ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸೋಲ್‌ ಟು ಕಾಲ್ಗಾ; ಕಾಲುದಾರಿಯ ಸ್ವರ್ಗ

Last Updated 8 ಮೇ 2019, 19:30 IST
ಅಕ್ಷರ ಗಾತ್ರ

ಅಂದು ದಿಲ್ಲಿಯ ಮೆಟ್ರೊದಲ್ಲಿ ನಾನು ಮತ್ತು ನನ್ನ ಸ್ನೇಹಿತ ಚಾರಣ–ಪ್ರವಾಸದ ಬಗ್ಗೆ ಮಾತಾಡುತ್ತಿದ್ದೆವು. ಅದನ್ನು ಕೇಳಿಸಿಕೊಂಡ ಪಕ್ಕದಲ್ಲಿದ್ದ ಅಪರಿಚಿತ ವ್ಯಕ್ತಿಯೊಬ್ಬರು ‘ಕಸೋಲ್ ಗೆ ಹೋಗಿ’ ಎಂದು ಸಲಹೆ ನೀಡಿದರು. ಅವರು ಹೇಳಿದ 30 ನಿಮಿಷದಲ್ಲೇ ಅಂದಿನ ರಾತ್ರಿ ಬಸ್ಸಿಗೆ ಟಿಕೆಟ್ ಬುಕ್‌ ಮಾಡಿದೆ.

ಹಿಮಾಚಲ ಪ್ರದೇಶ ರಾಜ್ಯದ ಕುಲು ಜಿಲ್ಲೆಗೆ ಸೇರಿದ ಕಸೋಲ್‌ಗೆ ಹೊರಟೆ. ರಾತ್ರಿ ಪ್ರಯಾಣ. ಕಣ್ಣು ಚುಚ್ಚಿದ ಸೂರ್ಯನ ಬೆಳಕಿನಿಂದಾಗಿ ಒಮ್ಮೆಲೇ ಎಚ್ಚರವಾಯಿತು. ಕಣ್ಣು ಬಿಟ್ಟಿದ್ದೇ ಕಿಟಕಿಯಿಂದಾಚೆಗೆ ದೂರದಲ್ಲಿ ಅಸ್ಪಷ್ಟವಾದ ಬೃಹದಾಕಾರದ ಬೆಳ್ಳನೆ ಚಿತ್ರವೊಂದು ಕಣ್ಣೆದುರು ಬಂತು. ಅದೇ ಹಿಮಾಲಯ ಪರ್ವತ ಶ್ರೇಣಿ. ಒಂದು ಕ್ಷಣ ಕಣ್ಣು ಒದ್ದೆಯಾಯಿತು. ಹಿಮಾಲಯದ ಬಗ್ಗೆ ಕಥೆಗಳನ್ನು ಕೇಳಿದ್ದೆ. ಪುಸ್ತಕದಲ್ಲಿ ಓದಿದ್ದೆ. ಎಂದೂ ನೋಡಿರಲಿಲ್ಲ. ದೂರದಿಂದಲೇ ಆದರೂ ನೈಜವಾಗಿ ನೋಡಿ ಕ್ಷಣ ಮಾತ್ರಕ್ಕೆ ಭಾವುಕಳಾಗಿಬಿಟ್ಟೆ.

ಕಿಟಕಿಯಿಂದ ಆಚೆ-ಈಚೆ ನೋಡಿದರೆ, ಪಕ್ಕದಲ್ಲೇ ನಾವು ಸಾಗಿದಂತೇ ನಮ್ಮ ಜೊತೆಗೇ ಹರಿಯುತ್ತಿರುವ ಬೀಸ್ ನದಿ. ಎರಡೂ ಕಡೆಯಿಂದ ಸುತ್ತುವರಿದ ಬೃಹದಾಕಾರದ ಗಂಧರ್ವ ಪರ್ವತ ಶ್ರೇಣಿ. ನಿದ್ದೆಯಿಂದ ಎದ್ದಾಗ ಇಂತಹ ಸೊಬಗು ಕಣ್ಣು ಕಟ್ಟಿದರೆ ಈ ಲೋಕದಲ್ಲಿ ಬೇರೇನು ಬೇಕು?

ಬೆಳಿಗ್ಗೆ 7.30 ರ ಸುಮಾರಿಗೆ ಬಸ್ ಭುಂತರ್ ತಲುಪಿತು. ಅಲ್ಲಿಂದ ಕಸೋಲ್‌ಗೆ ಮತ್ತೆ 1 ಗಂಟೆ ಪ್ರಯಾಣ. ಅಲ್ಲಿದ್ದ ಮಿನಿ ಬಸ್ ಏರಿ ಕುಳಿತೆ. ಮತ್ತೆ ಅಷ್ಟೇ ಅಂಕುಡೊಂಕಾದ ಪರ್ವತದ ಮಧ್ಯದ ದಾರಿ. ಸ್ವಲ್ಪ ಧ್ಯಾನ ತಪ್ಪಿದರೆ ಸೀದ ಪ್ರಪಾತ. ಸುಮಾರು 1.30 ಗಂಟೆಯ ಬಳಿಕ ಕಂಡಕ್ಟರ್ ‘ಕಸೋಲ್, ಕಸೋಲ್’ ಎಂದು ಕೂಗಿದಾಗ, ಕೆಲವು ಪ್ರಯಾಣಿಕರೊಂದಿಗೆ ನಾನೂ ಇಳಿದೆ.‌

ಇಳಿದವಳು ಸುತ್ತ ನೋಡಿದೆ. ಒಮ್ಮೆಲೇ ಭ್ರಮನಿರಸನ ವಾಯಿತು. ಈ ಊರಿನ ಬಗ್ಗೆ ನಾನು ಕಲ್ಪಿಸಿಕೊಂಡದ್ದೇ ಬೇರೆ. ಇಲ್ಲಿರುವುದೇ ಬೇರೆ. ಕಸೋಲ್ ನನಗೆ ಒಂದು ಸಾಮಾನ್ಯ ಪೇಟೆಯಂತೆ ಕಂಡಿತು. ‘ಎಲ್ಲೋ ತಪ್ಪಿ ಇಳಿದುಬಿಟ್ಟೆನಾ’ ಎಂದುಕೊಂಡು, ಅಲ್ಲೇ ಇದ್ದ ಇಬ್ಬರನ್ನು ವಿಚಾರಿಸಿದೆ. ಅವರೆಲ್ಲಾ ಇದೇ ಕಸೋಲ್ ಎಂದರು. ಹೋಟೆಲ್ ಕೂಡಾ ತೋರಿಸಲು ಶುರುಮಾಡಿದರು. ಯಾವುದೋ ಧೈರ್ಯದಲ್ಲಿ ಒಬ್ಬಳೇ ಬಸ್ ಹತ್ತಿ ಬಂದುಬಿಟ್ಟಿದ್ದೆ. ಈಗ ಹೆದರಿಕೆ ಶುರುವಾಯಿತು.

ಅಷ್ಟರಲ್ಲಿ ನನ್ನಂತೆ ಅಲ್ಲಿಗೆ ಬಂದಿದ್ದ ನಾಲ್ವರು ತರುಣ-ತರುಣಿಯರು ಬ್ಯಾಗ್ ಹೊತ್ತು ನಡೆಯುತ್ತಿದ್ದರು. ಅವರ ಬಳಿ ಹೋಗಿ, ‘ಇಲ್ಲಿ ಎಲ್ಲಿ ಉಳಿಯಬಹುದು, ನೋಡಲು ಏನಿದೆ?’ ಎಂದು ಕೇಳಿದೆ. ಅವರು ‘ಇಲ್ಲಿಗಿಂತ ಬರ್ಷೈನಿ ಚೆನ್ನಾಗಿದೆ. ನಾವು ಅಲ್ಲೇ ಉಳಿಯುತ್ತೇವೆ’ ಎಂದು ಹೋದರು. ನನಗೆ ಅರ್ಥವಾಗದೇ ಸುಮ್ಮನೇ ನಿಂತೆ. ಏಕೋ ಏನೋ, ಹೋದವರು ಮತ್ತೆ ಬಂದು, ‘ಒಬ್ಬರೆ ಇದ್ದೀರಾ? ನೀವೂ ನಮ್ಮ ಜೊತೆ ಬರೋದಾದರೆ ಬನ್ನಿ’ ಎಂದರು. ನಾನು ತಕ್ಷಣ ಒಪ್ಪಿಕೊಂಡುಬಿಟ್ಟೆ. ಅಲ್ಲಿಂದ ಶುರುವಾಯಿತು ನನ್ನ ಸಾಹಸಮಯ ಪಯಣ.

ಇನ್ನೊಂದು ಬಸ್ ಹಿಡಿದು ಬರ್ಷೈನಿ ತಲುಪಿದೆವು. ಹಸಿವಾದ್ದರಿಂದ ಸ್ವಲ್ಪ ಸ್ವಲ್ಪ ಏನೋ ತಿಂದೆವು. ಮುಂದೆ ಮೂರು ಹಳ್ಳಿಗಳಿವೆ. ಅಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಇದೆ. ಯಾವುದೇ ವಾಹನ ಮುಂದೆ ಹೋಗದ ಕಾರಣ ನಡೆಯಬೇಕು. ನಾವು ಹೋಗುತ್ತಿದ್ದ ಹಳ್ಳಿಯ ಹೆಸರು ಕಾಲ್ಗಾ. ಇಲ್ಲಿಂದ ಸುಮಾರು 5 ಕಿ.ಮೀ ಪಾರ್ವತಿ ನದಿಯ ತಪ್ಪಲಲ್ಲಿ ಕಾಲ್ಗಾದತ್ತ ಹೆಜ್ಜೆ ಹಾಕಿದೆವು. ಎದುರು ಕಣ್ಣಿಗೇ ಹೊಡೆಯುವ ಹಿಮಚ್ಛಾದಿತ ಪರ್ವತಗಳು. ಕೆಳಗೆ ಹಸಿರು ಬಣ್ಣದ ನದಿ. ಆ ನೋಟದ ಜೊತೆಗೆ ಸಾಗುತ್ತಿರುವ ದಾರಿ ತುಂಬಾ ಸಲೀಸಾಯಿತು.

ಕಾಲ್ಗಾ ಒಂದು ಪುಟ್ಟ ಹಳ್ಳಿ. ಹೆಚ್ಚೆಂದರೆ 4-5 ಮನೆಗಳಿರಬಹುದು. ಆದರೆ ಎಲ್ಲಾ ಮನೆಗಳು ಪ್ರವಾಸಿಗರಿಗೆಂದು ಉಳಿಯುವ ವ್ಯವಸ್ಥೆ ಮಾಡಿಕೊಂಡಿದ್ದವು. ಚಿಕ್ಕ, ಚೊಕ್ಕವಾದ ಮರದ ಮನೆಗಳಿದ್ದವು. ಅದರಲ್ಲಿ ಒಂದು ರಾತ್ರಿಗೆ ರೂಮ್‌ಗೆ ₹300 ಬಾಡಿಗೆ. ಊಟ-ತಿಂಡಿ ವ್ಯವಸ್ಥೆ ಅಲ್ಲೇ.

ನಾವು ಉಳಿದುಕೊಂಡ ಜಾಗ ಸ್ವರ್ಗದಂತಿತ್ತು. ಎದುರಿಗೇ ಹಿಮದಿಂದ ಕೂಡಿದ ಪಾರ್ವತಿ ಪರ್ವತಗಳು, ಕೊರೆಯುವ ಚಳಿ, ಬೆಚ್ಚಗಿನ ಮನೆ, ಸಮಯಕ್ಕೆ ಸರಿಯಾಗಿ ನೆನೆದಾಗೆಲ್ಲಾ ಬರುವ ಬಿಸಿ ಬಿಸಿ ಚಹ, ಬೋಂಡ. ಜೀವನಕ್ಕೆ ಇನ್ನೇನೂ ಬೇಡ ಇವಿಷ್ಟಿದ್ದರೆ ಸಾಕು ಎನ್ನುವಂತೆ. ಬಂದದ್ದು ಸಾರ್ಥಕವಾಯಿತು ಎಂದು ಸಂತೋಷಪಟ್ಟೆ. ಸಂಜೆ ತನಕ ಅಲ್ಲೇ ಸುತ್ತಿದೆ. ಅಲ್ಲಿಯ ಜನರ ಜೀವನಶೈಲಿಯ ಬಗ್ಗೆ ವಿಚಾರಿಸಿದೆ. ಇಂಥ ಪರಿಸರದಲ್ಲಿ ವಾಸ ಮಾಡುವ ಇವರು ಎಂಥಾ ಪುಣ್ಯವಂತರೆಂದು ಅಸೂಯೆ ಪಟ್ಟೆ. ಬೇರೆ ಬೇರೆ ಗೆಸ್ಟ್ ಹೌಸ್‌ಗಳಿಗೂ ಹೋಗಿ ಬಂದೆ. ಮತ್ತೂ ಒಂದಿಷ್ಟು ಜನ ಪರಿಚಯವಾದರು.

ವಾಪಸ್ ಬರುವ ವೇಳೆ ನನ್ನ ಜೊತೆ ಇದ್ದವರೆಲ್ಲಾ ಮರುದಿನ ಬೆಳಿಗ್ಗೆ ಖೀರ್ ಗಂಗಾ ಟ್ರೆಕ್ಕಿಂಗ್ ಹೋಗುವುದಾಗಿ ತಿಳಿಸಿದರು. ನನ್ನನ್ನೂ ಜತೆ ಕರೆದರು. ನಾನು ಖುಷಿಯಿಂದ ಒಪ್ಪಿಕೊಂಡೆ. ಆದರೆ 13 ಕಿ.ಮೀ. ಟ್ರೆಕ್ಕಿಂಗ್ ಮಾಡಲು ನನ್ನ ಹತ್ತಿರ ಏನೂ ರಕ್ಷಣಾ ಪರಿಕರಗಳು ಇರಲಿಲ್ಲ. ಒಂದೆರಡು ದಿನ ಪ್ರಕೃತಿ ಸವಿಯಲು ಬಂದಿದ್ದೆ. ನನ್ನ ಹತ್ತಿರ ಅಲ್ಲಿಯ ಚಳಿಯಿಂದ ರಕ್ಷಿಸಿಕೊಳ್ಳುವ ಬಟ್ಟೆಯೂ ಇರಲಿಲ್ಲ. ಇಲ್ಲಿಂದ ಬೆಳಿಗ್ಗೆ ಮುಂಚೆ ಹೊರಟರೆ ತಲುಪುವುದು ಸಂಜೆ ಆಗುತ್ತದೆ. ರಾತ್ರಿ ಅಲ್ಲಿ ತಾಪಮಾನ ಮೈನಸ್ ನಲ್ಲಿರುತ್ತದೆ. ಆದರೂ ಇರಲಿ ಎಂದು ಹೋಗುವ ತೀರ್ಮಾನ ಮಾಡಿದೆ.

ಬೆಳಿಗ್ಗೆ, ನಾನು ತಂದಿರುವ ಎಲ್ಲಾ ಬಟ್ಟೆಗಳನ್ನು ಒಂದರ ಮೇಲೊಂದು ಹಾಕಿಕೊಂಡು, ಗ್ಲೌಸ್ಸ್‌ ಅನ್ನು ಗೆಳೆಯರಿಂದ ಎರವಲು ಪಡೆದು, ನನ್ನ ಸಾಮಾನ್ಯ ಶೂ ಮೇಲೆ ಭರವಸೆ ಇಟ್ಟು ಟ್ರೆಕ್ಕಿಂಗ್ ಹೊರಟೆ. ನಾವು ಕ್ರಮಿಸುವ ದಾರಿ ಕಿರಿದಾಗಿತ್ತು. ಕೆಳಗೆ ಸೀದಾ ಪ್ರಪಾತ. ನಡೆಯಲು ಸುಲಭವಾಗಲೆಂದು ₹50 ಕೊಟ್ಟು ಅಲ್ಲೇ ಮಾರುತ್ತಿದ್ದ ಒಂದು ಕೋಲನ್ನು ಕೊಂಡೆ. ನಮ್ಮನ್ನು ಬಿಟ್ಟರೆ ಬೇರಾರೂ ಹೆಚ್ಚಾಗಿ ಕಾಣಲಿಲ್ಲ. ಅಲ್ಲಲ್ಲಿ 3-4 ಕಿ.ಮೀ. ಗೊಮ್ಮೆ ಸಣ್ಣ ಸಣ್ಣ ಅಂಗಡಿಗಳಿದ್ದವು. ಮೇಲೆ ಮೇಲೆ ಹೋಗುತ್ತಿದ್ದಂತೆ ತಿನಿಸುಗಳ ದರವೂ ಗಗನಕ್ಕೇರು ತ್ತಿತ್ತು. ಮಧ್ಯೆ ಮಧ್ಯೆ ವಿಶ್ರಮಿಸುತ್ತಾ, ಹಸಿವಾದಾಗ ತಿನ್ನುತ್ತಾ ಸಾಗಿದೆವು. ದಾರಿಯಲ್ಲಿ ಖೀರ್ ಗಂಗಾಕ್ಕೆ ಹೋಗುತ್ತಿರುವ ಇನ್ನೂ ಕೆಲವರು ಜೊತೆಯಾದರು.

7 ತಾಸಿನ, 13 ಕಿ.ಮೀ ನ ಸುದೀರ್ಘ ಪಯಣ ಮುಗಿದು ನಾವು ಅಲ್ಲಿ ತಲುಪಿದಾಗ ಸಂಜೆ 5 ಗಂಟೆ. ಸಂಪೂರ್ಣವಾಗಿ ದಣಿದ ನಮಗೆ ಅಲ್ಲಿ ಹೋಗಿ ನಿಂತಾಗ ಕಂಡ ದೃಶ್ಯದಿಂದ ಎಲ್ಲಾ ದಣಿವೂ ಮಂಗ ಮಾಯ. ತೀರಾ ಹತ್ತಿರದಲ್ಲೇ ಕಣ್ಣಿಗೇ ಹೊಡೆಯುವ ಪರ್ವತರಾಶಿ, ಎಲ್ಲಿ ನೋಡಿದರೂ ಹಿಮ, ಚಳಿ, ನಮ್ಮಂಥ ಇನ್ನೂ ಹಲವು ಪ್ರವಾಸಿಗರು, ಪುಟ್ಟ-ಪುಟ್ಟ ಕೆಫೆಗಳು, ದಣಿವು ನೀಗಿಸಲು ಕೆಫೆಗಳಲ್ಲಿ ನೇತು ಹಾಕಿರುವ ಜೋಕಾಲಿಗಳು. ಇವೆಲ್ಲ ನೋಡುತ್ತಿದ್ದಾಗ, ನಾನು ಇಲ್ಲಿಗೆ ಬರಲು ನಿರ್ಧಾರ ಮಾಡಿದ್ದು, ನನಗೆ ಹೆಮ್ಮೆ ಎನಿಸಿತು.

ಮೊದಲು ದಣಿವಾರಿಸಿಕೊಳ್ಳಲು ಒಂದು ಕೆಫೆಗೆ ಹೋದೆವು. ಒಂದು ಕಾಫಿ ಕುಡಿದು ಕೂರುವಷ್ಟರಲ್ಲಿ ಕತ್ತಲಾಯಿತು. ನಮ್ಮ ಜೊತೆಗೆ ಬಂದವನೊಬ್ಬ ಉಳಿಯಲು ಜಾಗ ನೋಡಿ ಬರಲು ಹೋದ. ಅವನು ಬರುವಷ್ಟರಲ್ಲಿ ಮಳೆ ಶುರುವಾಯಿತು. ಎಲ್ಲರೂ ಕೆಫೆ ಒಳಗೆ ಹೊಕ್ಕರು. ಹೊರಗೆ ಕಾಲಿಡಲಾಗದ ಮಳೆ. ಬೇರೆ ವಿಧಿಯಿಲ್ಲದೇ ನಮ್ಮನ್ನೂ ಸೇರಿಸಿ ಅಲ್ಲಿದ್ದ ಎಲ್ಲರೂ ಅಲ್ಲೇ ಮಲಗಲು ಯೋಚಿಸಿದೆವು. ಕೆಫೆಯ ಯಜಮಾನ ನಮಗೆ ಒಂದೊಂದು ಕಂಬಳಿ ಕೊಡಲು ಒಪ್ಪಿದ. ಜೊತೆಗೆ ಒಬ್ಬೊಬ್ಬರಿಗೆ ₹100 ಚಾರ್ಜ್ ಕೂಡ ಮಾಡಿದ. ಚಳಿ ಕಾಯಿಸಲು ಬೆಂಕಿ ಉರಿಸಿಕೊಟ್ಟ. ಕೊರೆಯುವ ಚಳಿ. ನಾನು ಅಲ್ಲೇ ಬೆಂಕಿಯ ಹತ್ತಿರ ಜಾಗ ಮಾಡಿಕೊಂಡೆ. ರಾತ್ರಿಯಿಡೀ ಕೆಫೆ ಹಾಡು-ಕುಣಿತಗಳಿಂದ ಕೂಡಿತ್ತು.

ನನಗೆ ಆ ದಿನ ಹೊರಡಬೇಕಾದ್ದರಿಂದ ಬೆಳಿಗ್ಗೆ ಎದ್ದು ಅಲ್ಲಿನ ಪ್ರಖ್ಯಾತ ಬಿಸಿ ನೀರಿನ ಬುಗ್ಗೆಗೆ ಸ್ನಾನ ಮಾಡಲು ಹೋದೆ. ಹಿಮದ ಮಧ್ಯೆ ಚಿಮ್ಮುವ ಈ ಬಿಸಿ ನೀರಿನ ಬುಗ್ಗೆಯೇ ನನಗೆ ಮಹದಾಶ್ಚರ್ಯದ ಸಂಗತಿಯಾಗಿತ್ತು. ಅದನ್ನು ನೋಡುವುದು, ಅದರಲ್ಲಿ ಸ್ನಾನ ಮಾಡುವುದು, ಈ ಅನುಭವದಿಂದ ಪುಳಕಿತಗೊಂಡೆ. ಅದಕ್ಕೆ ಸರಿಯಾಗಿ ಹಿಮಪಾತವಾಯಿತು. ಕೆಳಗೆ ನೈಸರ್ಗಿಕವಾದ ಬಿಸಿ ನೀರು, ಮೇಲಿನಿಂದ ಹಿಮ ಮೈ ಮೇಲೆ ಉದುರುತ್ತಿದೆ. ಏನೋ ಅದ್ಭುತ ನಿಗೂಢದ ಅನುಭವ ನನಗೆ. ನನಗಾಗೇ ಯೋಜಿಸಿ ಮಾಡಿದ ಹಾಗೆ.

ನನ್ನನ್ನು ಜೊತೆಗೆ ಸೇರಿಸಿಕೊಂಡು, ಇಂಥಹ ವಿಸ್ಮಯ ಅನುಭವವನ್ನು ದಕ್ಕಿಸಿಕೊಟ್ಟ ನನ್ನ ಜೊತೆಗಾರರನ್ನು ವಂದಿಸಿ ಅವರನ್ನು ಬೀಳ್ಕೊಟ್ಟೆ. ಖುಷಿಯಲ್ಲಿ ಹಾರುತ್ತಾ ಕೆಳಗಿಳಿದೆನೋ ಏನೋ, ಹತ್ತಲು 7 ತಾಸು ತೆಗೆದುಕೊಂಡ ದಾರಿ ಕೇವಲ 3 ತಾಸಿಗೆ ನನ್ನನ್ನು ಕೆಳಗಿಳಿಸಿತು. ಚಾರಣದಲ್ಲಿ ಸಿಕ್ಕ ಹೊಸ ಸ್ನೇಹಿತರು, ದಾರಿಯಲ್ಲಿ ಜೊತೆಯಾದವರು ಎಲ್ಲರಿಗೂ ‘ಟಾ ಟಾ’ ಹೇಳಿ ನನ್ನ ಬಸ್ ಹತ್ತುವಷ್ಟರಲ್ಲಿ ಮೇಲೆ ಹತ್ತಲು ಹೊರಟ ಒಬ್ಬಳು ನನ್ನ ಬಳಿ ಬಂದು ‘ಐ ಲೈಕ್ಡ್ ಯುವರ್ ಸ್ಟಿಕ್. ವೇರ್ ಡಿಡ್ ಯು ಗೆಟ್ ಇಟ್’ ಅಂದಳು.

ಹಿಂದಿನ ದಿನದಿಂದ ನನಗೆ ನೆರವಾದ ಆ ಕೋಲಿನ ಬಗ್ಗೆ ವಿಚಿತ್ರವಾದ ನಂಟು ಬೆಳೆಸಿಕೊಂಡಿದ್ದರೂ, ಏನನ್ನಿಸಿತೋ ಏನೋ, ‘ಯು ಕ್ಯಾನ್ ಟೇಕ್ ಇಟ್’ ಎಂದು ಅವಳಿಗೆ ಕೊಟ್ಟು ಬಿಟ್ಟೆ. ಕೊಡುವಾಗ, ನನ್ನ ಹೆಸರನ್ನು ಅದರ ಮೇಲೆ ಬರೆದು ಕೊಟ್ಟೆ. ‘ನೀನೂ ಕೆಳಗಿದ ಮೇಲೆ ಬೇರೆ ಯಾರಿಗಾದರೂ ಇದನ್ನು ಕೊಡು. ನಿನ್ನ ಹೆಸರು ಬರೆದು ಕೊಡು’ ಅಂದೆ. ಖುಷಿಯಾದಳು. ಬಹುಶಃ ಈಗಲೂ ಆ ಕೋಲು ನನ್ನ ಹೆಸರಿನೊಂದಿಗೆ ಆ ಪರ್ವತಗಳನ್ನು ಹತ್ತಿ-ಇಳಿಯುತ್ತಿದೆ ಎಂದು ನೆನೆದು ಸಂಭ್ರಮಿಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT