ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಭೀತಿ: ನೆಲಕಚ್ಚಿದ ವಿಮಾನ ಪ್ರಯಾಣ ದರ

Last Updated 25 ಫೆಬ್ರುವರಿ 2020, 3:55 IST
ಅಕ್ಷರ ಗಾತ್ರ

ಚೀನಾದಲ್ಲಿ ಕಾಣಿಸಿಕೊಂಡ ‘ಕೋವಿಡ್‌ 19’ ವೈರಸ್‌ ಭೀತಿ ಆಗ್ನೇಯ ಏಷ್ಯಾದ ಪೆಸಿಫಿಕ್‌ ರಾಷ್ಟ್ರಗಳನ್ನು ಅಷ್ಟೇ ಅಲ್ಲದೇ ಭಾರತದ ಮಾರುಕಟ್ಟೆ, ಹಣಕಾಸು ವಹಿವಾಟು, ವಾಣಿಜ್ಯ ಕ್ಷೇತ್ರ ಸೇರಿದಂತೆ ಇತರ ಕ್ಷೇತ್ರಗಳ ಮೇಲೂ ದುಷ್ಪರಿಣಾಮ ಬೀರಿದೆ. ಭಾರತದಿಂದ ಚೀನಾ ಮತ್ತು ಪೆಸಿಫಿಕ್‌ ರಾಷ್ಟ್ರಗಳಿಗೆ ತೆರಳುವ ಭಾರತೀಯ ಪ್ರಯಾಣಿಕರ ಸಂಖ್ಯೆ ಏಕಾಏಕಿ ಇಳಿಮುಖವಾಗಿದ್ದು, ಪ್ರವಾಸೋದ್ಯಮ ಕ್ಷೇತ್ರ ತತ್ತರಿಸಿದೆ.

ಕೋವಿಡ್‌ 19 ವೈರಸ್‌ ವರದಿಯಾದ ನಂತರ ಬೆಂಗಳೂರಿನಿಂದ ಚೀನಾ, ಥೈಯ್ಲೆಂಡ್‌, ಸಿಂಗಾಪುರ, ಮಲೇಷ್ಯಾ, ಕಾಂಬೋಡಿಯಾಕ್ಕೆ ತೆರಳುವ ವಿಮಾನಗಳು ಖಾಲಿಯಾಗಿವೆ. ಪ್ರಯಾಣಿಕರಿಲ್ಲದ ಕಾರಣ ಈ ದೇಶಗಳಿಗೆ ಸಂಚರಿಸುವ ವಿಮಾನದ ಪ್ರಯಾಣ ದರಗಳು ಕೂಡ ಭಾರಿ ಕುಸಿತ ಕಂಡಿವೆ.

ನವೆಂಬರ್‌ನಲ್ಲಿ ಬೆಂಗಳೂರಿನಿಂದ ಬ್ಯಾಂಕಾಕ್‌ಗೆ ಹೋಗಿ ಬರಲು (ರೌಂಡ್‌ ಟ್ರಿಪ್‌) ₹45,600 ವಿಮಾನ ಪ್ರಯಾಣ ದರವಿತ್ತು. ಈಗ ಅದು ₹11 ಸಾವಿರಕ್ಕೆ ಇಳಿದಿದೆ. ಈಗ ಹೆಚ್ಚು ಕಡಿಮೆ ₹6 ಸಾವಿರ ನೀಡಿದರೆ ಸಾಕು, ಬೆಂಗಳೂರಿನಿಂದ ಬ್ಯಾಂಕಾಕ್‌ ಅಥವಾ ಸಿಂಗಾಪುರಗೆ ಹೋಗಬಹುದು!

ಫೆಬ್ರುವರಿ 25ರಿಂದ ಮಾರ್ಚ್‌ 3ರ ಅವಧಿಯಲ್ಲಿ ಶಾಂಘೈರೌಂಡ್‌ ಟ್ರಿಪ್‌ ಟಿಕೆಟ್‌ ದರ ಕುಸಿತ ಕಂಡಿದ್ದು, ಶ್ರೀಲಂಕನ್‌ ಏರ್‌ಲೈನ್ಸ್‌ನಲ್ಲಿ ಟಿಕೆಟ್‌ ಬೆಲೆ ₹27,444 ಮತ್ತು ಥಾಯ್‌ ಏರ್‌ಲೈನ್ಸ್‌ನಲ್ಲಿ ₹32,920.ವಾರಾಂತ್ಯದಲ್ಲಿ ₹7,233 ನೀಡಿದರೆ ಬೆಂಗಳೂರಿನಿಂದ ಮಲೇಷ್ಯಾ ರಾಜಧಾನಿ ಕ್ವಾಲಾಲಂಪುರಕ್ಕೆ ಪ್ರವಾಸ ಹೊರಡಬಹುದು. ಮಾರ್ಚ್‌ 2ರಂದಾದರೆ ಕೇವಲ ₹5,986 ನೀಡಿದರೆ ಸಾಕು!

ಕೋವಿಡ್‌ ವೈರಾಣು ಮೊದಲು ಪತ್ತೆಯಾದ ಚೀನಾದ ವುಹಾನ್‌ ಸೇರಿದಂತೆ ಅಕ್ಕಪಕ್ಕದ ಅನೇಕ ವಿಮಾನ ನಿಲ್ದಾಣಗಳು ತಾತ್ಕಾಲಿಕವಾಗಿ ಮುಚ್ಚಿವೆ. ಬೆಂಗಳೂರಿನಿಂದ ವುಹಾನ್‌ಗೆ ನೇರ ಹಾರಾಟ ನಡೆಸುತ್ತಿದ್ದ ಸಿಂಗಾಪುರ ಏರ್‌ಲೈನ್ಸ್‌ ವಿಮಾನದ ಟಿಕೆಟ್‌ ಬಿಕರಿಯಾಗುತ್ತಿಲ್ಲ.ವುಹಾನ್‌ ನಗರದ ಸಮೀಪದ ಕೆಲವು ವಿಮಾನ ನಿಲ್ದಾಣಗಳು ನಿರ್ಬಂಧಿತ ಸಂಚಾರಕ್ಕೆ ಅವಕಾಶ ಕಲ್ಪಿಸಿದರೂ ಅಲ್ಲಿಗೆ ತೆರಳುವ ಪ್ರಯಾಣಿಕರಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT