ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಬ್ಬನ್‌ ಪಾರ್ಕ್‌ನಲ್ಲಿ ಮತ್ತೆ ‌ಜಿನುಗುತಿದೆ ಜೀವಜಲ

Last Updated 28 ಜೂನ್ 2019, 19:45 IST
ಅಕ್ಷರ ಗಾತ್ರ

ಕಬ್ಬನ್‌ ಪಾರ್ಕ್‌ನಲ್ಲಿ ಮಳೆ ನೀರು ಸಂಗ್ರಹಿಸಲುಭೋವಿ ಜನಾಂಗದ ಕಾರ್ಮಿಕರಿಂದ ತೋಡಿಸಲಾಗಿದ್ದ ಇಂಗುಗುಂಡಿಗಳು ನಿರೀಕ್ಷೆಯಂತೆ ಕಮಾಲ್‌ ಮಾಡಿವೆ. ಎರಡು ಮೂರು ತಿಂಗಳ ಹಿಂದೆ ತೋಡಲಾಗಿದ್ದ 50ಕ್ಕೂ ಹೆಚ್ಚು ಇಂಗುಗುಂಡಿಗಳು ಮಳೆ ನೀರಿನಿಂದ ತುಂಬಿಕೊಂಡಿದ್ದು, ಬತ್ತಿದ ಬೋರ್‌ವೆಲ್‌, ಬಾವಿಗಳಲ್ಲಿ ನೀರಿನ ಪಸೆ ಜಿನುಗುತ್ತಿದೆ.

ಹೂಳೆತ್ತಲಾಗಿದ್ದಕಂಠೀರವ ಸ್ಟೇಡಿಯಂ ಸಮೀಪದ ಕರಗದ ಕುಂಟೆ ಸೇರಿದಂತೆ ಬಾಲಭವನದ ಹತ್ತಿರದ ತಾವರೆಕೊಳ ಮತ್ತು ಚಾಮರಾಜೇಂದ್ರ ಒಡೆಯರ್‌ ಕಲ್ಯಾಣಿಗೆ ಮಳೆ ನೀರು ಜೀವಕಳೆ ತುಂಬಿದೆ. ಕರಗದ ಕುಂಟೆ ಸಂಪೂರ್ಣ ಹೂಳೆತ್ತಲಾಗಿದ್ದು, ಇನ್ನೆರೆಡು ಕೆರೆಗಳ ಹೂಳು ಎತ್ತುವ ಕಾರ್ಯ ಇನ್ನೂ ನಡೆಯುತ್ತಿದೆ.

ಬೇಸಿಗೆಗೂ ಮುನ್ನವೇ ಈ ಕೆರೆಗಳು ನೀರಿಲ್ಲದೆ ಬತ್ತಿದ್ದರಿಂದ ಅಂತರ್ಜಲಮಟ್ಟ ಕುಸಿದಿತ್ತು. ಪಕ್ಷಿಗಳು ನೀರಿಲ್ಲದೆ ಕಂಗೆಟ್ಟಿದ್ದವು. ಮಳೆಗಾಲ ಆರಂಭವಾಗುವ ಮುನ್ನವೇಮಳೆ ನೀರು ಹಿಡಿದಿಡಲು ನಿರ್ಧರಿಸಿದ್ದ ತೋಟಗಾರಿಕಾ ಇಲಾಖೆ ಇಂಗುಗುಂಡಿ ತೋಡಿಸುವ ಕೆಲಸ ಆರಂಭಿಸಿತ್ತು.

ಬಾವಿ, ಕರೆಕಟ್ಟೆ ಮತ್ತು ಇಂಗುಗುಂಡಿಗಳ ಬಗ್ಗೆ ಪಾರಂಪರಿಕ ಜ್ಞಾನ ಹೊಂದಿದ್ದ ಭೋವಿ ಜನಾಂಗದ ಕಾರ್ಮಿಕರನ್ನು ಕರೆ ತಂದು ಕಬ್ಬನ್‌ ಪಾರ್ಕ್‌ನ ಹಲವೆಡೆ 14 ಅಡಿ ಆಳ ಮತ್ತು ಮೂರು ಅಡಿ ಅಗಲದ 50 ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. ಇನ್ನೂ 10–15 ದಿನಗಳಲ್ಲಿ 11 ಇಂಗುಗುಂಡಿ ನಿರ್ಮಾಣ ಕಾಮಗಾರಿ ಮುಗಿಯಲಿದೆ. ಕೆರೆಗಳಿಗೆ ನೀರು ಹರಿದು ಹೋಗುವ ಕಾಲುವೆಗಳನ್ನು ಸ್ವಚ್ಛಗೊಳಿಸಿ ಜಾಳಿಗೆ ಅಳವಡಿಸಲಾಗಿದೆ.ಕಳೆ ಸಸಿಗಳು ಮತ್ತು ಪಾಚಿಗಳನ್ನು ತೆಗೆದು ಹಾಕಲಾಗಿದೆ. ಬತ್ತಿ ಹೋಗಿದ್ದ 50 ವರ್ಷಗಳ ಹಿಂದಿನ ಏಳು ಬಾವಿ ಮತ್ತು ಕೆರೆಗಳ ಹೂಳು ಎತ್ತಿಸಲಾಗಿದೆ. ಅಧಿಕಾರಿಗಳ ಮತ್ತು ಪರಿಸರ ತಜ್ಞರ ನಿರೀಕ್ಷೆ ಹುಸಿ ಹೋಗಲಿಲ್ಲ. ಏಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಬಿದ್ದ ಮಳೆಗೆ ಎಲ್ಲ ಇಂಗುಗುಂಡಿ, ಬಾವಿ, ಮೂರು ಕೊಳವೆಬಾವಿ ಮತ್ತು ಕಲ್ಯಾಣಿಗಳು ನೀರಿನಿಂದ ತುಂಬಿಕೊಂಡಿವೆ.

ಇಳಿಜಾರಿನಲ್ಲಿ ಬಿದ್ದು ಮಳೆನೀರು ವ್ಯರ್ಥವಾಗಿ ಸೋರಿ ಹೋಗುತ್ತಿತ್ತು. ಅದೆನ್ನೆಲ್ಲ ಹಿಡಿದಿಡಲು ಮತ್ತು ಶುದ್ಧೀಕರಿಸಲು ಎಲ್ಲ ಇಂಗುಗುಂಡಿಗಳಲ್ಲಿ ಜಾಳಿಗೆ ಮತ್ತು ಕಲ್ಲಿದ್ದಲು (ಚಾರ್ಕೋಲ್‌) ಹಾಕಲಾಗಿದೆ. ಮಳೆ ನೀರಿನಲ್ಲಿದ್ದ ಕಸ, ಕಡ್ಡಿಗಳು ಮತ್ತು ಭಾರ ಖನಿಜಗಳನ್ನು ಜಾಳಿಗೆ ಮತ್ತು ಕಲ್ಲಿದ್ದಲು ಸೋಸಿ ಬಿಡುತ್ತವೆ. ಹೀಗಾಗಿ ಇಂಗುಗುಂಡಿಗಳಲ್ಲಿ ಸಂಗ್ರಹವಾದ ನೀರು ಕಣ್ಮುಚ್ಚಿ ಕುಡಿಯಬಹುದಾದಷ್ಟು ಶುದ್ಧವಾಗಿದೆ.ಹೂಳು ಎತ್ತಿಸಿದ ನಂತರ ಏಳು ಭಾವಿಗಳಲ್ಲಿ 30–40 ಅಡಿ ನೀರು ಸಂಗ್ರಹವಾಗಿದೆ. ಒಂದು ಬಾವಿಯಲ್ಲಿ ನೀರು ಹೆಚ್ಚಾದರೆ ಪಂಪ್‌ಸೆಟ್ ಮೂಲಕ ಮತ್ತೊಂದು ಬಾವಿಯನ್ನು ತುಂಬಿಸಲಾಗುತ್ತಿದೆ. ಬಾಯಾರಿಕೆಯಿಂದ ಬಳಲುತ್ತಿದ್ದ ಪಶು, ಪಕ್ಷಿಗಳಿಗೆ ಚೈತನ್ಯ ಬಂದಿದೆ. ಕಬ್ಬನ್‌ ಉದ್ಯಾನದಲ್ಲಿ ಮತ್ತೆ ಹಕ್ಕಿಗಳ ಕಲರವ ಆರಂಭವಾಗಿದೆ.ಮಳೆಗಾಲ ಆರಂಭವಾದರೆ 4–5 ಲಕ್ಷ ಲೀಟರ್‌ ಮಳೆನೀರು ಸಂಗ್ರಹವಾಗುವ ನಿರೀಕ್ಷೆ ಇದೆ.

ಮಾಲಿನ್ಯ ತಡೆಯಲು ಮರ

ಮಳೆಗಾಲ ಆರಂಭಕ್ಕೂ ಮೊದಲು ಕಬ್ಬನ್‌ ಉದ್ಯಾನದಲ್ಲಿ 2,500 ರಿಂದ 3000 ವಿವಿಧ ಜಾತಿಯ ಅಪರೂಪದ ಸಸಿಗಳನ್ನು ನೆಡುವ ಕಾರ್ಯ ಆರಂಭವಾಗಿದೆ. ಒಣಗಿ ಹೋಗಿ ಬೀಳುವ ಸ್ಥಿತಿಯಲ್ಲಿದ್ದ 80–90 ಮರಗಳನ್ನು ತೆರವುಗೊಳಿಸಲಾಗಿದೆ. 12 ವೈವಿಧ್ಯಮಯ ಜಾತಿಯ 500 ಸಸಿಗಳನ್ನು ಈಗಾಗಲೇ ನೆಡಲಾಗಿದೆ. ಬಿದಿರು ಹಾಗೂ ಉಳಿದ ಸಸಿಗಳನ್ನು ನೆಡಲು ಗುಂಡಿಗಳನ್ನು ತೋಡಿ ಸಿದ್ಧವಾಗಿಟ್ಟುಕೊಳ್ಳಲಾಗಿದೆ.

ಪಕ್ಷಿಗಳಿಗೆ ಪ್ರಿಯವಾದ ಚಿಕ್ಕ ಹಣ್ಣು ಬಿಡುವ 200 ಸಸಿಗಳನ್ನು ತರಿಸಲಾಗಿದೆ. ಸಸಿಗಳು ಎರಡು ಮೂರು ವರ್ಷಗಳಲ್ಲಿ ಬೆಳೆದು ಹಣ್ಣು ಬಿಡಲು ಆರಂಭಿಸಿದರೆ ಪಕ್ಷಿಗಳು ಅರಿಸಿ ಇಲ್ಲಿಗೆ ಬರುತ್ತವೆ.ಇದರಿಂದಹಣ್ಣುಗಳನ್ನು ಅರಸಿ ಬರುವ ಬಗೆಬಗೆಯಹಕ್ಕಿಗಳನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳುಬಹುದು ಎನ್ನುವುದು ತೋಟಗಾರಿಕೆ ಇಲಾಖೆ (ಕಬ್ಬನ್‌ ಉದ್ಯಾನ) ಉಪ ನಿರ್ದೇಶಕ ಮಹಾಂತೇಶ ಮುರುಗೋಡ ಅವರ ಆಶಯ.

ಕಬ್ಬನ್‌ ಪಾರ್ಕ್‌ ಗಡಿಯಲ್ಲಿ ಆಕಾಶದೆತ್ತರಕ್ಕೆ ದಟ್ಟವಾಗಿ ಬೆಳೆಯುವ ಜಾತಿಯ ಸಸಿಗಳನ್ನು ನೆಡಲಾಗುತ್ತಿದೆ. ಐದಾರು ವರ್ಷಗಳಲ್ಲಿ 30–40 ಅಡಿ ಎತ್ತರ ಬೆಳೆಯುವ ಈ ಮರಗಳಿದ್ದರೆ ಬೇಲಿ ಹಾಕುವ ಆಗತ್ಯ ಇರುವುದಿಲ್ಲ. ವೆಂಕಟಪ್ಪ ಆರ್ಟ್‌ ಗ್ಯಾಲರಿಯಿಂದ ಹಡ್ಸನ್‌ ಸರ್ಕಲ್‌ವರೆಗೆ ಇಂತಹ ಸಸಿಗಳನ್ನು ಹಾಕಲಾಗುವುದು. ಈ ಮರಗಳು ಅಡ್ಡಡ್ಡ ಬೆಳೆಯುವುದಿಲ್ಲ, ಟಿಸಿಲು ಒಡೆಯುವುದಿಲ್ಲ. ಅಷ್ಟೇ ಅಲ್ಲ, ವಾಯು ಮಾಲಿನ್ಯ ತಡೆಯುತ್ತವೆ.

* 24 ಗಂಟೆ ಸಿ.ಸಿ.ಟಿ.ವಿ ಕ್ಯಾಮೆರಾ ಕಣ್ಣು

* ಸಂಸದರ ಅನುದಾನದಲ್ಲಿ ಮೂರು ಶೌಚಾಲಯ

* ಹತ್ತು ಅಡಿ ಎತ್ತರದ ಕಬ್ಬಿಣದ ಬಾಗಿಲು

* ಉದ್ಯಾನದಲ್ಲಿ ಸುತ್ತಾಡಲು ಬಾಡಿಗೆ ಸೈಕಲ್‌ ಸವಾರಿ ವ್ಯವಸ್ಥೆ

* ಡಿಜಿಟಲ್‌ ಬೋರ್ಡ್‌ ಮತ್ತು ಸ್ಮಾರ್ಟ್‌ ಲೈಟಿಂಗ್ ವ್ಯವಸ್ಥೆ

ಹೈಟೆಕ್‌ ಆಗಲಿದೆ ಪಾರಂಪರಿಕ ಪಾರ್ಕ್‌

ಕಬ್ಬನ್‌ ಉದ್ಯಾನಕ್ಕೆ ಭೇಟಿ ನೀಡುವ ಮಹಿಳೆಯರು, ಮಕ್ಕಳು ಮತ್ತು ಪ್ರವಾಸಿಗರ ಭದ್ರತೆಗೆ ಉದ್ಯಾನದ 60 ಕಡೆ ಸಿ.ಸಿ.ಟಿ.ವಿ. ಕ್ಯಾಮೆರಾ ಮತ್ತು ಸ್ಮಾರ್ಟ್‌ ಲೈಟ್‌ ಅಳವಡಿಸುವ ಕೆಲಸ ಬಹುತೇಕ ಮುಕ್ತಾಯ ಹಂತದಲ್ಲಿದೆ. ಆ ಪೈಕಿ 40 ಕ್ಯಾಮೆರಾ ಮತ್ತು
ಶೇ 90ರಷ್ಟು ಸ್ಮಾರ್ಟ್‌ ಲೈಟ್‌ ಅಳವಡಿಸುವ ಕೆಲಸ ಈಗಾಗಲೇ ಮುಗಿದಿದೆ.

ಉದ್ಯಾನದಲ್ಲಿ ಹಾಕಲಾಗಿರುವ ಡಿಜಿಟಲ್‌ ಫಲಕಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಪ್ರವಾಸೋದ್ಯಮ ಇಲಾಖೆ ಜತೆಗೂಡಿ ಹಡ್ಸನ್‌ ಸರ್ಕಲ್‌ ದ್ವಾರದ ಬಳಿ ಬಾಡಿಗೆ ಸೈಕಲ್‌ ಸ್ಟ್ಯಾಂಡ್‌ ಆರಂಭಿಸಲಾಗಿದೆ. ಉದ್ಯಾನದಲ್ಲಿ ಸೈಕಲ್‌ ಮೇಲೆ ಓಡಾಡಬಹುದು. ಇದರಿಂದ ಮಾಲಿನ್ಯಪ್ರಮಾಣವೂ ತಗ್ಗಲಿದೆ. ಇನ್ನೂ ಸ್ವಲ್ಪ ದಿನಗಳಲ್ಲಿ ಕಬ್ಬನ್‌ ಪಾರ್ಕ್‌ ಸಂಪೂರ್ಣ ಹೈಟೆಕ್‌ ಆಗಲಿದೆ.

ತಲೆ ಎತ್ತಲಿದೆ ಬಯಲು ಚಿಟ್ಟೆ ಉದ್ಯಾನ

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿರುವ ಚಿಟ್ಟೆಗಳ ಪಾರ್ಕ್‌ ಮಾದರಿಯಲ್ಲಿಯೇ ಆಗಸ್ಟ್‌ ಅಂತ್ಯದೊಳಗೆ ಕಬ್ಬನ್‌ ಪಾರ್ಕ್‌ನಲ್ಲಿ ಬಯಲು ಚಿಟ್ಟೆ ಪಾರ್ಕ್ ತಲೆ ಎತ್ತಲಿದೆ. ಬನ್ನೇರುಘಟ್ಟದಂತೆ ಗ್ಲಾಸ್‌ ಹೌಸ್‌ ಅಥವಾ ದೊಡ್ಡ ಪಂಜರದ ಮನೆಯಲ್ಲಿ ಪಾರ್ಕ್‌ ಇರುವುದಿಲ್ಲ. ಇಲ್ಲಿ ಚಿಟ್ಟೆಗಳು ತೆರೆದ ಆವರಣದಲ್ಲಿ ಮುಕ್ತವಾಗಿ ಹಾರಾಡುತ್ತವೆ.

ನೈಸರ್ಗಿಕವಾಗಿ ಚಿಟ್ಟೆಗಳನ್ನು ಆಕರ್ಷಿಸುವ ಸಾಕಷ್ಟು ಮರ,ಬಳ್ಳಿಗಳು ಕಬ್ಬನ್‌ ಉದ್ಯಾನದಲ್ಲಿವೆ. ಚಿಟ್ಟೆಗಳು ಹೆಚ್ಚಾಗಿ ಹಾರಾಡುವ ಎರಡು ಸ್ಥಳಗಳನ್ನು ಉದ್ಯಾನದಲ್ಲಿ ಗುರುತಿಸಲಾಗಿದೆ. ಚಿಟ್ಟೆಗಳ ಉದ್ಯಾನ ನಿರ್ಮಾಣ ಮಾಡಲು ಪರಿಸರ ತಜ್ಞ ಅ.ನ. ಯಲ್ಲಪ್ಪ ರೆಡ್ಡಿ ನೇತೃತ್ವದ ತಜ್ಞರ ತಂಡ ತೋಟಗಾರಿಕಾ ಇಲಾಖೆಗೆ ನರವಾಗಲಿದೆ.

ಚಿಟ್ಟೆಗಳನ್ನು ಸಹಜವಾಗಿ ಆಕರ್ಷಿಸುವ, ಹೆಚ್ಚು ಮಕರಂದವಿರುವ ಹೂವು ಬಿಡುವ (ನೆಕ್ಟರ್‌ ಪ್ಲಾಂಟ್ಸ್‌) ಮತ್ತು ಚಿಟ್ಟೆಗಳು ಮೊಟ್ಟೆ ಇಡಲು ಅನುಕೂಲವಾಗುವ ಮೂರು ಸಾವಿರ ಬಳ್ಳಿ, ಕಂಟಿ ಮತ್ತು ಸಸಿಗಳನ್ನು ನೆಡಲು ತೀರ್ಮಾನಿಸಲಾಗಿದೆ. ಬಿಳಿಗಿರಿರಂಗನ ಬೆಟ್ಟದಿಂದ ಈ ಸಸಿಗಳನ್ನು ತರಲಾಗಿದೆ.ಚಿಟ್ಟೆಗಳಿಗೆ ಬೇಕಾದ ವಾತಾವರಣ ನಿರ್ಮಿಸಲಾಗುತ್ತಿದೆ. ಆಗಸ್ಟ್‌ ಅಂತ್ಯದೊಳಗೆ ಚಿಟ್ಟೆ ಪಾರ್ಕ್‌ ಸಿದ್ಧವಾಗಲಿದೆ.

ಮರಗಳ ಗಣತಿ ಆರಂಭ

' ಈ ವರ್ಷಾಂತ್ಯದಲ್ಲಿ ಎಲ್ಲ ಕಾಮಗಾರಿ ಮುಗಿಯುವ ನಿರೀಕ್ಷೆ ಇದೆ. ಅದರ ಬೆನ್ನಲ್ಲೇ ಕಬ್ಬನ್‌ ಪಾರ್ಕ್ ಮರಗಳ ಗಣತಿ ಆರಂಭವಾಗಲಿದೆ. ನಂತರ ಎಲ್ಲ ಮರಗಳಿಗೂ ಕ್ಯೂಆರ್‌ ಕೋಡ್‌ ಅಳವಡಿಸುವ ಕೆಲಸ ಆರಂಭಿಸಲಾಗುವುದು. ' ಎಂದುತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಮಹಾಂತೇಶ ಮುರಗೋಡ ತಿಳಿಸಿದ್ದಾರೆ.


ಮಹಾಂತೇಶ ಮುರಗೋಡ, ಉಪ ನಿರ್ದೇಶಕರು, ತೋಟಗಾರಿಕಾ ಇಲಾಖೆ, ಕಬ್ಬನ್‌ ಪಾರ್ಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT