ಗುರುವಾರ , ಮೇ 28, 2020
27 °C

ಪ್ರವಾಸದಲ್ಲೊಂದು ಶ್ರಮದಾನ

ಗೌರಿ ಚಂದ್ರಕೇಸರಿ Updated:

ಅಕ್ಷರ ಗಾತ್ರ : | |

Prajavani

ವಿಹಾರ, ಮನರಂಜನೆಗಾಗಿ ಪ್ರವಾಸಕ್ಕೆ ಹೋಗುವುದು ಸಹಜ. ಆದರೆ, ಶಿವಮೊಗ್ಗದ ಯೂತ್‌ ಹಾಸ್ಟೆಲ್‌ ಸದಸ್ಯರು ಪ್ರವಾಸದಲ್ಲಿ ವಿಹಾರದ ಜತೆಗೆ ತಾಣವಂದರಲ್ಲಿ ಶ್ರಮದಾನ ಕೈಗೊಂಡಿದ್ದಾರೆ. ಪರಿಸರ ಸಂಬಂಧಿ ವಿಚಾರಗಳನ್ನು ಅರಿತಿದ್ದಾರೆ.

ಸಾಮಾನ್ಯವಾಗಿ ಪ್ರವಾಸಕ್ಕೆಂದು ಹೋದರೆ ಪ್ರೇಕ್ಷಣೀಯ ಸ್ಥಳಗಳನ್ನು ನೋಡಿಕೊಂಡು, ಖುಷಿಪಟ್ಟು ವಾಪಸ್ ಬರುವುದು ವಾಡಿಕೆ. ಆದರೆ ನಾವು ಕೈಗೊಂಡಿದ್ದ ಪ್ರವಾಸ ಸ್ವಲ್ಪ ವಿಭಿನ್ನವಾಗಿತ್ತು. ನಮ್ಮದು, ಪ್ರವಾಸದ ಜತೆಗೆ, ಭೇಟಿ ನೀಡಿದ್ದ ತಾಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸುವ ಉದ್ದೇಶವಿತ್ತು. ಇಂಥದ್ದೊಂದು ಅಪೂರ್ವ ಕಾರ್ಯಕ್ಕೆ ಅವಕಾಶ ಕಲ್ಪಿಸಿದ್ದು ಶಿವಮೊಗ್ಗದ ಯೂತ್ ಹಾಸ್ಟೆಲ್ ಅಸೋಸಿಯೇಷನ್. ಈ ಸಂಘದಲ್ಲಿರುವ ಸೈಕಲ್ ಕ್ಲಬ್ ಸದಸ್ಯರು, ಜಿಲ್ಲೆಯಲ್ಲಿರುವ ನದಿಗಳ ಉಗಮಸ್ಥಾನಗಳಿಗೆ ಭೇಟಿ ನೀಡುವುದೆಂದು ತೀರ್ಮಾನಿಸಿದರು.

ಒಂದು ದಿನದಲ್ಲಿ ಆರು ನದಿಗಳ ಉಗಮ ಸ್ಥಾನಗಳನ್ನು ನೋಡುವ ಯೋಜನೆ ರೂಪಿಸಿದರು. ಅದರಂತೆ ಅಂದು ಬೆಳಿಗ್ಗೆ ಎಂಟು ಗಂಟೆಗೆ 40  ಸದಸ್ಯರನ್ನು ಹೊತ್ತ ಬಸ್ಸು ಶಿವಮೊಗ್ಗ ಜಿಲ್ಲೆಯ ಹೊಸನಗರದ ಹುಂಚ ಗ್ರಾಮ ತಲುಪಿತು. ಸುತ್ತಮುತ್ತ ಹಸಿರನ್ನೇ ಹೊದ್ದ ಕಾಡಂಚಿನಲ್ಲಿ ಪುರಾಣ ಪ್ರಸಿದ್ಧ ಬಿಲ್ಲೇಶ್ವರ ದೇವಸ್ಥಾನವಿದೆ. ಇಲ್ಲಿನ ಈಶ್ವರಲಿಂಗವು ಲಕ್ಷ್ಮಣನಿಂದ ಪ್ರತಿಷ್ಠೆಗೊಂಡಿದೆ ಎಂಬ ಪ್ರತೀತಿ ಇದೆ. ದೇವಸ್ಥಾನದ ಹಿಂಭಾಗವನ್ನು ಬಳಸಿಕೊಂಡು ಸ್ವಲ್ಪ ದೂರ ಕಾಡಿನಲ್ಲಿ ನಡೆದರೆ ಅಲ್ಲಿ ಸಿಗುವುದೇ ಕುಮುದ್ವತಿ ತೀರ್ಥ. ಕಾಡಿನ ಇಳಿಜಾರು ಪ್ರದೇಶದ ಮೂಲಕ ನಿರಂತರ ಧಾರೆಯೊಂದು ಇಲ್ಲಿ ಹರಿದು ಬರುತ್ತದೆ.

1945ರಲ್ಲಿ ಈ ಧಾರೆಗೆ ಪುಟ್ಟ ಕಲ್ಯಾಣಿಯ ರೂಪದಲ್ಲಿರುವ ಹೊಂಡವೊಂದನ್ನು ನಿರ್ಮಿಸಲಾಗಿದೆ. ಈ ಹೊಂಡಕ್ಕೆ ಐದಾರು ಅಡಿ ಎತ್ತರದ ಕಾಡಿನಿಂದ ಹರಿದು ಬಂದ ನೀರು ಧಾರೆಯಾಗಿ ಬೀಳುತ್ತದೆ. ಅಲ್ಲಿಂದ ಆ ನೀರು ಭೂಗರ್ಭವನ್ನು ಸೇರಿ ಮುಂದೆ ಹರಿದು ಕುಮುದ್ವತಿ, ಶರ್ಮಣವತಿ ಹಾಗೂ ಶರ್ಮಣಾವತಿ ಎಂಬ ಮೂರು ನದಿಗಳಾಗಿ ಹರಿಯುತ್ತದೆ. ಈ ಕುಮುದ್ವತಿ ತೀರ್ಥದ ನೀರು ಅತ್ಯಂತ ಶುಚಿಯಾಗಿದೆ. ರುಚಿಕರವಾಗಿದೆ. ಬಿಸಿಲಲ್ಲಿ ಬಳಲಿ ಬಂದವರಿಗೆ ಇಲ್ಲಿಯ ನೀರು ತಂಪಿನ ಆಹ್ಲಾದವನ್ನು ನೀಡುತ್ತದೆ.

ಕುಮುದ್ವತಿ ತೀರ್ಥದ ಪಕ್ಕದ ಅನತಿ ದೂರದಲ್ಲಿಯೇ ಇನ್ನೊಂದು ನಿಸರ್ಗ ನಿರ್ಮಿತ ಹೊಂಡವಿದೆ. ಇದು ಕುಶಾವತಿ ಹಾಗೂ ಹರಿದ್ರಾವತಿ ನದಿಗಳ ಉಗಮ ಸ್ಥಾನ. ಈ ಎರಡೂ ಪವಿತ್ರ ಸ್ಥಳಗಳು ಹುಲ್ಲು, ಗಿಡ-ಗಂಟೆಗಳಿಂದ ತುಂಬಿಕೊಂಡಿತ್ತು. ಗುಂಪಿನ ಸದಸ್ಯರೆಲ್ಲ ಒಂದು ಗಂಟೆಯ ಶ್ರಮದಾನ ಮಾಡಿ, ಸ್ವಚ್ಛತಾ ಕಾರ್ಯ ಕೈಗೊಂಡೆವು. ಬರುವಾಗ, ಉಪಹಾರದ ಬುತ್ತಿ ತಂದಿದ್ದೆವು. ಶ್ರಮದಾನದ ನಂತರ ಉಪಹಾರ ಸವಿದೆವು.

ಹುಂಚದಿಂದ ಹೊರಟು ಅದೇ ರಸ್ತೆಯಲ್ಲಿರುವ ರಾಮೇಶ್ವರ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದೆವು. ರುದ್ರಾಕ್ಷಿಯ ಮರವನ್ನೇ ಕಂಡಿರದಿದ್ದ ನಮಗೆಲ್ಲ ಇಲ್ಲಿ ನೋಡುವ ಭಾಗ್ಯ ಲಭಿಸಿತ್ತು. ಇಲ್ಲಿರುವ ರಾಮೇಶ್ವರನನ್ನು ರಾಮನು ಪ್ರತಿಷ್ಠಾಪಿಸಿದನೆಂದು ಹೇಳುತ್ತಾರೆ. ಊಟದ ವೇಳೆಗೆ ಸರಿಯಾಗಿ ಹೊಸನಗರದ ಹೊಂಬುಜ ಮಠದಲ್ಲಿದ್ದೆವು. ಇಲ್ಲಿಯ ಪ್ರಸಿದ್ಧ ಪದ್ಮಾವತಿಯ ದರ್ಶನ ಪಡೆದವು. ಹೊಂಬುಜ ಮಠ ಜೈನರ ಧಾರ್ಮಿಕ ಕ್ಷೇತ್ರ. ಮಠದ ಭೋಜನ ಶಾಲೆಯಲ್ಲಿ ಊಟದ ವ್ಯವಸ್ಥೆಯಾಗಿತ್ತು.

ಇಲ್ಲಿಂದ ಮುಂದೆ ಹೊರಟ ನಮ್ಮ ಬಸ್ಸು ಅಂಕು ಡೊಂಕುಗಳನ್ನು ಹಾಯ್ದು ಒಂದು ಕಾಡಂಚಿಗೆ ಬಂದು ನಿಂತಿತ್ತು. ನಾವೆಂದೂ ಕೇಳರಿಯದ, ನೋಡಿರದ ಜಲಪಾತವನ್ನು ಕಣ್ತುಂಬಿಕೊಂಡೆವು. ಅದೇ ಹೊಸನಗರದ ಅರಳಸುರಳಿ ಎಂಬ ಗ್ರಾಮದ ಅಂಚಿಗಿರುವ ಅಚ್ಚಕನ್ಯಾ ಎಂಬ ಸುಂದರ ಜಲಪಾತ.

ಸ್ವಲ್ಪ ದೂರ ಕೊರಕಲಿನಲ್ಲಿ ಟ್ರೆಕ್ಕಿಂಗ್ ಮಾಡುತ್ತ ಸಾಗಿದಾಗ ಕಂಡದ್ದು ಈ ಮನಮೋಹಕ ಜಲಲ ಜಲಧಾರೆ. ಕಾಡಿನ ಮೂಲಕ ಹಾಯ್ದು ಬಂಡೆಗಳಿಂದ ಕೂಡಿ ಒಂದು ಕೊರಕಲಿಗೆ ನೀರು ರಭಸವಾಗಿ ಬೀಳುತ್ತದೆ. ಸುಮಾರು ಹತ್ತು ಅಡಿ ಎತ್ತರದಿಂದ ಧುಮ್ಮಿಕ್ಕುವ ಈ ನೀರು ಕಾಡಿನಲ್ಲಿಯೇ ತನ್ನ ಪಯಣವನ್ನು ಬೆಳೆಸಿ ಶರಾವತಿಯನ್ನು ಕೂಡಿಕೊಳ್ಳುತ್ತದೆ. ಮಳೆಗಾಲವಾದ್ದರಿಂದ ನೀರು ಸ್ವಲ್ಪ ಕೆಂಬಣ್ಣದಿಂದ ಕೂಡಿತ್ತು. ಇಲ್ಲಿ ನೀರಿನಲ್ಲಿ ಆಟವಾಡುತ್ತ ಕುಳಿತ ಯಾರೊಬ್ಬರಿಗೂ ಮುಂದೆ ಹೋಗುವ ಮನಸ್ಸಿರಲಿಲ್ಲ. ಆದರೆ ಸಂಯೋಜಕರ ಕರೆಗೆ ಓಗೊಡಲೇಬೇಕಾಯಿತು.


ಅಚ್ಚಕನ್ಯೆ ಜಲಪಾತ

ಜಲಪಾತದ ಸನಿಹದಲ್ಲೇ ಸಂಜೆಯ ಉಪಹಾರ. ಅಲ್ಲೇ ಇದ್ದ 86 ವರ್ಷದ ಹಿರಿಯ ಜೀವ, ಸಾಹಿತಿ ಸುಬ್ರಹ್ಮಣ್ಯ ಅಡಿಗರ ಮನೆಯಲ್ಲಿ ಉಪಹಾರ ನಿಗದಿಯಾಗಿತ್ತು. ಕುವೆಂಪು, ಬೇಂದ್ರೆಯವರ ಶಿಷ್ಯರಾದ ಸುಬ್ರಹ್ಮಣ್ಯ ಅಡಿಗರು ಹಲವು ಕಾದಂಬರಿ, ಕವನ ಸಂಕಲನ, ಕಥಾ ಸಂಕಲನಗಳ ಕೃಷಿ ಸಾಹಿತ್ಯ ಮಾಡಿದ್ದಾರೆ. ಬೇಂದ್ರೆ, ಕುವೆಂಪು ಅವರ ಜೊತೆಗಿನ ಒಡನಾಟವನ್ನು ಅತ್ಯಂತ ಸಂತೋಷದಿಂದ ನಮ್ಮೊಂದಿಗೆ ಹಂಚಿಕೊಂಡರು.

ನಗರದ ಆಕರ್ಷಣೆಗೆ ಮನಸೋಲದೆ ಹುಟ್ಟಿದಾರಭ್ಯ ಈ ಕಾನನದ ನಡುವೆಯೇ ಜೀವಿಸುತ್ತಿದ್ದಾರೆ ಸುಬ್ರಹ್ಮಣ್ಯ ಅಡಿಗರು. ಅಕ್ಕ-ತಂಗಿಯರ ಗುಂಡಿ ಎಂದು ಕರೆಯುತ್ತಿದ್ದ ತೆರೆಮರೆಯಲ್ಲಿಯೇ ಉಳಿದಿದ್ದ ಈ ಜಲಪಾತಕ್ಕೆ ಅಡಿಗರು ‘ಅಚ್ಚಕನ್ಯೆ’ ಎಂದು ನಾಮಕರಣ ಮಾಡಿದ್ದಾರೆ. ಜಲಪಾತ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಅನುಕೂಲವಾಗಲೆಂದು ಸರ್ಕಾರಕ್ಕೆ ಒತ್ತಡ ಹಾಕಿ ರಸ್ತೆಯನ್ನು ಮಾಡಿಸಿದ್ದಾರೆ.

ನಮ್ಮ ಪ್ರವಾಸದ ಕೊನೆಯ ತಾಣ ಶರಾವತಿಯ ಉಗಮ ಸ್ಥಾನ ಅಂಬು ತೀರ್ಥ. ಸುತ್ತಲೂ ಕಾಡು, ನಡುವೆ ರಾಮೇಶ್ವರ ದೇಗುಲ. ರಾಮೇಶ್ವರನ ಪಾದದ ಅಡಿಯಲ್ಲಿ ಉಗಮಮವಾಗಿ ಮುಂದೆ ಹರಿಯುತ್ತಾಳೆ ಶರಾವತಿ. ಈ ಉಗಮ ಸ್ಥಾನವೇ ತೀರ್ಥಹಳ್ಳಿಯ ಅಂಬು ತೀರ್ಥ. ಪುಟ್ಟ ಹೊಂಡದಲ್ಲಿರುವ ಈ ತೀರ್ಥ ಶುಭ್ರವಷ್ಟೇ ಅಲ್ಲದೆ ನೀರು ಕುಡಿದಾಗ ಆದ ಆಯಾಸವೆಲ್ಲ ಇಳಿದು ಹೋದ ಅನುಭವವಾಗಿತ್ತು. ದೇವಸ್ಥಾನದ ಮುಂಭಾಗದಲ್ಲಿರುವ ಎರಡು ದೊಡ್ಡ ಕಲ್ಯಾಣಿಯಾಕಾರದ ಹೊಂಡಗಳಿಗೆ ಅಂಬು ತೀರ್ಥವು ಹರಿದು ಅಲ್ಲಿಂದ ಅಂತರ್ಧಾನಳಾಗಿ ಮುಂದೆ ಶರಾವತಿಯಾಗಿ ಮೈದಳೆಯುತ್ತಾಳೆ.

ಬೆಳಗಿನಿಂದ ಸಂಜೆವರೆಗೆ ಆರು ನದಿಗಳ ಜನ್ಮಸ್ಥಾನ, ನಾಲ್ಕು ದೇಗುಲಗಳು, ಒಂದು ಜಲಪಾತ ನೋಡಿದೆವು. ಜತೆಗೆ ಶ್ರಮದಾನ ಮಾಡಿದೆವು. ಸಾಹಿತಿಯೊಬ್ಬರ ಭೇಟಿ, ಆತಿಥ್ಯದ ಜತೆಗೆ ಪ್ರಯಾಣದ ವೇಳೆ ಶ್ರೀನಿಧಿ ಹೆಬ್ಬಾರ್ ಅವರು ಪರಿಸರ ಕಾಳಜಿ, ಪ್ರಾಣಿ-ಪಕ್ಷಿ, ಕ್ರಿಮಿ-ಕೀಟ ಜಗತ್ತಿನ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಕೇಳುತ್ತಾ ಸಮಯ ಸರಿದದ್ದೇ ತಿಳಿಯಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು