ಗುರುವಾರ , ಆಗಸ್ಟ್ 6, 2020
28 °C

ಹಾಲ್ನೊರೆಯಂತಹ ಜಲಧಾರೆ...

ವೈದ್ಯ, ಶಿವಮೊಗ್ಗ Updated:

ಅಕ್ಷರ ಗಾತ್ರ : | |

Prajavani

ಉತ್ತರಖಂಡ ರಾಜ್ಯದಲ್ಲಿರುವ ಬದರಿಕ್ಷೇತ್ರಕ್ಕೆ ಭೇಟಿ ನೀಡುವವರು, ಸಾಮಾನ್ಯವಾಗಿ ಬದರಿನಾಥನ ದರ್ಶನ ಮಾಡಿ, ಬಿಸಿನೀರು ಕುಂಡದಲ್ಲಿ ಮಿಂದು ಬರುತ್ತಾರೆ. ನಂತರ ಅಲ್ಲಿಂದ 3 ಕಿ.ಮೀ ದೂರದಲ್ಲಿರುವ ಭಾರತದ ಗಡಿಯ ಕಟ್ಟ ಕಡೆಯ ಹಳ್ಳಿ ಮಾನಾಗೆ ಭೇಟಿ ನೀಡಿ, ಕೊನೆಯ ಚಹಾ ಅಂಗಡಿಯಲ್ಲಿ ಚಹಾ ಸೇವಿಸಿ ಬರುತ್ತಾರೆ.

ನಾವು ಅವೆಲ್ಲವನ್ನೂ ನೋಡಿಕೊಂಡು, ಬದರಿಯ ಸುತ್ತಲಿರುವ ಸ್ಥಳಗಳನ್ನು ನೋಡಲು ಹೊರಟೆವು. ವಿಶೇಷವಾಗಿ ವಸುಧಾರ ಜಲಪಾತ ನೋಡಬೇಕೆಂಬುದು ನಮ್ಮ ಗುರಿಯಾಗಿತ್ತು. ಹೀಗೆ ಹೊರಟಾಗ ಭಾರೀ ಸದ್ದಿನೊಂದಿಗೆ ಸರಸ್ವತಿ ನದಿ ಹರಿಯುತ್ತಿರುವ ದೃಶ್ಯ ಜತೆಗೆ, ಈ ನದಿಗೆ ಅಡ್ಡಲಾಗಿ ಕಟ್ಟಿದ ಭೀಮ್‌ಪೂಲ್‌ ಸೇತುವೆಯೂ ಕಂಡಿತು. ಈ ಸೇತುವೆಯನ್ನು ದಾಟುವ ಸರಸ್ವತಿ ನದಿ ಮುಂದೆ ಅಲಕನಂದಾ ನದಿಯನ್ನು ಸೇರುತ್ತದೆ. ಅಲ್ಲಿಂದ ದಕ್ಷಿಣಾಭಿಮುಖವಾಗಿ 6 ಕಿ.ಮೀ. ದೂರದಲ್ಲಿರುವುದೇ ನಯನ ಮನೋಹರ ವಸುಧಾರಾ ಜಲಪಾತ.

ದೂರದಿಂದ ಈ ಜಲಾಪತವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಕಪ್ಪುಶಿಲೆಗಳ ಬೆಟ್ಟದ ನಡುವೆ ದಾರದ ಎಳೆಯೊಂದು ಕೆಳಗೆ ಜೋತುಬಿದ್ದಂತೆ ಕಂಡಿತು. ಆದರೆ ಆ ಜಲಪಾತದ ಸಮೀಪ ಹೋಗುವುದು ಬಹಳ ಕಷ್ಟ ಎಂಬುದು, ಆ ಪರಿಸರವನ್ನು ನೋಡಿ ಅರ್ಥವಾಯಿತು.

ಚಾರಣ ಆರಂಭ

ಕಡಿದಾದ ಹಾದಿಯಲ್ಲಿ ಎತ್ತರದ ಗುಡ್ಡಗಳ ನಡುವೆ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಾ ಸಾಗುತ್ತಿದ್ದೆವು. ದಾರಿಯುದ್ದಕ್ಕೂ ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಎಲ್ಲೆಲ್ಲೂ ಎತ್ತರೆತ್ತರದ ಕಲ್ಲು ಪರ್ವತಗಳೇ. ಅಲ್ಲಲ್ಲಿ ಸಿಗುವ ತೊರೆಗಳನ್ನು ಎಚ್ಚರಿಕೆಯಿಂದ ದಾಟಿಯೇ ಮುಂದೆ ಸಾಗಬೇಕು. ದಾರಿಯಲ್ಲಿ ಎಲ್ಲೂ  ಒಂದು ಮರ ಕಾಣುವುದಿಲ್ಲ. ಅತ್ಯಂತ ಪ್ರಯಾಸಕರ ಹಾದಿ. ಪ್ರವಾಸಿಗರು ಕಾಣುವುದು ಅತಿ ವಿರಳ. ಒಂದು ರೀತಿಯ ನಿರ್ಜನ ಪ್ರದೇಶ. ಮಾಹಿತಿಗಾಗಿ ಒಂದು ಬೋರ್ಡ್ ಕೂಡ ಇಲ್ಲ. ‘ನಾವು ಹೋಗುತ್ತಿರುವುದು ಸರಿ ದಾರಿಯೇ, ಅಲ್ಲವೇ’ ಎಂದು ಪರಿಶೀಲಿಸಲು ಒಬ್ಬರೂ ಕಾಣಲಿಲ್ಲ.

ಆದರೆ, ತಣ್ಣಗೆ ಬೀಸುವ ತಂಗಾಳಿ, ರೋಮಾಂಚನ ಉಂಟು ಮಾಡುವ ಗಿರಿಪಂಕ್ತಿ, ಆ ಗಿರಿಪಂಕ್ತಿಗಳ ಮೇಲೆ ತೇಲಾಡುವ ಬಿಳಿಮೋಡಗಳು, ಅಲ್ಲಲ್ಲಿ ಕಾಣುವ ಹಿಮರಾಶಿ, ಪಕ್ಷಿಗಳ ಇಂಪಾದ ಗಾನ, ಕಾಲುದಾರಿಯ ಅಕ್ಕ-ಪಕ್ಕದಲ್ಲಿ ವಿವಿಧ ಬಣ್ಣಗಳ ಅಪರೂಪದ ಹೂ ಗಿಡಗಳು ನಮ್ಮೆಲ್ಲ ಭಯ, ಆಯಾಸ, ಏಕತಾನತೆಯನ್ನು ನಿವಾರಿಸಿಬಿಟ್ಟವು. ಇಂಥ ಸೌಂದರ್ಯವನ್ನು ಸವಿಯುತ್ತಾ ಮುಂದೆ ಹೆಜ್ಜೆ ಹಾಕುತ್ತಿದ್ದಾಗ, ನೀರು ಬೀಳುವ ಸದ್ದು ಕೇಳಿತು. ಸದ್ದು ಬಂದ ಕಡೆಗೆ ನಡೆದರೆ, ಹಾಲ್ನೊರೆಯಂತಹ ಜಲಧಾರೆ ಧುಮ್ಮಿಕ್ಕುತ್ತಿರುವುದು ಕಂಡಿತು. ಅದೇ ವಸುಧಾರಾ ಜಲಪಾತ.

ಜಲಧಾರೆಯ ಸೊಬಗು ನೋಡುತ್ತಾ...

ಕರಿಶಿಖರದ ಶೃಂಗದಿಂದ ಭೋರ್ಗರೆಯುತ್ತಾ, ಬಂಡೆಗಳ ಮೇಲೆ ವಸುಧಾರಾ ಜಲಧಾರೆ ಧುಮ್ಮಿಕ್ಕುತ್ತದೆ. ಅಷ್ಟು ಎತ್ತರದಿಂದ ಧುಮ್ಮಿಕ್ಕುವ ಜಲಪಾತ, ನೆಲ ತಲುಪುವ ವೇಳೆಗೆ ತುಂತುರು ತುಂತುರಾಗಿ, ಹನಿ ಹನಿಯಾಗಿ ಬೀಳುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಜಲಧಾರೆಯ ಹನಿ ನೀರಿಗೆ ಮೈಯೊಡ್ಡಲು ಜನ ಇರುವೆಯಂತೆ ಸಾಲುಗಟ್ಟಿ ನಿಂತಿರುತ್ತಾರೆ. ಎತ್ತರದಿಂದ ಸುರಿಯುವ ನೀರು ಮೈಮೇಲೆ ಬಿದ್ದರೆ, ಚಾರಣದ ಹಾದಿಯ ಆಯಾಸವನ್ನೆಲ್ಲ ನೀಗಿಸುತ್ತದೆ.

ನಿಮ್ಮಲ್ಲಿ ನಡೆಯುವ ಛಲ ಇದ್ದರೆ, ಎದುರುಗಿನ ಸೌಂದರ್ಯ ನಿಮ್ಮನ್ನು ಸೆಳೆಯುತ್ತದೆ. ನಡೆಯುವ ಹಾದಿಯ ಕೊನೆಯ ಗುರಿ ನಿಮ್ಮಲ್ಲಿ ಹೊಸ ಅನುಭವವನ್ನು ಕಟ್ಟಿಕೊಡುತ್ತದೆ. ಅಷ್ಟೇ ಅಲ್ಲ, ಈ ಪ್ರಕೃತಿ ಎದುರು ಮಾನವ ನಿಜಕ್ಕೂ ಅತೀ ಸಣ್ಣವ ಎಂದು ಸಾಬೀತುಪಡಿಸುತ್ತದೆ. ನಮ್ಮ ಅಹಂಕಾರವನ್ನೆಲ್ಲಾ ಮುರಿಯುತ್ತದೆ. ಇದೇ ಈ ಚಾರಣದ ವಿಶೇಷ.

ಬದರಿನಾಥ ಕ್ಷೇತ್ರಕ್ಕೆ ಭೇಟಿ ನೀಡುವವರು ಮರೆಯದೇ ಈ ಜಲಾಪತವನ್ನು ನೋಡಿಬನ್ನಿ. ‌

ವಿರಾಮದ ಭೇಟಿಗೆ ‘ಮಾನಾ’

ವಸುಧಾರಾ ಜಲಪಾತಕ್ಕೆ ಹೋಗುವ ಮುನ್ನ, ಬದರಿಕ್ಷೇತ್ರದಿಂದ 3 .ಕಿ.ಮೀ ದೂರವಿರುವ ಮಾನಾಕ್ಕೆ ಭೇಟಿ ನೀಡುವುದನ್ನು ಮರೆಯಬೇಡಿ. ಇದು ಭಾರತದ ಗಡಿಯಲ್ಲಿರುವ ಕೊನೆಯ ಹಳ್ಳಿ. ಇಲ್ಲಿ ಟೀ ಅಂಗಡಿ ಇದೆ. ಇದು ಭಾರತದ ಕಡೆಯ ಚಹಾ ಅಂಗಡಿ. ಈ ಅಂಗಡಿಯ ಮುಂದೆ ಕನ್ನಡದಲ್ಲಿ ನಾಮಫಲಕ ಇರುವುದು ವಿಶೇಷ. ಅನ್ಯ ರಾಜ್ಯದಲ್ಲಿ ಕನ್ನಡದ ಸಾಲುಗಳನ್ನು ಓದುತ್ತಾ, ಚಹಾ ಕುಡಿದಾಗ, ಮೈಮನಗಳಲ್ಲಿ ಸಣ್ಣದೊಂದು ಪುಳಕ.

ಮಾನಾ, 180 ಮನೆಗಳಿರುವ, 700 ಜನರಿರುವ ಹಳ್ಳಿ. ಇಲ್ಲಿಂದ ಸುಮಾರು 25 ಕಿ.ಮೀ. ದೂರದಲ್ಲಿ ಭಾರತ-ಚೀನ ಗಡಿಯಿದೆ. ಈ ಹಳ್ಳಿಯಲ್ಲಿರುವ ವ್ಯಾಸ ಗುಹೆಯಲ್ಲಿ ವ್ಯಾಸ ಮಹರ್ಷಿ ಗಣಪತಿಗೆ ಮಹಾಭಾರತ ಮಹಾಕಾವ್ಯವನ್ನು ಹೇಳಿ ಬರೆಸಿದ್ದರು. ತ್ರೇತಾಯುಗದಲ್ಲಿ ಪಾಂಡವರು ಸ್ವರ್ಗವನ್ನೇರುವಾಗ ಈ ಹಳ್ಳಿಯ ಮೂಲಕ ಹಾದು ಹೋದರು.. ಇಂಥ ಅನೇಕ ಪುರಾಣ ಕಥೆಗಳೊಂದಿಗೆ ಮಾನಾ ಹೆಸರು ತಳಕು ಹಾಕಿಕೊಂಡಿದೆ.

ಉಣ್ಣೆಯ ಬಟ್ಟೆಯನ್ನು ನೇಯುವುದು, ಅದನ್ನು ಮಾರಾಟ ಮಾಡುವುದು ಈ ಹಳ್ಳಿಗರ ಮುಖ್ಯ ಕಸುಬು. ಇಲ್ಲಿ ಆಲೂಗಡ್ಡೆಯನ್ನು ಹೇರಳವಾಗಿ ಬೆಳೆಯುತ್ತಾರೆ. ಉತ್ತರಖಂಡ ಸರ್ಕಾರ ಈ ಹಳ್ಳಿಯನ್ನು ಪ್ರವಾಸಿಗರ ಗ್ರಾಮ ಎಂದು ಘೋಷಿಸಿದೆ. ಮಳೆಗಾಲದಲ್ಲಿ ಈ ಭಾಗಕ್ಕೆ ಪ್ರವಾಸ ಹೋಗುವುದು ಕಷ್ಟ. ಗುಡ್ಡಗಾಡಿನ ಪ್ರದೇಶವಾದ್ದರಿಂದ, ಇಲ್ಲಿ ಗುಡ್ಡ ಕುಸಿತಗಳು ಸಾಮಾನ್ಯ. ಅಲಕನಂದಾ ನದಿಯ ದಂಡೆಯಲ್ಲಿರುವ ಬದರಿ ಕ್ಷೇತ್ರಕ್ಕೆ ಮಳೆಗಾಲದ ನಂತರದಲ್ಲೇ ಹೋಗಲು ‌ಪ್ಲಾನ್ ಮಾಡಿಕೊಳ್ಳಬೇಕು.

**

ಬದರಿಗೆ ಹೋಗುವವರಿಗೆ ಮಾಹಿತಿ

* ಹೃಷಿಕೇಶದಿಂದ ಬದರಿನಾಥ್‌ಗೆ 297 ಕಿ.ಮೀ.

* ಮಾನಾದಿಂದ ವಸುಧಾರಾ ಜಲಪಾತಕ್ಕೆ ಸಾಮಾನ್ಯ ವೇಗದ ನಡಿಗೆಯಲ್ಲಿ 4 ಗಂಟೆಗಳು ಬೇಕು.

* ದಾರಿಮಧ್ಯೆ ತಿಂಡಿ, ತಿನಿಸು, ನೀರು ಏನೂ ಸಿಗುವುದಿಲ್ಲ. ಹಾಗಾಗಿ ನೀರು, ಆಹಾರವನ್ನು ಮಾನಾದಿಂದ ತೆಗೆದುಕೊಂಡು ಹೋಗುವುದು ಒಳ್ಳೆಯದು.

* ದಾರಿಯಲ್ಲಿ ಲಕ್ಷಿವನ ಎಂಬ ಕಾಡು ಸಿಗುತ್ತದೆ.

* ಮುಂಜಾನೆಯೇ ಟ್ರೆಕ್ಕಿಂಗ್ ಆರಂಭಿಸಿದರೆ ಸಂಜೆ ಹೊತ್ತಿಗೆ ವಾಪಸಾಗಬಹುದು.

* ಮಾರ್ಚ್‌ನಿಂದ ಸೆಪ್ಟಂಬರ್‌ವರೆಗೆ ಪ್ರವಾಸಕ್ಕೆ ಸೂಕ್ತ ಸಮಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು