ಸಿಡ್ನಿ ನಗರದಲ್ಲಿ ಬಾಂಡೈ ಬೀಚ್ನಿಂದ ತಮರಮಾ ಬೀಚ್ವರೆಗೆ ಸುಮಾರು ಎರಡು ಕಿಲೋಮೀಟರ್ ಉದ್ದದ ಹಾದಿಯಲ್ಲಿ ಸೃಷ್ಟಿಯಾಗಿರುವ ಕಲಾಕೃತಿಗಳು ಉಸುರುವ ವಿಷಯಗಳು ಮನಸ್ಸಿಗೆ ನಾಟುವಂಥದ್ದು.

ಆಸ್ಟ್ರೇಲಿಯಾದ ಸಿಡ್ನಿ ನಗರದ ಬಾಂಡೈ ಕಡಲ ಕಿನಾರೆಯಲ್ಲಿ ಶಿಲ್ಪ ಕಲಾಕೃತಿಗಳ ಪ್ರದರ್ಶನ ಇರುವುದು ತಿಳಿದಾಗ ಕುತೂಹಲ ಮೂಡಿತು. ಅಕ್ಟೋಬರ್ 18 ರಿಂದ ನವೆಂಬರ್ 4ರವರೆಗೆ ಈ ವರ್ಷ ‘ಸ್ಕಲ್ಪ್ಚರ್ ಬೈ ದಿ ಸೀ’ (ಕಡಲ ತೀರದಲ್ಲಿ ಶಿಲ್ಪ ಕಲಾಕೃತಿ) ಹೆಸರಿನ ಉಚಿತ ಸಾರ್ವಜನಿಕ ಪ್ರದರ್ಶನ ಆಯೋಜಿಸಲಾಗಿತ್ತು.

ಬಾಂಡೈ ಬೀಚ್ನಿಂದ ತಮರಮಾ ಬೀಚ್ವರೆಗೆ ಸುಮಾರು ಎರಡು ಕಿಲೋಮೀಟರ್ ಉದ್ದದ ಹಾದಿಯಲ್ಲಿ ವಿವಿಧ ವಸ್ತುಗಳಿಂದ ಸೃಷ್ಟಿಯಾದ ಕಲಾಕೃತಿಗಳು, ಇನ್ಸ್ಟಾಲೇಷನ್ಗಳನ್ನು ಕಣ್ಣು ತುಂಬಿಕೊಳ್ಳುತ್ತಾ ನಡೆಯುತ್ತಾ ಸಾಗಿದಾಗ ಮೂಡಿದ್ದು ಬೆರಗಿಗಿಂತ ಹೆಚ್ಚಾಗಿ ಸಮ್ಮಿಶ್ರ ಭಾವಗಳು. ನಾವು ಹೋಗಿದ್ದು ಭಾನುವಾರದ ದಿನವಾದ್ದರಿಂದ ಬೀಚ್ನಲ್ಲಿ ವಿಹರಿಸುವ ವಾರಾಂತ್ಯದ ಜನಜಂಗುಳಿ ದಟ್ಟವಾಗಿತ್ತು. ಹಾಗೆಯೇ ಕಲಾಕೃತಿಗಳ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರ ಭರಾಟೆಯ ನಡುವೆಯೂ ಕಲಾಕೃತಿಗಳನ್ನು ಗಂಭೀರವಾಗಿ ಅವಲೋಕಿಸಿದಾಗ ಸಮಕಾಲೀನ ಸ್ಪಂದನಗಳಿಗೆ ದೊರೆತಿರುವ ಕಲಾಭಿವ್ಯಕ್ತಿಗಳು ಮನಸ್ಸಿಗೆ ನಾಟಿತು.

ಬಾಂಡೈ ಬೀಚ್ನಿಂದ ತಮರಮಾ ಬೀಚ್ವರೆಗಿನ ನಡಿಗೆ ವರ್ಷದ ಯಾವುದೇ ಸಮಯದಲ್ಲೂ ಒಂದು ಸುಂದರ ಅನುಭವ. ಕಳೆದ ವರ್ಷದ (2023) ಚಳಿಗಾಲದಲ್ಲಿ ಇದೇ ಕಡಲ ತೀರದ ಬಾಂಡೈ ಬೀಚ್ನಿಂದ ಬ್ರಾಂಟೆ ಬೀಚ್ವರೆಗೆ ಕಾಲ್ನಡಿಗೆಯಲ್ಲಿ ಸಾಗುತ್ತಾ ಪ್ರಕೃತಿಯ ಸೊಬಗನ್ನು ಆಸ್ವಾದಿಸಿದ ನೆನಪು ಹಸಿರಾಗಿತ್ತು. ಪೆಸಿಫಿಕ್ ಸಾಗರದ ನೀಲ ಹರಹಿನ ವಿಸ್ತಾರವಾದ ತಿಳಿಜಲದ ತೀರಗಳಲ್ಲಿ ಬಿಳಿನೊರೆಯಂತೆ ಉಕ್ಕಿ ಬರುತ್ತಲೇ ಇರುವ ಅಲೆಗಳ ಸೊಬಗು ಮನಸೂರೆಗೊಳ್ಳುವಂತಹದ್ದು. ಆದರೆ, ಈ ಬಾರಿ, ಇದರ ಜೊತೆಗೇ ಕಲಾಕೃತಿಗಳು ಹಾಗೂ ಇನ್ಸ್ಟಾಲೇಷನ್ಗಳ ವೀಕ್ಷಣೆ ನೀಡಿದ ಅನುಭವ ಭಿನ್ನವಾದದ್ದು. ಕಡಲದಂಡೆಯ ವಿಹಾರದ ಜತೆ ಜತೆಗೇ ಕಲೆಯನ್ನು ಜನಸಾಮಾನ್ಯರ ಗ್ರಹಿಕೆಯ ಭಿತ್ತಿಗೆ ಇಳಿಸುವ ಯತ್ನದಂತಿತ್ತು ಇದು.

1997ರಲ್ಲಿ ಸಮುದ್ರದಂಡೆಯಲ್ಲಿ 3ಡಿ ಶಿಲ್ಪ ಕಲಾಕೃತಿಗಳ ಈ ಪ್ರದರ್ಶನ ಆರಂಭವಾದಾಗ ಅದು ಕೇವಲ ಒಂದು ದಿನದ ಕಾರ್ಯಕ್ರಮವಾಗಿತ್ತು. ಪ್ರತಿ ವರ್ಷ ನಡೆಸಲಾಗುವ ಈ ಶಿಲ್ಪ ಕಲಾಕೃತಿ ಪ್ರದರ್ಶನವು ನಂತರದ ವರ್ಷಗಳಲ್ಲಿ ದೊಡ್ಡದಾಗಿ ಬೆಳೆದಿದ್ದಲ್ಲದೆ ಪ್ರದರ್ಶನದ ದಿನಗಳೂ ಹೆಚ್ಚಾದವು. ವಿಶ್ವದಲ್ಲೇ ಅತಿ ದೊಡ್ಡದಾದ ಶಿಲ್ಪ ಕಲಾಕೃತಿಗಳ ಹೊರಾಂಗಣ ಪ್ರದರ್ಶನವೆನಿಸಿರುವ ಈ ಪ್ರದರ್ಶನದ ಅವಧಿ ಈ ಬಾರಿ ಮೂರು ವಾರಗಳ ಕಾಲ ಇತ್ತು. ಸ್ಥಳೀಯ ಕಲಾವಿದರಷ್ಟೇ ಅಲ್ಲದೆ ಹೊರ ದೇಶಗಳಿಂದಲೂ ಕಲಾವಿದರು ತಮ್ಮದೇ ಖರ್ಚಿನಲ್ಲಿ ಬಂದು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಾರೆ. ಹೀಗಾಗಿ, ‘ಆಸ್ಟ್ರೇಲಿಯಾದಲ್ಲಿ ಶಿಲ್ಪಕಲೆ ಮಾತ್ರವೇ ಜಗತ್ತಿನ ಪ್ರಮುಖ ಕಲಾವಿದರನ್ನು ಆಕರ್ಷಿಸುವಂತಹ ಕಲಾ ಪ್ರಕಾರವಾಗಿದೆ’ ಎಂಬುದು ಈ ಸಮುದ್ರ ತೀರದ ಶಿಲ್ಪಕಲಾ ಪ್ರದರ್ಶನದ ಪರಿಕಲ್ಪನೆಯನ್ನು ರೂಪಿಸಿದ ನ್ಯೂ ಸೌತ್ ವೇಲ್ಸ್ ಕಲಾವಿದ ಡೇವಿಡ್ ಹ್ಯಾಂಡ್ಲಿಯ ಅನಿಸಿಕೆ.

ಈ ಬಾರಿ ಭಾರತದ ಎಂಟು ಕಲಾವಿದರು ಹಾಗೂ ಆಸ್ಟ್ರೇಲಿಯಾದಲ್ಲೇ ನೆಲೆಸಿರುವ ಅನಿವಾಸಿ ಭಾರತೀಯ ಸಮುದಾಯದ ಇಬ್ಬರ ಕಲಾಕೃತಿಗಳು ಪ್ರದರ್ಶನಗೊಂಡಿದ್ದವು. ಒಟ್ಟು 16 ದೇಶಗಳ 100 ಕಲಾವಿದರ ಕಲಾಕೃತಿಗಳು ಸಮಕಾಲೀನ ಭಾವ ಪ್ರಪಂಚ ಹಾಗೂ ತಲ್ಲಣ-ತಳಮಳಗಳಿಗೆ ಅಭಿವ್ಯಕ್ತಿ ನೀಡಿದ್ದವು. ಕಾರ್ಪೊರೇಟ್ ಪ್ರಾಯೋಜಕತ್ವ, ಖಾಸಗಿ ಸಹಾಯಧನ, ಕಲಾಕೃತಿಗಳ ಮಾರಾಟದ ಮೇಲಿನ ಕಮಿಷನ್ ಹಾಗೂ ಸರ್ಕಾರದ ಸಹಾಯಧನದ ಮೂಲಕ ಈ ಕಾರ್ಯಕ್ರಮದ ವೆಚ್ಚವನ್ನು ಭರಿಸಲಾಗುತ್ತಿದೆ.

ಎಲ್ಲರಿಗೂ ದೊಡ್ಡ ಕಲಾಕೃತಿಗಳನ್ನು ಮಾಡಲು ಸಾಧ್ಯವಿಲ್ಲ. ಏಕೆಂದರೆ, ದೊಡ್ಡ ಕಲಾಕೃತಿಗಳ ಸೃಷ್ಟಿಗೆ ಹೆಚ್ಚು ಮೂಲಸೌಕರ್ಯಗಳು ಬೇಕು. ಹೀಗಾಗಿಯೇ 2004ರಿಂದ ‘ಸ್ಕಲ್ಪ್ಚರ್ ಇನ್ ಸೈಡ್’ ಎಂಬ ಹೆಸರಿನ ಒಳಾಂಗಣ ಪ್ರದರ್ಶನವನ್ನೂ ಆರಂಭಿಸಲಾಗಿದೆ. ಚಿಕ್ಕದಾದ ಕಲಾಕೃತಿಗಳು ಅಥವಾ ಹೊರಾಂಗಣದಲ್ಲಿ ಪ್ರದರ್ಶಿತಗೊಂಡ ಕಲಾಕೃತಿಗಳ ಚಿಕ್ಕ ಮಾದರಿಗಳನ್ನು ಈ ಒಳಾಂಗಣ ಪ್ರದರ್ಶನದಲ್ಲಿ ಪ್ರದರ್ಶಿಸಲಾಗುತ್ತಿದೆ.

ಡ್ರ್ಯೂ ಮೆಕ್ಡೊನಾಲ್ಡ್ ಅವರ ‘ಶಾರ್ನಾನಾ’(ಬನಾನಾ ಶಾರ್ಕ್)- ಈ ಬಾರಿ ನೋಡುಗರ ಅತಿ ಹೆಚ್ಚಿನ ಮೆಚ್ಚುಗೆ ಪಡೆದ ಕಲಾಕೃತಿಯಾಗಿ, ಬಹುಮಾನಗಳನ್ನೂ ಗಳಿಸಿತು. ಸಿಪ್ಪೆ ಬಿಡಿಸಿದ ಬಾಳೆಹಣ್ಣಿನಿಂದ ಹೊರ ಬರುತ್ತಿರುವಂತಹ ಶಾರ್ಕ್ ಶಿಲ್ಪ ನಮ್ಮ ಅಸ್ತಿತ್ವದ ಅಸ್ತವ್ಯಸ್ತತೆಯನ್ನು ಧ್ವನಿಸುತ್ತದೆ. ಆದರೆ, ಇದು ಬರೀ ಭೀತಿ ಹಾಗೂ ಹತಾಶೆ ಮಾತ್ರ ಧ್ವನಿಸುವುದಿಲ್ಲ. ದಿನನಿತ್ಯದ ಬದುಕಿನ ವಿರೋಧಾಭಾಸಗಳ, ಅತಾರ್ಕಿಕ ವಿಲಕ್ಷಣತೆಗಳಲ್ಲಿ (surreal)ವಿನೋದ, ಸಂತಸ ಕಂಡುಕೊಳ್ಳುವಂತಹದ್ದನ್ನೂ ಇದು ನಿರೂಪಿಸುತ್ತದೆ. ಅಸಂಗತತೆಯಲ್ಲಿ ಜೀವನಪ್ರೀತಿ ಧ್ವನಿಸುವ ಎರಡು ಮೀಟರ್ ಉದ್ದದ ಈ ಕಲಾಕೃತಿಯನ್ನು ರೀಸೈಕಲ್ ಮಾಡಿದ ಪ್ಲಾಸ್ಟಿಕ್, ಕ್ಯಾಲ್ಷಿಯಂ ಕಾರ್ಬೊನೆಟ್, ಸ್ಟೀಲ್ ಹಾಗೂ ಆಕ್ರಿಲಿಕ್ ಪೇಂಟ್ ಬಳಸಿ ನಿರ್ಮಿಸಲಾಗಿದೆ.

‘ವಿಮೆನ್ ವೇರ್ ಟ್ರೌಷರ್ಸ್’, ಮಹಿಳಾ ಶಿಲ್ಪಿಗಳಿಗೆ ಗೌರವ ನೀಡುವಂತಹ ಯಥಾಸ್ಥಿತಿ ಬದಲಾವಣೆಯ ಆಶಯದ ಕಲಾಕೃತಿ. ಕಲಾವಿದೆಯರಿಗೆ ತೋರಬೇಕಾದ ಸಮಾನತೆ, ಗೌರವ ಇಲ್ಲಿ ವ್ಯಕ್ತ ಎಂದು ಪರ್ತ್ ಮೂಲದ ಕಲಾವಿದೆ ಡೆನಿಸ್ ಪೆಪರ್ ಹೇಳಿಕೊಂಡಿದ್ದಾರೆ. ಅವರ ಕಲಾ ಅಭಿವ್ಯಕ್ತಿಯ ಪರಿಕರ ಅಲ್ಯುಮಿನಿಯಂ. ಹವಾಮಾನ ಬದಲಾವಣೆಯ ಕ್ಲಿಷ್ಟಕರ ಯುಗದಲ್ಲಿ ವಿಶ್ವವೀಗ ಮರುಬಳಕೆ ತತ್ವದೆಡೆ ಸಾಗುತ್ತಿರುವ ಸಂದರ್ಭದಲ್ಲಿ, ದಿನ ನಿತ್ಯದ ಹಲವು ಅಗತ್ಯಗಳಿಗೆ ಮರುಬಳಕೆಯ ಅಲ್ಯುಮಿನಿಯಂ ಮುಖ್ಯವಾಗುತ್ತಿದೆ. ಇಂತಹ ಅಲ್ಯುಮಿನಿಯಂ ಅನ್ನು ಸೃಜನಾತ್ಮಕವಾಗಿ ಬಳಸುವುದೂ ಸಾಧ್ಯ ಎಂಬುದನ್ನು ಕಲಾವಿದರು ತೋರಿಸುತ್ತಿದ್ದಾರೆ.

ಭವಿಷ್ಯದ ಪೀಳಿಗೆಗಾಗಿ ಭೂಮಿ, ಸಮುದ್ರಗಳನ್ನು ಕಾಪಿಡಲು, ವಿಶ್ವದಲ್ಲಿ ಐಕ್ಯತೆ ಕಾಪಾಡಲು ನಮ್ಮೆಲ್ಲರ ಪಾತ್ರವಿದೆ ಎಂಬ ಬಗ್ಗೆ ಜಾಗೃತಿ ಮೂಡಿಸುವ ಆಶಯವನ್ನು ವ್ಯಕ್ತಪಡಿಸಿದ್ದು, ನ್ಯೂಜಿಲೆಂಡ್ ಕಲಾವಿದ ಆ್ಯಂಟನ್ ಫೋರ್ಡೆ ಅವರ ‘ರಕ್ಷಣೆ’ ಕಲಾಕೃತಿ. ಕಾಳಜಿ, ಒಟ್ಟಾಗಿ ಕೆಲಸ ಮಾಡುವುದು ಹಾಗೂ ಪ್ರಕೃತಿ ಕುರಿತಾದ ಪೂಜ್ಯ ಭಾವನೆಯಿಂದ ಭೂಮಿಯನ್ನು ನಿರಂತರವಾಗಿ ಬಳಸಿಕೊಳ್ಳಲು ಸಾಧ್ಯವಾದ ನಮ್ಮ ಪೂರ್ವಿಕರ ವ್ಯವಸ್ಥೆಗಳಿಂದ ಪ್ರೇರಣೆ ಪಡೆದ ಕಲಾಕೃತಿ ಇದು . ಈ ಇನ್ಸ್ಟಾಲೇಷನ್ ಬಳಿಯ ನಡಿಗೆ ಅಥವಾ ಕುಳಿತುಕೊಳ್ಳುವುದೂ ನೋಡುಗರಿಗೆ ರಕ್ಷಣಾತ್ಮಕ ಆಲಿಂಗನದ ಅನುಭವ ನೀಡುತ್ತದೆ ಎಂಬುದು ಕಾರ್ಯಕ್ರಮ ಸಂಘಟಕರ ಅಭಿಮತ.

ಪರ್ತ್ ನಗರದ ಬಳಿಯ ಕೊಟೆಸ್ಲೊ ಬೀಚ್ನಲ್ಲಿ ಇದೇ ಪ್ರದರ್ಶನವನ್ನು 2005 ರಿಂದ ಆರಂಭಿಸಲಾಗಿದ್ದು ಅಲ್ಲೂ ಪ್ರತಿ ವರ್ಷ ಈ ಪ್ರದರ್ಶನ ನಡೆಯುತ್ತದೆ. ಹಾಗೆಯೇ ತುಂಬಾರುಂಬಾ ಪಟ್ಟಣದ ಬಳಿ ಸ್ನೋಯಿ ವ್ಯಾಲಿ ಡಿಸ್ಟ್ರಿಕ್ಟ್ನಲ್ಲಿ 150 ಕಿಲೋಮಿಟರ್ ಉದ್ದದ ಕಾಯಂ ಶಿಲ್ಪ ಹಾದಿಯೊಂದನ್ನು ನಿರ್ಮಿಸಲಾಗಿದೆ. ಇದು, 2019-20ರಲ್ಲಿ ಸಂಭವಿಸಿದ ಘೋರ ಕಾಳ್ಗಿಚ್ಚಿನಲ್ಲಿ ವಿನಾಶಗೊಂಡಿದ್ದಂತಹ ಸ್ಥಳ. ಈ ದುರಂತದ ನೆಲೆಯನ್ನು ಈಗ ಮರು ನಿರ್ಮಿಸಿ ಸೃಜನಾತ್ಮಕತೆಯನ್ನು ಅರಳಿಸಿ, ಸಾಂಸ್ಕೃತಿಕ ಪ್ರವಾಸೋದ್ಯಮದ ಆಕರ್ಷಣೆಯಾಗಿಸಿರುವುದು ಪುಟಿದೇಳುವ ಮನುಷ್ಯ ಚೇತನಕ್ಕೆ ಪ್ರತೀಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.