ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ: ಪೆಹಲ್ಗಾಮ್ ಹಸಿರು ಕಣಿವೆಗಳಿಗೆ ಸಲಾಮ್

Published 25 ಜೂನ್ 2023, 0:30 IST
Last Updated 25 ಜೂನ್ 2023, 0:30 IST
ಅಕ್ಷರ ಗಾತ್ರ

ಮಂಜುಳಾ ರಾಜ್

ಉತ್ತರ ಭಾರತದ ಜಮ್ಮು ಮತ್ತು ಕಾಶ್ಮೀರ ಇಡೀ ವಿಶ್ವದಲ್ಲೇ ಅತ್ಯಂತ ಸುಂದರ ಗಿರಿಧಾಮವೆನಿಸಿಕೊಂಡಿದೆ. ಕಾಶ್ಮೀರ ಎಂದಾಗ ಏನೋ ಆಕರ್ಷಣೆ. ಆದರೂ ಅಲ್ಲಿಗೆ ಹೋಗಲು ಒಂದು ರೀತಿಯ ಆತಂಕ, ಎಲ್ಲಿ ಯಾವಾಗ ಬಾಂಬುಗಳ ಸುರಿಮಳೆ ಆಗುತ್ತದೆಯೋ ಅಥವಾ ಯಾವುದಾದರೂ ವಿಧ್ವಂಸಕ ಕೃತ್ಯ ನಡೆಯುತ್ತದೆಯೋ ಎನ್ನುವ ಭಯ. ಈಗ ಅಲ್ಲಿ ರಕ್ಷಣಾ ಕಾರ್ಯ ಚೆನ್ನಾಗಿರುವುದರಿಂದಲೋ ಏನೋ ಹೆಚ್ಚಿನ ಸಂಖ್ಯೆಯಲ್ಲಿ ಜನ ಪ್ರವಾಸ ಹೋಗುತ್ತಿದ್ದಾರೆ. ಕಾಶ್ಮೀರದಲ್ಲಿ ಎಲ್ಲಿ ಹೋದರೂ ಪ್ರವಾಸಿಗರ ದಂಡು ಕಾಣುತ್ತದೆ. ಕಾಶ್ಮೀರದ ತುಂಬಾ  ಪೂರ್ಣವಾಗಿ ಹಸಿರು ಹಿಮಾಚ್ಛಾದಿತ ಶಿಖರಗಳು ಆವರಿಸಿಕೊಂಡಿವೆಯಾದರೂ ಅಲ್ಲಿನ ಮುಖ್ಯ ಪ್ರವಾಸಿ ಆಕರ್ಷಣೆಯಾದ ಪೆಹೆಲ್ಗಾಮ್ ಅತ್ಯಂತ ಸುಂದರ ತಾಣ. 

7200 ಅಡಿ ಎತ್ತರದಲ್ಲಿರುವ ಈ ಸ್ಥಳವನ್ನು ಕುರುಬರ ತಾಣವೆಂದು ಕರೆಯಲಾಗುತ್ತದೆ. ಅನಂತನಾಗ್ ಜಿಲ್ಲೆಯ ಈಶಾನ್ಯ ದಿಕ್ಕಿನಲ್ಲಿ ಲಿಡರ್ ನದಿಯ ದಡದಲ್ಲಿದಲ್ಲಿರುವ ಈ ಸ್ಥಳ  ಕುರಿಗಳ ಆವಾಸಸ್ಥಾನವಾಗಿರುವುದರಿಂದ ಈ ಹೆಸರು ಬಂದಿರಬಹುದು. ಇಲ್ಲಿನ ಕುರಿಗಳು ಮೈ ತುಂಬಾ ಉಣ್ಣೆ ತುಂಬಿಕೊಂಡು ದಷ್ಟಪುಷ್ಟವಾಗಿ ಕಾಣುತ್ತವೆ. ಅಲ್ಲಲ್ಲಿ ಕುರಿಗಳ ಹಿಂಡೂ ಕಾಣಸಿಗುತ್ತವೆ. ಎತ್ತರದಲ್ಲಿ ಇರುವುದರಿಂದಲೋ ಏನೋ ಎಲ್ಲಿ ನೋಡಿದರೂ ಹಸಿರೇ ಹಸಿರು. ಇಲ್ಲಿನ ಮತ್ತೊಂದು ಸುಂದರ ತಾಣವೆಂದರೆ ತುಲಿಯಾನ್ ಸರೋವರ. ಇದು ಸಾಮಾನ್ಯವಾಗಿ ಹಿಮದಿಂದ ಹೆಪ್ಪುಗಟ್ಟಿರುತ್ತದೆ ಅಥವಾ ಹಿಮದ ತುಂಡುಗಳು ಸರೋವರದಲ್ಲಿ ತೇಲಾಡುತ್ತಿರುತ್ತವೆ. ಚಳಿಗಾಲದಲ್ಲಿ ಪೆಹಲ್ಗಾಮ್ ನೋಡಲು ಮತ್ತೂ ಚೆನ್ನ. ಅಲ್ಲಿನ ಚಳಿ ತಡೆಯುವಷ್ಟು ಶಕ್ತಿ ಇರಬೇಕಷ್ಟೆ.  ಪೆಹೆಲ್ಗಾಮ್‌ನ ತುಂಬಾ ಹಸಿರು ಕಣಿವೆಗಳಿವೆ. ಒಂದಕ್ಕಿಂತ ಒಂದು ಸುಂದರ. ಪ್ರಕೃತಿಮಾತೆ  ಹಸಿರು ಸೀರೆಯನ್ನುಟ್ಟು ಅದರ ಮೇಲೆ ಹೊಳೆಯುವ ಹಿಮ ಮಣಿಗಳನ್ನು ಪೋಣಿಸಿಕೊಂಡಂತೆ ಭಾಸವಾಗುತ್ತದೆ.

ಲಿಡರ್ ನದಿ ತಟದಲ್ಲಿ ಕುರಿಗಳು ಸಾರ್ ಕುರಿಗಳು
ಲಿಡರ್ ನದಿ ತಟದಲ್ಲಿ ಕುರಿಗಳು ಸಾರ್ ಕುರಿಗಳು

ಆರು ವ್ಯಾಲಿಯಲ್ಲಿ ಸ್ಕೀಯಿಂಗ್  

ಇದು ಪೆಹಲ್ಗಾಮ್‌ನ  ಪ್ರಸಿದ್ಧ ಹಸಿರು ಕಣಿವೆ. ಪೆಹಲ್ಗಾಮ್‌ನಿಂದ 12 ಕಿಲೋಮೀಟರ್ ದೂರವಿದೆ. ಅಲ್ಲಿಗೆ ಹೋಗಲು ಕೇವಲ 30 ನಿಮಿಷಗಳು ಸಾಕು. ಒಳಗೆ ಹೋಗಲು ಯಾವುದೇ ಶುಲ್ಕವಿಲ್ಲ. ಇಲ್ಲಿನ ಹಚ್ಚ ಹಸುರಿನ ಹುಲ್ಲುಗಾವಲುಗಳು, ಪ್ರಾಚೀನ ಸರೋವರಗಳು, ಹಿಮಾಚ್ಛಾದಿತ ಪರ್ವತಗಳು ಹೆಸರುವಾಸಿಯಾಗಿವೆ. ಕೊಲಾಹೊಯ್ ಹಿಮ ಪರ್ವತದ ಸುಂದರ ನೋಟದ ಜೊತೆ ಅನೇಕ ಚಟುವಟಿಕೆಗಳ ತಾಣವೂ ಹೌದು. ನದಿ ಚಾರಣಕ್ಕೆ ಹೇಳಿ ಮಾಡಿಸಿದ ಸ್ಥಳ. ಸ್ಕೀಯಿಂಗ್ ಮತ್ತು ಹೆಲಿಸ್ಕೀಯಿಂಗ್ ಇಲ್ಲಿನ ಜನಪ್ರಿಯ ಕ್ರೀಡೆಯೆನಿಸಿಕೊಂಡಿದೆ. ಕುದುರೆ ಸವಾರಿ ಇಲ್ಲಿನ ಒಂದು ಮುಖ್ಯ ಹಾಗೂ ಜನಪ್ರಿಯ ಚಟುವಟಿಕೆ.  ಈ ತಾಣದಲ್ಲಿ  ಬಹಳ ಸುಂದರವಾದ ದೊಡ್ಡ ತೆರೆದ ಉದ್ಯಾನವನವಿದೆ, ಸುತ್ತಲೂ   ಹಸಿರು ಬೆಟ್ಟಗಳಿವೆ. ಈ ಸುಂದರ ನೈಸರ್ಗಿಕ ತಾಣದಲ್ಲಿ, ಪ್ರಕೃತಿಯ ಮಡಿಲಿನಲ್ಲಿ  ಕಾಲ ಕಳೆಯುವುದೇ ಗೊತ್ತಾಗದು. ಆರು ವನ್ಯಧಾಮಗಳಲ್ಲಿ  ಕಂದು ಬಣ್ಣದ ಹಿಮ ಕರಡಿಗಳು ಮತ್ತು ಕಸ್ತೂರಿ ಜೆಂಕೆ [ಮಸ್ಕ ಡೀರ್] ನೋಡಲು ಸಿಗುತ್ತವೆ ಎನ್ನುತ್ತಾರೆ; ನಮಗಂತೂ ಸಿಗಲಿಲ್ಲ. 

ಬೈಸರನ್ ವ್ಯಾಲಿಯ ಫರ್‌ ವೃಕ್ಷ ವೈಭವ

ಇದನ್ನು ಮಿನಿ ಸ್ವಿಟ್ಜರ್‌ಲ್ಯಾಂಡ್  ಎಂದೂ ಕರೆಯುತ್ತಾರೆ. ಅಲ್ಲಿದ್ದಂತೆ ಮಂದ ಬೆಟ್ಟದ ತುದಿಗಳು ಇಲ್ಲಿಯೂ ಇವೆ. ಪೆಹಲ್ಗಾಮ್‌ನಿಂದ ಐದು ಕಿಲೋಮೀಟರ್ ದೂರ ಇದೆ ಅಷ್ಟೆ. ಬೆಳಿಗ್ಗೆ ಬೇಗ ಹೊರಟರೆ ಆದಷ್ಟು ಹೆಚ್ಚು ಹಸಿರು ಹಿಮಾಚ್ಛಾದಿತ ಕಣಿವೆಗಳನ್ನು ನೋಡಬಹುದು. ಈ ಕಣಿವೆಯೂ ತುಂಬಾ ಸುಂದರವಾಗಿದೆ. ಎತ್ತರದ ಬೆಟ್ಟಗಳನ್ನು ಆವರಿಸಿದ ಹಸಿರು ಹುಲ್ಲುಗಾವಲುಗಳು , ಅಲ್ಲಿನ ಸ್ವಚ್ಛ ಸರೋವರಗಳು, ಕಣ್ಣಿಗೆ ತಂಪೆನಿಸುತ್ತದೆ. ಪೈನ್, ಸೆಡಾರ್,ಮತ್ತು ಫರ್ ವೃಕ್ಷಗಳಿಂದ ಆವೃತವಾದ  ಸುಂದರ ಮತ್ತು ಪವಿತ್ರ ಬೈಸರನ್ ಕಣಿವೆ ಪೆಹೆಲ್ಗಾಮ್‌ನ ಅತ್ಯಂತ ಸುಂದರ ತಾಣವೆಂದು ಪ್ರಸಿದ್ಧವಾಗಿದೆ. ನಿಮಗೆ ಆಸಕ್ತಿ ಮತ್ತು ಧೈರ್ಯ ಇದ್ದರೆ ಕುದುರೆಯ ಮೇಲೂ ಸವಾರಿ ಮಾಡಬಹುದು.

ಬೇತಾಬ್ ಸಿನಿಮಾದಿಂದ ಪಡೆದ ಹೆಸರು

ಇಲ್ಲಿಯ ಮತ್ತೊಂದು ಸುಂದರ ಕಣಿವೆ ಬೇತಾಬ್ ವ್ಯಾಲಿ ಅರ್ಥಾತ್ ಕಣಿವೆ. ಪೆಹೆಲ್ಗಾಮ್‌ನ ಈಶಾನ್ಯ ಪ್ರದೇಶದಲ್ಲಿರುವ ಈ ಕಣಿವೆಯಲ್ಲಿ  ಖ್ಯಾತ ಚಲನಚಿತ್ರ ‘ಬೇತಾಬ್’ ಚಿತ್ರಣವಾಗಿರುವುದರಿಂದಲೇ ಈ ಹೆಸರು ಬಂದಿತೆನ್ನುತ್ತಾರೆ. ವಿಸ್ತಾರವಾದ ಸೊಂಪಾದ ಹುಲ್ಲುಗಾವಲುಗಳು, ಹಿಮಾಚ್ಛಾದಿತ  ಶಿಖರಗಳು, ಅಂಕು ಡೊಂಕಾಗಿ ತನ್ನದೇ ಹರಿವಿನಲ್ಲಿ ಸಾಗುವ ನದಿಗಳು ಕಣಿವೆಯ ಸೌಂದರ್ಯಕ್ಕೆ ಇಂಬು ಕೊಡುತ್ತದೆ.  ಟ್ರೆಕಿಂಗ್ ಮಾಡುವವರಿಗಂತೂ ಸ್ವರ್ಗವೇ ಸರಿ. ಮಧುಚಂದ್ರದ ದಂಪತಿಗಳಿಗೆ ಹೇರಳವಾಗಿ ಮಧು ಹಾಗೂ ಚಂದ್ರನ ಹೊಂಬೆಳಕು ಲಭ್ಯ. ಬೇತಾಬ್ ಕಣಿವೆಯ ಪಕ್ಕ ಲಿಡರ್ ನದಿ ಹರಿಯುತ್ತದೆ. ವಾಹನದಲ್ಲಿ ಸಾಗುವಾಗ ನಮ್ಮ ರಸ್ತೆಯ ಪಕ್ಕಕ್ಕೆ ನಮ್ಮ ಜೊತೆಯಲ್ಲೇ ಲಿಡರ್ ನದಿ ಜುಳು ಜುಳು ಸದ್ದು ಮಾಡುತ್ತಾ ಸಾಗುತ್ತದೆ. ಪರ್ವತದ ಸಾಲಿನಿಂದ ತುಲೈನ್ ಸರೋವರ ಹರಿಯುತ್ತದೆ ಆದರೆ ಬಹಳಷ್ಟು ಬಾರಿ ಅದು ಹಿಮಾವೃತವಾಗಿರುತ್ತದೆ. ಪೆಹಲ್ಗಾಮ್‌ ತನ್ನ ನೈಸರ್ಗಿಕ ಸೌಂದರ್ಯಕ್ಕೆ ಪ್ರಸಿದ್ಧ. ನೋಡಿದಷ್ಟೂ ಮತ್ತೆ ನೋಡಬೇಕೆನಿಸುವಷ್ಟು ಸುಂದರ ದೃಶ್ಯಗಳು. ಎತ್ತರದ ಹಸಿರು ಬೆಟ್ಟಗಳ ಪಕ್ಕ ಚಿನಾರ್, ಪೈನ್ ಮತ್ತು  ಫರ್ ವೃಕ್ಷಗಳು ಎತ್ತರದ ಬೆಟ್ಟಗಳನ್ನು ಆವರಿಸಿರುವ ಹಿಮದ ವೈಭವ, ಹಸಿರು ಬೆಟ್ಟಗಳಿಗೆ ಶ್ವೇತ ವರ್ಣದ ಹೊಳೆಯುವ ಚಾದರವನ್ನು ಹೊದಿಸಿದಂತೆ ಕಾಣುತ್ತದೆ. ಹೈಕಿಂಗ್, ಟ್ರೆಕಿಂಗ್, ಮತ್ತು ಫಿಶಿಂಗ್ ಮಾಡುವವರಿಗೆ ಒಳ್ಳೆಯ ಅವಕಾಶ. ಈ ಪರ್ವತದ ಸಾಲಿನಿಂದ ಹಿಂದೂಗಳ ಪವಿತ್ರ ಅಮರನಾಥ್ ದೇವಾಲಯದತ್ತ ಸಾಗುವ  ಹಾದಿಯೂ ಸಿಗುತ್ತದೆ.

ಅರು ವ್ಯಾಲಿಯಲ್ಲಿ ಮಳೆಯಲಿ ಜೊತೆಯಲಿ
ಅರು ವ್ಯಾಲಿಯಲ್ಲಿ ಮಳೆಯಲಿ ಜೊತೆಯಲಿ

ಮಧುಚಂದ್ರಕ್ಕೆ ಕೊಲಹೊ

ಚಾರಣಿಗರಿಗೆ ಇದು ಸುಂದರ ತಾಣ. 18000 ಮೀಟರ್ ಎತ್ತರಕ್ಕೆ ಏರುವುದು ಸುಲಭವಲ್ಲವಾದರೂ ತಲುಪಿದ ನಂತರದ ದೃಶ್ಯ ನೋಡಲು ಕಣ್ಣುಗಳೆರಡು ಸಾಲದು. ದಟ್ಟ ಹಸಿರು ಪರ್ವತ ಮತ್ತು ಹಸಿರು ಅರಣ್ಯಮಾರ್ಗ, ಸುತ್ತಲೂ ಆವರಿಸಿರುವ ಹಿಮಾಚ್ಛಾದಿತ ಪರ್ವತದ ಸಾಲುಗಳು, ತಣ್ಣಗೆ ಕೊರೆಯುವ ಸದ್ದು ಮಾಡುತ್ತಾ ಗಮನ ಸೆಳೆಯುವ ಲಿಡರ್ ನದಿ... ಈ ಎಲ್ಲವೂ ಮಧುಚಂದ್ರಕ್ಕೆ ಬಂದ ದಂಪತಿಗಳಿಗೆ ಹೇಳಿ ಮಾಡಿಸಿದಂತಹ ತಾಣವೆನ್ನಬಹುದು.

ಚಂದನವಾರಿ ಕಣಿವೆ

ಇವೆಲ್ಲಕ್ಕಿಂತ ಮತ್ತೊಂದು ಗಮನ ಸೆಳೆಯುವ ಕಣಿವೆ ಚಂದನವಾರಿ. ಇದನ್ನು ತೋರಿಸಲು ಅಲ್ಲಿನ ಗೈಡುಗಳಿಗೆ ಬಹಳ ಕಾತರ. ಇಲ್ಲಿಗೆ ಕುದುರೆಯ ಮೇಲೆಯೇ ಹೋಗಬೇಕು. ಅದು ನಿಜಕ್ಕೂ ದುಬಾರಿ. ಅದಕ್ಕಿಂತಾ ಹೆಚ್ಚಾಗಿ ಭಯವೂ ಹೌದು, ಅದರಲ್ಲೂ ಮೊದಲ ಸಲ ಕುದುರೆಯ ಮೇಲೆ ಕುಳಿತುಕೊಳ್ಳುವವರಿಗೆ ಭಯವೋ ಭಯ. ಆ ಕುದುರೆಗಳು ಕಣಿವೆಯ ಪಕ್ಕಕ್ಕೆ ಸಾಗುತ್ತವೆ. ಪಕ್ಕದಲ್ಲೇ ಪ್ರಪಾತ ಆದರೆ ಅವು ಹೋಗುವುದು ತುದಿಯಲ್ಲೇ. ಅಭ್ಯಾಸವಿಲ್ಲದವರು ಮತ್ತು ಸ್ವಲ್ಪ ವಯಸ್ಸಾದವರು ಹೋಗದಿರುವುದೇ ವಾಸಿ. ದಿನವೂ ಒಬ್ಬರಿಬ್ಬರಾದರೂ ಬೀಳುತ್ತಾರೆ ಮತ್ತು ನಂತರದ ಕಥೆ ಕೇಳಬೇಡಿ. ಇದು ಅಮರನಾಥ ಯಾತ್ರೆಗೆ ಹೋಗುವ ಪ್ರಾರಂಭಿಕ ಹಂತ. ಆದರೆ ಈಗ ಅಲ್ಲಿಗೆ ಬಹಳಷ್ಟು ಜನ ಹೆಲಿಕಾಪ್ಟರಿನಲ್ಲೇ ಹೋಗುತ್ತಾರೆ. ಕುದುರೆಯ ಮೇಲಿನ ಪ್ರಯಾಣ ಸ್ವಲ್ಪ ಕಷ್ಟವೇ ಸರಿ. ಈ ಕಣಿವೆಯನ್ನು ತಲುಪುವುದು ತ್ರಾಸದಾಯಕವಾದರೂ ತಲುಪಿದ ಮೇಲೆ ಕಾಣುವ ದೃಶ್ಯ ರಾಶಿಯ ಸೊಬಗು ಬಣ್ಣಿಸಲಸದಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT