ಬುಧವಾರ, ಡಿಸೆಂಬರ್ 11, 2019
20 °C

ರವೀಂದ್ರ ಕಲಾಕ್ಷೇತ್ರದಲ್ಲಿ ಡಿ.2ರಿಂದ 20ರವರೆಗೆ ‘ನಾಟಕ ಬೆಂಗ್ಳೂರು’

Published:
Updated:

‘ನಾಟಕ ಬೆಂಗ್ಳೂರು’ 12ನೇ ವರ್ಷದ ಸಂಭ್ರಮಾಚರಣೆ ರವೀಂದ್ರ ಕಲಾಕ್ಷೇತ್ರದಲ್ಲಿ ಡಿ.2ರಿಂದ ಆರಂಭಗೊಳ್ಳಲಿದೆ. ಈ ಉತ್ಸವ ಮಧ್ಯದಲ್ಲಿ ಒಂದೆರಡು ಬ್ರೇಕ್‌ ಇಟ್ಟುಕೊಂಡು ಡಿ.20ರವರೆಗೆ ಒಟ್ಟು 13ದಿನಗಳ ಕಾಲ ನಡೆಯಲಿದೆ. ನಗರದ ರಂಗತಂಡಗಳನ್ನು ‘ಸಹಕಾರ ತತ್ವ’ದಡಿ ಒಂದೆಡೆ ಸೇರಿಸುವ ಪ್ರಯತ್ನವೇ ಈ ರಂಗೋತ್ಸವ.

ನಗರದ ಹೆಮ್ಮೆಯ ರವೀಂದ್ರ ಕಲಾಕ್ಷೇತ್ರದಲ್ಲಿ ವಿಶೇಷವಾಗಿ ರಂಗಾಸಕ್ತರು ಮುಂಚಿನ ಹಾಗೆ ಸೇರುತ್ತಿಲ್ಲ ಎನ್ನುವುದು ವಾಸ್ತವ. ಮುಖ್ಯವಾಗಿ ಹವ್ಯಾಸಿ ರಂಗಭೂಮಿಗೆ ಇದೊಂದು ರೀತಿಯ ಸವಾಲು. 70, 80 ಮತ್ತು 90ರ ದಶಕದಲ್ಲಿ ಇದ್ದ ರಂಗ ಖದರು ಈಗ ಇಲ್ಲ ಎನ್ನುವ ಮಾತುಗಳು ರಂಗಾಸಕ್ತರಲ್ಲಿ ಚರ್ಚೆಯಾಗುತ್ತಲೇ ಇರುತ್ತವೆ. ಇದಕ್ಕೊಂದು ಪರಿಹಾರ ಕಂಡುಕೊಳ್ಳುವ ಹಲವು ಯತ್ನಗಳ ಪೈಕಿ ‘ನಾಟಕ ಬೆಂಗ್ಳೂರು’ ಒಂದು ಮುಖ್ಯವಾದ ಪ್ರಯತ್ನ. ಇದರಲ್ಲಿ ಸಮಾನಮನಸ್ಕ ಸುಮಾರು 35ಕ್ಕೂ ಹೆಚ್ಚಿನ ರಂಗತಂಡಗಳ ಪಾಲ್ಗೊಳ್ಳುತ್ತವೆ.

‘ಕಲಾಕ್ಷೇತ್ರದ ರಂಗಪ್ರಯೋಗಗಳಲ್ಲಿ ಹೊಸತನ್ನು ಕಟ್ಟಿ ಕೊಡುವ ಪ್ರಯತ್ನಗಳು ನಡೆದರೆ ಪ್ರೇಕ್ಷಕರು ಮತ್ತೆ ರಂಗದತ್ತ ಬರಬಹುದು ಎನ್ನುವ ನಿರೀಕ್ಷೆಯೊಂದಿಗೆ ಹೊಸ ನಾಟಕಗಳಿಗೆ ವೇದಿಕೆ ರೂಪಿಸುವ ಪ್ರಯತ್ನದ ಭಾಗವಾಗಿ ‘ನಾಟಕ ಬೆಂಗ್ಳೂರು’ ಪರಿಕಲ್ಪನೆ ಮೂಡಿತು.ಎನ್ನುತ್ತಾರೆ ಸಂಘಟಕರಲ್ಲೊಬ್ಬರಾದ ಹಿರಿಯ ರಂಗಕರ್ಮಿ ಶಶಿಧರ್‌ ಭಾರಿಘಾಟ್‌.

‘2013ರಲ್ಲಿ ಕಲಾಕ್ಷೇತ್ರಕ್ಕೆ 50 ವರ್ಷ ತುಂಬಿದಾಗ 50 ದಿನಗಳ ಕಾಲ ವಿವಿಧ ರಂಗಚಟುವಟಿಕೆಗಳು ನಡೆದವು. ಆಗ ರೂಪುಗೊಂಡ ರಂಗಕಾವು ಯಾಕೊ ಕ್ರಮೇಣ ತಣ್ಣಗಾಯಿತು. ಅದಕ್ಕೆ ಹಲವು ಕಾರಣಗಳಿರಬಹುದು. ಆದರೆ ಮತ್ತೆ ಒಂದು ಆಶಾವಾದದೊಂದಿಗೆ ‘ನಾಟಕ ಬೆಂಗ್ಳೂರು’ ತನ್ನ ಪ್ರಯತ್ನ ಮುಂದುವರಿಸಿದೆ. ಈ ಸಲದ ಉತ್ಸವದಲ್ಲಿ ‘ಕನ್ನಗತ್ತಿ’ (ರಚನೆ– ಲಕ್ಷ್ಮೀಪತಿ ಕೋಲಾರ, ನಿರ್ದೇಶನ– ಸಿ. ಬಸವಲಿಂಗಯ್ಯ) ಮತ್ತು ಸಮುದಾಯ ತಂಡದ ‘ಶಸ್ತ್ರ ಸಂತಾನ’ (ರಚನೆ/ರಂಗರೂಪ/ಅನುವಾದ ರಾಮೇಶ್ವರ ಪ್ರೇಮ್‌/ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ, ನಿರ್ದೇಶನ– ಶ್ರೀಪಾದ ಭಟ್‌)  ನಾಟಕಗಳ ಹೊರತುಪಡಿಸಿ ಉಳಿದ ಬಹುತೇಕ ನಾಟಕಗಳು ಈ ಉತ್ಸವಕ್ಕೆಂದೇ ಸಿದ್ಧವಾಗಿರುವಂಥವು’ ಎಂದು ಅವರು ವಿವರಿಸಿದರು. 

‘ರಾಷ್ಟ್ರೀಯ ನಾಟಕ ಶಾಲೆಯಲ್ಲಿ (ಎನ್‌ಎಸ್‌ಡಿ) ಅಧ್ಯಯನ ಮಾಡಿದ ಸವಿತಾ ಬಿ, ರಂಗಸಿರಿ ತಂಡದ ಅನುಪ್‌ ಕುಮಾರ್‌, ಹೇಮಂತ್‌ ಭಾರದ್ವಾಜ್‌ ಮತ್ತಿತರ ಯುವಕರು ಮೊದಲ ಸಲ ನಿರ್ದೇಶನಕ್ಕಿಳಿಯುತ್ತಿದ್ದಾರೆ. ದ್ರಾಕ್ಷಾಯಿನಿ ಭಟ್‌, ರಾಜ್‌ಗುರು ಹೊಸಕೋಟೆಯಂಥ ಯುವ ನಿರ್ದೇಶಕರು ಈಗಾಗಲೇ ಹೆಸರು ಮಾಡಿದ್ದಾರೆ. ಅವರು ಕೂಡ ಉತ್ಸವಕ್ಕೆಂದೇ ಹೊಸ ಪ್ರಯೋಗಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ’ ಎಂದರು.

ಪ್ರತಿವರ್ಷ ಹೆಚ್ಚೂ ಕಮ್ಮಿ 17 ಹೊಸ ಪ್ರೊಡಕ್ಷನ್‌ಗಳು ರೂಪುಗೊಳ್ಳುತ್ತವೆ. ‘ನಾಟಕ ಬೆಂಗ್ಳೂರು’ ಈವರೆಗೆ 250ರಿಂದ 300 ನಾಟಕಗಳ ಪ್ರದರ್ಶನಗಳಿಗೆ ವೇದಿಕೆಯಾಗಿದೆ. ಆದರೆ, ‘ಹಾಗೆ ಹುಟ್ಟಿಕೊಳ್ಳುವ ರಂಗಕಾವನ್ನು ಹೆಚ್ಚು ಕಾಲ ಉಳಿಸಿಕೊಳ್ಳಲಾಗುತ್ತಿಲ್ಲ’ ಎನ್ನುವುದು ಸಂಘಟಕರ ಕೊರಗು. ಪ್ರೇಕ್ಷಕರನ್ನು ಸೆಳೆಯುವ ಮತ್ತು ರಂಗಚಟುವಟಿಕೆಗೆ ಸ್ಫೂರ್ತಿ ತುಂಬುವ ಇಂಥ ಯತ್ನಕ್ಕೆ ಮುಂಚೆ ಅ.ನ ರಮೇಶ್‌, ಆರ್‌,ನಾಗೇಶ್‌, ತೋನಂ, ಕೃಷ್ಣ ರಾಯಚೂರು, ಪ್ರಕಾಶ್‌ ಶೆಟ್ಟಿ, ಜಗದೀಶ ಜಾಲ ಅವರಂಥ ಹಲವಾರು ಚೇತನಗಳ ಸಾಥ್‌ ಇತ್ತು. ಈಗ ಕೆ.ವಿ. ನಾಗರಾಜಮೂರ್ತಿ, ಚಡ್ಡಿ ನಾಗೇಶ್‌, ಶ್ರೀನಿವಾಸ ಜಿ ಕಪ್ಪಣ್ಣ, ಶಶಿಧರ ಅಡಪ, ಬಿ.ವಿ. ರಾಜಾರಾಂ, ಶಶಿಧರ ಭಾರಿಘಾಟ್‌, ವಿಠಲ್‌ ಅಪ್ಪಯ್ಯ, ಜಿಪಿಒ ಚಂದ್ರು ಮತ್ತಿತರರು ಉತ್ಸವವನ್ನು ಮುಂದುವರಿಸಿಕೊಂಡು ಬಂದಿದ್ದಾರೆ. 

‘ಟಿಕೆಟ್‌ ಇಟ್ಟರೆ ಪ್ರೇಕ್ಷಕರು ಕಮ್ಮಿ. ಪಾಸ್‌, ಉಚಿತ ಪ್ರವೇಶ ಎಂದಾಗ ಜನ ಸೇರುತ್ತಾರೆ. ಟಿಕೆಟ್‌ ಇಟ್ಟು ಪ್ರಯೋಗ ಮಾಡುವ ಪ್ರಯತ್ನಗಳು ನಡೆಯಬೇಕು. ಕಲಾಕ್ಷೇತ್ರದ ಸಮಸ್ಯೆ ಎಂದರೆ, ಶನಿವಾರ ಮತ್ತು ಭಾನುವಾರ ನಮಗೆ ವೇದಿಕೆ ಸಿಗಲ್ಲ. ಪೌರಾಣಿಕ ನಾಟಕಗಳು ಮತ್ತಿತರ ಯಾವುದೋ ಕಾರ್ಯಕ್ರಮಕ್ಕೆ ಬುಕ್‌ ಆಗಿರುವುದೇ ಹೆಚ್ಚು. ಇಂಥ ಮಿತಿಗಳ ನಡುವೆಯೂ ಹವ್ಯಾಸಿ ರಂಗಭೂಮಿಯ ಚಟುವಟಿಕೆಗಳನ್ನು ಕಲಾಕ್ಷೇತ್ರದಲ್ಲಿ ಸಂಘಟಿಸುವುದು ಒಂದು ರೀತಿಯ ಸವಾಲಿನ ಕೆಲಸ. ಕಲಾಕ್ಷೇತ್ರದಲ್ಲಿ 70 ಮತ್ತು 80ರ ದಶಕದ ರಂಗ ವಾತಾವರಣ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಅದು ಅಷ್ಟು ಸುಲಭಕ್ಕೆ ಸಾಧ್ಯವಾಗುತ್ತಿಲ್ಲ. ಹಳೆಯ ರಂಗತಂಡಗಳಿಗೆ ಕಲಾಕ್ಷೇತ್ರದತ್ತ ಪ್ರೇಕ್ಷಕರನ್ನು ಸೆಳೆಯಲು ಸಾಧ್ಯವಾಗುತ್ತಿಲ್ಲ. ಹೊಸ ತಂಡಗಳ ಪ್ರಯತ್ನ ಪರವಾಗಿಲ್ಲ. ಹಳೆಯ ತಂಡಗಳಿಗೆ ಪ್ರೇಕ್ಷಕ ವರ್ಗ ಕಮ್ಮಿಯಾಗುತ್ತಿದೆ. ಯುವಜನರು ಹೆಚ್ಚು ಕ್ರಿಯಾಶೀಲ ಆಗಿದ್ದರಿಂದ ಅವರಿಂದಲೇ ಹೊಸ ಪ್ರೇಕ್ಷಕ ವರ್ಗ ಸೃಷ್ಟಿ ಸಾಧ್ಯವಾಗುತ್ತಿದೆ’ ಎನ್ನುತ್ತಾರೆ ಭಾರಿಘಾಟ್‌.


‘ಕನ್ನಗತ್ತಿ’ ನಾಟಕದ ದೃಶ್ಯ

‘ವೈಶಂಪಾಯನ ತೀರ’, ‘ವಿದಿಷೆಯ ವಿದೂಷಕರು’, ಸುಮಾರು 80 ಕಲಾವಿದರನ್ನು ಸೇರಿಸಿ ರಾಜಗುರು ಹೊಸಕೋಟೆ ಮಾಡುತ್ತಿರುವ ಸಾಹಸ ‘ಕಡಲ್ಗಳ್ಳರು’ ನಾಟಕ,  ಬಿ.ಸುರೇಶ್‌ ನಿರ್ದೆಶನದ ‘ಮಹಮ್ಮದ್‌ ಗವಾನ್‌’, ಬಿ.ವಿ. ರಾಜಾರಾಂ ನಿರ್ದೇಶನದ ‘ಮೋಹನದಾಸ ಕನ್ನಡದ ನೆಲದಲ್ಲಿ’ (ರಚನೆ–ಶ್ರೀಪತಿ ಮಂಜನಬೈಲು) ಮತ್ತಿತರ ಪ್ರಯೋಗಾತ್ಮಕ ನಾಟಕಗಳ ಬಗ್ಗೆ ಈ ಉತ್ಸವದಲ್ಲಿ ತುಂಬ ನಿರೀಕ್ಷೆಗಳಿವೆ.

*
‘ನಾಟಕ ಬೆಂಗ್ಳೂರು’ ಪರಿಕಲ್ಪನೆ 2008ರಲ್ಲಿ ಚಿಗುರೊಡೆದದ್ದು. ನಗರದ ಎಲ್ಲ ರಂಗತಂಡಗಳು ಸೇರಿ ಸಹಕಾರ ಚಳವಳಿ ಮಾದರಿಯಲ್ಲಿ ಇದನ್ನು ಸಂಘಟಿಸುವುದು ನಮ್ಮ ಗುರಿ. ವಿವಿಧ ರಂಗತಂಡಗಳು ಕಲಾಕ್ಷೇತ್ರ ಬುಕ್‌ ಮಾಡಿಕೊಳ್ಳುತ್ತವೆ. ನಾವು ಎಲ್ಲ ತಂಡಗಳಿವೆ ಅವರಿಗೆ ಅನುಕೂಲವಾಗುವ ದಿನಾಂಕವನ್ನು ನಿಗದಿ ಮಾಡುತ್ತೇವೆ. ಹೊಸ ನಾಟಕಗಳಿಗೆ ಹೀಗೊಂದು ವೇದಿಕೆ ಸೃಷ್ಟಿಸುವ ಪ್ರಯತ್ನ ನಮ್ಮದು. ಪ್ರತಿ ಉತ್ಸವದಲ್ಲಿ ಬಹುತೇಕ ಹೊಸ ನಾಟಕಗಳೇ ಪ್ರದರ್ಶನಗೊಳ್ಳುತ್ತಿವೆ. ಕೆ.ವೈ ನಾರಾಯಣ ಸ್ವಾಮಿ ಅವರ ‘ಕಳವು’ ನಾಟಕ ಮೊದಲು ಪ್ರದರ್ಶನಗೊಂಡಿದ್ದು ಇದೇ ವೇದಿಕೆಯಿಂದ. ಹೀಗೆ ಸುಮಾರು 35 ಹೊಸ ನಾಟಕಗಳು ರೂಪುಗೊಂಡಿದ್ದಕ್ಕೆ ಈ ವೇದಿಕೆ ಸಾಕ್ಷಿಯಾಗಿದೆ. ಇದೊಂದು ಹೆಮ್ಮೆ.
–ಚಡ್ಡಿ ನಾಗೇಶ್‌, ಹಿರಿಯ ರಂಗಕರ್ಮಿ

*
ಈ ಸಲದ ಉತ್ಸವದಲ್ಲಿ ಶೇ 90ರಷ್ಟು ಹೊಸ ಪ್ರೊಡಕ್ಷನ್‌ಗಳಿವೆ. ಕನ್ನಡದ ಹಿರಿಯ ನಾಟಕಕಾರ ಡಾ. ಚಂದ್ರಶೇಖರ ಕಂಬಾರ ರಚಿಸಿದ ಹೊಸ ನಾಟಕ ‘ಮಹಮ್ಮದ್‌ ಗವಾನ್‌’ (ನಿರ್ದೇಶನ– ಬಿ.ಸುರೇಶ್‌) ‘ನಾಟಕ ಬೆಂಗ್ಳೂರು’ ಉತ್ಸವದಲ್ಲಿ ರಂಗಕ್ಕೇರುತ್ತಿದೆ. ಇದರ ಜೊತೆಗೆ ಇನ್ನೂ ಅನೇಕ ಹೊಸ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ಹಲವಾರು ಯುವ ರಂಗಕರ್ಮಿಗಳು ಈ ಸಲದ ಹೊಸ ಪ್ರೊಡಕ್ಷನ್‌ಗಳಲ್ಲಿ ಪಾಲ್ಗೊಂಡಿದ್ದಾರೆ. ಇದು ಈ ಸಲದ ವಿಶೇಷ. ಮುಂದಿನ ವರ್ಷ ಸಂಘಟನೆಯಿಂದಲೇ ರಂಗತಂಡಗಳಿಗೆ ವಿಷಯಗಳನ್ನು ಕೊಟ್ಟು ಹೊಸ ನಾಟಕಗಳನ್ನು ರೂಪಿಸುವುದಕ್ಕೆ ಪ್ರಯತ್ನಿಸುವ ಯೋಜನೆ ಇದೆ. ಹಿರಿಯ ರಂಗನಿರ್ದೇಶಕರಿಂದ ರಂಗಸಂವಾದಗಳನ್ನು ಕೂಡ ಆಯೋಜಿಸುತ್ತಿದ್ದೇವೆ.
–ಕೆ.ವಿ. ನಾಗರಾಜಮೂರ್ತಿ, ಹಿರಿಯ ರಂಗಸಂಘಟಕ

**

ಡಿಸೆಂಬರ್‌ 2 ಸೋಮವಾರ, ರಂಗನಿರಂತರ ತಂಡದಿಂದ ‘ಕನ್ನಗತ್ತಿ’ ನಾಟಕ ಪ್ರದರ್ಶನ. ರಚನೆ/ರಂಗರೂಪ/ಅನುವಾದ ಲಕ್ಷ್ಮೀಪತಿ ಕೋಲಾರ. ನಿರ್ದೇಶನ– ಸಿ. ಬಸವಲಿಂಗಯ್ಯ. 

ಡಿ. 3 ಮಂಗಳವಾರ, ಸಮುದಾಯ ತಂಡದಿಂದ ‘ಶಸ್ತ್ರ ಸಂತಾನ’. ರಚನೆ/ರಂಗರೂಪ/ಅನುವಾದ ರಾಮೇಶ್ವರ ಪ್ರೇಮ್‌/ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ. ನಿರ್ದೇಶನ– ಡಾ. ಶ್ರೀಪಾದ ಭಟ್‌. 

ಡಿ. 4 ಬುಧವಾರ, ಸಂಚಾರಿ ಥಿಯೇಟರ್‌ ತಂಡದಿಂದ ‘ಒಡವೆ’. ರಚನೆ/ರಂಗರೂಪ/ಅನುವಾದ ಎಚ್‌ ನಾಗವೇಣಿ/ ನಿಶಾ ಎನ್‌. ಆರ್‌.  ನಿರ್ದೇಶನ– ನಿಶಾ ಎನ್‌. ಆರ್‌. 

ಡಿ. 5 ಗುರುವಾರ, ಸಾಫಲ್ಯ ತಂಡದಿಂದ ‘ವೈಶಂಪಾಯನ ತೀರ’. ರಚನೆ/ರಂಗರೂಪ/ಅನುವಾದ ಎಲ್‌.ಎನ್‌ ಮುಕುಂದರಾಜ್‌. ನಿರ್ದೇಶನ– ಸವಿತಾ. ಬಿ/ಎನ್‌.ಎಸ್‌.ಡಿ. 

ಡಿ. 6 ಶುಕ್ರವಾರ, ದೃಶ್ಯ ತಂಡದಿಂದ ‘ವಿದಿಶೆಯ ವಿದೂಷಕ’. ರಚನೆ/ರಂಗರೂಪ/ಅನುವಾದ ಕಾಳಿದಾಸ/ಕೆ.ವಿ ಸುಬ್ಬಣ್ಣ. ನಿರ್ದೇಶನ– ದಾಕ್ಷಾಯಿಣಿ ಭಟ್‌. ಎ. 

ಡಿ. 9 ಸೋಮವಾರ, ರಂಗಸಿರಿ ತಂಡದಿಂದ ‘ಗುಲಾಮನ ಸ್ವಾತಂತ್ರ್ಯ ಯಾತ್ರೆ’. ರಚನೆ/ರಂಗರೂಪ/ಅನುವಾದ ತೌಫಿಕ್‌ ಅಲ್‌ಹಕೀಂ/ಎಂ.ಎನ್‌.ಕೆ ಪ್ರಭು. ನಿರ್ದೇಶನ– ಅನುಪ್‌ ಕುಮಾರ್‌ ಬಿ.ಆರ್‌. 

ಡಿ. 10 ಮಂಗಳವಾರ, ಪಂಚಮುಖಿ ನಟರ ಸಮೂಹ ತಂಡದಿಂದ ‘ಮಜಲು’. ರಚನೆ/ಪರಿಕಲ್ಪನೆ ಮಂಜುನಾರಾಯಣ್‌. ನಿರ್ದೇಶನ– ಮಧುಸೂದನ ಕೆ.ಎಸ್‌

ಡಿ. 11 ಬುಧವಾರ, ಕಲಾಗಂಗೋತ್ರಿ ತಂಡದಿಂದ ‘ಮೋಹನ ದಾಸ ಕನ್ನಡ ನೆಲದಲ್ಲಿ’. ರಚನೆ/ರಂಗರೂಪ/ಅನುವಾದ ಶ್ರೀಪತಿ ಮಂಜನಬೈಲು. ನಿರ್ದೇಶನ– ಡಾ. ಬಿ.ವಿ ರಾಜಾರಾಂ

ಡಿ. 16 ಸೋಮವಾರ, ಪ್ರಯೋಗರಂಗ ತಂಡದಿಂದ ‘ಮಹಮದ್‌ ಗವಾನ್‌’. ರಚನೆ/ರಂಗರೂಪ/ಅನುವಾದ ಡಾ. ಚಂದ್ರಶೇಖರ ಕಂಬಾರ. ನಿರ್ದೇಶನ– ಬಿ. ಸುರೇಶ್‌. 

ಡಿ. 17 ಮಂಗಳವಾರ, ಯುವಶ್ರೀ ತಂಡದಿಂದ ‘ಸಂಧ್ಯಾಛಾಯಾ’.ರಚನೆ/ರಂಗರೂಪ/ಅನುವಾದ ಜಯವಂತ ದಲ್ವಿ/ಹೇಮಂತಭಾರದ್ವಾಜ್‌. ನಿರ್ದೇಶನ– ಹೇಮಂತಭಾರದ್ವಾಜ್‌. 

ಡಿ. 18 ಬುಧವಾರ, ಆಹಾರ್ಯ ತಂಡದಿಂದ ‘ಯಮಕಿಂಕರ.com’. ರಚನೆ/ರಂಗರೂಪ/ಅನುವಾದ ಬೋಧಾಯನ/ ಉಮಾದೇವಿ. ನಿರ್ದೇಶನ– ರಾಮಕೃಷ್ಣ ಬೆಳತೂರು 

ಡಿ. 19 ಗುರುವಾರ, ರಂಗಪಯಣ ತಂಡದಿಂದ ಸೋಮಾಲಿಯಾ ‘ಕಡಲ್ಗಳ್ಳರು’. ರಚನೆ/ರಂಗರೂಪ/ಅನುವಾದ ಮತ್ತು ನಿರ್ದೇಶನ– ರಾಜಗುರು ಹೊಸಕೋಟೆ.

ಡಿ. 20 ಶುಕ್ರವಾರ, ಸಮನ್ವಯ ತಂಡದಿಂದ ‘ಬೂಟುಬಂದೂಕಗಳ ನಡುವೆ’. ರಚನೆ/ರಂಗರೂಪ/ಅನುವಾದ ಮೈನಾ ಚಂದ್ರು. ನಿರ್ದೇಶನ– ಮಾಲತೇಶ ಬಡಿಗೇರ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು