ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ: ಹಿಮಚಾಮರದೊಳ್‌ ತಡಿಯಂಡಮೋಳ್

Published 29 ಜುಲೈ 2023, 23:30 IST
Last Updated 29 ಜುಲೈ 2023, 23:30 IST
ಅಕ್ಷರ ಗಾತ್ರ

ಮಲ್ಲತ್ತಹಳ್ಳಿ ಎಚ್. ತುಕಾರಾಂ

ಈ ಬೆಟ್ಟದ ತುತ್ತತುದಿಯಿಂದ ಸುತ್ತ ನೋಡಿದರೆ ಹಾಲಿನ ಸಮುದ್ರದಲ್ಲಿ ತೇಲಾಡುತ್ತಿರುವಂತಹ ಭಾವ. ಮುಂಗಾರಿನಲ್ಲಿ ತಡಿಯಂಡಮೋಳ್‌ ಚಾರಣದ ಅನುಭವವನ್ನು ಮಾತಿನಲ್ಲಿ ಕಟ್ಟಿಕೊಡಲು ಬಲುಕಷ್ಟ. ಅದನ್ನು ಅನುಭವಿಸಿಯೇ ತೀರಬೇಕು. ಮಳೆಗಾಲದಲ್ಲಿ ಚಾರಣದ ಹವ್ಯಾಸವಿದ್ದರೆ ಇದನ್ನೊಮ್ಮೆ ನೋಡಿ ಬನ್ನಿ...

ಮುಂಗಾರಿನ ಆರಂಭ, ಚಾರಣಿಗರು ಪ್ರವಾಸಕ್ಕೆ ಆಯ್ದುಕೊಳ್ಳುವ ಪ್ರಶಸ್ತ ಸಮಯ. ಪ್ರಕೃತಿ ಸೌಂದರ್ಯವನ್ನು ಸವಿಯಲು ಅದು ಸೂಕ್ತ ಕಾಲ. ಮಳೆಗಾಲದಲ್ಲಂತೂ ಕೊಡಗು, ಚಿಕ್ಕಮಗಳೂರು, ಸಕಲೇಶಪುರ, ದಕ್ಷಿಣ ಕನ್ನಡವು ನೋಡುಗರಿಗೆ ಹಬ್ಬದೂಟದಂತೆ. ಅದನ್ನು ಅನುಭವಿಸುವ ಕಲೆ ಇರಬೇಕಷ್ಟೆ.

ಕಳೆದ ವಾರ ನಾವು ನಮ್ಮ ಕರ್ನಾಟಕದ ಗಡಿ ಪ್ರದೇಶದಲ್ಲಿರುವ ತಡಿಯಂಡಮೋಳ್ ಚಾರಣಕ್ಕೆ ಹೋಗಿದ್ದೆವು. ಇದು ಸಮುದ್ರ ಮಟ್ಟದಿಂದ 1,748 ಮೀಟರ್ ಎತ್ತರದಲ್ಲಿದೆ. ಬೆಂಗಳೂರಿನಿಂದ ಸುಮಾರು 250 ಕಿ.ಮೀ.; ವಿರಾಜಪೇಟೆಯಿಂದ ಸುಮಾರು 25 ಕಿ.ಮೀ. ದೂರವಿರುವ ಈ ಪ್ರದೇಶ ಚಾರಣಿಗರನ್ನು ಸೆಳೆಯುವ ಪ್ರಮುಖ ತಾಣ. ನಾವು ವಿರಾಜಪೇಟೆ ತಲುಪಿದ್ದು, ನಾಗರಹೊಳೆ ಮಾರ್ಗವಾಗಿ. ಚಾರಣ ನಮ್ಮ ಹವ್ಯಾಸವಾದ್ದರಿಂದ ಅದಕ್ಕೆ ಬೇಕಾಗುವ ಎಲ್ಲಾ ಪರಿಕರಗಳು ನಮ್ಮ ಬಳಿಯಿದ್ದವು. ಮುಖ್ಯವಾಗಿ ಈ ಮಳೆಗಾಲದಲ್ಲಿ ಕಾಡಿನಲ್ಲಿ ಸಂಚರಿಸುವಾಗ ಜಿಗಣೆಯಿಂದ ಕಾಪಾಡಿಕೊಳ್ಳಲು ಬೇಕಾದ ಅಸ್ತ್ರಗಳು! ತಳದಲ್ಲಿಯೇ ಇದ್ದ ಹೋಂ ಸ್ಟೇನಲ್ಲಿ ನಮ್ಮ ವಸತಿ. ಅದಾಗಲೇ ಅಲ್ಲಿ ಮಳೆರಾಯನ ಹಾಜರಿಯಿತ್ತು. ಇಲ್ಲಿ ಮಳೆ ಬಂದರೆ, ಕೆಆರ್‌ಎಸ್‌ ತುಂಬಿ ಬೆಂಗಳೂರಿಗೆ ನೀರು ಎಂದು ಆ ಕ್ಷಣದಲ್ಲಿ ಆಲೋಚಿಸಿದೆ.

ಚಾರಣದ ಆರಂಭದಲ್ಲಿ ನಮಗೆ ನೋಡಸಿಕ್ಕಿದ್ದು, ದಟ್ಟಡವಿಯ ತಪ್ಪಲಿನಲ್ಲಿರುವ ನಾಲ್ಕ್ನಾಡ್‌ ಅರಮನೆ. ಇಲ್ಲಿ ಒಂದು ಕಲ್ಲಿನಲ್ಲಿ ಆ ಅರಮನೆಯ ಬಗ್ಗೆ ಮಾಹಿತಿ ಇದೆ. ‘ತಡಿಯಂಡಮೋಳ್ ಬೆಟ್ಟದ ತಪ್ಪಲಿನ ದಟ್ಟಡವಿಯ ನಡುವೆ ಸುರಕ್ಷಿತವಾಗಿರಲು ದೊಡ್ಡವೀರರಾಜೇಂದ್ರ ಈ ಅರಮನೆಯನ್ನು ಕ್ರಿ.ಶ. 1792ರಲ್ಲಿ ನಿರ್ಮಿಸಿದ್ದ. ಎರಡು ಅಂತಸ್ತಿನ ಈ ಅರಮನೆಯು ಮೋಹಕ ಸ್ತಂಭಗಳು ಹಾಗೂ ಅಲಂಕೃತ ಮೊಗಸಾಲೆಗಳಿಂದ ಕೂಡಿದೆ. ಕ್ರಿ.ಶ.1834ರಲ್ಲಿ ಬ್ರಿಟಿಷರಿಗೆ ಶರಣಾಗುವುದಕ್ಕೆ ಮುಂಚೆ, ಈ ಅರಮನೆ ಚಿಕ್ಕವೀರರಾಜೇಂದ್ರರಿಗೆ ಕಡೆಯ ಅಡಗುತಾಣವಾಗಿತ್ತು. ವೈರಿಗಳ ಕಿರುಕುಳಕ್ಕೆ ಒಳಗಾಗಿದ್ದ ರಾಜಪರಿವಾರವು ಆಕ್ರಮಣಕಾರಿ ವೈರಿಗಳಿಗೆ ಭಯಮೂಡಿಸುವ ದೃಷ್ಟಿಯಿಂದ ಅರಮನೆಯ ಪ್ರಮುಖ ಸ್ಥಳಗಳಲ್ಲಿ ಹಾವಿನ ಸಂಕೇತಗಳನ್ನು ಮೂಡಿಸಿರಬಹುದು’ ಎಂದು ಆ ಫಲಕದಲ್ಲಿ ಉಲ್ಲೇಖಿಸಲಾಗಿದೆ. ವಿಶಾಲವಾದ ಅರಮನೆಯ ಮುಂದೆ ಒಂದು ದೇವಸ್ಥಾನವಿದೆ.

ಇಲ್ಲಿಂದ ಸುಮಾರು 6 ಕಿ.ಮೀ. ನಡೆದರೆ ಬೆಟ್ಟದ ತುದಿ ತಲುಪುತ್ತೇವೆ. ಹಿಂದೊಮ್ಮೆ ಮಧ್ಯಾಹ್ನ ಬಿಸಿಲಿನ ಸಮಯದಲ್ಲಿ ಚಾರಣ ನಡೆಸಿ ಇನ್ನೂ 2 ಕಿ.ಮೀ. ಬಾಕಿ ಉಳಿಸಿ ಮರಳಿದ್ದೆವು. ಅಂದು ತುಂಬಾ ದಣಿವಾಗಿತ್ತು. ಮಳೆಗಾಲದಲ್ಲಿ ಹತ್ತಲೇಬೇಕೆಂದು ತೀರ್ಮಾನಿಸಿ ಬೆಳಿಗ್ಗೆ 8.30ಕ್ಕೆ ನಡಿಗೆಯನ್ನು ಪ್ರಾರಂಭಿಸಿದ್ದೆವು. ನಾವು ತಂಗಿದ್ದ ಹೋಂಸ್ಟೇಯಿಂದ 1 ಕಿ.ಮೀ. ನಡೆದರೆ ಅಲ್ಲಿ ಅರಣ್ಯ ಕಾವಲುಗಾರರು ಇದ್ದು ಪ್ರತಿ ವ್ಯಕ್ತಿಗೆ ₹250ರಂತೆ ಪಡೆದು, ಬಂದಿದ್ದವರ ಮಾಹಿತಿ ಪಡೆದು ಚಾರಣಕ್ಕೆ ಅನುಮತಿ ನೀಡುತ್ತಾರೆ. ಮಕ್ಕಳಿಗೆ ₹150 ದರ ನಿಗದಿಪಡಿಸಲಾಗಿದೆ.

ಚಾರಣದ ಆರಂಭದಲ್ಲಿ ರಸ್ತೆ ಅಗಲವಾಗಿದ್ದು, ಅಷ್ಟೇನೂ ಕಷ್ಟವಲ್ಲ ಎಂಬ ಭಾವನೆ ಮೂಡಿಸುತ್ತದೆ. ಜುಳುಜುಳು ನೀರಿನ ಸದ್ದು, ಕೆಲವು ಕಡೆ ಶಾಂತವಾಗಿ ಹರಿಯುವ ತೊರೆಗಳು ಚಾರಣಕ್ಕೆ ಇನ್ನಷ್ಟು ಪ್ರೇರೇಪಿಸುತ್ತವೆ. ಹನಿ ಹನಿ ಮಳೆ, ಹದವಾದ ವಾತಾವರಣ ಚಾರಣಕ್ಕೆ ಪ್ರಶಸ್ತ ಎನ್ನುವಂತಿತ್ತು. ಪಾದಗಳಿಗೆ ಆಗಾಗ ಹತ್ತುವ ಜಿಗಣೆಗಳು, ಅದರಿಂದ ತಪ್ಪಿಸಿಕೊಳ್ಳಲು ಸ್ಯಾನಿಟೈಸರ್, ಹೊಗೆಸೊಪ್ಪುಗಳನ್ನು ಕಾಲಿಗೆ ಸಿಂಪಡಿಸುತ್ತಾ ಹೋದೆವು. ಜಿಗಣೆಗಳಿಂದ ತಪ್ಪಿಸಿಕೊಳ್ಳಲು ಎಷ್ಟೇ ಪ್ರಯತ್ನಪಟ್ಟರೂ ಹೇಗೋ ಯಾಮಾರಿಸಿ ಕಾಲಿನ ಶೂ, ಪ್ಯಾಂಟ್‌ನೊಳಗೆ ನುಗ್ಗಿ ತಮ್ಮ ಕಾರ್ಯವನ್ನು ಸಾಧಿಸಿಕೊಳ್ಳುತ್ತಿದ್ದವು. ಸುಮಾರು 4 ಕಿ.ಮೀ.ವರೆಗೆ ಸುಲಭ ಎನಿಸುವ ಚಾರಣದಲ್ಲಿ ಸವಾಲು ಕ್ರಮೇಣ ಆರಂಭವಾಗುತ್ತದೆ. ಅಲ್ಲಿಯೇ ಒಂದು ಬಸವನ ರೀತಿಯಲ್ಲಿ ಬಂಡೆಯಿದ್ದು, ಅರ್ಧಕ್ಕೆ ಕೆತ್ತನೆ ಮಾಡಿ ಬಿಟ್ಟ ರೀತಿ ಇದೆ. ಆ ರೀತಿಯ ಬಸವನ ಮೂರ್ತಿಯು ಅರಮನೆಯ ದೇವಸ್ಥಾನದಲ್ಲೂ ಕಾಣಬಹುದಾಗಿದೆ.

ಮಳೆ ಸಿಂಚನದಲ್ಲಿ ನಡೆಯುತ್ತಿದ್ದಾಗ ದಣಿವು ಕಡಿಮೆ ಎನಿಸಿದರೂ ಆಯಾಸ ಹೆಚ್ಚು. ಪಕ್ಕದ ಕೇರಳದಿಂದಲೂ ಸುಮಾರು 50 ವಿದ್ಯಾರ್ಥಿಗಳು, ಕೆಲವು ಕುಟುಂಬಗಳು ಬಹಳ ಉತ್ಸಾಹದಿಂದ ಚಾರಣಕ್ಕೆ ಬಂದಿದ್ದವು. ಬೆಟ್ಟದ ತುದಿ ತಲುಪುತ್ತಾ, ರಸ್ತೆ ಬದಿಯಲ್ಲಿ ಹುಲ್ಲು ದಟ್ಟವಾಗಿ ರಸ್ತೆಯನ್ನೇ ಕಾಣದಂತೆ ಆವರಿಸಿತ್ತು. ಹತ್ತಲೇಬೇಕೆಂಬ ಹಠವಿದ್ದುದರಿಂದ ನಿಧಾನವಾಗಿ, ಸಾವರಿಸಿಕೊಂಡು ಒಳ್ಳೆಯ ದೃಶ್ಯ ಕಂಡುಬಂದಾಗ ಫೋಟೊ ಕ್ಲಿಕ್ಕಿಸಿಕೊಳ್ಳುತ್ತಾ ತುತ್ತ ತುದಿ ತಲುಪಿದೆವು.

ತುತ್ತತುದಿಯಿಂದ ನೋಡಿದಾಗ ನಾವು ಹಾಲಿನ ಸಮುದ್ರದಲ್ಲಿರುವಂತಹ ಭಾವ. ಚಳಿ ಏರಿತು, ಮಳೆಯ ರಭಸ ಹೆಚ್ಚಿತು. ಎದುರಿದ್ದವರೂ ಕಾಣದ ರೀತಿ ಮಂಜು ಆವರಿಸಿಕೊಂಡಿತು. ಇಡೀ ತಡಿಯಂಡಮೋಳ್ ಮೋಡದ ಮರೆಯಲ್ಲಿ ಅವಿತು ಕುಳಿತ ಅನುಭವವನ್ನು ನೀಡಿತು. ಮಳೆಗಾಲವಾದ್ದರಿಂದ ಮತ್ತು ಮಂಜು ಮುಸುಕಿದ್ದ ಕಾರಣ, ಬೆಟ್ಟದ ತಪ್ಪಲು ಕಾಣಿಸಲೇ ಇಲ್ಲ. ದಟ್ಟ, ಕ್ಲಿಷ್ಟಕರವಾದ ಕುಮಾರ ಪರ್ವತ ಚಾರಣ ಮಾಡಿದ್ದ ನಮಗೆ ಅಷ್ಟೇ ಕಷ್ಟದ ಎರಡನೆಯ ಬೆಟ್ಟ ಎಂಬ ಭಾವನೆಯನ್ನು ಇದು ತರಿಸಿತು. ಮಳೆಗಾಲದಲ್ಲಿ ಚಾರಣದ ಅಭ್ಯಾಸವಿದ್ದರೆ ಇದನ್ನೊಮ್ಮೆ ನೋಡಿ ಬನ್ನಿ. 

ತಡಿಯಂಡಮೋಳ್
ತಡಿಯಂಡಮೋಳ್
ನಾಲ್ಕ್ನಾಡ್‌ ಅರಮನೆಯ ಒಳಾಂಗಣದಲ್ಲಿರುವ ಸ್ತಂಭಗಳು
ನಾಲ್ಕ್ನಾಡ್‌ ಅರಮನೆಯ ಒಳಾಂಗಣದಲ್ಲಿರುವ ಸ್ತಂಭಗಳು
ತಡಿಯಂಡಮೋಳ್
ತಡಿಯಂಡಮೋಳ್
ಬೇಸಿಗೆಯಲ್ಲಿ ಹೀಗೆ ಕಾಣುತ್ತದೆ ತಡಿಯಂಡಮೋಳ್‌
ಬೇಸಿಗೆಯಲ್ಲಿ ಹೀಗೆ ಕಾಣುತ್ತದೆ ತಡಿಯಂಡಮೋಳ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT