ಹೊರನಾಡು, ಅಮೃತಾಪುರ, ಬೆಳವಾಡಿಯ ದೇಗುಲಗಳು, ಮುತ್ತೋಡಿ ಮತ್ತು ಭದ್ರಾ ಅರಣ್ಯಗಳು, ಚಾರ್ಮಾಡಿ ಘಾಟಿ, ಉಳುವೆ ಪಕ್ಷಿಧಾಮ, ಕಲ್ಹತ್ತಿಗಿರಿ, ಹೆಬ್ಬೆ, ಸಿರಿಮನೆ, ಸೂತನಬ್ಬಿ, ಮಾಣಿಕ್ಯಧಾರಾ ಮೊದಲಾದ ಜಲಪಾತಗಳು, ಮಾಗುಂಡಿ ಜಲಸಾಹಸ ಕ್ರೀಡೆಯ ತಾಣ, ಋಷ್ಯಶೃಂಗ ತಪೋಭೂಮಿ ಕಿಗ್ಗಾ ಸಹಿತ ಹಲವು ಸುಂದರ ಸ್ಥಳಗಳು ಇಲ್ಲಿವೆ.

ಜಿಲ್ಲಾಡಳಿತವು ಲಾಕ್ಡೌನ್ ನಿರ್ಬಂಧ ಸಡಿಲಿಸಿ, ಆ.30ರಿಂದ ಕಾಫಿನಾಡು ದರ್ಶನಕ್ಕೆ ಷರತ್ತುಬದ್ಧ ಅವಕಾಶ ಕಲ್ಪಿಸಿದೆ. ಎರಡು ವಾರಗಳಿಂದ ಪ್ರವಾಸಿಗರ ದಂಡು ಹರಿಯಲಾರಂಭಿಸಿದೆ. ಆರೇಳು ತಿಂಗಳಿನಿಂದ ಸ್ತಬ್ಧವಾಗಿದ್ದ ಪ್ರವಾಸೋದ್ಯಮ ಕ್ಷೇತ್ರ ಚೇತರಿಕೆ ಕಡೆಗೆ ಮುಖ ಮಾಡಿದೆ. ಬದುಕಿನ ಬಂಡಿಗೆ ಪ್ರವಾಸೋದ್ಯಮವನ್ನೇ ನಂಬಿರುವ ಕುಟುಂಬಗಳಿಗೆ ಗುಟುಕು ಜೀವ ಬಂದಿದೆ. ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ಗಳ ನಿರ್ವಹಣೆಗೂ ಷರತ್ತುಗಳನ್ನು ವಿಧಿಸಿ ಅವಕಾಶ ನೀಡಲಾಗಿದೆ.

‘ಆರೇಳು ತಿಂಗಳಿನಿಂದ ಪ್ರವಾಸಿಗರು ಇರಲಿಲ್ಲ. ಹೀಗಾಗಿ, ವ್ಯಾಪಾರ ಬಿಟ್ಟು ಕೂಲಿಗೆ ಹೋಗುತ್ತಿದ್ದೆ. ಒಂದು ವಾರದಿಂದ ಪ್ರವಾಸಿಗರು ಬರುತ್ತಿದ್ದಾರೆ. ಮೆಕ್ಕೆಜೋಳ, ಎಳನೀರು, ಹಣ್ಣಿನ ವ್ಯಾಪಾರ ಮತ್ತೆ ಆರಂಭಿಸಿದ್ದೇನೆ. ದಿನಕ್ಕೆ ₹ 500ರಿಂದ ₹ 600 ದುಡಿಮೆಯಾಗುತ್ತಿದೆ’ ಎಂದು ನೆಮ್ಮದಿಯ ನಿಟ್ಟುಸಿರು ಬಿಡುತ್ತಾರೆ ಕೈಮರ ಚೆಕ್ಪೋಸ್ಟ್ ಬಳಿಯ ವ್ಯಾಪಾರಿ ರಾಮಣ್ಣ.

ಹೊರ ಜಿಲ್ಲೆ, ರಾಜ್ಯ, ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ವಾರಾಂತ್ಯದಲ್ಲಿ ಎರಡು ದಿನ ಕಾಫಿನಾಡಿನಲ್ಲಿ ತಂಗುವ ಪರಿಪಾಟ ಇದೆ. ವಾರಾಂತ್ಯದ ದಿನಗಳಲ್ಲಿ ಚಿಕ್ಕಮಗಳೂರು ನಗರದ ರಸ್ತೆಗಳು ವಾಹನಗಳು, ಪ್ರವಾಸಿಗರಿಂದ ಗಿಜಿಗಿಡುವುದು ಸಾಮಾನ್ಯ. ಲಾಕ್ಡೌನ್ ನಿರ್ಬಂಧದಿಂದಾಗಿ ಈ ಕಲರವ ಕೆಲವು ತಿಂಗಳಿನಿಂದ ಮರೆಯಾಗಿತ್ತು. ಕಳೆದ ವಾರದಿಂದ ಮತ್ತೆ ಪ್ರವಾಸಿಗರ ಕಲರವ ಶುರುವಾಗುವ ಚಿಹ್ನೆಗಳು ಗೋಚರಿಸಿವೆ.

ಕೊಡಗಿನಲ್ಲಿ ಸುರಿದಿರುವ ಮಳೆಗೆ ಜಲಪಾತಗಳ ಸಂಭ್ರಮ. ಮಡಿಕೇರಿಯಿಂದ ಸಿದ್ಧಾಪುರಕ್ಕೆ ತೆರಳುವ ಮಾರ್ಗದಲ್ಲಿನ ಬ್ಯಾಲ ಜಲಪಾತ ಪ್ರವಾಸಿಗರ ನಲ್ದಾಣಗಳಲ್ಲಿ ಒಂದಾಗಿದೆ.

ಜಲಪಾತಗಳ ಜಿಲ್ಲೆಯಲ್ಲಿ...

ಒಂದು ಕಡೆ ಭೋರ್ಗರೆವ ಕಡಲು, ಮತ್ತೊಂದೆಡೆ ಸಹ್ಯಾದ್ರಿ ಪರ್ವತಗಳ ಮಡಿಲು. ವನಸಿರಿಯ ನಡುವೆ ಧುಮ್ಮಿಕ್ಕುವ ಜಲಕನ್ಯೆಯರು, ಮುಗಿಲ ತಾಕುವಂತೆ ಕಾಣುವ ಪರ್ವತಗಳ ಸಾಲು... ಹೀಗೆ ವೈವಿಧ್ಯದ ನಿಸರ್ಗಸಂಪತ್ತಿನ ನೆಲೆದಾಣವಾದ ಉತ್ತರ ಕನ್ನಡ ಜಿಲ್ಲೆ ಪ್ರವಾಸಿಗರ ಪಾಲಿನ ನೆಚ್ಚಿನ ನಲ್ದಾಣವೂ ಹೌದು.

ಕಾರವಾರ, ಗೋಕರ್ಣ, ಮುರ್ಡೇಶ್ವರದ ಕಡಲತೀರಗಳು, ಯಲ್ಲಾಪುರ, ಶಿರಸಿ ಸುತ್ತಮುತ್ತಲಿನ ಜಲಧಾರೆಗಳು, ಜೋಯಿಡಾದ ದಟ್ಟ ಕಾನನ, ಬೇಡ್ತಿ, ಅಘನಾಶಿನಿ, ಕಾಳಿಯಂಥ ನದಿಗಳ ಜಲತನನನ... ಹೀಗೆ ಪ್ರವಾಸಿಗರನ್ನು ಸೆಳೆದುಕೊಳ್ಳಲು ಪೈಪೊಟಿಗೆ ಬಿದ್ದಂತೆ ಕಾಣುವ ಪ್ರವಾಸಿಕೇಂದ್ರಗಳು ಈಗ ಜನರಿಲ್ಲದೆ ಭಣಗುಡುತ್ತಿವೆ. ಆತಿಥ್ಯ ವಲಯವನ್ನೇ ನೆಚ್ಚಿಕೊಂಡು ಲಕ್ಷಾಂತರ ರೂಪಾಯಿಗಳ ಬಂಡವಾಳ ಹೂಡಿದ್ದವರು ಸಾಲದ ಕಂತು ಪಾವತಿಸಲೂ ಸಾಧ್ಯವಾಗದೆ ಚಿಂತೆಯಲ್ಲಿದ್ದಾರೆ. ಆದರೆ ಕೇಂದ್ರ ಸರ್ಕಾರವು ಲಾಕ್ಡೌನ್ ನಿಯಮಗಳನ್ನು ಸಡಿಲಿಸಿದ ಬಳಿಕ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಹರಿವು ನಿಧಾನವಾಗಿ ಶುರುವಾಗಿರುವುದು ಅವರ ಉಸಿರಾಟವನ್ನು ತುಸು ನಿರಾಳಗೊಳಿಸಿರುವುದೂ ನಿಜ.

ಕಾರವಾರದ ರವೀಂದ್ರನಾಥ ಟ್ಯಾಗೋರ್ ಕಡಲತೀರ, ಮುರ್ಡೇಶ್ವರ, ಜೊಯಿಡಾದ ಹೋಮ್ ಸ್ಟೇಗಳು, ಯಲ್ಲಾಪುರದ ಸಾತೊಡ್ಡಿ, ಮಾಗೋಡು, ಶಿರಲೆ ಜಲಪಾತಗಳು, ಜೇನುಕಲ್ಲುಗುಡ್ಡ, ಸಿದ್ದಾಪುರದ ಬುರುಡೆ ಫಾಲ್ಸ್, ಶಿರಸಿಯ ಉಂಚಳ್ಳಿ ಫಾಲ್ಸ್, ಯಾಣಕ್ಕೆ ಪ್ರವಾಸಿಗರು ಭೇಟಿ ನೀಡಲು ಆರಂಭಿಸಿದ್ದಾರೆ. ಪ್ರತಿ ವರ್ಷ ವಿದೇಶಿಗರಿಂದಲೇ ಮಿಜಿಗುಡುತ್ತಿದ್ದ ಓಂ ಬೀಚ್ ಈಗ ಸ್ವದೇಶಿ ಪ್ರವಾಸಿಗರ ವಿರಳ ಓಡಾಟದಲ್ಲಿಯೇ ತೃಪ್ತಿಪಟ್ಟುಕೊಳ್ಳುತ್ತಿದೆ.

ಸುರಕ್ಷತೆಗೆ ಆದ್ಯತೆ

ಉತ್ತರಕನ್ನಡ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನವರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ರೆಸಾರ್ಟ್, ಹೋಮ್ಸ್ಟೇ, ಹೋಟೆಲ್ ಕೊಠಡಿಗಳನ್ನು ಆನ್ಲೈನ್ ಬುಕಿಂಗ್ ಮಾಡಿಕೊಂಡು ಬರುತ್ತಾರೆ. ಅವರ ಹಾಗೂ ಉದ್ಯಮ ನಡೆಸುವವರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದೆ.

‘ಪ್ರವಾಸಿಗರು ಮತ್ತು ಸಿಬ್ಬಂದಿಯ ನಡುವೆ ಸಾಕಷ್ಟು ಅಂತರ ಇರುವಂತೆ ನೋಡಿಕೊಳ್ಳಲಾಗುತ್ತಿದೆ. ಪ್ರವಾಸಿಗರು ಖಾಲಿ ಮಾಡಿದ ಕೊಠಡಿಯನ್ನು 24 ಗಂಟೆಗಳ ನಂತರವೇ ಸ್ವಚ್ಛಗೊಳಿಸಿ ಸ್ಯಾನಿಟೈಸ್ ಮಾಡಲಾಗುತ್ತಿದೆ. ಎಲ್ಲರೂ ಮುಖಗವುಸು ಧರಿಸುವುದನ್ನು ಕಡ್ಡಾಯ ಮಾಡಲಾಗಿದೆ’ ಎನ್ನುತ್ತಾರೆ ಜೊಯಿಡಾದ ‘ಕಾಡುಮನೆ ಹೋಂ ಸ್ಟೇ’ ಮಾಲೀಕ ನರಸಿಂಹ ಭಟ್.

‘ಪ್ರವಾಸಿಗರು ಉಳಿದುಕೊಂಡಿರುವ ಕೊಠಡಿಗಳ ಬಾಗಿಲಿನವರೆಗೆ ಮಾತ್ರ ಸಿಬ್ಬಂದಿಯ ಸೇವೆಯನ್ನು (ರೂಂ ಸರ್ವಿಸ್) ಸೀಮಿತಗೊಳಿಸಲಾಗಿದೆ. ಮೊದಲಿನಂತೆ, ಕೊಠಡಿಗಳ ಒಳಗೇ ಹೋಗಿ ಆಹಾರ, ಪಾನೀಯ ನೀಡುವ ಪದ್ಧತಿ ಈಗ ಇಲ್ಲ. ಪ್ರವಾಸಿಗರ ವಾಹನಗಳನ್ನು ವಾಸ್ತವ್ಯದ ಪ್ರದೇಶದಿಂದ ಸುಮಾರು 100 ಮೀಟರ್ ದೂರದಲ್ಲೇ ನಿಲುಗಡೆ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ’ ಎಂದು ಕಾರವಾರದ ‘ಓಷಿಯನ್ ಡೆಕ್ ಹೋಮ್ಸ್ಟೇ’ ಮಾಲೀಕ ವಿನಯ ನಾಯ್ಕ ಮಾಹಿತಿ ನೀಡುತ್ತಾರೆ.

ಗೋಕರ್ಣ, ಮುರ್ಡೇಶ್ವರ, ಶಿರಸಿಯ ಮಾರಿಕಾಂಬಾ ಮುಂತಾದ ಪ್ರಸಿದ್ಧ ದೇಗುಲಗಳು ತೆರೆದಿದ್ದರೂ ಕೊರೊನಾಕ್ಕೂ ಹಿಂದೆ ಇದ್ದ ರೀತಿಯಲ್ಲಿ ಭಕ್ತರಿಗೆ ಪ್ರವೇಶ ಸಿಕ್ಕಿಲ್ಲ. ಧಾರ್ಮಿಕ ಕ್ಷೇತ್ರಗಳಲ್ಲೂ ಸ್ಯಾನಿಟೈಸರ್, ಮುಖಗವುಸು ಬಳಕೆ ಕಡ್ಡಾಯವಿದೆ.

‘ದೇವಸ್ಥಾನದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದಾರೆ. ಎಲ್ಲೂ ಅಸುರಕ್ಷತೆಯ ಭಾವನೆ ಬಂದಿಲ್ಲ. ಸ್ಯಾನಿಟೈಸರ್ ಬಳಸಿ ಕೈ ಸ್ವಚ್ಛಗೊಳಿಸುವುದು, ಥರ್ಮಲ್ ಸ್ಕ್ಯಾನರ್ನಿಂದ ದೇಹದ ಉಷ್ಣಾಂಶವನ್ನು ಪರೀಕ್ಷಿಸುತ್ತಾರೆ. ನಾವು ಕುಟುಂಬದ ಸಮೇತ ಬಂದಿದ್ದೇವೆ’ ಎಂದು ಬೆಂಗಳೂರಿನಿಂದ ಗೋಕರ್ಣಕ್ಕೆ ಬಂದಿದ್ದ ಎ.ಎಸ್. ಆನಂದ ‘ಸುಧಾ’ ಪ್ರತಿನಿಧಿಗೆ ತಿಳಿಸಿದರು.

ಕಡಲತೀರಗಳಲ್ಲಿ ಎಚ್ಚರ

ಈಗ ಮಳೆಗಾಲವಾಗಿರುವ ಕಾರಣ ಉತ್ತರ ಕನ್ನಡದ ಕಡಲತೀರಗಳು ಅಷ್ಟಾಗಿ ಸುರಕ್ಷಿತವಾಗಿಲ್ಲ. ಕಡಲಿಗಿಳಿದ ಪ್ರವಾಸಿಗರಿಗೆ ಸೂಚನೆ ನೀಡುತ್ತಿದ್ದ, ಮುಳುಗುತ್ತಿದ್ದ ಪ್ರವಾಸಿಗರ ರಕ್ಷಣೆಗೆ ಧಾವಿಸುತ್ತಿದ್ದ ‘ಜೀವರಕ್ಷಕ’ರ ನೇಮಕ ಇನ್ನೂ ಆಗಿಲ್ಲ. ಹಾಗಾಗಿ ಅಬ್ಬರದ ಅಲೆಗಳಿಗೆ ಸಿಲುಕಿದರೆ ಅಪಾಯ ಉಂಟಾಗುವ ಸಾಧ್ಯತೆಯಿದೆ.

ಭಕ್ತರ ದಾರಿ ಕಾಯುವ ದೇವರು!

ಕರ್ನಾಟಕದ ಕರಾವಳಿ ದೇವಸ್ಥಾನಗಳಿಗೆ ಹೆಚ್ಚು ಪ್ರಸಿದ್ಧಿ. ಜಾತ್ರೆಗಳ ಸಂಭ್ರಮ, ನವರಾತ್ರಿಯ ವೈಭವ, ತೆನೆಹಬ್ಬದ ಶ್ರದ್ಧೆ ಮತ್ತು ದೈವಾರಾಧನೆಯ ಧ್ವನಿಯೊಂದಿಗೆ ವರ್ಷವಿಡೀ ವೈಭವವನ್ನೇ ಉಸಿರಾಡುವ ಕರಾವಳಿಯಲ್ಲಿ ‘ಕೋವಿಡ್ 19’ ಕಾರಣಕ್ಕೆ ಕಳೆದ ಆರೇಳು ತಿಂಗಳಿಂದ ಕವಿದಿದ್ದ ಮೌನ ಈಗ ನಿಧಾನಕ್ಕೆ ಕದಡುತ್ತಿದೆ.

ದೇವಸ್ಥಾನಗಳನ್ನು ಹೊರತುಪಡಿಸಿದರೆ, ಬೀಚ್ಗಳಲ್ಲಾದರೂ ಜನರ ಓಡಾಟವಿದೆಯೇ ಎಂದು ಗಮನಿಸಿದರೆ, ಅಲ್ಲೂ ಹೆಚ್ಚು ಖುಷಿಯಿಲ್ಲ. ಕೋವಿಡ್ ಸೋಂಕಿನ ದೆಸೆಯಿಂದ ಲಾಕ್ಡೌನ್ ತುಸು ಹೆಚ್ಚೇ ಬಿಗುವಾಗಿದ್ದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಸಿದ್ಧ ದೇವಸ್ಥಾನಗಳಿಗೆ ಬರುವ ಭಕ್ತರ ಸಂಖ್ಯೆ ತೀರಾ ಕಡಿಮೆ ಆಗಿತ್ತು. ಆದರೆ ಜೂನ್ 1ರ ನಂತರ ಜಾರಿಯಾದ ಅನ್ಲಾಕ್ ನಿಯಮಗಳನ್ನು ಅನುಸರಿಸಿ, ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸ್ವಚ್ಛತೆಯ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಭಕ್ತರಿಗೆ ದೇವರ ದರ್ಶನದ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಆದರೆ ದಿನಕ್ಕೆ 80ಕ್ಕೂ ಹೆಚ್ಚು ಸರ್ಪ ಸಂಸ್ಕಾರ, ಎರಡು ಹಂತದಲ್ಲಿ ನಡೆಯುತ್ತಿದ್ದ ಆಶ್ಲೇಷಾ ಬಲಿ ಮತ್ತು ಇತರ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಸರ್ಪ ಸಂಸ್ಕಾರ ಮತ್ತು ಇತರ ಸೇವೆಗಳಿಗೆ ದಿನ ನಿಗದಿ ಮಾಡಿ, ಮುಂಗಡ ಹಣ ಪಾವತಿಸಿದವರ ಪೈಕಿ ಕೆಲವರಿಗೆ ಆನ್ಲೈನ್ನಲ್ಲಿ ಹಣವನ್ನು ಮರುಪಾವತಿಸಲಾಗಿದೆ. ಮತ್ತೆ ಕೆಲವರು ಪರಿಸ್ಥಿತಿ ಸರಿಯಾದ ಬಳಿಕವೇ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ರವೀಂದ್ರ ಮಾಹಿತಿ ನೀಡಿದರು.

ಈಗಲೂ ಕುಕ್ಕೆ ದೇವಸ್ಥಾನಕ್ಕೆ ದಿನಕ್ಕೆ ಸುಮಾರು ಎರಡು ಸಾವಿರ ಭಕ್ತರು ಭೇಟಿ ಕೊಡುತ್ತಿದ್ದಾರೆ. ಅವರಿಗೆ ತೀರ್ಥ ಪ್ರಸಾದವಾಗಲೀ, ಲಡ್ಡು ಮುಂತಾದ ಯಾವುದೇ ಪ್ರಸಾದವಾಗಲೀ ಕೊಡುವ ಅವಕಾಶ ಇಲ್ಲ. ಕೈಗೆ ಸ್ಯಾನಿಟೈಸರ್ ಹಾಕುವಂತೆ ಸೂಚಿಸಿ, ಪ್ರತಿಯೊಬ್ಬರ ದೇಹದ ತಾಪಮಾನ ಪರಿಶೀಲನೆ ಮಾಡಿದ ಬಳಿಕ ದೇವಸ್ಥಾನದೊಳಗೆ ಬಿಡಲಾಗುತ್ತಿದೆ. ದೇವಸ್ಥಾನದೊಳಗೂ ಭಕ್ತರು ದೇವರ ದರ್ಶನ ಪಡೆದು, ಪ್ರದಕ್ಷಿಣೆ ಹಾಕಿ ಸೀದಾ ಹೊರಗೆ ಬರಬೇಕು. ಎಲ್ಲಿಯೂ ಕುಳಿತುಕೊಳ್ಳುವಂತಿಲ್ಲ. ದೇವಸ್ಥಾನದ ವಸತಿ ಗೃಹಗಳಲ್ಲಿ ಭಕ್ತರಿಗೆ ಉಳಿದುಕೊಳ್ಳುವ ಅವಕಾಶ ನೀಡಿಲ್ಲ. ಖಾಸಗಿ ವಸತಿ ಗೃಹಗಳು ದೂರದ ಊರುಗಳಿಂದ ಬರುವ ಭಕ್ತರಿಗೆ ವಿಶ್ರಾಂತಿಯ ಅವಕಾಶ ಕಲ್ಪಿಸಿವೆ.

ಧರ್ಮಸ್ಥಳದಲ್ಲಿಯೂ ಇದೇ ಮಾದರಿಯನ್ನು ಅನುಸರಿಸಿ ಭಕ್ತರಿಗೆ ದರ್ಶನದ ಅವಕಾಶ ಕಲ್ಪಿಸಲಾಗಿದೆ. ಸ್ಯಾನಿಟೈಸ್ಗೆ ಹೆಚ್ಚು ಆದ್ಯತೆ ನೀಡಿ ಭಕ್ತರನ್ನು ದೇವಸ್ಥಾನದೊಳಗೆ ಬಿಡಲಾಗುತ್ತದೆ. ದೇವಸ್ಥಾನದಲ್ಲಿ ಅನ್ನದಾನದ ಪರಂಪರೆಗೆ ಚ್ಯುತಿ ಬರಬಾರದು ಎಂಬ ಕಾರಣಕ್ಕೆ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಬಹಳ ದೂರದಿಂದ ಬರುವ ಭಕ್ತರಿಗೆ ಊಟದ ಅವಶ್ಯಕತೆ ಇರುತ್ತದೆ. ಆದ್ದರಿಂದ ಸ್ವಚ್ಛತೆಗೆ ಆದ್ಯತೆ ನೀಡಿ ಮಧ್ಯಾಹ್ನ ಊಟದ ಪ್ರಸಾದ ನೀಡಲಾಗುತ್ತಿದೆ. ಪದೇಪದೇ ಸ್ಯಾನಿಟೈಸ್ ಮಾಡುವುದು, ಬಿಸಿನೀರು ಬಳಕೆ ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನು ದೇವಸ್ಥಾನದಲ್ಲಿ ಕೈಗೊಳ್ಳಲಾಗಿದೆ. ಕೊಲ್ಲೂರು ಸೇರಿದಂತೆ ಕರಾವಳಿಯ ಎರಡೂ ಜಿಲ್ಲೆಗಳ ಬಹುತೇಕ ದೇವಸ್ಥಾನಗಳಲ್ಲಿ ಹೀಗೆ ದರ್ಶನಕ್ಕಷ್ಟೇ ಅವಕಾಶ. ಉಡುಪಿ ಕೃಷ್ಣ ಮಠದಲ್ಲಿಯೂ ಗರ್ಭಗುಡಿಯವರೆಗೆ ಹೋಗಿ ದರ್ಶನಪಡೆಯುವ ಅವಕಾಶ ಇನ್ನೂ ನೀಡಿಲ್ಲ. ಕನಕನಕಿಂಡಿಯವರೆಗೆ ಹೋಗಿ ದರ್ಶನಪಡೆದು ಬರಬಹುದು. ಮುಜರಾಯಿ ಇಲಾಖೆಯಿಂದ ಪ್ರಕಟವಾಗಲಿರುವ ಹೊಸ ಮಾರ್ಗಸೂಚಿಗಳ ನಿರೀಕ್ಷೆಯಲ್ಲಿ ದೇವಸ್ಥಾನಗಳ ಆಡಳಿತ ಸಿಬ್ಬಂದಿ ಇದ್ದಾರೆ.

ಮಂಗಳೂರು ಮತ್ತು ಉಡುಪಿಯ ಸಮುದ್ರದಂಡೆಗಳಲ್ಲಿ ಪ್ರವಾಸಿಗರು ಓಡಾಡುತ್ತಿದ್ದಾರೆ. ಮನರಂಜನೆ ವ್ಯವಸ್ಥೆ ಇರುವ ಬೀಚ್ಗಳು ಮೌನವಾಗಿವೆ. ಪ್ರವಾಸಿಗರು ಸಮುದ್ರದಂಡೆಯುದ್ದಕ್ಕೂ ಹೆಜ್ಜೆ ಹಾಕಬೇಕಷ್ಟೆ. ಒಂಟೆ ಸವಾರಿ, ಕುದುರೆ ಸವಾರಿ, ದೋಣಿ ಸವಾರಿ ಮುಂತಾದ ಗಮ್ಮತ್ತುಗಳಿಗೆ ಅವಕಾಶವಿಲ್ಲ. ಆದರೂ ಆಗಸ್ಟ್ ಕೊನೆಯವಾರ, ಸೆಪ್ಟೆಂಬರ್ ಮೊದಲ ವಾರಗಳಲ್ಲಿ ಬೀಚ್ಗಳಲ್ಲಿ ಪ್ರವಾಸಿಗರ ಸಂಖ್ಯೆ ಗಿಜಿಗುಡುತ್ತಿತ್ತು. ಬಸ್ಸುಗಳ ಸಂಖ್ಯೆ ಕಡಿಮೆಯಾದರೂ, ಖಾಸಗಿ ವಾಹನಗಳಲ್ಲಿ ಬರುವವರೇ ಹೆಚ್ಚು.

ಮೈಸೂರಿನ ವೈಭವ ಮರಳಿ ಹಳಿಯತ್ತ

ಮೈಸೂರಿನ ಪ್ರವಾಸಿತಾಣಗಳ ಪಟ್ಟಿ ಬೇಕಾದವರು ‘ನೆನಪಿರಲಿ’ ಚಿತ್ರದ ಈ ಹಾಡನ್ನು ಒಮ್ಮೆ ಕೇಳಿದರೆ ಸಾಕು.

‘ಕೂರಕ್ ಕುಕ್ರಳ್ಳಿ ಕೆರೆ/ ತೇಲಕ್ ಕಾರಂಜಿ ಕೆರೆ/ ಚಾಮುಂಡಿ ಬೆಟ್ಟ ಇದೆ/ ಕನ್ನಂಬಾಡಿ ಕಟ್ಟೆ ಇದೆ’ ಎಂದು ಬೆಳೆಯುತ್ತ ಹೋಗುವ ಹಾಡು ಕೆ.ಆರ್.ಎಸ್., ಶ್ರೀರಂಗಪಟ್ಟಣ, ನಂಜನಗೂಡು, ರಂಗನತಿಟ್ಟು ಹೀಗೆ ಮೈಸೂರು ಸುತ್ತಮುತ್ತಲಿನ ಎಲ್ಲ ಪ್ರೇಕ್ಷಣೀಯ ಸ್ಥಳಗಳನ್ನೂ ಪಟ್ಟಿ ಮಾಡುತ್ತದೆ. ಈ ಹಾಡು ಶುರುವಾಗುವುದೇ ‘ಅರೆ ಯಾರ್ರೀ ಹೆದರ್ ಕೊಳ್ಳೋರು/ ಬೆದರ್ ಕೊಳ್ಳೋರು/ ಪೇಚಾಡೋರು, ಪರದಾಡವ್ರು’ ಎಂದು. ಸಿನಿಮಾದಲ್ಲಿ ಪ್ರೇಮಿಗಳನ್ನು ಉದ್ದೇಶಿಸಿ ಹೇಳಿದ ಈ ಮಾತು ಇಂದು ಎಲ್ಲರಿಗೂ ಅಕ್ಷರಶಃ ಅನ್ವಯಿಸುವಂತಿದೆ. ಇಡೀ ಮೈಸೂರೇ ಈ ಹಾಡನ್ನು ಗುನುಗುತ್ತ ಪ್ರವಾಸಿಗರ ಎದೆಯಲ್ಲಿನ ಭಯವನ್ನು ಕರಗಿಸಿ ಕೈಬೀಸಿ ಕರೆಯುತ್ತಿರುವಂತೆ ಭಾಸವಾಗುತ್ತಿದೆ.

ಮೈಸೂರು ಹಾಗೂ ಸುತ್ತಮುತ್ತಲಿನ ಪ್ರಮುಖ ಪ್ರವಾಸಿ ತಾಣಗಳಾದ ಅಂಬಾವಿಲಾಸ ಅರಮನೆ, ಚಾಮರಾಜೇಂದ್ರ ಮೃಗಾಲಯ, ಚಾಮುಂಡಿಬೆಟ್ಟ, ನಂಜನಗೂಡು, ಶ್ರೀರಂಗಪಟ್ಟಣ, ತಲಕಾಡು ಪ್ರವಾಸಿಗರಿಲ್ಲದೆ ಭಣಗುಟ್ಟುತ್ತಿವೆ. ಕೆಆರ್ಎಸ್–ಬೃಂದಾವನ ಉದ್ಯಾನ, ರಂಗನತಿಟ್ಟು ಇನ್ನೂ ತೆರೆದಿಲ್ಲ.

ಸಾಂಸ್ಕೃತಿಕ ನಗರಿ ಮೈಸೂರಿಗೆ ಹಿಂದೆ ವರ್ಷದ ಎಲ್ಲಾ ದಿನಗಳಲ್ಲೂ ಪ್ರವಾಸಿಗರು ಹರಿದು ಬರುತ್ತಲೇ ಇದ್ದರು. ಆದರೆ ಈ ವರ್ಷ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ. ಪ್ರವಾಸೋದ್ಯಮವನ್ನೇ ನಂಬಿ ಬದುಕುತ್ತಿರುವ ಇಲ್ಲಿನ ಹೋಟೆಲ್, ಲಾಡ್ಜ್, ಪ್ರವಾಸಿ ಸ್ಥಳದ ಅಂಗಡಿಗಳು, ಟ್ಯಾಕ್ಸಿಗಳು, ಆಟೊ ಚಾಲಕರು ಪ್ರವಾಸಿಗರಿಲ್ಲದೇ ಕಳೆದ ಆರು ತಿಂಗಳಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಟೂರಿಸ್ಟ್ ಗೈಡ್ಗಳು, ಟೂರಿಸ್ಟ್ ಫೋಟೊಗ್ರಾಫರ್ಸ್, ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ.

‘ಮೈಸೂರಿನ ಶೇ 30ರಷ್ಟು ಮಂದಿ ಪ್ರವಾಸೋದ್ಯಮ ನಂಬಿ ಬದುಕುತ್ತಿದ್ದಾರೆ. ಈ ವಲಯಕ್ಕೆ ಪ್ರತಿದಿನ ಅಂದಾಜು ₹ 50 ಕೋಟಿ ಆದಾಯ ನಷ್ಟ ಉಂಟಾಗುತ್ತಿದೆ. ಹಲವು ಹೋಟೆಲ್ಗಳು ಮುಚ್ಚಿವೆ. ಲಾಡ್ಜ್ಗಳು ಶೇ 90ರಷ್ಟು ಖಾಲಿ ಬಿದ್ದಿವೆ’ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಹೇಳುತ್ತಾರೆ.

ವಾರಾಂತ್ಯದಲ್ಲೂ ಬೆರಳೆಣಿಕೆ ಮಂದಿ ಕಾಣಿಸುತ್ತಿದ್ದಾರೆ. ಪ್ರಮುಖವಾಗಿ ಹಿಂದೆಲ್ಲ ಮಕ್ಕಳ ಕಲರವ ಜೋರಾಗಿರುತ್ತಿತ್ತು. ಈಗ ಮಕ್ಕಳು ಮನೆಯಲ್ಲೇ ಬಂದಿಯಾಗಿದ್ದಾರೆ. ಶಾಲಾಕಾಲೇಜಿಗೆ ರಜೆ ಇದ್ದರೂ ಪ್ರವಾಸಿ ತಾಣಗಳಲ್ಲಿ ಮಕ್ಕಳ ಸುಳಿವು ಇಲ್ಲ. ವಿದೇಶಿಗರು ಅಲ್ಲದೇ, ಇತರ ರಾಜ್ಯಗಳಿಂದಲೂ ಪ್ರವಾಸಿಗರು ಬರುತ್ತಿದ್ದರು. ಅದೀಗ ಸಂಪೂರ್ಣ ನಿಂತು ಹೋಗಿದೆ.

ಮೈಸೂರು ಅರಮನೆ ಸುತ್ತಮುತ್ತ ಮೊದಲಿನ ವಾತಾವರಣ ಇಲ್ಲ. ಬೆರಳೆಣಿಕೆ ಪ್ರವಾಸಿಗರಷ್ಟೇ ಕಾಣಿಸುತ್ತಾರೆ. ಇನ್ನೂ ಅರಮನೆ ವಿದ್ಯುತ್ ಅಲಂಕಾರ ಆರಂಭಿಸಿಲ್ಲ. ದಸರಾ ಮಹೋತ್ಸವ ಬೇರೆ ಸಮೀಪಿಸುತ್ತಿದೆ. ಅದಕ್ಕೂ ಸರಿಯಾಗಿ ಸಿದ್ಧತೆ ಆರಂಭವಾಗಿಲ್ಲ.

ರಾಜ್ಯದ ನಂಬರ್ ಒನ್ ಮೃಗಾಲಯಕ್ಕೆ ಪ್ರತಿನಿತ್ಯ ಸರಾಸರಿ ನಾಲ್ಕು ಸಾವಿರ ಪ್ರವಾಸಿಗರು ಬರುತ್ತಿದ್ದರು. ಈಗ ಅದರ ಶೇ 30ರಷ್ಟು ಮಂದಿಯೂ ಬರುತ್ತಿಲ್ಲ. ಮೃಗಾಲಯದ ನಿರ್ವಹಣೆ, ಸಿಬ್ಬಂದಿಯ ವೇತನ ಮತ್ತು ಪ್ರಾಣಿಗಳ ಆಹಾರ ಸೇರಿ ತಿಂಗಳಿಗೆ ₹ 2 ಕೋಟಿಯಷ್ಟು ಹಣ ಬೇಕಿದೆ. ಈಗ ಆದಾಯಕ್ಕೆ ಪೆಟ್ಟು ಬಿದ್ದಿದೆ.

ಚಾಮುಂಡಿಬೆಟ್ಟಕ್ಕೆ ಬರುವವರ ಸಂಖ್ಯೆಯೂ ತೀರ ಹೇಳಿಕೊಳ್ಳುವಂತಿಲ್ಲ. ಉಳಿದ ಪ್ರದೇಶಗಳಿಗೆ ಹೋಲಿಸಿದರೆ ಪರವಾಗಿಲ್ಲ ಎನ್ನಬಹುದಷ್ಟೇ. ಚಾಮುಂಡೇಶ್ವರಿ ತಾಯಿ ದರ್ಶನ ಪಡೆಯಲು ನಿತ್ಯ ಭಕ್ತರು ಬಂದು ಹೋಗುತ್ತಿದ್ದಾರೆ. ಪರಿಸ್ಥಿತಿ ಮೊದಲಿನ ಸ್ಥಿತಿಗೆ ಬರಲಿ ಎಂದು ಪ್ರವಾಸಿಗರಷ್ಟೇ ಅಲ್ಲ, ಇಡೀ ಮೈಸೂರೇ ಆಸೆಗಣ್ಣಿನಿಂದ ಕಾಯುತ್ತಿರುವಂತಿದೆ.

ಕೊಡಗಿಗೆ ಭೂಕುಸಿತದ ಬಡಿತ

ರಾಜ್ಯದ ಬೇರೆಲ್ಲ ಪ್ರವಾಸಿ ತಾಣಗಳು ಕೊರೊನಾ ಬರೆಯಿಂದ ತತ್ತರಿಸಿದರೆ ಕೊಡಗಿನ ಕಥೆಯೇ ಬೇರೆ. ಕಳೆದ ವರ್ಷವೇ ಕೊಡಗು ಪ್ರಕೃತಿವಿಕೋಪದಿಂದ ಪತರಗುಟ್ಟಿತ್ತು. ಈ ವರ್ಷ ಒಂದೆಡೆ ಕೊರೊನಾ ದರಿ, ಇನ್ನೊಂದೆಡೆ ಭೂಕುಸಿತದ ಹುಲಿ. ನಡುವೆ ಸಿಲುಕಿದ ಕೊಡವರ ನಾಡು ಅಕ್ಷರಶಃ ಬಡವಾಗಿದೆ.

ಕೊಡಗಿನಲ್ಲಿ ಅಂದಾಜು ನಾಲ್ಕು ಸಾವಿರ ಹೋಮ್ಸ್ಟೇಗಳಿವೆ. ಅದರಲ್ಲಿ ಮೂರು ಸಾವಿರ ಅನಧಿಕೃತ ಹೋಮ್ಸ್ಟೇಗಳು. ಈ ಸಂಖ್ಯೆಯಿಂದ, ಅಲ್ಲಿನ ಜನರು ಪ್ರವಾಸೋದ್ಯಮವನ್ನು ಎಷ್ಟು ನೆಚ್ಚಿಕೊಂಡಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬಹುದು. ನಿಸರ್ಗ ದೇವತೆ ಪುರಸೊತ್ತಲ್ಲಿ ಸೃಷ್ಟಿಸಿದಂತೆ ಭಾಸವಾಗುವ ಇಲ್ಲಿನ ಹಲವು ರಮಣೀಯ ತಾಣಗಳು ಈಗ ನಿರ್ಜನವಾಗಿವೆ. ಸೆ. 1ರವರೆಗೂ ಇಲ್ಲಿನ ರಾಜಾಸೀಟ್ ಬಿಟ್ಟು ಉಳಿದ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ಪ್ರವೇಶ ಇರಲಿಲ್ಲ. ಹೊಸ ಪ್ರವಾಸೋದ್ಯಮ ನೀತಿ ಜಾರಿಗೆ ಬಂದ ಮೇಲೆ ಪ್ರವಾಸಿ ಚಟುವಟಿಕೆಗಳು, ನಿಧಾನವಾಗಿ ಗರಿಗೆದರುವ ಲಕ್ಷಣಗಳು ಕಾಣಿಸುತ್ತಿವೆ. ಒಂದೊಂದೇ ಪ್ರವಾಸಿ ತಾಣಗಳು ಪ್ರವೇಶಕ್ಕೆ ಮುಕ್ತವಾಗುತ್ತಿವೆ. ಕೋವಿಡ್ ಕರಿನೆರಳು ಇನ್ನೂ ಕಾಡುತ್ತಿದ್ದು ಅದರ ನಡುವೆಯೇ ಜೀವಿಸುವ ಅನಿವಾರ್ಯತೆ ಸೃಷ್ಟಿಯಾಗಿದೆ.

ಎರಡು ವಾರಗಳ ಹಿಂದೆ ಮಡಿಕೇರಿಯ ರಾಜಾಸೀಟ್ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ ನಿಧಾನಕ್ಕೆ ಪ್ರವಾಸಿಗರು ‘ಮಂಜಿನ ನಗರಿ’ಯತ್ತ ಆಗಮಿಸುತ್ತಿದ್ದಾರೆ. ವಾರಾಂತ್ಯದಲ್ಲಿ ರಾಜಾಸೀಟ್ ಹಾಗೂ ಕುಶಾಲನಗರದ ನಿಸರ್ಗಧಾಮದಲ್ಲಿ ಪ್ರವಾಸಿಗರ ಕಲರವ ಕೇಳಿಸುತ್ತಿದೆ.

ಸೆ.15ರ ಬಳಿಕ ಮತ್ತಷ್ಟು ಪ್ರವಾಸಿ ತಾಣಗಳು ಪ್ರವಾಸಿಗರಿಗೆ ಮುಕ್ತವಾಗಲಿವೆ. ಇದರಿಂದ ಪ್ರವಾಸೋದ್ಯಮವನ್ನೇ ಅವಲಂಬಿಸಿ ಜೀವನ ನಡೆಸುತ್ತಿದ್ದವರ ಮೊಗದಲ್ಲಿ ಮಂದಹಾಸ ಮೂಡುವ ಲಕ್ಷಣಗಳು ಕಾಣಿಸುತ್ತಿವೆ. ಅಬ್ಬಿ ಜಲಪಾತ, ರಾಜಾಸೀಟ್, ನಿಸರ್ಗಧಾಮ, ಮಲ್ಲಳ್ಳಿ ಜಲಪಾತ, ದುಬಾರೆ, ಚೇಲಾವರ ಜಲಪಾತ, ಇರ್ಫು ಜಲಪಾತ ಹಾಗೂ ತಲಕಾವೇರಿ ಸದಾ ಪ್ರವಾಸಿಗರಿಂದ ಮಿಜಿಗುಡುತ್ತಿದ್ದ ತಾಣಗಳಾಗಿದ್ದವು. ಆರು ತಿಂಗಳ ಅಜ್ಞಾತವಾಸವನ್ನು ಮುಗಿಸಿ ಅವೀಗ ಅತಿಥಿಗಳನ್ನು ಎದುರುಗೊಳ್ಳಲು ಸಜ್ಜಾಗುತ್ತಿವೆ.

ಬುಕಿಂಗ್ ಆರಂಭ

ಕೊಡಗಿನಲ್ಲಿ ಕೊರೊನಾ ಭೀತಿ ಹೆಚ್ಚಾದ ಮೇಲೆ ಮಾರ್ಚ್ 20ರ ಬಳಿಕ ಹೋಮ್ ಸ್ಟೇ ಹಾಗೂ ರೆಸಾರ್ಟ್ಗಳು ಬಂದ್ ಆಗಿದ್ದವು. ಜಿಲ್ಲಾಡಳಿತವೇ ಹೋಮ್ ಸ್ಟೇ, ರೆಸಾರ್ಟ್ ಮುಚ್ಚುವಂತೆ ಅಧಿಕೃತ ಆದೇಶ ಹೊರಡಿಸಿತ್ತು. ಇದೀಗ ಅವುಗಳನ್ನು ತೆರೆಯಲು ಅವಕಾಶ ನೀಡಲಾಗಿದ್ದು, ಹೋಮ್ ಸ್ಟೇ ಹಾಗೂ ರೆಸಾರ್ಟ್ ಮಾಲೀಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಬುಕಿಂಗ್ ಸಹ ಆರಂಭವಾಗಿದೆ. ಲಾಕ್ಡೌನ್ ಅವಧಿಯಲ್ಲಿ ಹೋಮ್ ಸ್ಟೇಗಳಲ್ಲಿ ಕೆಲಸವಿಲ್ಲದೇ ಕಾರ್ಮಿಕರು ಊರಿಗೆ ತೆರಳಿದ್ದರು. ಅವರು ಮತ್ತೆ ವಾಪಸ್ಸಾಗುತ್ತಿದ್ದಾರೆ.

‘ವರ್ಕ್ ಫ್ರಂ ಹೋಮ್’ ನಿಯಮದಿಂದ ಸಾಫ್ಟ್ವೇರ್ ಎಂಜಿನಿಯರ್ಗಳು ಕೊಡಗಿನ ಹೋಮ್ಸ್ಟೇಗಳಲ್ಲಿ ಕುಳಿತು ಕೆಲಸ ಮಾಡುತ್ತಿದ್ದಾರೆ. ಇಲ್ಲಿನ ಪ್ರಕೃತಿ ಮಡಿಲಿನ ಹೋಮ್ ಸ್ಟೇಗಳಲ್ಲಿ ಕಾಲ ಕಳೆಯುತ್ತಲೇ ಕೆಲಸ ಮಾಡುತ್ತಿದ್ದಾರೆ. ಅಕ್ಟೋಬರ್ ವೇಳೆಗೆ ಪ್ರವಾಸಿ ಚಟುವಟಿಕೆಗೆ ಇನ್ನಷ್ಟು ಮೆರುಗು ಬರಬಹುದು ಎಂಬ ನಿರೀಕ್ಷೆ ಪ್ರವಾಸೋದ್ಯಮ ಅವಲಂಬಿತರದ್ದು.

ಹಂಪಿಯ ಕಲ್ಲುರಥ ಕಾದಿದೆ ಸೆಲ್ಫಿಗೆ

ಕನ್ನಡ ನಾಡಿನ ಇತಿಹಾಸದ ವೈಭವದ ಹೆಗ್ಗುರುತು ಹಂಪಿ. ವಿಶ್ವ ಪಾರಂಪರಿಕ ತಾಣ ಎಂದು ಗುರ್ತಿಸಲಾಗಿರುವ ಈ ಜಾಗ ಪ್ರವಾಸಿತಾಣವಾಗಿಯೂ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. ಆದರೆ ಕಳೆದ ಕೆಲವು ತಿಂಗಳುಗಳಿಂದ ಹಂಪಿಯಲ್ಲಿ ಒತ್ತೊತ್ತಿಗೆ ಹತ್ತಿ ನಿಂತಿದ್ದ ಕಲ್ಲುಗಳೇ ಮಾತಾಡಿಕೊಳ್ಳುತ್ತಿದ್ದವೇ ವಿನಾ ಪ್ರವಾಸಿಗರ ಸುಳಿವಿರಲಿಲ್ಲ. ಹಾಗೆ ನೋಡಿದರೆ ಈಗಲೂ ಹಂಪಿಯಲ್ಲಿ ಪ್ರತಿವರ್ಷದಂತೆ ಹರ್ಷದ ಕೇಕೆ ಕೇಳುತ್ತಿಲ್ಲ. ಕಲ್ಲಿನ ರಥದ ಮುಂದೆ, ಮಾತಂಗ ಪರ್ವತದ ನೆತ್ತಿಯ ಮೇಲೆ, ವಿರೂಪಾಕ್ಷ ದೇವಾಲಯದ ಆವರಣದಲ್ಲಿ ಎಲ್ಲೆಂದರಲ್ಲಿ ನಿಂತು ಸೆಲ್ಫಿಗೆ ಮುಖವೊಡ್ಡುತ್ತಿದ್ದ ಪ್ರವಾಸಿಗರ ಗಜಿಬಿಜಿಯ ಒಂದಂಶವೂ ಇಲ್ಲ. ಆದರೆ ನಿಧಾನವಾಗಿ ಪ್ರವಾಸಿಗರು ಈ ಕ್ಷೇತ್ರದ ಕಡೆಗೆ ಮುಖಮಾಡುತ್ತಿರುವುದು ಬಿಸಿಲ ಬೇಗೆಯಲ್ಲಿಯೂ ಸ್ಥಳೀಯರಲ್ಲಿ ಸಮಾಧಾನದ ತಂಗಾಳಿಯಂತೆ ಭಾಸವಾಗುತ್ತಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಜುಲೈ 6ರಿಂದ ಜಾರಿಗೆ ಬರುವಂತೆ ಸಾರ್ವಜನಿಕರಿಗೆ ಹಂಪಿ ಸ್ಮಾರಕಗಳ ವೀಕ್ಷಣೆಯನ್ನು ಮುಕ್ತಗೊಳಿಸಿತು. ಒಂದೆರಡು ವಾರಗಳಲ್ಲಿ ಪರಿಸ್ಥಿತಿ ಸುಧಾರಿಸಿ, ಪ್ರವಾಸಿಗರು ತುಂಗೆಯ ತಟದತ್ತ ಮುಖ ಮಾಡಬಹುದು ಎಂಬ ನಿರೀಕ್ಷೆ ಇತ್ತು. ಪ್ರವಾಸಿಗರನ್ನೇ ನೆಚ್ಚಿಕೊಂಡು ಬದುಕು ಕಟ್ಟಿಕೊಂಡಿರುವ ಇಲ್ಲಿನ ಇನ್ನೂರಕ್ಕೂ ಹೆಚ್ಚು ಮಾರ್ಗದರ್ಶಿಗಳು (ಗೈಡ್ಗಳು), ನೂರರ ಆಸುಪಾಸಿನಲ್ಲಿರುವ ಹೋಟೆಲ್, ರೆಸಾರ್ಟ್ ಹಾಗೂ ಹೋಂ ಸ್ಟೇಗಳ ಮಾಲೀಕರು, ಅಲ್ಲಿ ಕೆಲಸ ನಿರ್ವಹಿಸುವ ನೂರಾರು ಜನರೂ ಅದನ್ನೇ ಕಾಯುತ್ತಿದ್ದರು. ಆರಂಭದಲ್ಲಿ ಹುಸಿಯಾಗಿದ್ದ ಅವರ ನಿರೀಕ್ಷೆ ಈಗ ಸ್ವಲ್ಪಮಟ್ಟಿಗೆ ಕೈಗೂಡುವ ಲಕ್ಷಣಗಳು ಕಂಡು ಬರುತ್ತಿವೆ. ಅವರ ವ್ಯವಹಾರ ನಿಧಾನವಾಗಿ ಹಳಿ ಮೇಲೆ ಬರುತ್ತಿದೆ.

ಮಳೆಗಾಲದಲ್ಲಿ ಹಂಪಿಯ ಬೆಟ್ಟ, ಗುಡ್ಡಗಳು, ಅದರ ಸುತ್ತಮುತ್ತಲಿನ ಪರಿಸರ ಹಚ್ಚ ಹಸಿರಾಗುತ್ತದೆ. ತುಂಗಭದ್ರೆ ಮೈದುಂಬಿಕೊಂಡು ಹರಿಯುತ್ತಾಳೆ. ತಂಪಾದ ವಾತಾವರಣದಲ್ಲಿ ಹಂಪಿ ನೋಡಲು ಹೆಚ್ಚಿನವರು ಇಷ್ಟಪಡುತ್ತಾರೆ. ಹವ್ಯಾಸಿ ಛಾಯಾಗ್ರಾಹಕರೂ ಇದೇ ಸಂದರ್ಭಕ್ಕೆ ಕಾದು ಕುಳಿತಿರುತ್ತಾರೆ.

ಮಾರ್ಚ್ನಿಂದ ಆಗಸ್ಟ್ ಎರಡನೇ ವಾರದವರೆಗೆ ‘ಬಯಲು ವಸ್ತು ಸಂಗ್ರಹಾಲಯ’ದಲ್ಲಿ ಬರೀ ಮೌನ ಆವರಿಸಿಕೊಂಡಿತ್ತು. ಈಗ ಕೊರೊನಾ ಭಯ ಜನರಿಂದ ನಿಧಾನ ದೂರವಾದಂತೆ ಗೋಚರಿಸುತ್ತಿದೆ. ಅದಕ್ಕೆ ಸಾಕ್ಷಿ ಪ್ರವಾಸಿಗರ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚಳ ಆಗುತ್ತಿರುವುದು.

ಮಳೆಗಾಲದಲ್ಲಿ ಪ್ರತಿ ವರ್ಷ ನಿತ್ಯ ಕನಿಷ್ಠ ಏನಿಲ್ಲವೆಂದರೂ ಸರಿಸುಮಾರು ಎರಡು ಸಾವಿರಕ್ಕಿಂತ ಅಧಿಕ ಪ್ರವಾಸಿಗರು ಬಂದು ಹೋಗುತ್ತಾರೆ. ಸದ್ಯ ಈ ಸಂಖ್ಯೆ ಸಾವಿರದ ಗಡಿ ದಾಟಿದೆ. ವಾರಾಂತ್ಯದಲ್ಲಿ ಎರಡರಿಂದ ಮೂರು ಸಾವಿರಕ್ಕೂ ಅಧಿಕ ಜನ ಬರುತ್ತಿದ್ದಾರೆ. ಇದುವರೆಗೆ ಬಾಗಿಲು ಮುಚ್ಚಿದ್ದ ಹೋಟೆಲ್, ಹೋಂ ಸ್ಟೇ, ರೆಸಾರ್ಟ್ಗಳಿಗೆ ಪುನಃ ಬೇಡಿಕೆ ಸೃಷ್ಟಿಯಾಗಿದೆ. ಕೆಲಸ ಇಲ್ಲದೆ ಕಂಗಾಲಾಗಿದ್ದ ಗೈಡ್ಗಳಿಗೆ ಕೆಲಸ ಸಿಗುತ್ತಿದೆ.

‘ಅಂತರರಾಜ್ಯ ಸಂಚಾರದ ಮೇಲಿನ ನಿರ್ಬಂಧವನ್ನು ಕೇಂದ್ರ ಸರ್ಕಾರ ಈಗಷ್ಟೇ ತೆರವುಗೊಳಿಸಿದೆ. ಆದರೂ ನಿರೀಕ್ಷೆಗೂ ಮೀರಿ ಪ್ರವಾಸಿಗರು ಬರುತ್ತಿದ್ದಾರೆ. ದಿನ ಕಳೆದಂತೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ವಿದೇಶಗಳಿಗೆ ವಿಮಾನ ಸೇವೆ ಆರಂಭಿಸುವ ಮಾತುಗಳು ಕೇಳಿ ಬರುತ್ತಿವೆ. ಒಂದುವೇಳೆ ಅದು ಆರಂಭವಾದರೆ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿಯರು ಬರುತ್ತಾರೆ’ ಎಂದು ಹಂಪಿ ಗೈಡ್ ಗೋಪಾಲ್ ನಂಬಿಕೆಯ ಮಾತುಗಳನ್ನಾಡುತ್ತಾರೆ. ಜನ ಕೊರೊನಾ ಭಯಬಿಟ್ಟು ಬರುತ್ತಿದ್ದಾರೆ ಎಂಬುದು ಅವರಂಥ ನೂರಾರು ಗೈಡ್ಗಳಲ್ಲಿ ಜೀವನೋತ್ಸಾಹ ತುಂಬಿದೆ.

‘ಜುಲೈನಲ್ಲಿ ಬೆರಳೆಣಿಕೆಯಷ್ಟು ಪ್ರವಾಸಿಗರು ಬಂದು ಹೋಗುತ್ತಿದ್ದರು. ಹಾಕಿದ ಬಂಡವಾಳವೂ ವಾಪಸ್ ಬರುವ ಲಕ್ಷಣ ಇರಲಿಲ್ಲ. ಹೀಗಾಗಿ ಹಂಪಿಯಲ್ಲಿ ಯಾರೊಬ್ಬರೂ ಹೋಟೆಲ್ ತೆರೆಯಲು ಧೈರ್ಯ ತೋರಿರಲಿಲ್ಲ. ಈಗ ಹೆಚ್ಚು ಕಮ್ಮಿ ಲಾಕ್ಡೌನ್ ತೆಗೆಯಲಾಗಿದೆ. ಕೊರೊನಾ ಭಯ ಕಡಿಮೆಯಾಗಿದೆ. ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ವಾರಾಂತ್ಯಕ್ಕೆ ಆ ಸಂಖ್ಯೆ ಹೆಚ್ಚಾಗುತ್ತಿದೆ. ಈಗ ಬಹುತೇಕರು ಹೋಟೆಲ್ಗಳನ್ನು ತೆರೆದಿದ್ದಾರೆ. ನಿಧಾನವಾಗಿ ವ್ಯಾಪಾರ ಚೇತರಿಸಿಕೊಳ್ಳುತ್ತಿದೆ’ ಎನ್ನುವ ಸ್ಥಳೀಯ ಹೋಟೆಲ್ ಮಾಲೀಕ ಕೃಷ್ಣ ಅವರ ಮಾತಿನಲ್ಲಿ ಉತ್ಸಾಹದ ಧ್ವನಿ ಕೇಳಿಸುತ್ತದೆ.

ಪ್ರವಾಸಿಗರು ಬರದ ಕಾರಣ ಶೆಡ್ ಸೇರಿದ್ದ ಬ್ಯಾಟರಿಚಾಲಿತ ವಾಹನಗಳು ಸೆಪ್ಟೆಂಬರ್ 1ರಿಂದ ರಸ್ತೆಗೆ ಇಳಿದಿವೆ. ಅಕ್ಟೋಬರ್ನಿಂದ ಇಡೀ ಹಂಪಿಯ ಪರಿಸರದಲ್ಲಿ ಮಿನಿ ರೈಲು ಮಾದರಿಯ ಬ್ಯಾಟರಿ ಅಥವಾ ಡೀಸೆಲ್ ಚಾಲಿತ ವಾಹನಗಳನ್ನು ಓಡಿಸಲು ನಿರ್ಧರಿಸಲಾಗಿದೆ. ಇದು ಸಹ ಇನ್ನಷ್ಟು ಪ್ರವಾಸಿಗರ ಆಕರ್ಷಣೆಗೆ ಕಾರಣವಾಗಬಹು.

ಜೋಗದ ಭೋರ್ಗರೆತಕ್ಕೆ ಸಾಟಿಯಿಲ್ಲ

ರಾಜ ರಾಣಿ ರೋರರ್ ರಾಕೆಟ್ಗಳೆಲ್ಲ ಒಂದೇ ಆಗಿ ನಭಕ್ಕೆ ತಲುಪುವ ಹಾಗೆ ಸಮೂಹಗಾಯನ ಮಾಡುತ್ತ ಧುಮುಕುವ ಮಳೆಗಾಲದ ಜೋಗದ ವೈಭವ ನೋಡಿಯೇ ಸವಿಯಬೇಕು. ಆದರೆ ಈ ಮಳೆಗಾಲದಲ್ಲಿ ಜೋಗದ ಸಿರಿಯ ಸಮೂಹಗಾನವನ್ನು ಕಾಡಹಕ್ಕಿಯ ಹಾಡಿನಂತೆ ಕೇಳುವವರಿರಲಿಲ್ಲ. ಆಗಸ್ಟ್ನಲ್ಲಿ ಲಾಕ್ಡೌನ್ ತೆರವಿನ ನಂತರ, ಜೋಗದ ಜಲನರ್ತನದ ರಭಸವನ್ನೂ ಮೀರಿಸುವ ಹಾಗೆ ಪ್ರವಾಸಿಗರು ಬರಲು ಶುರುವಾಗಿದ್ದಾರೆ. ಪ್ರಾಧಿಕಾರದ, ಸರ್ಕಾರದ ನಿಯಮಾನುಸಾರ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮತ್ತು ಮಾಸ್ಕ್ ಧರಿಸುವ ನಿಯಮ ಕಡ್ಡಾಯಗೊಳಿಸಿದ್ದರೂ ಪ್ರವಾಸಿಗರು ಲೆಕ್ಕಿಸುತ್ತಿಲ್ಲ

ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿಸಿ ಆಗಸ್ಟ್ ತಿಂಗಳಿನಲ್ಲಿ ಸುಮಾರು 65 ಸಾವಿರ ಪ್ರವಾಸಿಗರು ಜಲಪಾತದ ವೀಕ್ಷಣೆಗೆ ಬಂದಿದ್ದಾರೆ. ವೀಕೆಂಡ್ಗಳಲ್ಲಿ ಪ್ರತಿದಿನ ಜೋಗ ನಿರ್ವಹಣಾ ಪ್ರಾಧಿಕಾರದ ಪ್ರಧಾನ ಗೇಟಿನಲ್ಲಿ ₹ 2 ಲಕ್ಷಕ್ಕೂ ಮೀರಿ ಪ್ರವೇಶ ಶುಲ್ಕ ಸಂಗ್ರಹವಾಗುವ ಹಂತಕ್ಕೆ ಬಂದು ನಿಂತಿದೆ.

ಅತ್ಯಂತ ಎತ್ತರದಿಂದ ಯಾವುದೇ ಅಡೆತಡೆಯಿಲ್ಲದೇ ಧುಮ್ಮಿಕ್ಕುವ ರಾಜ, ಇಡೀ ಪ್ರದೇಶದಲ್ಲಿ ಗುಂಯ್ ಎಂಬ ಶಬ್ದ ಮಾರ್ದನಿಸುವಂತೆ ಕವಲುಗಳಲ್ಲಿ ಗರ್ಜಿಸಿ ಹರಿಯುವ ರೋರರ್, ಭೋರ್ ಬಂಡೆಗಳ ಮೇಲೆ ರಭಸವಾಗಿ ಬಿದ್ದು ಟಿಸಿಲು ಟಿಸಿಲಾಗಿ ಚಿಮ್ಮುವ ರಾಕೆಟ್, ಬಂಡೆಗಳ ಮೇಲೆ ನಯವಾಗಿ ವಯ್ಯಾರದಿಂದ ನುಣುಪಾಗಿ ಜಾರುತ್ತಾ ಜೋಗದ ಗುಂಡಿ ಸೇರುವ ರಾಣಿಯ ನಯನ ಮನೋಹರ ದೃಶ್ಯಗಳನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುತ್ತಿದ್ದಾರೆ. ಸದ್ಯ ಜೋಗದ ಗುಂಡಿಗೆ ತೆರಳುವ ದಾರಿಯನ್ನು ಮುಚ್ಚಲಾಗಿದೆ. ಜೋಗದ ಗುಂಡಿಯ ಮಾರ್ಗದಲ್ಲಿ ಜಲಪಾತದ ಒಂದೊಂದು ಮಜಲುಗಳನ್ನು ವಿಭಿನ್ನ ಕೋನದಲ್ಲಿ ಸೆರೆ ಹಿಡಿದು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳುವ ಅವಕಾಶ ಸದ್ಯ ಇಲ್ಲವಾಗಿದೆ.

ಜೋಗ ಬಹುಜನಪ್ರಿಯ ಪ್ರವಾಸಿ ತಾಣವಾಗಿದ್ದರೂ ಅದಕ್ಕೆ ತಕ್ಕ ಹಾಗೆ ಮೂಲಸೌಕರ್ಯಗಳು ಅಭಿವೃದ್ಧಿಗೊಂಡಿಲ್ಲ. ಪ್ರಸಕ್ತ ಸರ್ಕಾರ 120 ಕೋಟಿಗಳ ಅನುದಾನ ಇಲ್ಲಿನ ಅಭಿವೃದ್ದಿಗಾಗಿ ಮೀಸಲಾಗಿರಿಸಿದೆ. ಸರ್ವ ಋತು ಪ್ರವಾಸಿ ತಾಣದ ಕನಸನ್ನು ನನಸು ಮಾಡುವ ಸವಾಲು ಜೋಗ ನಿರ್ವಹಣಾ ಪ್ರಾಧಿಕಾರದ ಎದುರು ಇದೆ. ಯುವಜನತೆಗೆ ಪೂರಕವಾಗಿ ಸುಂದರವಾದ ಈಜುಕೊಳದ ಪ್ರಸ್ತಾಪ ಬಂದಿದೆ. ಜಲಸಿರಿಯ ಜೊತೆಗೆ ಬೆರೆಯಲು ವೇವ್ ಪೂಲ್ ನಿರ್ಮಾಣದ ಕನಸು ಚಿಗುರೊಡೆಯುತ್ತಿದೆ. ಆದರೆ ಜೋಗದ ನೊರೆಹಾಲಿನ ಅಬ್ಬರದ ಮುಂದೆ ಉಳಿದೆಲ್ಲ ಕೊರತೆಗಳೂ ಹಿನ್ನೆಲೆಗೆ ಸರಿಯುತ್ತವೆ.

ಕೊಡಚಾದ್ರಿ ಬೆಟ್ಟ

ಕೊಡಚಾದ್ರಿಯ ನೆತ್ತಿಯಲ್ಲಿ ಪ್ರವಾಸಿಗರ ಸಂಭ್ರಮ

ಜುಲೈ ತಿಂಗಳು ಕೊಡಚಾದ್ರಿಗೆ ಅತ್ಯಧಿಕ ಪ್ರವಾಸಿಗರು ಬರುವ ಸಮಯ. ಆದರೆ ಈ ವರ್ಷದ ಜುಲೈ ನಿರ್ಜನವಾಗಿಯೇ ಕಳೆದುಹೋಯ್ತು. ಆಗಸ್ಟ್ನಲ್ಲಿ ಲಾಕ್ಡೌನ್ ತೆರವುಗೊಂಡ ನಂತರ ಪ್ರವಾಸಿಗರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಯ್ತು. ಪ್ರವಾಸಿಗರೇನೋ ಬರಲು ಮನಸ್ಸು ಮಾಡಿದರು. ಆದರೆ ಸ್ಥಳೀಯರಿಗೆ ಕೊರೊನಾ ಬಗೆಗಿನ ಭೀತಿ ಕಡಿಮೆಯಾಗಿರಲಿಲ್ಲ. ಅವರ ಪ್ರತಿರೋಧದ ಕಾರಣಕ್ಕೆ ಸ್ಥಳೀಯ ಆಡಳಿತ ಆ. 15ರ ವರೆಗೆ ಕೊಡಚಾದ್ರಿ ಸುತ್ತಲಿನ ಹೋಮ್ಸ್ಟೇಗಳನ್ನು ತೆರೆಯದಿರುವಂತೆ ಸೂಚಿಸಿತ್ತು. ಆಗಸ್ಟ್ 15ರಿಂದ ಮತ್ತೆ ಬಹುತೇಕ ಹೋಮ್ಸ್ಟೇಗಳು ಬಾಗಿಲು ತೆರೆದು ಪ್ರವಾಸಿಗರನ್ನು ಬರಮಾಡಿಕೊಳ್ಳುತ್ತಿವೆ. ಪ್ರವಾಸಿಗರೂ ಮುಗಿಬಿದ್ದು ಕೊಡಚಾದ್ರಿಯ ನೆತ್ತಿಮೇಲಿನ ಸೂರ್ಯಾಸ್ಥದ ರಸಸಮಯವನ್ನು ಆಸ್ವಾದಿಸುತ್ತಿದ್ದಾರೆ. ಕಡಿದಾದ ರಸ್ತೆಗಳಲ್ಲಿ ಓಲಾಡುತ್ತ ಜೀಪುಗಳು ಓಡಾಡಲು ಶುರುವಾಗಿವೆ. ಚಾರಣ ಹೋಗುವವರ ಸಂಖ್ಯೆಯೂ ಹೆಚ್ಚಿದೆ.

‘ಕೊಡಚಾದ್ರಿ ಬುಡದ ಕಟ್ಟಿನಹೊಳೆ ಸರ್ಕಲ್ ಸಮೀಪದ ಬಹುತೇಕ ಹೋಮ್ಸ್ಟೇಗಳನ್ನು ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ತೆರೆಯಲಾಗಿದೆ. ಇನ್ನೂ ಕೆಲವು ಹೋಮ್ಸ್ಟೇಗಳು ಕಾದು ನೋಡುವ ನಿರ್ಧಾರದಲ್ಲಿ ಬಾಗಿಲು ಮುಚ್ಚಿಕೊಂಡೇ ಇದ್ದಾರೆ. ಅಕ್ಟೋಬರ್ನಿಂದ ಹೋಮ್ಸ್ಟೇ ಆರಂಭಿಸುವ ಯೋಚನೆಯಲ್ಲಿದ್ದೇನೆ’ ಎನ್ನುತ್ತಾರೆ ‘ಸಿಂಹ ಫಾರ್ಮ್ ಹೌಸ್’ನ ಆದಿತ್ಯ ಸಿಂಹ

ವಾರಾಂತ್ಯದಲ್ಲಿ ಸಾವಿರಕ್ಕೂ ಅಧಿಕ ಜನರು ಕೊಡಚಾದ್ರಿಗೆ ಭೇಟಿ ನೀಡುತ್ತಿದ್ದಾರೆ. ಈ ಜನರ ಹರಿವು ಮತ್ತು ಕೊರೊನಾ ರಿಸ್ಕ್ ಕಾರಣಕ್ಕಾಗಿ ಹೋಮ್ ಸ್ಟೇಗಳ ಬೆಲೆಯೂ ತುಸು ದುಬಾರಿಯಾಗಿದೆ.

ಪ್ರವಾಸದ ಸಿದ್ಧತೆ ಹೀಗಿರಲಿ

ಸ್ಯಾನಿಟೈಸರ್, ಮುಖಗವುಸು ಧರಿಸುವುದು

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು

ಕಡಿಮೆ ಜನ ಕೂಡಿ ಪ್ರವಾಸ ಮಾಡಿದಷ್ಟೂ ಒಳ್ಳೆಯದು.

ವೈಯಕ್ತಿಕ ಸ್ವಚ್ಛತೆ

ಮನೆಯಿಂದಲೇ ಟವಲ್, ಬೆಡ್ಶೀಟ್ ತರುವುದು

ಲಾಡ್ಜ್, ರೂಮುಗಳಲ್ಲಿ, ಹೊಟೇಲ್ಗಳಲ್ಲಿ ಸ್ಯಾನಿಟೈಜ್ ಮಾಡಲಾಗುತ್ತದೆಯೇ ಎಂದು ಖಚಿತಪಡಿಸಿಕೊಳ್ಳಿ

ದೀರ್ಘಕಾಲದ ಪ್ರವಾಸಕ್ಕೆ ತೆರಳುವ ಮುನ್ನ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳುವುದು ಒಳಿತು.

ಅತಿಯಾಗಿ ನೀರಿನಲ್ಲಿ ನೆನೆಯುವುದು, ದೇಹಕ್ಕೆ ಒಗ್ಗದ ಆಹಾರ ಸೇವನೆಯಿಂದ ಆರೋಗ್ಯ ಕೆಡಿಸಿಕೊಳ್ಳಬೇಡಿ

ಅತಿಯಾದ ಜನದಟ್ಟಣೆ ಇರುವ ತಾಣಗಳಿಗೆ ಹೋಗದಿರುವುದೇ ಒಳಿತು

ಚಿಕ್ಕಮಕ್ಕಳು, ವೃದ್ಧರು ಇನ್ನೂ ಸ್ವಲ್ಪ ಕಾಲ ಪ್ರವಾಸ ಮಾಡದಿದ್ದರೆ ಒಳ್ಳೆಯದು

ಹೋಂ ಸ್ಟೆಗಳಲ್ಲಿ ವಾಸ್ತವ್ಯ ಶುರುವಾಗಿದೆ. ಸುರಕ್ಷತಾ ಕ್ರಮಗಳಿಗೆ ಒತ್ತು ನೀಡಿದ್ದೇವೆ.‘ವರ್ಕ್ ಫ್ರಂ ಹೋಂ’ (ಮನೆಯಿಂದಲೇ ಕೆಲಸ) ಅವಕಾಶ ಇರುವವರು ಜಾಸ್ತಿ ಬರುತ್ತಿದ್ದಾರೆ. ಉದ್ಯಮ ತುಸು ಸುಧಾರಣೆ ಹಾದಿಯಲ್ಲಿ ಹೆಜ್ಜೆ ಇಟ್ಟಿದೆ.
ಹೊಲದ ಗದ್ದೆ ಗಿರೀಶ್, ಸಾರಂಗ ಹೋಂ ಸ್ಟೆ, ಮಲ್ಲಂದೂರು.

ಕೋವಿಡ್ನಿಂದಾಗಿ ಕೆಲ ತಿಂಗಳಿನಿಂದ ಪ್ರವಾಸ ಹೋಗಲು ಸಾಧ್ಯವಾಗಿರಲಿಲ್ಲ. ಮುಳ್ಳಯ್ಯನ ಗಿರಿ, ಸೀತಾಳಯ್ಯನಗಿರಿ ಇವೆಲ್ಲವೂ ಬಹಳ ಸುಂದರ ತಾಣಗಳು. ಇಲ್ಲಿನ ತಂಪು ಹವೆ ಅತ್ಯಂತ ಹಿತಕರವಾಗಿದೆ. ಇಲ್ಲಿನ ಪರ್ವತ ಶ್ರೇಣಿ ವಿಶಿಷ್ಟವಾಗಿದೆ.
– ಅಜಿತ್ ಸಿಂಗ್, ಪ್ರವಾಸಿ ಬೆಂಗಳೂರು

ಇತಿಹಾಸದಲ್ಲಿ ಯಾವತ್ತೂ ಈ ರೀತಿಯ ಹೊಡೆತ ಅರಮನೆಗೆ ಬಿದ್ದಿರಲಿಲ್ಲ. ಲಾಕ್ಡೌನ್ ತೆರವುಗೊಳಿಸಿದ್ದರೂ ಜನ ಬರುತ್ತಿಲ್ಲ. ಕೋವಿಡ್ ಭಯದಲ್ಲೇ ಇದ್ದಾರೆ. ಪ್ರವಾಸಿಗರು ನೀಡುವ ಶುಲ್ಕವೇ ನಮ್ಮ ಆದಾಯ. ಎಲ್ಲವೂ ಸರಿ ಹೋಗಲು ಇನ್ನೂ ಒಂದು ವರ್ಷ ಬೇಕು. ಈಗ ಬರುವ ಪ್ರವಾಸಿಗರನ್ನು ಸ್ಕ್ರೀನಿಂಗ್ ಮಾಡಿಯೇ ಒಳಬಿಡಲಾಗುತ್ತಿದೆ. ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೇವೆ. ಪ್ರವಾಸಿಗರು ಧೈರ್ಯವಾಗಿ ಬರಬಹುದು.

– ಟಿ.ಎಸ್.ಸುಬ್ರಮಣ್ಯ,ಅರಮನೆ ಮಂಡಳಿ ಉಪನಿರ್ದೇಶಕ ಮೈಸೂರು

ಕೊರೊನಾ ಭೀತಿ ತಗ್ಗಿದೆ. ಯಾವುದೇ ಪ್ರವಾಸಿ ತಾಣಕ್ಕೆ ಹೋದರೂ ಹೆಚ್ಚು ಜನರು ಕಾಣುತ್ತಿಲ್ಲ. ಕೊರೊನಾ ಭಯ ಅದಕ್ಕೆ ಕಾರಣ. ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಅರಮನೆ ಮಂಡಳಿಯವರು ತೆಗೆದುಕೊಂಡಿರುವುದರಿಂದ ಯಾವುದೇ ಭಯವಿಲ್ಲದೇ ಮೈಸೂರಿನ ಅರಮನೆ ವೀಕ್ಷಿಸಲು ಬಂದಿದ್ದೇನೆ. ಈ ಹಿಂದೆಯೂ ನೋಡಿದ್ದೆ. ಆದರೆ, ಈಗ ನೋಡುತ್ತಿರುವ ಅರಮನೆ ಹೆಚ್ಚು ಖುಷಿ ಕೊಡುತ್ತಿದೆ.
– ಸುಜಾತಾ, ಪ್ರವಾಸಿ

ದೇವಸ್ಥಾನದಲ್ಲಿ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದಾರೆ. ಎಲ್ಲೂ ಅಸುರಕ್ಷತೆಯ ಭಾವನೆ ಬಂದಿಲ್ಲ. ಸ್ಯಾನಿಟೈಸರ್ ಬಳಕೆ, ವ್ಯಕ್ತಿಗತ ಅಂತರ ಕಾಪಾಡಲಾಗುತ್ತಿದೆ.
– ಎ.ಎಸ್. ಆನಂದ, ಪ್ರವಾಸಿ

ಕೋವಿಡ್ ಭಯದಿಂದ ಜನರು, ಬೇರೆ ರಾಜ್ಯಗಳ ಪ್ರವಾಸಿ ತಾಣಕ್ಕೆ ಭೇಟಿ ಕೊಡುವ ಸಾಧ್ಯತೆ ಕಡಿಮೆ. ಸ್ಥಳೀಯ ಪ್ರವಾಸಿ ತಾಣಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ
–ನಾಗೇಂದ್ರಪ್ರಸಾದ್, ಅಧ್ಯಕ್ಷ, ಹೋಟೆಲ್ ಹಾಗೂ ರೆಸಾರ್ಟ್ ಮಾಲೀಕರ ಸಂಘ ಕೊಡಗು

ಕೊಡಗು ಜಿಲ್ಲೆಗೆ ಕೋವಿಡ್ಗೂ ಮೊದಲು ಪ್ರತಿ ತಿಂಗಳು ಅಂದಾಜು 2 ಲಕ್ಷ ಪ್ರವಾಸಿಗರು ಭೇಟಿ ಕೊಡುತ್ತಿದ್ದರು. ಸುಧಾರಣೆ ಕಾಣಲು ಕೆಲವು ತಿಂಗಳುಗಳೇ ಬೇಕು.
– ರಾಘವೇಂದ್ರ, ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ ಮಡಿಕೇರಿ

ಪದ್ಮನಾಭ ಭಟ್ ಪೂರಕ ಮಾಹಿತಿ: ಬಿ.ಜೆ. ಧನ್ಯಪ್ರಸಾದ್, ಸದಾಶಿವ ಎಂ.ಎಸ್., ಕೋಡಿಬೆಟ್ಟು ರಾಜಲಕ್ಷ್ಮಿ, ಓಂಕಾರಮೂರ್ತಿ, ಆದಿತ್ಯ ಕೆ.ಎ., ಶಶಿಕಾಂತ ಎಸ್. ಶೆಂಬೆಳ್ಳಿ, ವಿ. ಸಂತೋಷ್ಕುಮಾರ್ ಕಾರ್ಗಲ್

ಚಿತ್ರಗಳು: ಎ.ಎನ್.ಮೂರ್ತಿ, ದಿನೇಶ್ ಮಾನೀರ್, ಆದಿತ್ಯ ಬೀಳೂರು, ಪ್ರಜಾವಾಣಿ ಸಂಗ್ರಹ.

ಪ್ರತಿಕ್ರಿಯಿಸಿ: feedback@sudha.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.