ಬುಧವಾರ, ಫೆಬ್ರವರಿ 19, 2020
16 °C
ಇಲಾಖೆ, ಪ್ರಾಧಿಕಾರ, ಟ್ರಸ್ಟ್‌ಗಳ ನಡುವೆ ಕಾಣದ ಸಮನ್ವಯ l ಇಲಾಖೆಯ ಬಾದಾಮಿ ಕಚೇರಿಗೆ ಬೀಗವೇ ಕಾಯಂ

ಬಾಗಲಕೋಟೆ ಪ್ರವಾಸೋದ್ಯಮ ಅಭಿವೃದ್ಧಿ; ಇನ್ನೂ ಮರೀಚಿಕೆ

ವೆಂಕಟೇಶ್ ಜಿ.ಎಚ್ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮದಂತಹ ಐತಿಹಾಸಿಕ ತಾಣಗಳು ಜಿಲ್ಲೆಗೆ ವಿಶ್ವದ ಪ್ರವಾಸಿ ನಕ್ಷೆಯಲ್ಲಿ ಸ್ಥಾನ ಕಲ್ಪಿಸಿವೆ. ಆ ಸ್ಥಾನಮಾನ ಉಳಿಸಿಕೊಳ್ಳುವ, ಇಲ್ಲವೇ ಅದನ್ನು ಬೆಳೆಸಿ ಜಿಲ್ಲೆಯನ್ನು ಪ್ರವಾಸಿ ಸ್ನೇಹಿಯಾಗಿಸುವ ಯಾವ ಚಟುವಟಿಕೆಯೂ ವಾಸ್ತವವಾಗಿ ನಡೆಯುತ್ತಿಲ್ಲ.

ಒಂದೆಡೆ ಯುನೆಸ್ಕೊ ಮನ್ನಣೆ ಪಡೆದ ಪ್ರವಾಸಿ ತಾಣಗಳು, ಇನ್ನೊಂದೆಡೆ ವರ್ಷದ ಏಳೆಂಟು ತಿಂಗಳು ಜಿಲ್ಲೆಯ ಉದ್ದಕ್ಕೂ ಮೈಚಾಚಿ ನಿಲ್ಲುವ ಆಲಮಟ್ಟಿ ಜಲಾಶಯದ ಹಿನ್ನೀರು ಇದ್ದರೂ, ಕರ್ನಾಟಕದಲ್ಲಿ ‘ಪ್ರವಾಸೋದ್ಯಮ ಅಭಿವೃದ್ಧಿ’ಯ ಮಾತು ಬರೀ ಬೆಂಗಳೂರು–ಮೈಸೂರು, ಮಡಿಕೇರಿ, ಹಂಪಿ–ಹೊಸಪೇಟೆಯ ಸುತ್ತ ಗಿರಕಿ ಹೊಡೆಯುತ್ತಿದೆ.

ಸ್ಥಳೀಯವಾಗಿ ರಾಜಕೀಯ ಇಚ್ಛಾಶಕ್ತಿ ಕೊರತೆ, ಅಧಿಕಾರಶಾಹಿಯ ಜಾಣ ಮೌನ, ಸರ್ಕಾರದ ನಿರ್ಲಕ್ಷ್ಯವೂ ‘ಪ್ರವಾಸೋದ್ಯಮ’ದಿಂದ ಬದುಕು ಕಟ್ಟಿಕೊಳ್ಳುವ ಸ್ಥಳೀಯರ ಕನಸಿಗೆ ಬೆಂಕಿ ಇಟ್ಟಿದೆ. ಪ್ರವಾಸೋದ್ಯಮವನ್ನೇ ಬದುಕಾಗಿಸಿಕೊಳ್ಳಬೇಕಿದ್ದ ನಮ್ಮೂರ ಮಕ್ಕಳು, ಕೆಲಸ ಹುಡುಕಿಕೊಂಡು ಬೆಂಗಳೂರು, ಮಂಗಳೂರು, ಪುಣೆ, ರತ್ನಗಿರಿ, ಗೋವಾಗೆ ಗುಳೆ ಹೋಗುತ್ತಿದ್ದಾರೆ.

ಸಮನ್ವಯ ಕೊರತೆ: ಚಾಲುಕ್ಯರ ನೆಲೆಗಳಾದ ಬಾದಾಮಿ, ಐಹೊಳೆ, ಪಟ್ಟದಕಲ್ಲು ಭಾರತೀಯ ಪುರಾತತ್ವ ಇಲಾಖೆಯ (ಎಎಸ್‌ಐ) ಸುಪರ್ದಿಯಲ್ಲಿವೆ. ಕೂಡಲಸಂಗಮ, ಬೀಳಗಿ ತಾಲ್ಲೂಕಿನ ಚಿಕ್ಕಸಂಗಮ ನಿರ್ವಹಣೆಗೆ ಪ್ರತ್ಯೇಕ ಪ್ರಾಧಿಕಾರವಿದೆ. ಮಹಾಕೂಟದಲ್ಲಿನ ಕೆಲವು ಸ್ಮಾರಕಗಳು ರಾಜ್ಯ ಪುರಾತತ್ವ ಇಲಾಖೆ ವ್ಯಾಪ್ತಿಯಲ್ಲಿವೆ. ಇನ್ನೂ ಕೆಲವು ಸ್ಥಳೀಯ ಟ್ರಸ್ಟ್‌ನ ನಿರ್ವಹಣೆಯಲ್ಲಿವೆ. ಇಲ್ಲಿ ಪ್ರವಾಸೋದ್ಯಮ ಇಲಾಖೆಗೆ ಉತ್ತರದಾಯಿತ್ವ ನಗಣ್ಯ. ಹೀಗಾಗಿ ಇಲಾಖೆ, ಪ್ರಾಧಿಕಾರ, ಟ್ರಸ್ಟ್‌ಗಳ ನಡುವೆ ಸಮನ್ವಯ ಸಾಧಿಸಿ ಪ್ರವಾಸಿಗರ ಹಿತ ಕಾಯಲು ಪ್ರವಾಸೋದ್ಯಮ ಇಲಾಖೆಯೂ ಮುಂದಾಗುತ್ತಿಲ್ಲ.

ಸ್ಮಾರಕಗಳ ರಕ್ಷಣೆಯಷ್ಟೇ ತನ್ನ ಜವಾಬ್ದಾರಿ ಎಂದು ಭಾವಿಸಿ ಪುರಾತತ್ವ ಇಲಾಖೆ ಅವುಗಳಿಗೆ ಗಡಿ ನಿಗದಿಪಡಿಸಿ ಅಲ್ಲೊಂದು ರಕ್ಷಣಾ ಗೋಡೆ (ಬೇಲಿ) ಕಟ್ಟಿಕೊಂಡು ಕುಳಿತರೆ, ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ತನ್ನ ವ್ಯಾಪ್ತಿಯ ಪ್ರವಾಸಿ ತಾಣಗಳಲ್ಲಿ ಬರೀ ‘ಕಟ್ಟುವ’ (ನಿರ್ಮಾಣ ಕಾಮಗಾರಿ) ಕಾರ್ಯಕ್ಕೆ ಮಾತ್ರ ಆದ್ಯತೆ ನೀಡುತ್ತಿದೆ. ಹೀಗಾಗಿ ಪ್ರವಾಸಿಗರ ಗೋಳು ಕೇಳುವವರು, ದೇಖರೇಖಿ ಮಾಡುವವರು ಇಲ್ಲವಾಗಿದೆ.

ಕಾಯಂ ಬೀಗ: ಬಾದಾಮಿಯ ಮಯೂರ ಚಾಲುಕ್ಯ ಹೋಟೆಲ್‌ನಲ್ಲಿ ಪ್ರವಾಸೋದ್ಯಮ ಇಲಾಖೆಯ ಸ್ಥಳೀಯ ಕಚೇರಿ ಇದೆ. ಅದಕ್ಕೆ ಕಾಯಂ ಆಗಿ ಬೀಗ ಹಾಕಲಾಗಿರುತ್ತದೆ. ಅಧಿಕಾರಿ ಇರಲಿ, ಸಿಬ್ಬಂದಿಯೂ ಅಲ್ಲಿಲ್ಲ. ಮುಂಜಾನೆ ಬರುವ ಸ್ವಚ್ಛತಾ ಸಿಬ್ಬಂದಿ ಕಸ ಗುಡಿಸಿ ಮತ್ತೆ ಬೀಗ ಹಾಕಿಕೊಂಡು ಹೊರಡುತ್ತಾರೆ. ಚಾಲುಕ್ಯರ ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಅಸ್ತಿತ್ವವನ್ನು ಚಾಲುಕ್ಯ ಹೋಟೆಲ್ ಮಾತ್ರ ಪ್ರತಿನಿಧಿಸುತ್ತದೆ.

ಐದು ವರ್ಷಗಳಿಂದ ಹಾಳು ಬಿದ್ದಿದೆ: ಮಹಾಕೂಟದಲ್ಲಿ ಲೋಕೋಪಯೋಗಿ ಇಲಾಖೆಯಿಂದ ₹2 ಕೋಟಿ ವೆಚ್ಚದಲ್ಲಿ ಐದು ವರ್ಷಗಳ ಹಿಂದೆ ಪ್ರವಾಸಿ ಮಂದಿರ ಕಟ್ಟಲಾಗಿದೆ. ಆದರೆ ಒಮ್ಮೆಯೂ ಅದು ಬಳಕೆಯಾಗಿಲ್ಲ. ಅಲ್ಲಿ ನೀರು ಇಲ್ಲ ಎಂಬ ನೆಪ ಹೇಳಿ ಬೀಗ ಜಡಿಯಲಾಗಿದೆ. ಪ್ರವಾಸೋದ್ಯಮ ಇಲಾಖೆ ಅಧೀನಕ್ಕೆ ಕೊಟ್ಟರೆ ಅವರಾದರೂ ನಡೆಸಿಕೊಂಡು ಹೋಗುತ್ತಾರೆ. ಆ ಕೆಲಸವೂ ಆಗಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸುತ್ತಾರೆ.

13 ವರ್ಷಗಳಿಂದ ಕಡತದಲ್ಲೇ ಉಳಿದ ಐಹೊಳೆ ಸ್ಥಳಾಂತರ

ಐಹೊಳೆಯಲ್ಲಿನ ಜನವಸತಿಯನ್ನು ಬೇರೆಡೆ ಸ್ಥಳಾಂತರಿಸುವ ಕಾರ್ಯ 13 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಅದಕ್ಕೆ ಚಾಲನೆ ನೀಡಲಾಗಿತ್ತು. ಅದಕ್ಕೆ ಪೂರಕವಾಗಿ 2018ರ ಅಕ್ಟೋಬರ್ 1ರಂದು ಐಹೊಳೆಯಲ್ಲಿ ಜಿಲ್ಲಾಡಳಿತ ಗ್ರಾಮಸಭೆ ನಡೆಸಿ ಸ್ಥಳೀಯರಿಂದ ಒಪ್ಪಿಗೆ ಕೂಡ ಪಡೆದಿತ್ತು. ನಂತರ ಆ ಪ್ರಸ್ತಾವ ಕಡತ ಸೇರಿದೆ.

ಐಹೊಳೆ ಗ್ರಾಮದಲ್ಲಿ ಜನವಸತಿಯ ನಡುವೆಯೇ 90ಕ್ಕೂ ಹೆಚ್ಚು ಸ್ಮಾರಕಗಳು ಇವೆ. ಕೆಲವು ಕಡೆ ಸ್ಮಾರಕಗಳಲ್ಲಿಯೇ ಜನರು ವಾಸವಿದ್ದಾರೆ. ಆದರೆ ಸ್ಮಾರಕಗಳ ನೆಲೆಯನ್ನು ಸಂರಕ್ಷಿತ ಪ್ರದೇಶ ಎಂದು ಭಾರತೀಯ ಪುರಾತತ್ಚ ಇಲಾಖೆ (ಎಎಸ್‌ಐ) ಗುರುತಿಸಿದೆ.

ಆರಂಭದಲ್ಲಿ ಒಂಬತ್ತು ದೇವಾಲಯಗಳ ಸಂಕೀರ್ಣಗಳ ಸುತ್ತಲಿನ 144 ಮನೆಗಳ ಸ್ಥಳಾಂತರಕ್ಕೆ ಎಎಸ್‌ಐ ಮುಂದಾಗಿತ್ತು. ಅದಕ್ಕಾಗಿ 2006ರಲ್ಲಿ ₹30 ಕೋಟಿ ವೆಚ್ಚದ ಯೋಜನೆಯ ಪ್ರಸ್ತಾವ ಕೂಡ ಸಲ್ಲಿಸಿತ್ತು. ಅದಕ್ಕೆ ಅಂದಿನ ಸರ್ಕಾರ ಅನುಮೋದನೆ ನೀಡಿತ್ತು. ಆದರೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರು. ಸ್ಥಳಾಂತರ ಮಾಡಿದಲ್ಲಿ ಎಲ್ಲರನ್ನೂ ಮಾಡಿ ಎಂದು ಒತ್ತಾಯಿಸಿದ್ದರು.

ಹಾಗಾಗಿ ಮರು ಸಮೀಕ್ಷೆ ನಡೆಸಿ 942 ಮನೆಗಳ ಸ್ಥಳಾಂತರಕ್ಕೆ ನಿರ್ಧರಿಸಲಾಗಿತ್ತು. ವರ್ಷಗಳು ಉರುಳಿದಂತೆ ಯೋಜನಾ ವೆಚ್ಚವೂ ಹೆಚ್ಚಳವಾಗಿದೆ. 2015ರ ಜೂನ್ 10ರಂದು ₹362 ಕೋಟಿ ವೆಚ್ಚದ ಮತ್ತೊಂದು ಪ್ರಸ್ತಾವ ಸರ್ಕಾರಕ್ಕೆ ಸಲ್ಲಿಕೆಯಾಗಿತ್ತು. ಸ್ಥಳಾಂತರಕ್ಕೆ 51 ಎಕರೆ ಭೂಮಿ ಕೂಡ ಗುರುತಿಸಲಾಗಿದೆ. ಈಗ ಸ್ಥಳಾಂತರಿಸಬೇಕಾದ ಮನೆಗಳ ಸಂಖ್ಯೆ 1052ಕ್ಕೆ ಏರಿಕೆಯಾಗಿದೆ.

ದಶಕದಿಂದ ‘ಪ್ರಭಾರ’ದ್ದೇ ಕಾರುಬಾರು

ಕಳೆದೊಂದು ದಶಕದಿಂದ ಇಲ್ಲಿನ ಪ್ರವಾಸೋದ್ಯಮ ಇಲಾಖೆಗೆ ಪೂರ್ಣಪ್ರಮಾಣದ ಅಧಿಕಾರಿಯೇ ಇಲ್ಲ. ವಾರ್ತಾ ಮತ್ತು ಪ್ರಚಾರ, ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿಗಳೇ ‘ಪ್ರಭಾರ’ ನಡೆಸಿದ್ದರೆ, ಈಗ ಬೀಳಗಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗೆ ಹೆಚ್ಚುವರಿ ಹೊಣೆ ವಹಿಸಲಾಗಿದೆ. ಪ್ರವಾಸೋದ್ಯಮ ಇಲಾಖೆ ಕಚೇರಿಯಲ್ಲಿನ ಪ್ರವಾಸಿ ವ್ಯವಸ್ಥಾಪಕ, ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗಳು ಖಾಲಿ ಇದ್ದು, ಎಲ್ಲ ಕಡೆಯೂ ‘ಪ್ರಭಾರ’ದ್ದೇ ಕಾರ್ಯಭಾರ ನಡೆದಿದೆ.

ಬಾದಾಮಿ: ಮನೆ ಸ್ಥಳಾಂತರ ನನೆಗುದಿಗೆ

ಬಾದಾಮಿಯ ಮ್ಯುಸಿಯಂ ರಸ್ತೆಯಲ್ಲಿನ 96 ಮನೆಗಳ ಸ್ಥಳಾಂತರಕ್ಕೆ ₹32 ಕೋಟಿ ಅಂದಾಜು ವೆಚ್ಚದ ಯೋಜನಾ ವರದಿಯನ್ನು ಲೋಕೋಪಯೋಗಿ ಇಲಾಖೆ ಸಿದ್ಧಪಡಿಸಿ 2018ರ ಆಗಸ್ಟ್‌ನಲ್ಲಿ ಸರ್ಕಾರಕ್ಕೆ ಸಲ್ಲಿಸಿದೆ. ಆದರೆ ಇಲ್ಲಿಯವರೆಗೆ ಯಾವುದೇ ಪ್ರಗತಿ ಕಂಡುಬಂದಿಲ್ಲ. ಮನೆಗಳನ್ನು ಸ್ಥಳಾಂತರಿಸಿದರೆ ಅಲ್ಲಿನ ಇತಿಹಾಸ ಪ್ರಸಿದ್ಧ ಗುಹೆಗಳಿಗೆ ವೀಕ್ಷಣೆಗೆ ತೆರಳಲು ಪ್ರವಾಸಿಗರಿಗೆ ಇರುವ ಅಡ್ಡಿ–ಆತಂಕ ನಿವಾರಣೆಯಾಗಲಿದೆ.

ಈ ಪ್ರಸ್ತಾವ ಎರಡು ದಶಕಗಳ ಹಿಂದಿನದು. ಬಾದಾಮಿಯ ಅಗಸ್ತ್ಯತೀರ್ಥ ಹೊಂಡದ ಗೋಡೆಗೆ ಹತ್ತಿಕೊಂಡಂತೆಯೇ ಇರುವ ಈ ಮನೆಗಳನ್ನು ಸ್ಥಳಾಂತರಿಸಿ, ಮ್ಯೂಸಿಯಂ ಹಾಗೂ ಮೇಣದ ಬಸದಿ ಸಂಪರ್ಕಿಸಲು ರಸ್ತೆ ನಿರ್ಮಾಣಕ್ಕೆ ಆಗಲೇ ಭಾರತೀಯ ಪುರಾತತ್ವ ಇಲಾಖೆ ಯೋಜನೆ ಸಿದ್ಧಪಡಿಸಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿತ್ತು. ಆಗ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದರು. ಅವರ ಮನವೊಲಿಸಿ ಕಳೆದ ವರ್ಷ ಸ್ಥಳಾಂತರ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಲಾಗಿತ್ತು.

ಪಟ್ಟದಕಲ್ಲು: ಊಟ ಸಿಗೊಲ್ಲ...

‘ಪಟ್ಟದಕಲ್ಲಿನಲ್ಲಿ ಪ್ರವಾಸಿಗರಿಗೆ ಹಸಿವಾದರೆ ಊಟ ಕೂಡ ಸಿಕ್ಕೊಲ್ಲ’ ಎಂಬ ದೂರಿನ ಹಿನ್ನೆಲೆಯಲ್ಲಿ ಅಲ್ಲಿ ₹30 ಕೋಟಿ ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆ ಟೂರಿಸಂ ಪ್ಲಾಜಾ ನಿರ್ಮಿಸಲು ಯೋಜನೆ ರೂಪಿಸಿದೆ. ಅದಕ್ಕಾಗಿ 2006ರಲ್ಲಿಯೇ 24 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿದೆ. ಇಲ್ಲಿಯವರೆಗೂ ಕೆಲಸ ಆರಂಭವಾಗಿಲ್ಲ. ಈ ವಿಳಂಬ ಧೋರಣೆಗೆ ಬೇಸತ್ತು ಇಲಾಖೆಗೆ ಭೂಮಿ ಕೊಟ್ಟಿದ್ದ ರೈತರು ಅದನ್ನು ಮರಳಿ ಕೇಳುತ್ತಿದ್ದಾರೆ. ಗೃಹಮಂಡಳಿಗೆ ಕೆಲಸ ನೀಡಲಾಗಿದೆ. ಇನ್ನಷ್ಟೇ ಕೆಲಸ ಆರಂಭಿಸಬೇಕಿದೆ ಎಂದು ಪ್ರವಾಸೋದ್ಯಮ ಇಲಾಖೆ ಹೆಚ್ಚುವರಿ ಅಧಿಕಾರಿ ಧನಪಾಲ್ ಹೇಳುತ್ತಾರೆ.
ಮುಚಖಂಡಿ ಕೆರೆ ಅಭಿವೃದ್ಧಿ: ಸಿಗದ ಒಪ್ಪಿಗೆ

ಜಿಲ್ಲೆಯಲ್ಲಿ ಹುಲಿಗೆಮ್ಮನಕೊಳ್ಳ, ಸಿದ್ಧನಕೊಳ್ಳವನ್ನು ಪ್ರವಾಸಿ ತಾಣಗಳನ್ನಾಗಿ ರೂಪಿಸಲು ಅವಕಾಶವಿದೆ. ಬಾಗಲಕೋಟೆ ಸಮೀಪದ ಮುಚಖಂಡಿ ಕೆರೆಯಲ್ಲಿ ಬೋಟಿಂಗ್ ಆರಂಭ ಸೇರಿದಂತೆ ಬೇರೆ ಬೇರೆ ಕಾಮಗಾರಿ ಕೈಗೊಂಡು ಪ್ರವಾಸಿಗರನ್ನು ಆಕರ್ಷಿಸಲು ₹10 ಕೋಟಿ ಯೋಜನಾ ವೆಚ್ಚದ ಪ್ರಸ್ತಾವವನ್ನು ಪ್ರವಾಸೋದ್ಯಮ ಇಲಾಖೆ ಕಳೆದ ವರ್ಷ ಸರ್ಕಾರಕ್ಕೆ ಸಲ್ಲಿಸಿತ್ತು.

ಆದರೆ ನಿರೀಕ್ಷಿತ ಆದಾಯ ಬರುವುದಿಲ್ಲ ಎಂಬ ನೆಪ ಹೇಳಿ ಕಡತ ವಾಪಸ್ ಕಳುಹಿಸಲಾಗಿದೆ. ಅದೇ ರೀತಿ ಬೀಳಗಿ ತಾಲ್ಲೂಕಿನ ಚಿಕ್ಕಸಂಗಮ ಅಭಿವೃದ್ಧಿಗೆ ₹2.5 ಕೋಟಿ ಹಾಗೂ ಮಹಾಕೂಟದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ₹4.5 ಕೋಟಿ ವೆಚ್ಚದ ಯೋಜನೆಯ ಪ್ರಸ್ತಾವ ಸಲ್ಲಿಸಲಾಗಿದೆ. ಅದಕ್ಕಿನ್ನೂ ಅನುಮೋದನೆ ದೊರೆತಿಲ್ಲ.

**

ಐಹೊಳೆ ಸ್ಥಳಾಂತರಕ್ಕೆ ಈ ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿಯೇ ಚಾಲನೆ ನೀಡಲಾಗಿತ್ತು. ಆಗ ಗ್ರಾಮಸ್ಥರು ಒಪ್ಪಿರಲಿಲ್ಲ. ಈಗ ಒಪ್ಪಿಕೊಂಡಿದ್ದಾರೆ.
- ಗೋವಿಂದ ಕಾರಜೋಳ, ಜಿಲ್ಲಾ ಉಸ್ತುವಾರಿ ಸಚಿವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು