ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ | ಚಿತ್ರದುರ್ಗ: ಜಟಾಯು ಇಳಿದ ಜಟಂಗಿ ಏರಿ...

Last Updated 5 ಫೆಬ್ರುವರಿ 2022, 20:00 IST
ಅಕ್ಷರ ಗಾತ್ರ

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕು, ಕೈಮಗ್ಗಗಳಿಂದ ತಯಾರಾಗುವ ರೇಷ್ಮೆ ಸೀರೆಗಳಿಗೆ ಖ್ಯಾತಿ ಪಡೆದಿರುವಂತೆಯೇ, ದೇವಸಮುದ್ರ ಗ್ರಾಮದಲ್ಲಿರುವ ಪುರಾಣ ಪ್ರಸಿದ್ಧ ಜಟಂಗಿ ರಾಮೇಶ್ವರ ಬೆಟ್ಟ, ಬ್ರಹ್ಮಗಿರಿ ಬೆಟ್ಟ ಹಾಗೂ ಚಕ್ರವರ್ತಿ ಅಶೋಕನ ಶಾಸನವಿರುವ ಅಶೋಕ ಸಿದ್ದಾಪುರದಿಂದ ಐತಿಹಾಸಿಕವಾಗಿಯೂ ಪ್ರಸಿದ್ಧಿ ಪಡೆದಿದೆ. ಚಿತ್ರದುರ್ಗ ಜಿಲ್ಲೆಯ ಅತಿ ಎತ್ತರದ ಬೆಟ್ಟಗಳ ಶ್ರೇಣಿಯೆಂದು ಪರಿಗಣಿಸಲಾಗಿರುವ, ಇಲ್ಲಿನ ಬೆಟ್ಟಗಳನ್ನು ಚಿಕ್ಕ ಜಟಂಗಿ ಮತ್ತು ದೊಡ್ಡ ಜಟಂಗಿ ಬೆಟ್ಟಗಳೆಂದು ಕರೆಯುತ್ತಾರೆ. ಚಿಕ್ಕ ಜಟಂಗಿ ಬೆಟ್ಟದ ಮೇಲೆ ನೆಲೆನಿಂತಿರುವ ಶ್ರೀರಾಮೇಶ್ವರ ದೇವಾಲಯದಿಂದಾಗಿ, ‘ಜಟಂಗಿ ರಾಮೇಶ್ವರ ಬೆಟ್ಟ’ ಎಂದೇ ಇದು ಹೆಸರುವಾಸಿಯಾಗಿದೆ.

ಜಟಂಗಿ ರಾಮೇಶ್ವರ ದೇವಾಲಯವು ಪೌರಾಣಿಕ ಹಿನ್ನೆಲೆಯನ್ನು ಹೊಂದಿದ್ದು, ಸೀತಾಪಹರಣ ಘಟನೆಯೊಂದಿಗೆ ನಂಟು ಹೊಂದಿದೆ. ರಾವಣ ಸೀತೆಯನ್ನು ಪುಷ್ಪಕ ವಿಮಾನದಲ್ಲಿ ಅಪಹರಿಸಿಕೊಂಡು ಹೋಗುವ ಸಮಯದಲ್ಲಿ ಜಟಾಯು ಪಕ್ಷಿ ಹೋರಾಟ ನಡೆಸುತ್ತದೆ. ಇದೇ ಸಮಯದಲ್ಲಿ ಪಕ್ಷಿಯ ರೆಕ್ಕೆಯನ್ನು ರಾವಣ ಕತ್ತರಿಸುತ್ತಾನೆ. ಗಾಯಗೊಂಡ ಜಟಾಯು ಪಕ್ಷಿ ಬೆಟ್ಟದ ಮೇಲೆ ಬೀಳುತ್ತದೆ. ಕೆಲವು ದಿನಗಳ ನಂತರ ಶ್ರೀರಾಮಚಂದ್ರನು ಸೀತೆಯನ್ನು ಹುಡುಕಿಕೊಂಡು ಇದೇ ಮಾರ್ಗದಲ್ಲಿ ಬಂದಾಗ, ರಾವಣ, ಸೀತೆಯನ್ನು ಅಪಹರಿಸಿಕೊಂಡು ಹೋದ ಮಾರ್ಗವನ್ನು ಜಟಾಯು ಪಕ್ಷಿ ಶ್ರೀರಾಮನಿಗೆ ತಿಳಿಸುತ್ತದೆ. ಆ ಪಕ್ಷಿಯ ಭಕ್ತಿಗೆ ಮೆಚ್ಚಿದ ರಾಮನು ಅದಕ್ಕೆ ಮೋಕ್ಷವನ್ನು ಕರುಣಿಸುತ್ತಾನೆ ಹಾಗೂ ಅದರ ಕೋರಿಕೆಯಂತೆ ಬೆಟ್ಟದಲ್ಲಿ ಒಂದು ಶಿವಲಿಂಗವನ್ನು ಪ್ರತಿಷ್ಠಾಪಿಸುತ್ತಾನೆ ಎಂದು ಪ್ರತೀತಿ.

ಅನಾಯಾಸವಾಗಿ ಜಟಂಗಿ ಬೆಟ್ಟವನ್ನೇರಲು ಮೆಟ್ಟಿಲುಗಳು ಹಾಗೂ ನಡುವೆ ಕಬ್ಬಿಣದ ಪೈಪುಗಳ ರೇಲಿಂಗ್‌ ಅಳವಡಿಸಲಾಗಿದೆ. ಬೆಟ್ಟದ ತುದಿಯಲ್ಲಿ ಸುತ್ತಲೂ ಕಲ್ಲಿನ ಕೋಟೆಯನ್ನು ನಿರ್ಮಿಸಲಾಗಿದ್ದು, ಒಳ ಹೋಗುತ್ತಿದ್ದಂತೆ ಮೆಟ್ಟಿಲುಗಳು ಕಾಣಸಿಗುತ್ತವೆ. ಮೆಟ್ಟಿಲುಗಳ ಇಕ್ಕೆಲಗಳಲ್ಲಿರುವ ಪಟ್ಟಿಕೆಗಳಲ್ಲಿ ಒಂದು ಕಡೆ ಆನೆಗಳ ಸಾಲು ಹಾಗೂ ಮತ್ತೊಂದು ಕಡೆ ಸುಂದರವಾದ ಹೂವಿನ ಸಾಲಿನ ಕೆತ್ತನೆಗಳಿವೆ. ಮೆಟ್ಟಿಲುಗಳನ್ನೇರಿ ಮುಂದೆ ಸಾಗಿದಂತೆ, ಮಹಾದ್ವಾರವಿದ್ದು ಇಕ್ಕೆಲಗಳಲ್ಲಿ ಈಶ್ವರನ ಪುಟ್ಟ ಗುಡಿಗಳಿವೆ. ಇಲ್ಲಿಂದಲೇ ಜಟಂಗಿ ರಾಮೇಶ್ವರ ದೇವಾಲಯದ ಬಂಗಾರ ವರ್ಣದ ಗೋಪುರ ಕಾಣಿಸುತ್ತದೆ.

ದೇವಾಲಯದ ಪ್ರಾಂಗಣವನ್ನು ತಲುಪುತ್ತಿದ್ದಂತೆ ಹಲವಾರು ಉಪ ದೇಗುಲಗಳ ದರ್ಶನವಾಗುತ್ತದೆ. ಸೂರ್ಯನಾರಾಯಣ, ಗಣೇಶ ದೇವರುಗಳ ಗುಡಿಗಳಲ್ಲದೆ, ಈಶ್ವರನ ವಿವಿಧ ರೂಪಗಳಾದ ವೀರಭದ್ರ, ಮಹಾಬಲೇಶ್ವರ, ಚಂದ್ರಮೌಳೀಶ್ವರ, ಚಂಡಿಕೇಶ್ವರ, ಆರ್ಕೇಶ್ವರ, ಜಂಬುಕೇಶ್ವರ, ವಿರೂಪಾಕ್ಷೇಶ್ವರ, ಕಾಲಭೈರವ, ಸೋಮೇಶ್ವರ ಮೊದಲಾದ ದೇವರುಗಳ ಗುಡಿಗಳಿವೆ. ಪುಟ್ಟ ಗುಡಿಗಳ ಮಧ್ಯಭಾಗದಲ್ಲಿ ರಾಮೇಶ್ವರ ದೇವಾಲಯವಿದ್ದು ಗರ್ಭಗೃಹ, ಅಂತರಾಳ, ನವರಂಗಗಳಿರುವ ದೇವಾಲಯದ ಮುಂಭಾಗದಲ್ಲಿ ಸುಮಾರು 40 ಅಡಿ ಎತ್ತರವುಳ್ಳ ಏಕಶಿಲಾ ದೀಪಸ್ತಂಭವಿದೆ. ದೇವಾಲಯದ ಮುಂಭಾಗದಲ್ಲಿರುವ ಸೂರ್ಯನಾರಾಯಣ ಗುಡಿಯ ಇಕ್ಕೆಲಗಳಲ್ಲಿ ನಾಗರ ಕಲ್ಲುಗಳು ಹಾಗೂ ಶಿಲಾಶಾಸನಗಳಿವೆ.

ದೇವಾಲಯದ ಎಡ ಹಿಂಬದಿಯಲ್ಲಿ ಸೀತಾಕೊಳ, ತಾವರೆ ಕೊಳ ಹಾಗೂ ಏಕಾಂತ ತೀರ್ಥವೆಂಬ ನೀರಿನ ಕೊಳಗಳು ಹಾಗೂ ಶಿಲ್ಪಗಳ ಅವಶೇಷಗಳನ್ನೂ ಕಾಣಬಹುದಾಗಿದೆ, ಕೊಳದ ಬಳಿ ಆರು ಹೆಜ್ಜೆಯ ಗುರುತುಗಳಿದ್ದು, ಇವುಗಳನ್ನು ಜಟಾಯು ಪಕ್ಷಿ ಪಾದದ ಗುರುತುಗಳೆಂದು ಸ್ಥಳೀಯರು ಹೇಳುತ್ತಾರೆ.

ಪ್ರಾಚೀನ ಕಾಲದಿಂದಲೂ ಈ ಪರಿಸರದ ಜನರು ಜಟಂಗಿ ರಾಮೇಶ್ವರರನ್ನು ಪೂಜಿಸುತ್ತಿದ್ದ ದಾಖಲೆಗಳಿವೆ. ದೇವಾಲಯಕ್ಕೆ ಸಂಬಂಧಿಸಿದ ಶಾಸನಗಳಲ್ಲಿ ವಿವಿಧ ಅರಸ ಸಾಮಂತರು ದಾನದತ್ತಿ ನೀಡಿದ ಹಾಗೂ ಜೀರ್ಣೋದ್ಧಾರ ಮಾಡಿದ ವಿವರಗಳಿವೆ. ಶಾಸನಗಳಲ್ಲಿ ಬಲ್ಗೋಡಿ ತೀರ್ಥದ ಶ್ರೀರಾಮೇಶ್ವರ, ಜಟಾಂಗಿ ರಾಮಯದೇವ, ಜಟಂಗೆ ರಾಮಯದೇವ, ಜೆಟೋಗಿ ರಾಮಯದೇವ ಮಂತಾದ ಹೆಸರುಗಳ ಉಲ್ಲೇಖಗಳಿವೆ.

ಬಂಡೆಯ ಮೇಲೆ ಪಾಳಿ ಭಾಷೆಯಲ್ಲಿ ಕೆತ್ತಲಾದ ಸಾಮ್ರಾಟ ಅಶೋಕ ಚಕ್ರವರ್ತಿಯ ಶಿಲಾಶಾಸನವಿದ್ದು, ಇದರ ಸುತ್ತಲೂ ಕಟಕಟೆಯನ್ನು ನಿರ್ಮಿಸಲಾಗಿದೆ. ವೀರಗಲ್ಲು ಮುಂತಾದ ಚಾರಿತ್ರಿಕ ಕುರುಹುಗಳೂ ಬೆಟ್ಟದ ಮೇಲಿವೆ. ಈ ಹಿಂದೆ ಶ್ರೀರಾಮೇಶ್ವರ ದೇವಾಲಯವನ್ನು ಇಟ್ಟಿಗೆಗಳಿಂದ ನಿರ್ಮಿಸಲಾಗಿದ್ದು, ದೇವಾಲಯ ಶಿಥಿಲಾವಸ್ಥೆಯಲ್ಲಿದ್ದಾಗ ಕಲ್ಲುಗಳಿಂದ ನಿರ್ಮಿಸಲಾಯಿತಂತೆ.

ಚಿಕ್ಕ ಮತ್ತು ದೊಡ್ಡ ಜಟಂಗಿ ಬೆಟ್ಟದ ಮೇಲಿಂದ ಪರಿಸರದ ಸೊಬಗನ್ನು ಆಸ್ವಾದಿಸಬಹುದು. ಬೆಟ್ಟಕ್ಕೆ ಹೊಂದಿಕೊಂಡಿರುವ ದೊಡ್ಡ ಜಟಂಗಿ ಬೆಟ್ಟ, ಕೆಳಭಾಗದಲ್ಲಿರುವ ಎರಡು ಪುಟ್ಟ ಬೆಟ್ಟಗಳು, ಹೊಲ, ಗದ್ದೆಗಳು, ದೂರದಲ್ಲಿ ಕಾಣುವ ರಾಂಪುರದ ಪರಿಸರ, ಕೆರೆ, ಅಂಕುಡೊಂಕಾಗಿ ಹಾವಿನಂತೆ ಕಾಣುವ ರಸ್ತೆಗಳು, ನೀರಿನಿಂದ ತುಂಬಿರುವ ಹಳ್ಳಗಳು ಮನಸಿಗೆ ಮುದನೀಡುತ್ತವೆ.

ಜಟಂಗಿ ರಾಮೇಶ್ವರ ಬೆಟ್ಟವನ್ನು ಹೊಂದಿಕೊಂಡು ಜಟಾಯು ಪಕ್ಷಿಯ ಸಮಾಧಿಯಿರುವ ದೊಡ್ಡ ಜಟಂಗಿ ಬೆಟ್ಟವಿದೆ. ಬೆಟ್ಟವನ್ನೇರಲು ಮೆಟ್ಟಿಲುಗಳಿಲ್ಲದ ಕಾರಣ ಕಲ್ಲು ಬಂಡೆಗಳ ಮೇಲೆ ನಡೆದುಕೊಂಡು, ಕೆಲವು ಕಡೆ ತೆವಳಿಕೊಂಡು ಹೋಗಬೇಕಾಗುತ್ತದೆ. ಹೆಚ್ಚಾಗಿ ಚಾರಣಿಗರು ಮಾತ್ರ ಈ ಬೆಟ್ಟವನ್ನೇರುವ ಸಾಹಸ ಮಾಡುತ್ತಾರೆ. ಮಕ್ಕಳು ಮತ್ತು ಮಹಿಳೆಯರು ಬೆಟ್ಟವನ್ನೇರಲಾರರು. ಬೆಟ್ಟದ ತುದಿಯಲ್ಲಿ ಜಟಾಯು ಪಕ್ಷಿಯ ಸಮಾಧಿಯಿದ್ದು, ಮೇಲೆ ಕಲ್ಲಿನಿಂದ ಕೆತ್ತಲಾದ ಶಿವಲಿಂಗವನ್ನಿಡಲಾಗಿದೆ. ಸಮಾಧಿಯ ಸುತ್ತಲೂ ಕಲ್ಲಿನ ರಚನೆಯಿದೆ. ಇಲ್ಲಿಂದ ಸ್ವಲ್ಪ ದೂರದಲ್ಲಿ ಶಿವಲಿಂಗವಿರುವ ಪುಟ್ಟ ಗುಡಿಯಿದೆ, ಸೋಮವಾರ ಹಾಗೂ ವಿಶೇಷ ದಿನಗಳಲ್ಲಿ ಭಕ್ತರು ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತಾರೆ.

ಪ್ರತಿನಿತ್ಯ ಜಟಂಗಿ ರಾಮೇಶ್ವರ ದೇವಾಲಯಕ್ಕೆ ಪ್ರವಾಸಿಗರ ಭೇಟಿ ವಿರಳ. ಸೋಮವಾರ, ಅಮಾವಾಸ್ಯೆ ದಿನಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪೂಜೆ ಸಲ್ಲಿಸುತ್ತಾರೆ. ಯುಗಾದಿಯಂದು ಜರುಗುವ ಜಟಂಗಿ ರಾಮೇಶ್ವರ ಜಾತ್ರಾ ಮಹೋತ್ಸವದಂದು ಜಿಲ್ಲೆಯ ಭಕ್ತರಲ್ಲದೆ ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸಿ ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಮಹಾಶಿವರಾತ್ರಿ ಮತ್ತು ಕಾರ್ತಿಕ ಮಾಸದಲ್ಲಿ ದೇವರಿಗೆ ವಿಶೇಷ ಪೂಜೆಗಳನ್ನು ಮಾಡುತ್ತಾರೆ.

ಬಳ್ಳಾರಿಯಿಂದ 40 ಕಿ.ಮೀ, ಮೊಳಕಾಲ್ಮೂರುನಿಂದ 30 ಕಿ.ಮೀ ದೂರದಲ್ಲಿರುವ ಜಟಂಗಿ ರಾಮೇಶ್ವರ ಬೆಟ್ಟದ ಸಮೀಪಕ್ಕೆ ಸಾರ್ವಜನಿಕ ಸಾರಿಗೆ ವಿರಳವಾಗಿರುವುದರಿಂದ ಸ್ವಂತ ಅಥವಾ ಬಾಡಿಗೆ ವಾಹನಗಳಲ್ಲಿ ತೆರಳುವುದು ಉತ್ತಮ. ಹತ್ತಿರದಲ್ಲಿ ಹೋಟೆಲ್‌ಗಳು ಇಲ್ಲ. ನೀರು, ಊಟ, ತಿಂಡಿ ವ್ಯವಸ್ಥೆಯನ್ನು ಮಾಡಿಕೊಂಡು ಹೋಗುವುದು ಉತ್ತಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT