ಶುಕ್ರವಾರ, ಅಕ್ಟೋಬರ್ 23, 2020
21 °C

ಉತ್ತರಪ್ರದೇಶದಲ್ಲಿರುವ 'ಕಸಾಯಿಖಾನೆ', ಮಾಂಸ ಮಾರಾಟ ಉದ್ಯಮದ ಸುತ್ತಮುತ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉತ್ತರಪ್ರದೇಶದಲ್ಲಿರುವ 'ಕಸಾಯಿಖಾನೆ', ಮಾಂಸ ಮಾರಾಟ ಉದ್ಯಮದ ಸುತ್ತಮುತ್ತ

ಲಖನೌ: ಬಿಜೆಪಿ ಅಧಿಕಾರಕ್ಕೇರಿದರೆ ರಾಜ್ಯದಲ್ಲಿರುವ ಅನಧಿಕೃತ ಕಸಾಯಿಖಾನೆಗಳನ್ನು ಮುಚ್ಚುವುದಾಗಿ ಚುನಾವಣಾ ಪ್ರಣಾಳಿಕೆಯಲ್ಲಿಯೇ ಹೇಳಲಾಗಿತ್ತು. ಅದರಂತೆಯೇ ಯೋಗಿ ಆದಿತ್ಯನಾಥ್ ಅವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಉತ್ತರಪ್ರದೇಶದಲ್ಲಿರುವ ಅನಧಿಕೃತ ಕಸಾಯಿಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇಲ್ಲಿ ಗೋಹತ್ಯೆ ನಿಷೇಧ ಹೇರಿದ್ದರೂ ಕೋಣಗಳನ್ನು ಹತ್ಯೆ ಮಾಡುವುದಕ್ಕೆ ಯಾವುದೇ ನಿಷೇಧವಿಲ್ಲ. ಸರ್ಕಾರ ಅನಧಿಕೃತ ಕಸಾಯಿಖಾನೆಗಳ ವಿರುದ್ಧ ಕ್ರಮ ಕೈಗೊಂಡಿರುವುದರಿಂದಾಗಿ ಇಲ್ಲಿನ ಮಾಂಸ ಮಾರಾಟ ಉದ್ಯಮಕ್ಕೆ ಹೊಡೆತ ಬಿದ್ದಂತಾಗುತ್ತದೆ. ಮಾಂಸ ಮಾರಾಟದ ಉದ್ಯಮದಲ್ಲಿ ಮುಂಚೂಣಿಯಲ್ಲಿರುವ ಉತ್ತರಪ್ರದೇಶದಲ್ಲಿ 'ಅನಧಿಕೃತ ಕಸಾಯಿಖಾನೆ ನಿಷೇಧ' ಈ ಉದ್ಯಮದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ? ಎಂಬುದರ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

'ಕಸಾಯಿಖಾನೆ'ಯ ಸುತ್ತಮುತ್ತ

'ಕಸಾಯಿಖಾನೆ' ಅಥವಾ ಮಾಂಸದಂಗಡಿಯನ್ನು ಆರಂಭಿಸುವುದಕ್ಕೆ ಪರವಾನಗಿ ಅತ್ಯಗತ್ಯ. ಹೀಗೆ ಉದ್ಯಮ ಆರಂಭಿಸುವ ವ್ಯಕ್ತಿ ಮೊದಲು ಕೈಗಾರಿಕಾ ಕೇಂದ್ರಕ್ಕೆ ಈ ಬಗ್ಗೆ ಅರ್ಜಿ ಸಲ್ಲಿಸಬೇಕು. ಅಲ್ಲಿಂದ ಆ ಅರ್ಜಿ  ಉತ್ತರಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿ (ಯುಪಿಪಿಸಿಬಿ)ಗೆ ಹೋಗಿ ಅದು ಮುಂದಿನ ನಿರ್ದೇಶನಕ್ಕಾಗಿ  ಜಿಲ್ಲಾ ಮೆಜಿಸ್ಟ್ರೇಟರ್‍ ಗೆ ಸಲ್ಲಿಸಲಾಗುತ್ತಿದೆ. ಜಿಲ್ಲಾ ಮೆಜಿಸ್ಟ್ರೇಟರ್ ಅವರು ರಚಿಸಿದ ಸಮಿತಿಯು ಕಸಾಯಿಖಾನೆ ಆರಂಭಿಸಲು ಉದ್ದೇಶಿಸಿರುವ ಪ್ರದೇಶಕ್ಕೆ ಭೇಟಿ ನೀಡಿ, ಆ ಪ್ರದೇಶದಲ್ಲಿ ಕಸಾಯಿಖಾನೆ ಮಾಡಬಹುದೇ? ಎಂಬುದರ ಬಗ್ಗೆ ಪರಿಶೀಲನೆ ನಡೆಸುತ್ತದೆ. ಪ್ರಸ್ತುತ ಪ್ರದೇಶದಲ್ಲಿ ಕಸಾಯಿಖಾನೆ ಆರಂಭಿಸಲು ಯಾವುದೇ ಅಭ್ಯಂತರಗಳು ಇಲ್ಲ ಎಂದು ಮನವರಿಕೆ ಆದ ನಂತರವೇ ನಿರಾಕ್ಷೇಪಣಾ ಪತ್ರ (ಎನ್‍ಒಸಿ) ನೀಡಲಾಗುತ್ತದೆ. ಕಸಾಯಿಖಾನೆಯಿಂದಾಗಿ ಪರಸರ ಮಾಲಿನ್ಯವಾಗುತ್ತಿದೆಯೇ? ಎಂಬುದನ್ನು ಪರಿಶೀಲಿಸಿದ ನಂತರ  ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ  ಕೃಷಿ ಮತ್ತು ಸಂಸ್ಕರಿತ ಆಹಾರ ಉತ್ಪನ್ನ ರಫ್ತು ಅಭಿವೃದ್ಧಿ ಪ್ರಾಧಿಕಾರ(ಎಪಿಇಡಿಎ)ಕ್ಕೆ ಈ ಅರ್ಜಿಯನ್ನು ಕಳುಹಿಸಿಕೊಡಲಾಗುತ್ತದೆ. ಮಾಂಸವನ್ನು ರಫ್ತು ಮಾಡುವ ಮುನ್ನ ಆ ಮಾಂಸದ ಗುಣ ಮಟ್ಟ ಮತ್ತು ಕಸಾಯಿಖಾನೆಯಲ್ಲಿ ಮಾಂಸ ಉತ್ಪಾದನೆ ಮಾಡುವ ರೀತಿ, ರಫ್ತು ಪ್ರಕ್ರಿಯೆಗಳ ಬಗ್ಗೆ ಪರಿಶೀಲನೆ ನಡೆಸಿದ ನಂತರವೇ ಎಪಿಇಡಿಎ ಮಾಂಸ ರಫ್ತಿಗಾಗಿ ಅನುಮತಿ ನೀಡಲಾಗುತ್ತದೆ.

ಉತ್ತರಪ್ರದೇಶದಲ್ಲಿರುವ ಕಸಾಯಿಖಾನೆಗಳು

ದೇಶದಲ್ಲಿ ಒಟ್ಟು ಸರ್ಕಾರಿ ಅನುಮತಿ ಪಡೆದಿರುವ 72 ಕಸಾಯಿಖಾನೆಗಳಿವೆ. ಉತ್ತರಪ್ರದೇಶ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೀಡಲಾಗಿರುವ ಎನ್‍ಒಸಿ ಅಂಕಿ ಅಂಶಗಳ  ಪ್ರಕಾರ ಉತ್ತರಪ್ರದೇಶದಲ್ಲಿ 38 ಕಸಾಯಿಖಾನೆಗಳಿವೆ. ಇದರಲ್ಲಿ ನಾಲ್ಕೇ ನಾಲ್ಕು ಕಸಾಯಿಖಾನೆಗಳು ಕಾರ್ಯನಿರತವಾಗಿವೆ. ಎರಡು ಕಸಾಯಿಖಾನೆಗಳು ಆಗ್ರಾದಲ್ಲಿಯೂ ಇನ್ನೆರಡು ಕಸಾಯಿಖಾನೆ  ಸಹರಣ್‍ಪುರದಲ್ಲೂ ಕಾರ್ಯ ನಿರತವಾಗಿವೆ. ಎರಡು ಕಸಾಯಿಖಾನೆಗಳನ್ನು ಲಖನೌ ಮತ್ತು ಬರೇಲಿಯಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ. ಮೊದಲ ಬಾರಿ 1996ರಲ್ಲಿ ಆಲಿಗಢದಲ್ಲಿ  ಹಿಂದ್ ಆಗ್ರೊ ಐಎಂಪಿಪಿ ಎಂಬ ಮಾಂಸ ಸಂಸ್ಕರಣ ಕೇಂದ್ರ ಆರಂಭವಾಗಿತ್ತು.

ಅನಧಿಕೃತ ಕಸಾಯಿಖಾನೆ ಬೆಳೆಯಲು ಕಾರಣವೇನು?

ಉತ್ತರಪ್ರದೇಶದಲ್ಲಿರುವ 38 ಕಸಾಯಿಖಾನೆಗಳಲ್ಲಿ ಹೆಚ್ಚಿನವು ಮಾಂಸ ರಫ್ತು ಮಾಡಲಿರುವವುಗಳಾಗಿವೆ.  ಭಾರತದಲ್ಲಿ ಮಾರಾಟವಾಗುವ  ಕೋಣದ ಮಾಂಸಕ್ಕೆ ಗಲ್ಫ್ ರಾಷ್ಟ್ರಗಳಲ್ಲಿ ಬಹು ಬೇಡಿಕೆ ಇದೆ. ಭಾರತದಲ್ಲಿಂದ ರಫ್ತಾಗುವ ಮಾಂಸಗಳು ಕಡಿಮೆ ಬೆಲೆಗೆ ಲಭ್ಯವಾಗುವುದು ಮತ್ತು 'ಹಲಾಲ್' ಮಾಂಸವೇ ಇಲ್ಲಿ ರಫ್ತಾಗುವುದರಿಂದ ಮುಸ್ಲಿಂ ರಾಷ್ಟ್ರಗಳಲ್ಲಿ ಈ ಮಾಂಸಗಳಿಗೆ ಹೆಚ್ಚಿನ ಬೇಡಿಕೆಯುಂಟಾಗಲು ಕಾರಣ. ಇಂಥಾ ಪರಿಸ್ಥಿತಿಯಲ್ಲಿ ಇಲ್ಲಿನ  ಜನ ಸಾಮಾನ್ಯರಿಗೆ ಬೇಕಾಗಿರುವ ಮಾಂಸಗಳನ್ನು ಪೂರೈಸುವುದಕ್ಕಾಗಿ ಅನಧಿಕೃತ ಕಸಾಯಿಖಾನೆಗಳು ತಲೆಯೆತ್ತಿಕೊಂಡವು.

ಕಸಾಯಿಖಾನೆಯಲ್ಲಿನ ವಹಿವಾಟು

ಇಲ್ಲಿರುವ ಮಾಂಸ ಸಂಸ್ಕರಣ ಘಟಕಗಳಲ್ಲಿ ದಿನವೊಂದಕ್ಕೆ ಸರಿಸುಮಾರು 300ರಿಂದ 3000 ಜಾನುವಾರುಗಳನ್ನು ಕಡಿಯಲಾಗುತ್ತದೆ. ಕೋಣ, ಕುರಿ ಮತ್ತು ಆಡುಗಳನ್ನು ಮಾಂಸಕ್ಕಾಗಿ ಮಂಡಿ (ಗ್ರಾಮದ ಮಾರುಕಟ್ಟೆ)ಯಲ್ಲಿ ಮಾರಲಾಗುತ್ತದೆ. ಒಂದು ಕೋಣನ ಸರಾಸರಿ ಬೆಲೆ ₹20,000. ಕಸಾಯಿಖಾನೆ ಆರಂಭಿಸಲು ಕನಿಷ್ಠ 10 ಎಕರೆ ಸ್ಥಳವಂತೂ ಬೇಕೆ ಬೇಕು. ಈ ಸ್ಥಳದ ಬೆಲೆ ₹40 ರಿಂದ ₹50 ಕೋಟಿವರೆಗೆ ಇರುತ್ತದೆ. 15 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವ ಅಥವಾ ಅರೋಗ್ಯಕರವಲ್ಲದ ತಳಿಯ ಎತ್ತುಗಳನ್ನು ಇಲ್ಲಿ ವಧೆ ಮಾಡಲು ಸರ್ಕಾರದಿಂದ ಪರವಾನಗಿ ಇದೆ.

ಮಾಂಸ ಮಾರಾಟ ಉದ್ಯಮದ ವ್ಯಾಪ್ತಿ

ದೇಶದಲ್ಲಿರುವ  ಮಾಂಸ ಉತ್ಪಾದನೆ ಮತ್ತು ರಫ್ತು ಉದ್ಯಮದಲ್ಲಿ ಉತ್ತರಪ್ರದೇಶವೇ ಮುಂಚೂಣಿಯಲ್ಲಿದೆ.  ಇಲ್ಲಿರುವ ಅನಧಿಕೃತ ಕಸಾಯಿಖಾನೆ ಮತ್ತು ಅನಧಿಕೃತವಾಗಿ ಜಾನುವಾರುಗಳನ್ನು ಕಡಿದು ಮಾರುವ ಮಾಂಸದ ಪ್ರಮಾಣದ ಬಗ್ಗೆ ಸರಿಯಾದ ದಾಖಲೆಗಳೇನೂ ಲಭ್ಯಲಿಲ್ಲ. ಆದರೆ ರಾಜ್ಯದಲ್ಲಿ ಪರವಾನಗಿ  ಇಲ್ಲದೆ ಇರುವ 140 ಕಸಾಯಿಖಾನೆ ಮತ್ತು 50,000 ಮಾಂಸದಂಗಡಿಗಳಿವೆ ಎಂದು ಅಂದಾಜಿಸಲಾಗಿದೆ.  ಎಪಿಇಡಿಎ ವರದಿ ಪ್ರಕಾರ ಉತ್ತರಪ್ರದೇಶದಲ್ಲಿ ಅತೀ ಹೆಚ್ಚು ಮಾಂಸ ಉತ್ಪಾದನೆಯಾಗುತ್ತದೆ. ಅಂದರೆ ಶೇ. 19.1 ಶೇ ಇಲ್ಲಿ ಮಾಂಸ ಉತ್ಪಾದನೆಯಾಗುತ್ತದೆ. ಅದೇ ವೇಳೆ ಆಂಧ್ರ  ಪ್ರದೇಶದಲ್ಲಿ ಶೇ.15.2 ಮತ್ತು ಪಶ್ಚಿಮ ಬಂಗಾಳದಲ್ಲಿ ಶೇ. 10.9  ಮಾಂಸ ಉತ್ಪಾದನೆಯಾಗುತ್ತದೆ.

2008-09 ರಿಂದ 2014-15ರ ಅವಧಿಯಲ್ಲಿ ಉತ್ತರಪ್ರದೇಶದಲ್ಲಿ 7515.14 ಲಕ್ಷ ಕೆಜಿ ಕೋಣನ ಮಾಂಸ, 1171.65 ಲಕ್ಷ ಕೆಜಿ  ಆಡು ಮಾಂಸ, 230.99 ಲಕ್ಷ ಕೆಜಿ ಕುರಿ ಮಾಂಸ ಮತ್ತು  2014-15ರಲ್ಲಿ 1410.32 ಕೆಜಿ ಹಂದಿ ಮಾಂಸ ಉತ್ಪಾದನೆಯಾಗಿದೆ ಎಂದು ರಾಜ್ಯದ ಪಶುಸಂಗೋಪನೆ ಇಲಾಖೆಯ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಕೇಂದ್ರದಿಂದ ಈ ಉದ್ಯಮಕ್ಕೆ ಸಿಗುವ ಸಹಾಯವೇನು?

ಕೇಂದ್ರ ಸರ್ಕಾರವೂ ಮಾಂಸ ಮಾರಾಟ ಉದ್ಯಮಕ್ಕೆ ಉತ್ತೇಜನ ನೀಡುತ್ತಿದ್ದು, ಕಸಾಯಿಖಾನೆ ಆರಂಭಿಸುವಾಗ ಶೇ.50ರಷ್ಟು ಹಣಕಾಸಿನ ಸಹಾಯವನ್ನು ನೀಡುತ್ತದೆ. ಭಾರತದಿಂದ ರಫ್ತಾಗುತ್ತಿರುವ ಒಟ್ಟು ಮಾಂಸ ಮಾರಾಟದ ಲ್ಲಿ ಸರಿಸುಮಾರು ಶೇ. 50ರಷ್ಟು ಮಾಂಸ ರಫ್ತಾಗುವುದು ಉತ್ತರಪ್ರದೇಶದಿಂದಲೇ. ಅಖಿಲ ಭಾರತ ಮಾಂಸ ಮತ್ತು ಜಾನುವಾರು ರಫ್ತುದಾರರ ಸಂಘದ ಪ್ರಕಾರ ಈ ಉದ್ಯಮದಲ್ಲಿ ಪರೋಕ್ಷ ಅಥವಾ ಪ್ರತ್ಯಕ್ಷವಾಗಿ ತೊಡಗಿಸಿಕೊಂಡವರ ಸಂಖ್ಯೆ 25 ಲಕ್ಷಕ್ಕಿಂತಲೂ ಹೆಚ್ಚು ಇದೆ.

ಕಸಾಯಿಖಾನೆಗಳ ನಿಷೇಧ ಈ ಉದ್ಯಮದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ?

ಉತ್ತರಪ್ರದೇಶದ ಪಶು ಸಂಗೋಪನೆ ಇಲಾಖೆ ಪ್ರಕಾರ, ಪ್ರತೀ ವರ್ಷ ₹26,685 ಕೋಟಿ ಮೌಲ್ಯದ ಮಾಂಸ ರಫ್ತಾಗುತ್ತದೆ. ಭಾರತ ಮಾಂಸ ಮತ್ತು ಜಾನುವಾರು ರಫ್ತುದಾರರ ಸಂಘದ ಪ್ರಕಾರ, ಕಸಾಯಿಖಾನೆಗಳನ್ನು ನಿಷೇಧಿಸಿದರೆ ರಾಜ್ಯದ ಆದಾಯದಲ್ಲಿ ₹11,350 ಕೋಟಿ ನಷ್ಟವುಂಟಾಗುತ್ತದೆ. ಇದೇ ರೀತಿ ಮುಂದಿನ 5 ವರ್ಷಗಳ ಕಾಲ ಮುಂದುವರಿದರೆ  ಆದಾಯದಲ್ಲಿ ₹56,000 ಕೋಟಿ  ನಷ್ಟವುಂಟಾಗಲಿದೆ. 2015-16ರ ಅವಧಿಯಲ್ಲಿ ಉತ್ತರಪ್ರದೇಶವು  5,65,958.20 ಮೆಟ್ರಿಕ್ ಟನ್ ಕೋಣದ ಮಾಂಸ ರಫ್ತು ಮಾಡಿದೆ.

ಕಾನೂನು ಏನನ್ನುತ್ತದೆ?

ಉತ್ತರಪ್ರದೇಶ ಮುನ್ಸಿಪಲ್ ಕಾಯ್ದೆ,1959 ಪ್ರಕಾರ ನಗರ ವ್ಯಾಪ್ತಿಯಲ್ಲಿರುವ ಕಸಾಯಿಖಾನೆಗಳಲ್ಲಿ ಶುಚಿತ್ವವನ್ನು ಕಡ್ಡಾಯವಾಗಿ ಪಾಲಿಸಬೇಕು. ಇಲ್ಲಿ ತಾಜಾ ಮಾಂಸಗಳನ್ನು ಜನರಿಗೆ ಒದಗಿಸುವ ಜತೆಗೆ ನೈರ್ಮಲ್ಯವನ್ನು ಕಾಪಾಡಬೇಕು ಎಂದು ಹೇಳಲಾಗಿದೆ. ಈ ಕಾಯ್ದೆಯ ಸೆಕ್ಷನ್ 421 ರಿಂದ 430ರ ವರೆಗಿರುವ ನಿಯಮಗಳಲ್ಲಿ ಕಸಾಯಿಖಾನೆಗಳ ಕಾರ್ಯ ರೀತಿ, ಪ್ರಾಣಿಗಳ ಮಾರಾಟ ಮತ್ತು ಖಾಸಗಿ ಕಸಾಯಿಖಾನೆಗಳ ನಿಯಂತ್ರಣ ಬಗ್ಗೆ ಹೇಳಲಾಗಿದೆ.

[related]

ಪರವಾನಗಿ ಇಲ್ಲದೇ ಇದ್ದರೆ ಏನಾಗುತ್ತದೆ?

ಸಂಬಂಧಪಟ್ಟ ಇಲಾಖೆ ಅಥವಾ ಕಚೇರಿಯಿಂದ ನೋಂದಣಿ ಪತ್ರ ಹೊಂದಿರದೇ ಇರುವ ಕಸಾಯಿಖಾನೆಗಳ ಮೇಲೆ ಸರ್ಕಾರ ಕ್ರಮಕೈಗೊಳ್ಳಲಿದೆ. ಕಸಾಯಿಖಾನೆ ನಡೆಸಲು ಬೇಕಾಗಿರುವ ದಾಖಲೆಗಳು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎನ್‍ಒಸಿ  ಮತ್ತು ಮುನ್ಸಿಪಲ್ ಅಥಾರಿಟಿಯಿಂದ ಅನುಮತಿ ಪಡೆದಿರಬೇಕಾಗಿದೆ.

ಪ್ರಮಾಣ ಪತ್ರ ರದ್ದು ಆಗುವುದು ಯಾವಾಗ?

ಕಸಾಯಿಖಾನೆಗಳಲ್ಲಿ ಮಾಂಸ ಸಂಸ್ಕರಣೆ ಗುಣಮಟ್ಟ ಕಾಪಾಡದೇ ಇದ್ದರೆ,  ವಿದೇಶ ವ್ಯಾಪಾರನೀತಿಯ ಉಲ್ಲಂಘನೆ, ಆಹಾರ ಸುರಕ್ಷತೆ ನಿಯಮದ ಉಲ್ಲಂಘನೆ ಅಥವಾ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಉಲ್ಲಂಘಿಸಿದರೆ ಕಸಾಯಿಖಾನೆಗಳಿಗೆ ನೀಡಲಾಗಿರುವ ಪ್ರಮಾಣಪತ್ರವನ್ನು ರದ್ದು ಅಥವಾ ನಿರಾಕರಿಸಲಾಗುವುದು.

ಜಾನುವಾರು ಗಣತಿ

ಜಾನುವಾರುಗಳ ಗಣತಿ ಅಂಕಿ ಅಂಶದ ಪ್ರಕಾರ, 1997ರಲ್ಲಿ ಉತ್ತರಪ್ರದೇಶದಲ್ಲಿ 189.96 ಲಕ್ಷ ಇದ್ದ ಕೋಣಗಳ ಸಂಖ್ಯೆ  2012ರ ಹೊತ್ತಿಗೆ 306.25 ಲಕ್ಷಕ್ಕೆ ಏರಿಕೆಯಾಗಿತ್ತು. 1997ರಲ್ಲಿ ಎಮ್ಮೆ ಗಳ ಸಂಖ್ಯೆ 141.09 ಲಕ್ಷ ಇತ್ತು 2012ರಲ್ಲಿ  ಇದು  257.11 ಲಕ್ಷಕ್ಕೇರಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.