ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಕ್‌ ಪಾರ್ಕ್‌ ಎದುರು ಹೀಗೊಂದು ‘ಪಿಜಿ ಪುರ’

Last Updated 11 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಮಾನ್ಯತಾ ಟೆಕ್‌ ಪಾರ್ಕ್‌! ಒಂದು ಹೊಸ ಜಗತ್ತು. ಇದಕ್ಕೆ ಹೊಂದಿಕೊಂಡಂತೆ ಮತ್ತೂ ಒಂದು ಜಗತ್ತು ರೂಪುಗೊಂಡಿದೆ. ಅದೇ ಪಿಜಿ (ಪೇಯಿಂಗ್‌ ಗೆಸ್ಟ್‌) ದುನಿಯಾ. ಇವೆರಡೂ ನೆಲೆಗೊಂಡಿದ್ದು ನಗರದ ಮೋಸ್ಟ್‌ ಹ್ಯಾಪನಿಂಗ್‌ ಏರಿಯಾ ನಾಗವಾರದಲ್ಲಿ. ಇದು ಉತ್ತರ ಬೆಂಗಳೂರಿನ ಪ್ರಮುಖ ಪ್ರದೇಶ. ಒಂದೊಮ್ಮೆ ನಾಗವಾರ, ಪಕ್ಕದ ಹೆಣ್ಣೂರು, ವೀರಣ್ಣ ಪಾಳ್ಯ, ಸಾರಾಯ್‌ ಪಾಳ್ಯ ಕೆರೆ, ಗದ್ದೆಗಳಿಂದ ಕಂಗೊಳಿಸುತ್ತಿದ್ದ ಪ್ರದೇಶಗಳು. ಇದೀಗ ಟೆಕ್‌ ಪಾರ್ಕ್‌ ಆಗಿ ಜಗತ್ತನ್ನೇ ಸೆಳೆಯುತ್ತಿವೆ.

ದೂರದ ನಗರ, ಕುಗ್ರಾಮಗಳಿಂದ ದುಡಿಮೆಗೆ, ಅದರ ಜೊತೆಗೆ ಓದು ಮುಂದುವರಿಸಲು, ತಮ್ಮ ಕನಸುಗಳಿಗೆ ರೂಪು ಕೊಡಲು ಯುವಜನತೆ ಇಲ್ಲಿಗೆ ದಾಂಗುಡಿ ಇಡುತ್ತಿದೆ. ಕೆಲಸ ಸಿಕ್ಕವರು, ಕೆಲಸ ಅರಸಿ ನಗರಕ್ಕೆ ಬರುವವರು ತಂಗಲು ಪುಟ್ಟ ಆಶ್ರಯಕ್ಕೆ ಪರದಾಡುವುದು ಸಹಜವಲ್ಲವೇ?

ಬಾಡಿಗೆ ಕೋಣೆ, ಮನೆ ಇವೆಲ್ಲ ಈಗ ಔಟ್‌ ಆಫ್‌ ಫ್ಯಾಷನ್‌. ಒಬ್ಬರೇ ಇರುವುದಕ್ಕೆ ಅನಗತ್ಯದ ಬರ್ಡನ್‌. ಕೆಲಸದ ಆಯಾಸ ಕಳೆದುಕೊಳ್ಳಲು ಯಾ ರಿಲ್ಯಾಕ್ಸ್‌ ಆಗಲು, ಓದಲು ಅಥವಾ ಕೆಲಸ ಹುಡುಕಲು ಒಟ್ಟು ಒಂದು ಪ್ರೈವೇಸಿ ಎನ್ನುವಂಥ ಫ್ರೀ ಸ್ಪೇಸ್‌ ಬೇಕು ಅಷ್ಟೇ. ಇಂಥದಕ್ಕೆಲ್ಲ ನೆರವಾಗುವ ಸೂಕ್ತ ಆಶ್ರಯ ತಾಣ ‘ಪಿಜಿ’.

ನಗರದಲ್ಲಿ ಪಿಜಿ ಹುಡುಕುವುದು ಈಗ ಸುಲಭ. ನಾಗವಾರದ ಮಾನ್ಯತಾ ಟೆಕ್‌ ಪಾರ್ಕ್‌ ಸುತ್ತಮುತ್ತ ‘ಪಿಜಿ ಪುರ’ವೇ ಸೃಷ್ಟಿಯಾಗಿದೆ. ಹಳೆಯದೆಲ್ಲವನ್ನು ಕೆಡವಿ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಮಹಲುಗಳಂತೆ ಕಾಣುವಹಲವು ಅಂತಸ್ತಿನ ಕಟ್ಟಡಗಳಲ್ಲಿ ಬಹುತೇಕ ‘ಪಿಜಿ’ ವ್ಯವಸ್ಥೆ ಇದೆ. ಆಧುನಿಕ ಮೂಲಸೌಕರ್ಯ ಒಳಗೊಂಡಿವೆ.

ಎಲ್ಲ ರೀತಿಯ ಬಜೆಟ್‌ಗೆ ಹೊಂದುವಂಥ ಪಿಜಿ ವ್ಯವಸ್ಥೆ ಇಲ್ಲಿದೆ. ಒಬ್ಬರು, ಇಬ್ಬರು ಮತ್ತು ನಾಲ್ಕಾರು ಜನ ಸೇರಿ ಕೋಣೆ ಶೇರ್‌ ಮಾಡಿಕೊಳ್ಳಬಹುದು. ಅತ್ಯಂತ ಸುಂದರ ಬಹುಮಹಡಿ ಕಟ್ಟಡಗಳಲ್ಲಿ ಅಚ್ಚುಕಟ್ಟಾದ ರೂಂಗಳು, ಹೊಂದಿಕೊಂಡಂತೆ ಶೇರಿಂಗ್‌ ಬಾತ್‌ ರೂಂ, ಟಾಯ್ಲೆಟ್‌, ಒಂದೆಡೆ ಸೇರಿ ಟಿವಿ ವೀಕ್ಷಣೆ, ಹರಟೆಗೆ ಹಜಾರ. ನೆರವಿಗೆ ಆಯಾಳಂಥ ಸಹಾಯಕಿಯರು. ಎಲ್ಲದರ ಮೇಲೆ ನಿಗಾ ವಹಿಸಲು ಹಾಸ್ಟೆಲ್‌ ವಾರ್ಡನ್‌ ತರಹದ ಮ್ಯಾನೇಜರ್‌.. ಹೀಗೆ ಎಲ್ಲವೂ ಪ್ರೊಫೇಷನಲ್‌.

‘ಬೆಳಿಗ್ಗೆ ತಿಂಡಿ, ಕಾಫಿ ಕೊಡ್ತಾರೆ. ಕೆಲಸಕ್ಕೆ ಹೊರಟು ನಿಂತಾಗ ಊಟದ ಡಬ್ಬಿ ರೆಡಿ. ಸಂಜೆ ರೂಂಗೆ ಮರಳಿದರೆ ರಿಲ್ಯಾಕ್ಸ್‌ ಆಗಲು ಹಜಾರದಲ್ಲಿ ಟಿವಿ ನೋಡಬಹುದು. ರಾತ್ರಿ ಡಿನ್ನರ್‌.. ಇನ್ನೇನು ಬೇಕು?’ ಎನ್ನುವುದು ಆಂಧ್ರದ ಆವಂತಿಕಾಳ ನಿರಾಳದ ಉತ್ತರ. ಬಹುಶಃ ಆವಂತಿಕಾಳ ಈ ಮಾತು ಇಲ್ಲಿನ ಪಿಜಿ ಹುಡುಗಿಯರು ಎಷ್ಟು ಸೇಫ್‌ ಮತ್ತು ಸೆಕ್ಯುರ್‌ ಎನ್ನುವುದನ್ನು ಸೂಚಿಸುತ್ತದೆ.

ಒಂದು ಕಾಲಕ್ಕೆ ಬೆಂಗಳೂರು ಶಹರಿನಿಂದ ದೂರದ ನಾಗವಾರ ಹೊಲ, ಗದ್ದೆ, ಕೆರೆ, ಕಟ್ಟೆಗಳಿಂದ ತುಂಬಿದ ಸಮೃದ್ಧ ಹಳ್ಳಿ. ಪಟೇಲರಾದಿಯಾಗಿ, ದಲಿತರು ಎಲ್ಲ ವರ್ಗದ ಬಡವ, ಶ್ರಮಿಕ, ಕೆಲವೇ ಶ್ರೀಮಂತ ಕುಟುಂಬಗಳ ವಾಸದ ಕೃಷಿ ಜಗತ್ತು. ಆದರೆ, ಇದೀಗ ಇದರ ಸ್ವರೂಪವೇ ಬದಲಾಗಿದೆ. ಕೆಲಸಕ್ಕೆಂದು ಮಾನ್ಯತಾ ಟೆಕ್‌ ಪಾರ್ಕ್‌ಗೆ ದಾಂಗುಡಿ ಇಡುವವರ ಸಂಖ್ಯೆ ಹೆಚ್ಚಿದ್ದರಿಂದ ಆಶ್ರಯ ನೀಡುವ ಪಿಜಿ ವ್ಯವಸ್ಥೆಗೆ ಭಾರಿ ಡಿಮ್ಯಾಂಡ್‌ ಬಂದ ಹಿನ್ನೆಲೆಯಲ್ಲಿ ಇಲ್ಲಿನ ಬಹುತೇಕ ಕಟ್ಟಡಗಳು ಇದೀಗ ‘ಪಿಜಿ’ ಆಗಿ ಮಾರ್ಪಾಡಾಗಿವೆ. ಇದೊಂದು ಅಕ್ಷರಶಃ ‘ಪಿಜಿ ಪುರ’.

‘ಪಿಜಿ’ ಅತಿಥಿ ದೇವೋಭವದ ಮನೋಧರ್ಮದ್ದಲ್ಲ. ಇದೀಗ ಸ್ವತಂತ್ರ ಉದ್ಯಮದ ಸ್ವರೂಪ ಪಡೆದುಕೊಂಡಿದೆ. ಒಂದು ಜಾಗ. ಕಟ್ಟಡ ಮತ್ತು ಒಂದಷ್ಟು ಮೂಲ ಸೌಕರ್ಯ. ಇದಿಷ್ಟನ್ನು ಒಂದೆಡೆ ಒದಗಿಸುವ ವ್ಯವಸ್ಥೆ ರೂಪಿಸಿದರೆ ಸಾಕು. ವರ್ಷಗಟ್ಟಲೆ ಇದನ್ನು ಒಂದು ಉದ್ಯಮದಂತೆ ಮುನ್ನಡೆಸಿಕೊಂಡು ಹೋಗಬಹುದು. ಇದು ಬಾಡಿಗೆ ಮನೆಯೂ ಅಲ್ಲದ ಮತ್ತು ಲಾಡ್ಜ್‌ ಅಂಡ್‌ ಬೋರ್ಡಿಂಗ್‌ ಕೂಡ ಅಲ್ಲದ ಒಂದು ಅತ್ಯಂತ ಅನುಕೂಲಕರ ಉದ್ಯಮ. ಈಗ ಉಚ್ಛ್ರಾಯ ಸ್ಥಿತಿಯಲ್ಲಿರುವ ಐಟಿ/ಬಿಟಿ ಉದ್ಯಮ ನಂಬಿಕೊಂಡು ಉದ್ಯೋಗಕ್ಕೆಂದು ನಗರಕ್ಕೆ ಬರುವವರು ಇರುವಷ್ಟು ದಿನ ‘ಪಿಜಿ’ ಉದ್ಯಮಕ್ಕೂ ಭಂಗವಿಲ್ಲ.

ಬಜೆಟ್‌ಗೆ ಆದ್ಯತೆ

ಕಾಲೇಜಿಗೆ ಸಮೀಪದಲ್ಲಿರಬೇಕು. ಆಫೀಸ್‌ಗೆ ಬೇಗನೆ ತಲುಪುವಂತಿರಬೇಕು. ಚಾಟ್‌ಸೆಂಟರ್‌ ಹತ್ತಿರ ಇರಬೇಕು. ಪಠ್ಯ ಸಂಬಂಧಿ ಸಲಕರಣೆಯ ಶಾಪ್‌ಗಳು ಸಮೀಪವಿರಬೇಕು. ಹೀಗೆ ‘ಪಿಜಿ‘ ಜಗತ್ತಿಗೆ ಸೇರುವವರದು ಹಲವು ಬೇಡಿಕೆಗಳಿವೆ. ಇದಕ್ಕೆಲ್ಲ ಮುಖ್ಯ ಕಾರಣ ಬಜೆಟ್‌.

ಪರ ಊರಿನಿಂದ ಬಂದವರು ಪಾಕೆಟ್‌ ಮನಿ ಉಳಿಸಿಕೊಳ್ಳಲು ಹೆಣಗುವುದು ಸಾಮಾನ್ಯ. ಎಲ್ಲವೂ ಹತ್ತಿರದಲ್ಲಿದ್ದರೆ ಬಸ್‌, ಮೆಟ್ರೊ, ಆಟೋ ಖರ್ಚುಗಳು ಉಳಿಯುತ್ತವಲ್ಲ ಎನ್ನುವುದು ಹಲವರ ಲೆಕ್ಕಾಚಾರ.

ಎಷ್ಟೇ ಹಣವಂತರಿದ್ದರೂ ಒಂದು ಬಾರಿ ಇವುಗಳತ್ತ ಗಮನ ಹರಿಸುತ್ತಾರೆ. ಮೂಲ ಅಗತ್ಯ ಸೌಕರ್ಯಗಳು ಲಭ್ಯವಾಗಬಲ್ಲ ಪಿಜಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಮಾನ್ಯತಾ ಟೆಕ್‌ಪಾರ್ಕ್‌ ಟೆಕ್ಕಿಗಳ ಅಡ್ಡಾ. ವಾಸಯೋಗ್ಯ ವಾತಾವರಣದಿಂದಾಗಿ ನಾಗವಾರ ಇದೀಗ ಪಿಜಿ ಪಾರ್ಕ್‌.

ಅಕ್ಷರಶಃ ‘ಪಿಜಿ ನಗರ’

ನಾಗವಾರ ಅಕ್ಷರಶಃ ‘ಪಿಜಿ ನಗರ’ವಾಗಿ ಬದಲಾಗಿದೆ. ಇಲ್ಲಿ ಎಲ್ಲಿ ನೋಡಿದರತ್ತ ಪಿಜಿ ಫಾರ್‌ ಜೇಂಟ್ಸ್‌, ಪಿಜಿ ಫಾರ್‌ ಲೇಡಿಸ್‌ ಎನ್ನುವ ಬೋರ್ಡ್‌ಗಳೇ ರಾರಾಜಿಸುತ್ತಿವೆ.ಮಾನ್ಯತಾ ಟೆಕ್‌ಪಾರ್ಕ್‌ ನಿರ್ಮಾಣವಾಗುತ್ತಿದ್ದಂತೆ ಈ ಪ್ರದೇಶದ ಸುತ್ತಲಿನ ಜನವಸತಿ, ಹಳೆಯ ಹೊಲಗಳ ಪ್ರದೇಶ ಎಲ್ಲದರಲ್ಲಿ ಐದರಿಂದ ಹತ್ತಾರು ಅಂತಸ್ತಿನ ದೊಡ್ಡ ಕಟ್ಟಡಗಳು ತಲೆ ಎತ್ತಿದವು. ಇವೆಲ್ಲವೂ ‘ಪಿಜಿ’ ರೂಪಿಸುವ ಯೋಜನೆ ಇಟ್ಟುಕೊಂಡೇ ನಿರ್ಮಿಸಿದ ಕಟ್ಟಡಗಳು.

ಇಂಥ ಕಟ್ಟಡಗಳ ಪ್ರತಿಯೊಂದು ರೂಮ್‌ಗಳು ಉತ್ತಮ ಸ್ನಾನಗ್ರಹ, ಶೌಚಾಲಯ, ಬೆಡ್‌, ಟಿವಿ, ಇಂಟರ್‌ನೆಟ್‌ ಸೌಲಭ್ಯದಂಥ ಸೌಕರ್ಯಗಳನ್ನು ಹೊಂದಿವೆ. ಈ ಏರಿಯಾದಲ್ಲಿ ಎಲ್ಲಿ ನೋಡಿದರೂ ಚಾಟ್‌ಸೆಂಟರ್‌, ಜೂಸ್‌ ಸೆಂಟರ್‌, ದರ್ಶಿನಿ, ಮೆಸ್‌ಗಳು, ತಳ್ಳುವ ಗಾಡಿಯಿಂದ ಹೈಟೆಕ್‌ ಹೋಟೆಲ್‌ವರೆಗೂ ಕಾಣಸಿಗುತ್ತವೆ. ಈ ಎಲ್ಲ ಹೋಟೆಲ್‌, ಶಾಪ್‌ಗಳು ‘ಪಿಜಿ’ಗಳನ್ನೇ ನೆಚ್ಚಿಕೊಂಡಿವೆ. ಸಂಜೆಯಾದರೆ ಸಾಕು ಈ ‘ಪಿಜಿ’ಗಳು ಅಂಗಡಿಗಳಿಗೆ ಮುಗಿಬೀಳುತ್ತಾರೆ.ಇಲ್ಲಿ ಎಲ್ಲಿ ನೋಡಿದರೂ ಹುಡುಗರು, ಹುಡುಗಿಯರೇ ಕಾಣುತ್ತಾರೆ.

ದೇಶದ ಪ್ರತಿಯೊಂದು ರಾಜ್ಯದ ಯುವಸಮೂಹವನ್ನು ಇಲ್ಲಿ ಕಾಣಬಹುದು. ಆಂಧ್ರದಿಂದ ಹಿಡಿದು, ಅಸ್ಸಾಂ, ಬಿಹಾರ್, ಗೋವಾ, ಗುಜರಾತ್, ಪಂಜಾಬ್, ರಾಜಸ್ತಾನ ಜನರಿದ್ದಾರೆ. ಹಲವು ಪಿಜಿಗಳು ಉತ್ತರ ಭಾರತ ಶೈಲಿಯ ಊಟವನ್ನೇ ಹೆಚ್ಚಾಗಿ ನೀಡುತ್ತಿವೆ. ಇದರಿಂದ ದಕ್ಷಿಣದ ಆಹಾರ ಅಭ್ಯಾಸಿಗಳಿಗೆ ಕೊಂಚ ಕಷ್ಟ. ಇದನ್ನು ಹೊರತುಪಡಿಸಿದರೆ ಉಳಿದಂತೆ ಉತ್ತಮ ಮೂಲ ಸೌಕರ್ಯಗಳುಳ್ಳ ನಾಗವಾರದ ಈ ‘ಪಿಜಿ ಪುರ’ಕ್ಕೆ ವಿಶೇಷ ಬೇಡಿಕೆ.

ಪೂರಕ ಮಾಹಿತಿ: ಐಶ್ವರ್ಯ ಚಿಮ್ಮಲಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT