ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯ ಅಂದ ಕೆಡಿಸದಿರಲಿ ಆ ವಸ್ತುಗಳು!

Last Updated 23 ಜುಲೈ 2020, 20:30 IST
ಅಕ್ಷರ ಗಾತ್ರ

ಮನೆ ಸ್ವಚ್ಛವಾಗಿದ್ದರೆ ಮನಸ್ಸು ಸ್ವಚ್ಛವಾಗಿರುತ್ತದೆ. ಮನೆಯೊಳಗೆ ಸ್ವಚ್ಛತೆ ಇದ್ದರೆ ಮನಸ್ಸು ಧನಾತ್ಮಕವಾಗಿರುತ್ತದೆ. ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ ಹೇಳುವುದಾದರೂ ಮನೆ ಸ್ವಚ್ಛವಾಗಿದ್ದು, ಮನೆಯೊಳಗಿನ ವಸ್ತುಗಳು ಕ್ರಮಬದ್ಧವಾಗಿದ್ದರೆ ವಾಸ್ತು ಚೆನ್ನಾಗಿರುತ್ತದೆ ಎಂಬ ಮಾತಿದೆ. ಮನೆಯ ಒಳಗೆ ಕೊಳಕಿದ್ದರೆ ಮನಸ್ಸಿನಲ್ಲಿ ನಕಾರಾತ್ಮಕ ಭಾವನೆಗಳು ಬೆಳೆಯುತ್ತವೆ. ಆ ಕಾರಣಕ್ಕೆ ಮನೆಯನ್ನು ಸ್ವಚ್ಛ ಮಾಡಿ ವಸ್ತುಗಳನ್ನು ಕ್ರಮಬದ್ಧವಾಗಿ ಜೋಡಿಸುವುದು ತುಂಬಾ ಮುಖ್ಯ. ಮನೆಯ ಅಂದಗೆಡಿಸುವ ಹಾಗೂ ಮನೆಯಲ್ಲಿ ಸಾಮಾನ್ಯವಾಗಿ ಮಾಡುವ ಕೆಲವು ತಪ್ಪುಗಳು ಇಲ್ಲಿವೆ.

ಸಿಂಕ್‌ನಲ್ಲಿ ಪಾತ್ರೆ ತುಂಬಿಡುವುದು
ಅನೇಕರ ಮನೆಯಲ್ಲಿನ ಸಾಮಾನ್ಯ ಸಮಸ್ಯೆ ಇದು. ಯಾವಾಗಲೂ ಅಡುಗೆಮನೆಯ ಸಿಂಕ್‌ನಲ್ಲಿ ಪಾತ್ರೆಗಳನ್ನು ತುಂಬಿಸಿಡುತ್ತಾರೆ. ಇದು ನಮ್ಮ ಮನಸ್ಸು ಎಷ್ಟು ಕೊಳಕು ಎಂಬುದನ್ನು ಸೂಚಿಸುತ್ತದೆ. ಆ ಕಾರಣಕ್ಕೆ ಆಗಾಗ ಪಾತ್ರೆಗಳನ್ನು ತೊಳೆಯುತ್ತಿರಿ. ಎಲ್ಲವನ್ನೂ ಒಮ್ಮೆಲೆ ತೊಳೆಯಬೇಕು ಎಂಬ ಮನೋಭಾವ ಬೇಡ. ಇದರಿಂದ ನಿಮಗೂ ಹೊರೆ ಎನ್ನಿಸಬಹುದು. ಆಗಿಂದಾಗ್ಗೆ ಸ್ವಚ್ಛ ಮಾಡುವುದರಿಂದ ಮನಸ್ಸಿಗೂ ನೆಮ್ಮದಿ. ದೇಹಕ್ಕೂ ಆಯಾಸ ಕಡಿಮೆ.

ತುಂಬಿದ ಡೈನಿಂಗ್ ಟೇಬಲ್‌
ಅನೇಕರ ಮನೆಯಲ್ಲಿ ಡೈನಿಂಗ್ ಟೇಬಲ್‌ ಮೇಲೆ ಬೇಕಾಬಿಟ್ಟಿಯಾಗಿ ವಸ್ತುಗಳನ್ನು ಹರಡಿರುತ್ತಾರೆ. ಡೈನಿಂಗ್ ಟೇಬಲ್ ಎನ್ನುವುದು ಊಟದ ಮಾಡಲು ಸೀಮಿತವಾಗಿರುವುದು ಎಂಬುದನ್ನು ಮರೆತಂತೆ ವಸ್ತುಗಳನ್ನು ಇಟ್ಟಿರುತ್ತಾರೆ. ಆದರೆ, ಮನೆಯ ಅಂದಕ್ಕೆ ಡೈನಿಂಗ್ ಟೇಬಲ್ ಸ್ವಚ್ಛವಾಗಿರುವುದೂ ಅಷ್ಟೇ ಮುಖ್ಯ. ಅನೇಕರ ಮನೆಯ ಡೈನಿಂಗ್ ಟೇಬಲ್‌ ಮೇಲೆ ಟಿಶ್ಯೂ ಪೇಪರ್‌, ಉಪ್ಪು, ಕಾಳುಮೆಣಸು, ಸಾಸ್‌, ಉಪ್ಪಿನಕಾಯಿ ಹೀಗೆ ಎಲ್ಲವನ್ನು ಅಲ್ಲೇ ಇಟ್ಟಿರುತ್ತಾರೆ. ಅದರ ಬದಲು ಆಗಾಗ ಅಡುಗೆಮನೆಯಿಂದ ಊಟದ ಸಮಯದಲ್ಲಿ ಮಾತ್ರ ಅವುಗಳನ್ನು ಡೈನಿಂಗ್ ಟೇಬಲ್ ಇಟ್ಟು ಬೇರೆ ಸಮಯದಲ್ಲಿ ಮರಳಿ ಅಡುಗೆಮನೆಯಲ್ಲಿ ಇಡುವ ಮೂಲಕ ಸ್ವಚ್ಛತೆಗೆ ಗಮನ ನೀಡಬಹುದು.

ಕೊಳೆ ಬಟ್ಟೆ ಹಾಕುವ ಬಾಕ್ಸ್‌
ಕೊಳೆ ಬಟ್ಟೆಗಳನ್ನು ತುಂಬಿಸಿಡುವ ಬಾಕ್ಸ್ ತೆರೆದಿದ್ದರೆ ಅದಕ್ಕಿಂತಲೂ ಗಲೀಜು ಯಾವುದಿಲ್ಲ. ಕೆಲವರು ಆ ಬಾಕ್ಸ್‌ನ ಮೇಲೆಲ್ಲಾ ಕೊಳೆ ಬಟ್ಟೆ ಹರಡಿರುತ್ತಾರೆ. ಆ ಕಾರಣಕ್ಕೆ ಮುಚ್ಚಳ ಇರುವ ಬಾಕ್ಸ್ ಬಳಸುವುದು ಉತ್ತಮ. ಇದರಿಂದ ಕೊಳೆ ಬಟ್ಟೆ ಹಾಕಿದ ಮೇಲೆ ಬಾಕ್ಸ್ ಅನ್ನು ಮುಚ್ಚಿಡಬಹುದು. ಇದರಿಂದ ಗಲೀಜು ಕಡಿಮೆಯಾಗುತ್ತದೆ.

ಕೊಳಕಾಗಿರುವ ಸ್ವಿಚ್‌- ಹಿಡಿಕೆಗಳು
ಅನೇಕರು ಮನೆಯ ಅಂದ ಹೆಚ್ಚಿಸಲು ಪೇಂಟ್ ಮಾಡಿಸಿದ್ದರೂ ಸ್ವಿಚ್‌ ಹಾಗೂ ಬಾಗಿಲು ಕಿಟಿಕಿಯ ಹಿಡಿಕೆಗಳ ಮೇಲೆ ಗಮನ ಹರಿಸಿರುವುದಿಲ್ಲ.

ಅವುಗಳ ಮೇಲೆ ದೂಳು, ಪೇಂಟ್‌ ಬಿದ್ದು ಅಂದಗೆಟ್ಟಿರುತ್ತವೆ. ಆ ಕಾರಣಕ್ಕೆ ಅವುಗಳನ್ನು ಸ್ವಚ್ಛ ಮಾಡುವುದು ಅವಶ್ಯ. ಇಲ್ಲದಿದ್ದರೆ ಕೊಳಕು ಕೈಗಳಿಂದ ಅದನ್ನು ಮುಟ್ಟಿ ಮುಟ್ಟಿ ಇನ್ನಷ್ಟು ಕೊಳಕಾಗಿರುತ್ತದೆ.

ಮುಚ್ಚಳವಿಲ್ಲದ ಕಸದ ಡಬ್ಬಿ
ಮನೆ ಅಥವಾ ಅಡುಗೆಮನೆಯಲ್ಲಿ ತೆರೆದ ಕಸದ ಡಬ್ಬಿ ಇದ್ದರೆ ಅದಕ್ಕಿಂತ ಕೊಳಕು ಯಾವುದೂ ಇಲ್ಲ. ತೆರೆದ ಕಸದ ಬುಟ್ಟಿಯನ್ನು ಯಾರೂ ಇಷ್ಟಪಡುವುದಿಲ್ಲ. ಆದಷ್ಟು ಕಸದ ಡಬ್ಬಿಯನ್ನು ಮುಚ್ಚಿಡಿ. ಅಲ್ಲದೇ ಎದುರಿಗೆ ಕಾಣುವಂತೆ ಇಡಬೇಡಿ.

ಬಾಲ್ಕನಿ, ಗಾರ್ಡನ್, ಅಡುಗೆಮನೆ ಎಲ್ಲೇ ಇರಲಿ ಕಸದ ಡಬ್ಬಿಯನ್ನು ಕಾಣುವಂತೆ ಇರಿಸಬೇಡಿ. ಅಲ್ಲದೇ ಆದಷ್ಟು ಅದನ್ನು ಸ್ವಚ್ಛವಾಗಿರಿಸಲು ಪ್ರಯತ್ನಿಸಿ. ಆಗಾಗ ಕಸದ ಡಬ್ಬಿಯನ್ನು ಸ್ವಚ್ಛ ಮಾಡದಿದ್ದರೆ ಗಬ್ಬು ವಾಸನೆ ಬರುತ್ತಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT