ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸಾಹಿತ್ಯ ಜಗತ್ತು ಗಟ್ಟಿಗೊಳ್ಳಲಿ: ಮಕ್ಕಳ ಸಾಹಿತಿ ಪ್ರಿಯಾ ಕುರಿಯನ್

‘ಬಿಗ್‌ ಲಿಟಲ್‌ ಬುಕ್‌ ಅವಾರ್ಡ್‌’ ಪ್ರಶಸ್ತಿ ಪುರಸ್ಕೃತ ಇಲಸ್ಟ್ರೇಟರ್‌ ಪ್ರಿಯಾ ಕುರಿಯನ್‌
Last Updated 2 ಡಿಸೆಂಬರ್ 2019, 19:30 IST
ಅಕ್ಷರ ಗಾತ್ರ

ಮಕ್ಕಳ ಬಾಲ್ಯಕ್ಕೆ ಗ್ಯಾಜೆಟ್‌ನಷ್ಟೆ ಸಲೀಸಾಗಿ ಪುಸ್ತಕಗಳು ಜತೆಯಾದರೆ, ಆ ಬಾಲ್ಯ ಮತ್ತಷ್ಟು ಶ್ರೀಮಂತಗೊಳ್ಳುತ್ತದೆ. ಕಲ್ಪನೆಗಳು ಗರಿಗೆದರಿ, ಆವಿಷ್ಕಾರಕ್ಕೆ ಮುಂದಾಗಲು ಈ ಪುಸ್ತಕಗಳೆಲ್ಲವೂ ಸದಾ ಪ್ರೇರಣೆ. ಬಾಲ್ಯವನ್ನು ಚಂದಗೊಳಿಸುವ ಮಕ್ಕಳ ಪುಸ್ತಕಗಳಿಗೆ ಪ್ರೋತ್ಸಾಹ ಕೊಡುವ ಸಲುವಾಗಿಯೇ ‘ಟಾಟಾ ಟ್ರಸ್ಟ್‌’ ‘ಪರಾಗ್‌’ ಯೋಜನೆಯನ್ನು 2005ರಲ್ಲಿ ಜಾರಿಗೊಳಿಸಿತು.

ಇದರ ಅಂಗವಾಗಿ ಪ್ರತಿ ವರ್ಷ ‘ಬಿಗ್‌ ಲಿಟಲ್‌ ಬುಕ್‌ ಅವಾರ್ಡ್‌’ ಪ್ರಶಸ್ತಿ ನೀಡುತ್ತಾ ಬಂದಿದೆ. ’2019ರ ಬಿಎಲ್‌ಬಿಎ– ಬೆಸ್ಟ್‌ ಚಿಲ್ಡ್ರನ್‌ ಇಲಸ್ಟ್ರೇಟರ್‌ ಪ್ರಶಸ್ತಿ’ಯನ್ನು ಕೇರಳದ ಪ್ರಿಯಾ ಕುರಿಯನ್‌ ಅವರು ಪಡೆದುಕೊಂಡಿದ್ದಾರೆ. ಅವರು ಸಹಪಾಠಿಯೊಂದಿಗೆ ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದಿರುವುದಕ್ಕೆ ಹೇಗನಿಸುತ್ತದೆ?

ಮಕ್ಕಳ ಸಾಹಿತ್ಯ ಲೋಕದಲ್ಲಿ ಚಿತ್ರಗಳು ಬಹಳ ದೊಡ್ಡ ಜವಾಬ್ದಾರಿಯನ್ನು ವಹಿಸುತ್ತವೆ. ಅವು ಮಕ್ಕಳನ್ನು ಕಲ್ಪನಾ ಪ್ರಪಂಚವನ್ನು ತೀಡುತ್ತವೆ. ಇದರ ಭಾಗವಾಗಿರುವುದಕ್ಕೆ ಹೆಮ್ಮೆಯಿದೆ.ನನ್ನ ಕೆಲಸವನ್ನು ಗುರುತಿಸಿರುವುದಕ್ಕೆ ನಿಜಕ್ಕೂ ಖುಷಿಯಾಗುತ್ತಿದೆ. ಇದು ಒಂದು ಪುಸ್ತಕಕ್ಕೆ ಸಂದ ಪ್ರಶಸ್ತಿ ಅಲ್ಲ. ಅಷ್ಟೆ ಅಲ್ಲದೇ ಇನ್ನಷ್ಟು ಚಿತ್ರಗಳನ್ನು ಬರೆಯಲು ಉತ್ಸಾಹ ನೀಡುತ್ತದೆ.

* ನೀವು ಮಕ್ಕಳ ಅಕ್ಷರ ಜಗತ್ತಿನೊಳಗೆ ಪ್ರವೇಶ ಪಡೆದಿದ್ದು ಹೇಗೆ?

2003ರಿಂದ ನಾನು ಚಿತ್ರ ಬಿಡಿಸಲು ಆರಂಭಿಸಿದೆ. ಅಹಮದಬಾದ್‌ನಲ್ಲಿರುವ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಡಿಸೈನ್‌ನಲ್ಲಿ ಪದವಿ ಪಡೆದೆ. ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಚಿತ್ರ ಬರೆಯುತ್ತಿದ್ದೆ. ಅದನ್ನು ಹಲವು ಪ್ರಕಾಶನ ಸಂಸ್ಥೆಗಳಿಗೆ ನೀಡುತ್ತಿದ್ದೆ. ಚೆನ್ನೈನ ಪ್ರಕಾಶನ ಸಂಸ್ಥೆ ಟುಲಿಕಾಗೆ ಕಳುಹಿಸಿದೆ. ರಾಧಿಕಾ ಚಡ್ಡ ಅವರ ‘ಐ ಯಾಮ್‌ ಸೋ ಸ್ಲೀಪಿ’ ಪುಸ್ತಕಕ್ಕೆ ಚಿತ್ರ ಬಿಡಿಸಿದೆ. ಅಲ್ಲಿಂದ ಸಾಲು ಸಾಲಾಗಿ ಮಕ್ಕಳ ಪುಸ್ತಕಗಳಿಗೆ ಚಿತ್ರ ಬಿಡಿಸಲು ಅವಕಾಶ ಸಿಕ್ಕಿತು.

* ಆರಂಭದಲ್ಲಿ ಅನಿಮೇಷನ್‌ ಪ್ರೊಡಕ್ಷನ್‌ ಹೌಸ್‌ನಲ್ಲಿಯೂ ಕೆಲಸ ಮಾಡಿದ್ದೀರಿ. ಅದರ ಅನುಭವ?

ಈವರೆಗೆ ಐವತ್ತಕ್ಕೂ ಹೆಚ್ಚು ಪುಸ್ತಕಗಳಿಗೆ ಇಲಸ್ಟ್ರೇಟ್‌ ಮಾಡಿದ್ದೇನೆ. ಇವೆಲ್ಲದರ ಹಿಂದಿರುವುದು ವೃತ್ತಿಪರತೆ. ಅದನ್ನು ನಾನು ಮೊದಲು ಕೆಲಸ ಮಾಡಿದ ಅನಿಮೇಷನ್‌ ಪ್ರೊಡಕ್ಷನ್‌ ಹೌಸ್‌ನಿಂದ ಕಲಿತೆ. ಒಂದು ಪಾತ್ರವನ್ನು ನಿರ್ದಿಷ್ಟ ಅವಧಿಯೊಳಗೆ ಚಿತ್ರಿಸಿ, ಕಥಾ ಪ್ರಪಂಚಕ್ಕೆ ಹೊಂದಿಸುವುದು ಖುಷಿ ಕೊಡುವ ವಿಚಾರವೇ ಸರಿ. ಅದನ್ನು ಪ್ರೊಡಕ್ಷನ್‌ ಹೌಸ್‌ನಿಂದ ಕಲಿಯುತ್ತಾ ಹೋದೆ. ಇದು ಮಕ್ಕಳ ಸಾಹಿತ್ಯ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿತು.

* ನಿಮ್ಮ ಇಲಸ್ಟ್ರೇಟ್‌ಗಳಿಗೆ ಪ್ರೇರಣೆ ಏನು?

ನನ್ನ ದಿನದ ಬಹುಭಾಗವನ್ನು ಪುಸ್ತಕದೊಂದಿಗೆ ಕಳೆಯಲು ಇಷ್ಟಪಡುತ್ತೇನೆ. ಎಲ್ಲ ಸಮಕಾಲೀನ ಲೇಖಕರು, ಕಥೆಗಾರರು, ಕಾದಂಬರಿಕಾರರೆಂದರೆ ನನಗಿಷ್ಟ. ಇವರನ್ನು ಓದುತ್ತಾ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ. ಓದುವ ಜತೆಗೆ ನನ್ನೊಂದಿಗೆ ಸದಾ ಚಿತ್ರಬಿಡಿಸುವ ಪುಸ್ತಕವಿರುತ್ತದೆ. ನನ್ನ ಕಲ್ಪನೆಗೆ ದಕ್ಕಿದ ಪಾತ್ರಗಳೆಲ್ಲವೂ ಚಿತ್ರಗಳಾಗಿ ಹೊರಹೊಮ್ಮುತ್ತವೆ. ಭಾರತೀಯ ಚಿತ್ರಕಲಾವಿದ ಮಾರಿಯಾ ಡಿ ಮಿರಾಂಡೊ ಬಿಡಿಸಿದ ಇಲಸ್ಟ್ರೇಟ್‌ಗಳು ನನ್ನನ್ನು ಬಹಳ ಕಾಡಿವೆ. 80ದಶಕದಲ್ಲಿ ಜನಪ್ರಿಯವಾಗಿದ್ದ ರಷ್ಯಾದ ಮಕ್ಕಳ ಪತ್ರಿಕೆ ‘ಮಿಶಾ’ವನ್ನು ನೋಡುತ್ತಲೇ ಬೆಳೆದವಳು. ಇವೆಲ್ಲಕ್ಕಿಂತ ಹೆಚ್ಚಾಗಿ ನನ್ನ ಸುತ್ತಮುತ್ತ ನಡೆಯುವ ಸೂಕ್ಷ್ಮವಾಗಿ ಗಮನಿಸುತ್ತಿರುತ್ತೇನೆ. ಅವು ಪಾತ್ರಗಳನ್ನು ರೂಪಿಸುವಲ್ಲಿ ಬಹು ದೊಡ್ಡ ಕೊಡಗೆಯನ್ನು ನೀಡಿವೆ.

* ಪುಟಾಣಿಗಳ ಚಿತ್ರಪ್ರಪಂಚದಲ್ಲಿನ ಸವಾಲುಗಳೇನು?

ಮಕ್ಕಳ ಪತ್ರಿಕೆಗೆ ಚಿತ್ರ ಬಿಡಿಸುವವರ ಜವಾಬ್ದಾರಿ ಹೆಚ್ಚೇ ಇದೆ. ಮಕ್ಕಳ ಸಂವೇದನೆಯನ್ನು ರೂಪಿಸುವುದು ಬಹಳ ಸಣ್ಣ ಸಂಗತಿಯಲ್ಲ. ಅದು ಒಟ್ಟಾರೆ ದೇಶದ ಭವಿಷ್ಯವನ್ನು ಆಧರಿಸಿರುತ್ತದೆ. ಎಲ್ಲಾ ಪೂರ್ವಾಗ್ರಹಗಳಿಂದಲೂ ಮುಕ್ತವಾಗಿದಷ್ಟು ಮಕ್ಕಳಿಗೆ ಹತ್ತಿರವಾಗಬಹುದು. ಓದುವುದು ಎಂದಿಗೂ ಖುಷಿ ಕೊಡುವ ವಿಚಾರ. ಅದು ಚಿತ್ರಗಳ ಮೂಲಕ ಮಕ್ಕಳು ಪುಸ್ತಕ ಓದುವ ಹಾಗೆ ಮಾಡಬೇಕು. ದೊಡ್ಡವರ ಸಿದ್ಧಾಂತಗಳು ಏನೇ ಇರಲಿ; ಮಕ್ಕಳ ಮನಸ್ಸನ್ನು ಅರಳಿಸಲು ಕಲೆ ಪೂರಕವಾಗಿರಬೇಕೇ ಹೊರತು. ಮುರುಟಲು ಅಲ್ಲ. ಉದಾಹರಣೆಗೆ ಮೈಬಣ್ಣದ ಸಂಗತಿಯನ್ನಿಟ್ಟುಕೊಂಡು ಪಾತ್ರವೊಂದು ರೂಪುಗೊಂಡರೆ, ಕಪ್ಪುಬಣ್ಣವು ಸುಂದರವೇ ಎಂಬುದನ್ನು ಮನದಟ್ಟು ಮಾಡಿಸುವಂತಿರಬೇಕು.

* ಮಕ್ಕಳ ಸಾಹಿತ್ಯ ಬೆಳೆಯಲು ಪೂರಕ ವಾತಾವರಣ ಇದೆಯೇ?

ಮಕ್ಕಳ ಸಾಹಿತ್ಯಕ್ಕೆ ಸಿಗಬೇಕಿರುವ ಪ್ರಾಮುಖ್ಯ ಸಿಗುತ್ತಿಲ್ಲ. ಇದು ಈ ಕಾಲದ ವ್ಯಂಗ್ಯ. ಜಗತ್ತಿನ ಅತಿ ಮೌಲ್ಯಯುತ ಸಂಗತಿಗಳಲ್ಲಿ ಬಾಲ್ಯವೂ ಒಂದು ಎಂಬುದನ್ನು ಮರೆತಿದ್ದೇವೆ. ಈ ದೇಶದಲ್ಲಿ ಯುವಜನರೇ ಹೆಚ್ಚಿದ್ದಾರೆ. ಆದರೆ, ಮಕ್ಕಳ ಬೌದ್ಧಿಕತೆಯನ್ನು ಚುರುಕಾಗಿಡಲು ಅಗತ್ಯವಿರುವ ಪುಸ್ತಕಗಳ ಕೊರೆತೆಯಿದೆ. ಹಿರಿಯ ಸಾಹಿತ್ಯ, ಮಕ್ಕಳ ಸಾಹಿತ್ಯ ಎಂಬ ಭೇದ ಮಾಡುತ್ತಿದ್ದೇವೆ. ಮಕ್ಕಳಿಗಾಗಿ ಪುಸ್ತಕ ಬರೆಯುವ, ಪ್ರಕಟಿಸುವವರಿಗೆ ಸೂಕ್ತ ಪ್ರೋತ್ಸಾಹ ದೊರೆಯಬೇಕು. ಓದುವ ಸಂಸ್ಕೃತಿ ಹೆಚ್ಚಾಗುವಂತೆ ನೋಡಿಕೊಳ್ಳಬೇಕು.‍ ಅದರಲ್ಲಿಯೂ ಕನ್ನಡ, ಮಲಯಾಳಂ, ಹಿಂದಿ ಹೀಗೆ ಪ್ರಾದೇಶಿಕವಾಗಿರುವವ ಮಕ್ಕಳ ಸಾಹಿತ್ಯ ಜಗತ್ತು ಗಟ್ಟಿಗೊಳ್ಳಲು ಎಲ್ಲರೂ ಒಂದುಗೂಡಬೇಕಾದ ಸಮಯವಿದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT