ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ನಾನದ ಕೋಣೆಯಲ್ಲೂ ಹಸಿರು ತುಂಬಲಿ...

Last Updated 9 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಸ್ನಾನದ ಕೋಣೆಯಲ್ಲಿ ಗಿಡವೆ!? ಹುಬ್ಬೇರಿಸಬೇಡಿ. ಸ್ನಾನದ ಕೋಣೆಯಲ್ಲೂ ಗಿಡಗಳನ್ನು ಬೆಳೆಸಬಹುದು. ಅಲ್ಲಿ ಬೆಳೆಯುವ ಕೆಲ ಪ್ರಕಾರದ ಗಿಡಗಳು ಕೋಣೆಯ ಅಂದ ಹೆಚ್ಚಿಸುವ ಜೊತೆಗೆ ಆಹ್ಲಾದಕರ ಭಾವ ಹೊಮ್ಮಿಸುತ್ತವೆ. ಬಾತ್‌ ರೂಮಿಗೆ ಯಾವ ಯಾವವು ಉತ್ತಮ, ಬೆಳೆಸುವುದು ಹೇಗೆ? ಇಲ್ಲಿ ಓದಿ…

ಮನೆಯ ಹೊರಗೂ–ಒಳಗೂ ಸಸ್ಯ ಸಂಕುಲವಿದ್ದರೆ ಸೊಗಸು. ಕೆಲವು ಜಾತಿಯ ಗಿಡಗಳಿಗೆ ಪ್ರಕಾಶಮಾನವಾದ ಸೂರ್ಯನ ಬೆಳಕು, ಹೆಚ್ಚಿನ ಆರ್ದ್ರತೆ ಮತ್ತು ಹೆಚ್ಚು ಆರೈಕೆಯ ಅಗತ್ಯವಿರುತ್ತದೆ. ಇನ್ನೂ ಕೆಲವಕ್ಕೆ ಕಡಿಮೆ ಬೆಳಕು, ಕಡಿಮೆ ಆರ್ದ್ರತೆ ಮತ್ತು ಕಡಿಮೆ ಆರೈಕೆ ಸಾಕು. ಹೀಗಾಗಿ, ಕೆಲವನ್ನು ಮನೆಯ ಹೊರಗೆ ಬೆಳೆಸಬೇಕಾಗುತ್ತದೆ, ಕೆಲವನ್ನು ಮನೆಯ ಒಳಗೂ ಬೆಳೆಸಬಹುದು.

ಕಳೆದ ಕೆಲವು ವರ್ಷಗಳಿಂದ ಮನೆಯಲ್ಲಿ ಬೆಳೆಸುವ ಗಿಡಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಇದರಿಂದ ಮನೆಯ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲ, ಮನೆಯಲ್ಲಿ ಸುಳಿಯುವ ಗಾಳಿಯಲ್ಲಿ ಜೀವಚೈತನ್ಯವನ್ನೂ ತುಂಬಬಹುದು ಎನ್ನುವುದು ಮನದಟ್ಟಾಗಿದೆ. ಅಷ್ಟೆ ಅಲ್ಲ, ಈ ಪ್ರವೃತ್ತಿ ಬಾತ್‌ರೂಮ್‌ ಸೇರಿದಂತೆ ಮನೆಯ ಪ್ರತಿಯೊಂದು ಕೋಣೆಗೂ ವಿಸ್ತರಿಸಿದೆ. ಆದರೆ, ಲಿವಿಂಗ್‌ ರೂಮಿನಲ್ಲಿ ಎಂಥ ಗಿಡಗಳನ್ನಿಡಬೇಕು, ಬೆಡ್‌ ರೂಮಿನಲ್ಲಿ ಇಡಬಹುದಾದ ಗಿಡಗಳು ಯಾವವು? ಮತ್ತು ಬಾತ್‌ ರೂಮಿಗೆ ಎಂಥವು ಸೂಕ್ತ ಎನ್ನುವುದನ್ನು ತಿಳಿದುಕೊಳ್ಳಬೇಕು.

ಬಾತ್‌ ರೂಮಿನಲ್ಲಿ ಸರಿಯಾದ ಗಾಳಿ ಬೆಳಕು ಇರುವುದಿಲ್ಲ. ಬಹುತೇಕ ಸಮಯ ಆ ಕೋಣೆಯ ಬಾಗಿಲು ಮುಚ್ಚಿಯೇ ಇರುತ್ತವೆ. ಅಲ್ಲಿ ಗಿಡಗಳನ್ನು ಬೆಳೆಸುವುದು ಹೇಗೆ ಎಂಬ ಗೊಂದಲವೂ ಇರಬಹುದು. ಆದರೆ, ಈ ಕೆಲವು ಸಸ್ಯಗಳನ್ನು ಅಂಥ ವಾತಾವಣದಲ್ಲೂ ಬೆಳೆಸಲು ಸಾಧ್ಯವಿದೆ.

ಅಲೊವೆರಾ(ಲೋಳೆಸರ)

ಅಲೊವೆರಾ ಅಥವಾ ಲೋಳೆಸರವನ್ನೂ ನೀವು ಬಾತ್‌ ರೂಮ್‌ನಲ್ಲಿ ಬೆಳೆಸಬಹುದು. ಫೇಸ್‌ಮಾಸ್ಕ್ ಆಗುವ, ಚರ್ಮಕ್ಕೆ ಕಾಂತಿ ತುಂಬುವುದು ಸೇರಿದಂತೆ ಅನೇಕ ಔಷಧಿಯ ಗುಣಗಳನ್ನು ಹೊಂದಿರುವ ಈ ಸಸ್ಯವನ್ನು ಕೋಣೆಯ ಕಿಟಕಿಗೆ ಇಡುವುದು ಸೂಕ್ತ. ವಾರಕ್ಕೊಮ್ಮೆ ಬಿಸಿಲಿಗೆ ಇಟ್ಟು ಚೆನ್ನಾಗಿ ನೀರು ಹಾಕಿದರೆ ಸೊಗಸಾಗಿ ಬೆಳೆಯುತ್ತದೆ.

ಕ್ಯಾಲಥಿಯಾ

ಬಾತ್‌ರೂಮ್‌ನ ಅಂದ ಹೆಚ್ಚಿಸುವ ಗಿಡ ಇದು. ಈ ಒಂದೇ ಸಸ್ಯ 3–4 ಬಣ್ಣಗಳಲ್ಲಿ ಮೈದಳೆಯುವುದನ್ನು ನೋಡುವುದೇ ಒಂದು ಆನಂದ. ನೇರವಾದ ಸೂರ್ಯನ ಬೆಳಕು ಹಾಗೂ ಹೆಚ್ಚು ಗಾಳಿಯ ಅಗತ್ಯ ಇದಕ್ಕಿಲ್ಲ. ಸೂರ್ಯನ ಕಿರಣಗಳು ನೇರವಾಗಿ ಬಿದ್ದರೆ ಇದರ ಎಲೆಗಳು ಮುದುಡುತ್ತವೆ ಮತ್ತು ಎಲೆಗಳ ನೈಸರ್ಗಿಕ ಬಣ್ಣ ಹಾಳಾಗುತ್ತದೆ. ಆದ್ದರಿಂದ ಸ್ನಾನದ ಕೋಣೆ ಇದಕ್ಕೆ ಪ್ರಶಸ್ತವಾದ ಜಾಗ. ಸರಿಯಾದ ಪ್ರಮಾಣದಲ್ಲಿ ನೀರು, ತೇವಾಂಶದ ಮಟ್ಟ ಮತ್ತು ಒಳಾಂಗಣ ಗಾಳಿಯಷ್ಟೆ ಇದಕ್ಕೆ ಮುಖ್ಯ.

ಸ್ಪೈಡರ್ ಪ್ಲಾಂಟ್

ಇದು ಸ್ನಾನಗೃಹಕ್ಕೆ ಹೇಳಿ ಮಾಡಿಸಿದ ಸಸ್ಯವಾಗಿದೆ. ತೆಳ್ಳ ಗಿನ, ಉದ್ದವಾದ, ಕಮಾನಿನಂತಹ ಎಲೆಗಳು ಗಾಢ ಹಸಿರು ಮತ್ತು ತಿಳಿಯಾದ ಬಿಳಿ ಬಣ್ಣದ ವಿಶ್ರಣವನ್ನು ಹೊಂದಿರುತ್ತವೆ. ಇದೂ ತೇವದಲ್ಲಿ ಬೆಳೆವ ಮತ್ತು ಕಡಿಮೆ ಬೆಳಕಿನ ಅವಶ್ಯಕತೆ ಇರುವ ಸಸ್ಯ. ಇದನ್ನು ಸುಲಭವಾಗಿ ವಿಂಗಡಿಸಬಹುದು ಮತ್ತು ಬೇರೆ ಬೇರೆ ಕಡೆ ಮರು ನೆಡಬಹುದು. ಇದನ್ನು ತೂಗು ಕುಂಡದಲ್ಲಿ ನೆಡುವುದರಿಂದ ಕಡಿಮೆ ಜಾಗದಲ್ಲಿ ಬೆಳೆಸಬಹುದು.

ಒಳಾಂಗಣ ಬಿದಿರು

ಹೊಲ–ತೋಟ, ಕಾಡಲ್ಲಿ ಬೆಳೆಯುವ ಬಿದರನ್ನು ಬಾತ್‌ರೂಮ್‌ನಲ್ಲಿ ಬೆಳೆಸಲು ಸಾಧ್ಯವೇ ಎಂದು ಗಾಬರಿಯಾಗಬೇಡಿ. ಇದು ಮನೆಯ ಒಳಾಂಗಣದಲ್ಲಿ ಬೆಳೆಸುವ ಅಲಂಕಾರಿಕ ಬಿದಿರಿನ ತಳಿ.ಇದಕ್ಕೆಅತಿಯಾದ ಸೂರ್ಯನ ಬೆಳಕು ಅಗತ್ಯ ವಿಲ್ಲ. ಆದರೆ ವಾರಕ್ಕೊಮ್ಮೆ ಮುಂಜಾನೆಯ ಬೆಳಕಿಗೆ ಒಡ್ಡಬೇಕು. ನೀರು ಸಹ ಮಿತವಾಗಿರಬೇಕು. ವಾರಕ್ಕೆ ಎರಡು ಬಾರಿ ಮಣ್ಣು ಒಣಗಿದಾಗ ನೀರು ಹಾಕಿದರೆ ಸಾಕು. ಚಂದ ಬೆಳೆಯುತ್ತದೆ. ಮನೆಯ ಅಂದವನ್ನೂ ಹೆಚ್ಚಿಸುತ್ತದೆ.

ಸ್ನೇಕ್‌ ಪ್ಲಾಂಟ್‌

ಸಾಮಾನ್ಯವಾಗಿ ಮನೆಯ ಯಾವುದೇ ಮೂಲೆಯಲ್ಲಿ ಟ್ಟರೂ ತನ್ನಷ್ಟಕ್ಕೆ ತಾನು ಬದುಕಬಲ್ಲ, ಬೆಳೆಯಬಲ್ಲ ಸಸ್ಯ ಸ್ನೇಕ್‌ ಪ್ಲಾಂಟ್‌. ಇದು ಏಷ್ಯಾ, ಆಫ್ರಿಕಾ ಮೂಲದಿಂದ ಬಂದಿದೆ. ಹಸಿರು ಬಣ್ಣದ ಕತ್ತಿ ಆಕಾರದ ಇದರ ಎಲೆಗಳು ಮನೆಯ ಅಂದವನ್ನೂ ಹೆಚ್ಚಿಸುತ್ತವೆ. ನೋಡಲು ಕೃತಕ ಸಸ್ಯದಂತೆ ಕಾಣುವ ಈ ಸಸ್ಯವನ್ನು ಬೆಳೆಸುವುದು ತುಂಬಾ ಸುಲಭ. ಇದಕ್ಕೆ ಹೆಚ್ಚು ನೀರಿನ ಅಗತ್ಯ ಇರುವುದಿಲ್ಲ. ಪಾಟ್‌ ನಲ್ಲಿನ ಮಣ್ಣು ಒಣಗಿದಾಗ ಮಾತ್ರ ನೀರು ಹಾಕುತ್ತಿದ್ದರೂ ಸಾಕು. ಈ ಸಸ್ಯವು ಬಿಸಿಲು ಕಡಿಮೆ ಇರುವ ಸ್ಥಳದಲ್ಲಿ ಚೆನ್ನಾಗಿ ಬೆಳೆಯುತ್ತದೆ.

ಕ್ಯಾಕ್ಟಸ್‌ ಸಸ್ಯಗಳು

ಇವುಗಳನ್ನು ಕಳ್ಳಿ ಗಿಡ ಎಂದೂ ಕರೆಯಲಾಗುತ್ತದೆ. ಈ ಗಿಡಗಳನ್ನು ಒಳಾಂಗಣದಲ್ಲಿ ಬೆಳೆಸುವುದು ಸುಲಭ. ಸ್ನಾನದ ಕೋಣೆಯಲ್ಲೂ ಸೊಗಸಾಗಿ ಬೆಳೆಯಬಲ್ಲವು. ಆದರೆ, ಈ ಗುಂಪಿನಲ್ಲಿ ಹಲವಾರು ವೈವಿಧ್ಯಗಳಿದ್ದು, ಸುಲಭವಾಗಿ ಆರೈಕೆ ಮಾಡಬಲ್ಲ ಗುಂಪಿನ ಕ್ಯಾಕ್ಟಸ್‌ ಸಸ್ಯಗಳನ್ನು ಆರಿಸಿಕೊಳ್ಳುವುದು ಮುಖ್ಯ.

ಇದಷ್ಟೆ ಅಲ್ಲದೆ, ಶಾಂತಿ ಲಿಲಿ, ಮನಿ ಪ್ಲಾಂಟ್, ಪೊಥೋಸ್, ಬೆಗೊನಿಯಾಸ್, ಬೋಸ್ಟನ್, ಆರ್ಕಿಡ್‌ ಗಳು ಸೇರಿದಂತೆ ಅನೇಕ ಸಸ್ಯಗಳನ್ನು ನೀವು ಬಾತ್‌ ರೂಮಿನಲ್ಲಿ ಬೆಳೆಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT