ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರಕಗಳ ನಗರ ವಾಷಿಂಗ್ಟನ್‌ ಡಿ.ಸಿ.: ಅರ್ಲಿಂಗ್‌ಟನ್ ಸಮಾಧಿಗಳ ಸುತ್ತ

Last Updated 9 ಜನವರಿ 2022, 2:10 IST
ಅಕ್ಷರ ಗಾತ್ರ

ಸ್ಮಾರಕಗಳ ನಗರವೆಂದೇ ಪ್ರಸಿದ್ಧವಾದ ವಾಷಿಂಗ್ಟನ್‌ ಡಿ.ಸಿ. ಪ್ರವಾಸಿಗರನ್ನು ಕೈಬೀಸಿ ಕರೆಯುವ ನಗರಿ. ಆದರೆ, ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ವೀಕ್ಷಿಸದ ಸ್ಮಾರಕದ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ...

ಸ್ಮಾರಕಗಳ ನಗರವೆಂದೇ ಪ್ರಸಿದ್ಧಿ ಪಡೆದ ವಾಷಿಂಗ್ಟನ್‌ ಡಿ.ಸಿ.ಗೆ ಭೇಟಿ ನೀಡುವ ಪ್ರವಾಸಿಗರು ರಾಷ್ಟ್ರೀಯ ಸ್ಮಾರಕಗಳು, ರಾಷ್ಟ್ರೀಯ ಕಲಾಗ್ಯಾಲರಿಗಳು, ರಾಷ್ಟ್ರೀಯ ಏರ್‌ಸ್ಪೇಸ್ ಸಂಗ್ರಹಾಲಯಗಳನ್ನು ಸಂದರ್ಶಿಸುತ್ತಾರೆ. ಆದರೆ ಇವುಗಳಷ್ಟೇ ಮುಖ್ಯವಾದ ರಾಷ್ಟ್ರೀಯ ಸಮಾಧಿ ಸ್ಥಳವೊಂದನ್ನು ಸಾಕಷ್ಟು ಪ್ರವಾಸಿಗರು ನೋಡಿರುವುದಿಲ್ಲ. ನನ್ನ ಮಗ ಅಮರೇಶ್ ನಮಗೆ ಅರ್ಲಿಂಗ್‌ಟನ್ ರಾಷ್ಟ್ರೀಯ ಸಮಾಧಿ ಸ್ಥಳವನ್ನು ತೋರಿಸಲು ಕರೆದುಕೊಂಡು ಹೋದ.

ಸಮಾಧಿ ಸ್ಥಳವು ವಿಶಾಲವಾಗಿದ್ದು ಒಳಗಡೆ ಸುತ್ತಾಡಿಕೊಂಡು ಬರಲು ನಡೆದು ಹೋಗಬಹುದು, ಬಸ್ಸಿನಲ್ಲಿಯೂ ಹೋಗಿ ಬರುವ ವ್ಯವಸ್ಥೆಯನ್ನು ಮಾಡಿದ್ದಾರೆ. ಸಮಯದ ಅಭಾವದಿಂದಾಗಿ ನಾವು ಬಸ್ಸಿನಲ್ಲಿಯೇ ಹೋಗಿಬರಲು ನಿರ್ಧರಿಸಿ ಟಿಕೆಟ್ ಪಡೆದು ಒಳಗಡೆ ಪ್ರವೇಶಿಸಿದೆವು. ಒಳಗೆ ಹೋದ ನಮಗೆ ಅಲ್ಲಿಯ ಸ್ಥಳ ಸುಂದರವಾದ ಉದ್ಯಾನದಂತೆ ಗೋಚರಿಸಿತು. ವ್ಯವಸ್ಥಿತವಾಗಿ ಬೆಳೆಸಿದ ಹೂಗಿಡಗಳು, ಹಚ್ಚಹಸಿರಿನಿಂದ ಕೂಡಿದ ಗಿಡಮರಗಳು, ಕಣ್ಣಿಗೆ ಕಾಣುವಷ್ಟು ದೂರದವರೆಗೆ ಕಲ್ಲುಗಳಿಂದ ಜೋಡಿಸಿದ ಸಮಾಧಿಗಳ ಸಾಲು. ಆ ಸುಂದರ ದೃಶ್ಯವನ್ನು ನೋಡುತ್ತ ಹೋಗಿ ಬಸ್ಸಿನಲ್ಲಿ ಕುಳಿತುಕೊಂಡೆವು. ಬಸ್ಸು ನಿಧಾನವಾಗಿ ಸಮಾಧಿಗಳ ರಸ್ತೆಯ ಮಧ್ಯದಲ್ಲಿ ಹೊರಟಿತು.

ಅರ್ಲಿಂಗ್‌ಟನ್ ರಾಷ್ಟ್ರೀಯ ಸಮಾಧಿ ಸ್ಥಳವನ್ನು 1864ರಲ್ಲಿ ಅಮೆರಿಕ ಸರ್ಕಾರ ರಾಷ್ಟ್ರೀಯ ಮಿಲಿಟರಿ ವ್ಯಾಪ್ತಿಗೆ ವರ್ಗಾಯಿಸಿದೆ. ಈ ಸಮಾಧಿಯು ಸುಮಾರು 1200 ಎಕರೆ ಪ್ರದೇಶದಲ್ಲಿ ವಿಸ್ತರಿಸಿದ್ದನ್ನು ಕೇಳಿ ನಮಗೆ ಆಶ್ಚರ್ಯವಾಯಿತು. ಈ ಸಮಾಧಿ ಸ್ಥಳವು ರಾಷ್ಟ್ರಾಧ್ಯಕ್ಷರು, ಯುದ್ಧದಲ್ಲಿ ಮಡಿದ ವೀರಯೋಧರು ಮತ್ತು ಅವರ ಕುಟುಂಬವರ್ಗದವರಿಗಾಗಿ ಮೀಸಲಿಟ್ಟಿರುವ ಸ್ಥಳವಾಗಿದೆ. ನಾವು ಬಸ್ಸಿನಲ್ಲಿ ಕುಳಿತು ಹೋಗುವ ಸಂದರ್ಭದಲ್ಲಿ ಅಲ್ಲಲ್ಲಿ ರಾಷ್ಟ್ರಧ್ವಜಗಳು ಕಾಣುತ್ತಿದ್ದವು. ಕೆಲವು ಕಡೆ, ಸಾವಿಗೀಡಾದವರ ವಂಶಸ್ಥರು ಸಮಾಧಿಗಳ ಮುಂದೆ ನಿಂತು ಪ್ರಾರ್ಥನೆ ಸಲ್ಲಿಸುತ್ತಿದ್ದ ದೃಶ್ಯಗಳನ್ನು ಕಂಡೆವು. ಯಾವುದೋ ಒಂದು ಮೂಲೆಯಲ್ಲಿ ಗುಂಡು ಹಾರಿಸುವ ಶಬ್ದವೂ ಕೇಳಿಬರುತ್ತಿತ್ತು. ಈ ಶಬ್ದವು ದೇಶಕ್ಕಾಗಿ ಹೋರಾಡಿ ಜೀವತೆತ್ತ ವೀರಯೋಧರನ್ನು ನೆನಪಿಸಿಕೊಳ್ಳುವ ಕಾರ್ಯವಾಗಿರುತ್ತದೆ ಎಂದು ನಮ್ಮ ಜೊತೆಯಲ್ಲಿದ್ದವರು ಹೇಳಿದರು.

ಈ ವಿಸ್ತಾರವಾದ ಜಾಗ ಮಾರ್ಥಾ ವಾಷಿಂಗ್ಟನ್‌ ಅವರ ಮೊಮ್ಮಗ ಜಾರ್ಜ್ ವಾಷಿಂಗ್ಟನ್‌ ಪಾರ್ಕೆ ಕಸ್ಟಿಸ್‌ಗೆ ಸೇರಿತ್ತಂತೆ. ಈತ ಜಾರ್ಜ್ ವಾಷಿಂಗ್ಟನ್‌ ಅವರ ಮಲಮೊಮ್ಮಗ. 1857ರಲ್ಲಿ ಈ ಜಾಗವನ್ನೆಲ್ಲ ಕಸ್ಟಿಸ್‌ ತನ್ನ ಮಗಳು ಮೇರಿ ಲೀಗೆ ಉಯಿಲು ಬರೆದಿದ್ದ. 1861ರಲ್ಲಿ ಅಂತರ್‌ಯುದ್ಧ ಆರಂಭವಾಗಿ ಈ ಎಸ್ಟೇಟ್ ಅನ್ನು ತೆರೆವುಗೊಳಿಸಲಾಯಿತು. ಆನಂತರ ಫೆಡರಲ್ ಪಡೆಗಳು ಈ ಪ್ರದೇಶವನ್ನು ಆಕ್ರಮಿಸಿಕೊಂಡು ತಮ್ಮ ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡವು.

1863ರಲ್ಲಿ ಈ ಎಸ್ಟೇಟಿನ ಒಂದು ಭಾಗದಲ್ಲಿ ಫ್ರೀಡ್‌ಮ್ಯಾನ್ ಎನ್ನುವ ವ್ಯಕ್ತಿ ಹಳ್ಳಿಯನ್ನು ಸ್ಥಾಪಿಸಿ ಅಲ್ಲಿಯ ಗುಲಾಮರನ್ನು ಸ್ವತಂತ್ರಗೊಳಿಸುವತ್ತ ಗಮನಹರಿಸಿದ್ದ. ಗುಲಾಮರಿಗೆ ಆ ಸ್ಥಳದಲ್ಲಿ ಮನೆಗಳನ್ನು ಕಟ್ಟಿಸಿಕೊಟ್ಟು ಅವರಿಗೆ ಶಿಕ್ಷಣ, ತರಬೇತಿ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದ. ಮತ್ತೆ ಕೆಲ ವರ್ಷಗಳ ನಂತರ ಮತ್ತೊಂದು ಅಂತರ್‌ಯುದ್ಧ ಪ್ರಾರಂಭವಾಗಿ ಅಲ್ಲಿ ಸಾವು-ನೋವುಗಳು ಜಾಸ್ತಿಯಾದವು. ಆಗ ಈ ಪ್ರದೇಶವನ್ನು ರುದ್ರಭೂಮಿಯನ್ನಾಗಿ ಪರಿವರ್ತಿಸಲಾಯಿತು. ಯುದ್ಧ ಕೊನೆಗೊಂಡಾಗ ಎಸ್ಟೇಟಿನ ಸುಮಾರು 200 ಎಕರೆ ಪ್ರದೇಶದಲ್ಲಿ ಸಾವಿರಾರು ಸೈನಿಕರು ಮತ್ತು ಈ ಹಿಂದೆ ಗುಲಾಮರಾಗಿದ್ದವರನ್ನು ಸಹ ಈ ಸ್ಥಳದಲ್ಲಿ ಸಮಾಧಿ ಮಾಡಿದರು. ಹೀಗೆ 13 ಕಡೆ ಬೇರೆ ಬೇರೆ ರೀತಿಯಲ್ಲಿ ಜಾಗ ಗುರುತಿಸಿ ಅವರ ಅಧಿಕಾರ ಶ್ರೇಣಿಗಳಿಗೆ ಅನುಸಾರ ಸಮಾಧಿ ಮಾಡಿರುವುದನ್ನು ಕಾಣಬಹುದಾಗಿದೆ.

ಮುಂದಿನ ಹಂತದಲ್ಲಿ ಪ್ರಥಮ ಹಾಗೂ ದ್ವಿತೀಯ ವಿಶ್ವ ಮಹಾಯುದ್ಧದಲ್ಲಿ ಮಡಿದ ಸಾವಿರಾರು ಅಧಿಕಾರಿಗಳು, ವಿಯೆಟ್ನಾಂ ಹಾಗೂ ಕೊರಿಯಾ ಯುದ್ಧದಲ್ಲಿ ಮಡಿದ ಸೈನಿಕರೂ ಸೇರಿದಂತೆ ಮಿಲಿಟರಿಯಲ್ಲಿ ಸೇವೆ ಸಲ್ಲಿಸಿದ ಪ್ರಮುಖರ ಸಮಾಧಿಗಳು ಇಲ್ಲಿವೆ. ಯುದ್ಧದಲ್ಲಿ ಸೇವೆ ಸಲ್ಲಿಸಿದ ಸ್ಪ್ಯಾನಿಷ್ ಅಮೆರಿಕನ್ ದಾದಿಯರಿಗೆ ಹಾಗೂ ಜ್ಯೂಯಿಷ್ ಪ್ರೊಟೆಸ್ಟೆಂಟ್ ಮತ್ತು ರೋಮನ್ ಕ್ಯಾಥೊಲಿಕ್ ಮಿಲಿಟರಿಯವರಿಗೆ ಮತ್ತು ಸುಮಾರು 3800 ಗುಲಾಮರ ಕುಟುಂಬಗಳಿಗೆ ಜಾಗ ಮೀಸಲಿಟ್ಟಿರುವುದು ವಿಶೇಷ. ಜೊತೆಗೆ ಬಹುಸ್ಮರಣೀಯವಾದ, ದೇಶಕ್ಕಾಗಿ ಪ್ರಾಣತೆತ್ತ ಅನಾಮಿಕ ಸೈನಿಕರ ಸಮಾಧಿಗಳೂ ಅಲ್ಲಿವೆ.

ಬಸ್ಸಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಸಮಾಧಿಗಳು ದೂರದೂರದವರೆಗೂ ಒಂದೇ ಸಾಲಿನಲ್ಲಿದ್ದಂತೆ ಕಾಣುತ್ತಿದ್ದವು. ಸೈನಿಕರ ಸಮಾಧಿ ಸ್ಥಳಗಳಲ್ಲಿ ನೆಟ್ಟ ಬಿಳಿಬಣ್ಣದ ಕಲ್ಲುಗಳಲ್ಲಿ ಅವರ ಹೆಸರುಗಳನ್ನು ಕೆತ್ತಿದ್ದಾರೆ. ಸಮಾಧಿ ಸ್ಥಳದ ಮಧ್ಯದಲ್ಲಿ ಬೆಳೆದ ಹಸಿರುಹುಲ್ಲು ಹಾಗೂ ಹೂವಿನ ಗಿಡಗಳು ನೋಡುಗರ ಮನಸ್ಸಿಗೆ ಮುದ ನೀಡುತ್ತಿದ್ದವು. ಮತ್ತೊಂದು ಭಾಗದಲ್ಲಿ ದೇಶಕ್ಕಾಗಿ ದುಡಿದ ಕೆಲವು ಪ್ರಮುಖರ ಹೆಸರುಗಳನ್ನು ಕೆತ್ತಿದ, ಮೂರರಿಂದ ಎಂಟು ಅಡಿ ಎತ್ತರದವರೆಗಿನ ನೂರಾರು ಸುಂದರ ಕಲಾತ್ಮಕ ಸ್ಮಾರಕಗಳು ಅದ್ಭುತವಾಗಿವೆ. ಈ ಸ್ಥಳದಲ್ಲಿ ಅಂದಿನಿಂದ ಇಂದಿನವರೆಗೆ ಒಟ್ಟು ಸುಮಾರು 4 ಲಕ್ಷಕ್ಕಿಂತಲೂ ಹೆಚ್ಚು ಸಮಾಧಿಗಳಿವೆ ಎಂದು ತಿಳಿಯಿತು.

ಈ ಸ್ಥಳದಲ್ಲಿಯೇ ರಾಷ್ಟ್ರೀಯ ಸಮಾಧಿಗೆ ಹೆಸರಿಸಿರುವ ಅರ್ಲಿಂಗ್‌ಟನ್, ಉತ್ತರಧ್ರುವವನ್ನು ಕಂಡುಹಿಡಿದವರಲ್ಲಿ ಒಬ್ಬರಾದ ಮ್ಯಾಥ್ಯೂ ಅಲೆಕ್ಸಾಂಡರ್‌ ಹೆನ್‌ಸನ್, ರಾಷ್ಟ್ರಾಧ್ಯಕ್ಷರಾಗಿದ್ದ ವಿಲಿಯಂ ಹೋವರ್ಡ್ ಟಫ್ಟ್, ಜಾನ್ ಎಫ್. ಕೆನಡಿ, ಅವರ ಪತ್ನಿ ಜಾಕ್ವಿಲಿನ್‌ ಕೆನಡಿ ಹಾಗೂ ಮಕ್ಕಳು, ಜನರಲ್ ಜಾನ್ ಪರ್ಷಿಂಗ್, ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಥುರ್‌ಗೋಡ್ ಮಾರ್ಷಲ್, ಜನರಲ್‌ಗಳಾದ ಜಾರ್ಜ್ ಸಿ. ಮಾರ್ಷಲ್, ಮೇಜರ್ ಪಿರ‍್ರಿ ಚಾರ್ಲ್ಸ್ ಮುಂತಾದ ಪ್ರಮುಖರ ಸ್ಮಾರಕಗಳಿವೆ. 1984ರಿಂದ ಈಚೆಗೆ ಯುದ್ಧದಲ್ಲಿ ಮಡಿದವರ ನೆನಪಿಗಾಗಿಯೇ ಆ ದೇಶದಲ್ಲಿ ಮೇ ತಿಂಗಳ ಕೊನೇ ಸೋಮವಾರದಂದು ರಾಷ್ಟ್ರೀಯ ಮೆಮೋರಿಯಲ್ ದಿನವನ್ನಾಗಿ ಆಚರಿಸಿಕೊಂಡು ಬರುತ್ತಿದ್ದಾರೆ.

ಈ ಪ್ರದೇಶದಲ್ಲಿ ಭಾನುವಾರ ಹೊರತುಪಡಿಸಿ ಮಿಕ್ಕ ಎಲ್ಲಾ ದಿನಗಳಂದು, ಮಡಿದ ಯೋಧರಿಗಾಗಿ ಪ್ರಾರ್ಥನಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಗಲಿದ ಹಿರಿಯರನ್ನು ನೆನೆಯುತ್ತಾರಂತೆ. ನಾವು ಸುಮಾರು 80 ನಿಮಿಷಗಳ ಕಾಲ ಬಸ್ಸಿನಲ್ಲಿ ಸುತ್ತಿದ ರುದ್ರಭೂಮಿಯ ದರ್ಶನ ನಿಜಕ್ಕೂ ಮರೆಯಲಾರದ್ದು. ವಾಷಿಂಗ್ಟನ್‌ಡಿ.ಸಿ.ಗೆ ಭೇಟಿ ನೀಡುವವರು ವಿಶಾಲವಾದ, ಸುಂದರವಾದ ಈ ರಾಷ್ಟ್ರೀಯ ಸಮಾಧಿ ಸ್ಥಳವನ್ನು ಸಂದರ್ಶಿಸಲು ಮರೆಯಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT