ಶುಕ್ರವಾರ, ಫೆಬ್ರವರಿ 21, 2020
29 °C

ಮತ್ತೆ ಬಂದ ‘ಮದುಮಗಳು’

ದಿಲಾವರ್‌ ರಾಮದುರ್ಗ Updated:

ಅಕ್ಷರ ಗಾತ್ರ : | |

ಕಲಾಗ್ರಾಮದಲ್ಲಿ ಮತ್ತೆ ‘ಮಲೆಗಳಲ್ಲಿ ಮದುಮಗಳು’! ಜ.20ರಿಂದ ಇದರ ಅಹೋರಾತ್ರಿ ಪ್ರದರ್ಶನ ಆರಂಭಗೊಳ್ಳುತ್ತಿದೆ. ರಾತ್ರಿ 8.30ರಿಂದ ಶುರುವಾಗುವ ಒಟ್ಟು 9 ಗಂಟೆಗಳ ಸುದೀರ್ಘ ಅವಧಿಯ ರಂಗಪ್ರಯೋಗವಿದು. ಈಗಾಗಲೇ 80ಕ್ಕೂ ಹೆಚ್ಚು ಪ್ರದರ್ಶನಗಳನ್ನು ಇದು ಕಂಡಿದೆ. ‘ಸೆಂಚೂರಿ’ ಸಾಧನೆಯತ್ತ ದಾಪುಗಾಲಿಡಲಿದೆ. ಕವಿ ಕುವೆಂಪು ಅವರ ಕಾದಂಬರಿಯೊಂದನ್ನು ಹೀಗೆ ರಂಗಮುಖೇನ ಮರುಓದಿಗೊಳಪಡಿಸುತ್ತಿರುವುದು ರಂಗ ಇತಿಹಾಸದಲ್ಲೇ ಅಪರೂಪದ ಪ್ರಯತ್ನ. 

ಜನಪ್ರಿಯ ಕಾದಂಬರಿ ಮೊದಲ ಬಾರಿಗೆ ಮೈಸೂರು ರಂಗಾಯಣದಲ್ಲಿ ಜೀವ ಪಡೆದಾಗ ರಂಗಭೂಮಿಯಲ್ಲೊಂದು ದೊಡ್ಡ ಸಂಚಲನ. ಈ ಹಿಂದೆ ದೇವನೂರು ಮಹದೇವ ಅವರ ‘ಕುಸುಮ ಬಾಲೆ’ಯಂಥ ಸಾಹಿತ್ಯ ಕೃತಿಯನ್ನು ರಂಗಕ್ಕೆ ತಂದು ಸೈ ಎನಿಸಿಕೊಂಡಿದ್ದ ಹೆಸರಾಂತ ರಂಗ ನಿರ್ದೇಶಕ ಸಿ. ಬಸವಲಿಂಗಯ್ಯ, ಕುವೆಂಪು ಅವರ ಮೇರು ಕೃತಿಯೊಂದನ್ನು ಕೈಗೆತ್ತಿಕೊಂಡ ಸುದ್ದಿ ಕುತೂಹಲ ಕೆರಳಿಸಿತ್ತು.

ಪ್ರೊಸಿನಿಯಂ ರಂಗಕ್ಕಿಂತ ಹೆಚ್ಚಿನದನ್ನು ಬಯಸುವ ಈ ಕಾದಂಬರಿಯ ವಸ್ತುವಿಗೆ ಬಯಲು ರಂಗದಲ್ಲಿ ಪೂರಕವಾದ ಮಲೆನಾಡಿನ ಪರಿಸರದ ಸೃಷ್ಟಿ ಒಂದು ಸವಾಲಾಗಿತ್ತು. ಅದಕ್ಕೆ ದ್ವಾರ್ಕಿ ಅವರಂಥ ರಂಗವಿನ್ಯಾಸಕಾರರು ಮತ್ತು ಸ್ವತಃ ವಿನ್ಯಾಸಕಾರರರೂ ಆದ ಬಸವಲಿಂಗಯ್ಯ ಪೂರಕ ರಂಗವಿನ್ಯಾಸ ರೂಪಿಸಿದ್ದರು. ಅದರ ನಡುವೆ ಕಣ್ಮುಂದೆ ಕಾದಂಬರಿಯ ಪಾತ್ರಗಳೆಲ್ಲ ಜೀವ ತಳೆದಂತೆ ಭಾಸವಾಗುವ ಹಾಗೆ ವಿಶೇಷ ರಂಗಾನುಭವವನ್ನು ಕಟ್ಟಿಕೊಡುವ ಯತ್ನವಾಗಿ ಇದು ಗಮನ ಸೆಳೆದಿತ್ತು. ಇಂಥ ರಂಗ ವಾತಾವರಣ ಪುನರ್‌ಸೃಷ್ಟಿಸುವ ಆಲೋಚನೆ ಬಸವಲಿಂಗಯ್ಯನವರಿಗೂ ಇರಲಿಲ್ಲವೇನೊ. ಅವರು ರಾಷ್ಟ್ರೀಯ ನಾಟಕ ಶಾಲೆಗೆ ನಿರ್ದೇಶಕರಾಗಿ ಬಂದ ಮೇಲೆ ಸಾಧ್ಯವಾಗಿದೆ.

ಕಲಾಗ್ರಾಮದ ಪರಿಸರ ‘ಮದುಮಗಳ’ನ್ನು ಮತ್ತೆ ಕರೆಯಿಸಿಕೊಂಡಿತೇನೊ.. ತಮ್ಮ ಗರಡಿಯಲ್ಲಿ ಪಳಗುತ್ತಿರುವ ಎನ್‌ಎಸ್‌ಡಿ ವಿದ್ಯಾರ್ಥಿಗಳು ಮತ್ತಿತರರ ಮೂಲಕ ಹೊಸ ಮದುಮಗಳನ್ನು ಅವರು ರಂಗಕ್ಕಿಳಿಸಿಯೇಬಿಟ್ಟರು. ರಂಗವಿನ್ಯಾಸ ಈ ಹಿಂದಿನ ಮೈಸೂರು ರಂಗಾಯಣದ ಪುನರಾವರ್ತನೆ ಎನಿಸದಂತೆ ನೋಡಿಕೊಳ್ಳಬೇಕಿತ್ತು. ಬೆಂಗಳೂರಿನ ರಂಗಾಸಕ್ತರನ್ನು ಇದು ಸೆಳೆಯಿತು ಕೂಡ. ಈ ಬಾರಿ ನಾಡಿನ ಹೆಸರಾಂತ ರಂಗವಿನ್ಯಾಸಗಾರ ಶಶಿಧರ ಅಡಪ ರಂಗವಿನ್ಯಾಸಕ್ಕೆ ಹೊಸ ರೂಪ ಕೊಟ್ಟಿದ್ದರು. ಈಗ ಹೊಸ ರಂಗಸ್ಪರ್ಶದೊಂದಿಗೆ ‘ಮಲೆಗಳಲ್ಲಿ ಮದುಮಗಳು’ ಪುನಃ ರಂಗಕ್ಕೇರುತ್ತಿದೆ. ಇದೀಗ ಅದೇ ಜಾಗದಲ್ಲಿ ರಂಗವಿನ್ಯಾಸಕ್ಕೆ ಅಡಪ ಮತ್ತೆ ಹೊಸ ಸ್ಪರ್ಶ ನೀಡಿದ್ದಾರೆ. ಅದಕ್ಕೆ ಅಪ್ಪಯ್ಯ, ಕಿರಣ್‌ ಸಿಜಿಕೆ ಅವರಂಥ ಕ್ರಿಯಾಶೀಲರ ಸಾಥ್‌ ದಕ್ಕಿದೆ. ನಂದಕಿಶೋರ್‌ (ಬೆಳಕು ವಿನ್ಯಾಸ), ಗಜಾನನ ನಾಯ್ಕ (ಸಂಗೀತ), ಪ್ರಮೋದ ಶಿಗ್ಗಾಂವ್‌ (ರಂಗ ಪರಿಕರ), ರಾಮಕೃಷ್ಣ ಬೆಳ್ತೂರ್‌ (ಪ್ರಸಾದನ) ಅವರು ನೇಪಥ್ಯದಲ್ಲಿ ನೆರವಾಗುತ್ತಿದ್ದಾರೆ. ಕವಿ, ನಾಟಕಕಾರ ಕೆ.ವೈ. ನಾರಾಯಣ ಸ್ವಾಮಿ ಸಾಹಿತ್ಯ ಮತ್ತು ರಂಗರೂಪಕ್ಕೆ ದೊಡ್ಡ ಸಾಥ್‌ ನೀಡಿದರೆ, ಖ್ಯಾತ ಸಿನಿ ಸಂಗೀತ ನಿರ್ದೇಶಕ ಹಂಸಲೇಖ ರಂಗಸಂಗೀತದ ಸ್ಪರ್ಶ ನೀಡಿದ್ದಾರೆ.

ವಿವಿಧ ಪ್ರದೇಶಗಳ ಹಲವಾರು ನಟ, ನಟಿಯರು, ಮೇಳದವರು, ಕಲಾಗ್ರಾಮದ ಅಂಗಳದ ತುಂಬ ನಾಲ್ಕು ಮುಖ್ಯ ಬಯಲು ರಂಗವೇದಿಕೆಗಳನ್ನು ರೂಪಿಸಲು ಹಗಲು ರಾತ್ರಿ ಶ್ರಮಿಸಿದ ರಂಗಕರ್ಮಿಗಳು ವಿಶೇಷ ರಂಗ ವಿನ್ಯಾಸ, ಬೆಳಕು ಮತ್ತು ಧ್ವನಿ ವ್ಯವಸ್ಥೆಯೊಂದಿಗೆ ಮದುಮಗಳ ಅದ್ಭುತ ಲೋಕವೊಂದರ ಅನಾವರಣಕ್ಕೆ ಸಜ್ಜಾಗಿದ್ದಾರೆ. ಪ್ರೇಕ್ಷಕರಿಗೆ ಇದೊಂದು ವಿಭಿನ್ನ ರಂಗಾನುಭವ ಕಟ್ಟಿಕೊಡಲಿದೆ. ‘ಈ ಹಿಂದೆ ಪ್ರಯೋಗವನ್ನು ಸವಿದವರು ಮತ್ತು ಇದರ ಬಗ್ಗೆ ಕುತೂಹಲ ಹೆಚ್ಚಿಸಿಕೊಂಡವರು, ಹೊಸಬರು ದೊಡ್ಡ ಪ್ರೇಕ್ಷಕ ವರ್ಗವಾಗಲಿದ್ದಾರೆ’ ಎನ್ನುವ ನಿರೀಕ್ಷೆ ಆಯೋಜಕರದು.

ಮತ್ತೆ ಯಾಕೆ ಮದುಮಗಳು? ಎನ್ನುವ ಬಹುದೊಡ್ಡ ಪ್ರಶ್ನೆಯೊಂದಿಗೆ ಕೆಣಕಿದರೆ ಬಸವಲಿಂಗಯ್ಯ ಹೇಳುವ ಉತ್ತರ ಇಷ್ಟೇ– ಕುವೆಂಪು ಅವರಂಥ ಮೇರು ಲೇಖಕರ ಕೃತಿಯೊಂದನ್ನು ಜನರಿಗೆ ರಂಗಮುಖೇನ ಮತ್ತೆ ಮತ್ತೆ ಓದಿಸುವುದು. ಇಂಥ ವಿಶೇಷ ರಂಗ ಸಾಹಸ, ಪ್ರಯೋಗಗಳ ಮುಖಾಂತರ ಬಹುದೊಡ್ಡ ಪ್ರೇಕ್ಷಕ ವರ್ಗವನ್ನು ಸೃಷ್ಟಿಸುವುದು, ರಂಗಕ್ಕೆ ಮತ್ತೆ ಮತ್ತೆ ಅವರನ್ನು ಸೆಳೆಯುವುದು. ಇದರ ಜೊತೆಗೆ ರಾಷ್ಟ್ರೀಯ ನಾಟಕ ಶಾಲೆಯ ವಿದ್ಯಾರ್ಥಿಗಳಿಗೂ ಈ ಮೂಲಕ ವಿಭಿನ್ನ ರಂಗಾನುಭವ, ಶಿಕ್ಷಣ ಕಟ್ಟಿಕೊಡುವುದು.

ನಾಟಕ: ಮಲೆಗಳಲ್ಲಿ ಮದುಮಗಳು, ನಿರ್ದೇಶನ: ಸಿ. ಬಸವಲಿಂಗಯ್ಯ. ಸ್ಥಳ: ಕಲಾಗ್ರಾಮ, ಮಲ್ಲತ್ತಹಳ್ಳಿ. ಸೋಮವಾರ ರಾತ್ರಿ 8.30. 

 

ಪ್ರೇಕ್ಷಕರಿಗೆ ಒಂದಷ್ಟು ಸಲಹೆಗಳು

ಮಲ್ಲತ್ತಹಳ್ಳಿಯಲ್ಲಿರುವ ಕಲಾಗ್ರಾಮದ ಆವರಣ ವಿಶಾಲವಾದ ಬಯಲು ಪ್ರದೇಶ. ಗಿಡ ಮರ, ತಗ್ಗು ದಿಣ್ಣೆಗಳಿಂದ ಕೂಡಿದ ಸುಂದರ ಪರಿಸರ. ನಾಲ್ಕು ವಿಶೇಷ ರಂಗವೇದಿಕೆಗಳ ಮೇಲೆ ‘ಮದುಮಗಳ’ನ್ನು ವೀಕ್ಷಿಸಲು ಆ್ಯಂಪಿ ಥಿಯೇಟರ್‌ ಮಾದರಿಯಲ್ಲಿ ಸ್ಥಳಾವಕಾಶವಿರುತ್ತದೆ. ಖುರ್ಚಿ ಮತ್ತಿತರ ಆಸನಗಳಿರುವುದಿಲ್ಲ. ನೆಲಕ್ಕೆ ಕೂತು ವೀಕ್ಷಿಸಬಹುದು. ಬಯಲು ಪ್ರದೇಶವಾದ್ದರಿಂದ ಚಳಿ ಹೆಚ್ಚು. ಅಹೋರಾತ್ರಿ ರಂಗವೀಕ್ಷಣೆಗೆ ತೊಂದರೆಯಾಗದಂತೆ ಸೂಕ್ತ ಬೆಚ್ಚಗಿನ ಉಡುಪುಗಳನ್ನು, ನೆಲಕ್ಕೆ ಹಾಸಿಕೊಳ್ಳಲು ಒಂದು ಪುಟ್ಟ ಬಟ್ಟೆ, ಹೊದ್ದುಕೊಳ್ಳಲು ಶಾಲು, ಕಿವಿ ಮುಚ್ಚುವ ಹಾಗೆ ಒಂದು ಟೋಪಿ, ಬೇಕೆನಿಸಿದರೆ ಕೈಗವಸು ಜೊತೆಯಲ್ಲಿ ತೆಗೆದುಕೊಂಡು ಹೋಗಿ. 

ಆಗಾಗ ನಾಟಕದ ವಸ್ತುವಿಗೆ ಪೂರಕವಾಗಿ ವೇದಿಕೆಗಳು ಶಿಫ್ಟ್‌ ಆಗುವುದರಿಂದ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರೇಕ್ಷಕರು ಸ್ಥಳಾಂತರಗೊಳ್ಳುತ್ತಾರೆ. ಅಲ್ಲಲ್ಲಿ ಬೆಳಕಿನ ವ್ಯವಸ್ಥೆ ಇರುತ್ತದೆಯಾದರೂ ತಗ್ಗು ದಿಣ್ಣೆಯಂಥ ಪ್ರದೇಶವಾದ್ದರಿಂದ ವಯಸ್ಸಾದವರಿಗೆ ನಡೆದಾಡಲು ಕಷ್ಟವಾಗಬಹುದು. ಕೊಂಚ ಎಚ್ಚರ ವಹಿಸಿ. ಪರಿಚಿತರ, ಸಹಪ್ರೇಕ್ಷಕರ ನೆರವು ಪಡೆದುಕೊಳ್ಳಿ. ಅಲ್ಲಲ್ಲಿ ಸಾರ್ವಜನಿಕ ಟಾಯ್ಲೆಟ್‌ ಕೂಡ ರೂಪಿಸಲಾಗಿದೆ.

ಟಿಕೆಟ್‌ಗಳು ಕೌಂಟರ್‌ನಲ್ಲೂ ಲಭ್ಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು