ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯಾಯದೇವತೆಯ ಮರುಕಲ್ಪನೆಗೆ ಸಕಾಲ

ನ್ಯಾಯದೇವತೆಯ ಮಂದಿರ ಸಂಪೂರ್ಣವಾಗಿ ಜೀರ್ಣವಾಗುವುದಕ್ಕಿಂತ ಮುಂಚೆಯೇ ಜೀರ್ಣೋದ್ಧಾರ ಕಾರ್ಯ ನಡೆಯಬೇಕಾಗಿದೆ
Last Updated 11 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ
l ಸೂರ್ಯಪ್ರಕಾಶ್‌ ಬಿ.ಎಸ್‌.
ನ್ಯಾಯದೇವತೆಯ ಕಲ್ಪನೆ ನಮಗೆಲ್ಲ ಇದ್ದೇ ಇದೆ. ಒಂದು ಕೈಯಲ್ಲಿ ತಕ್ಕಡಿ, ಮತ್ತೊಂದರಲ್ಲಿ ಕತ್ತಿ, ಕಣ್ಣಿಗೆ ಪಟ್ಟಿ. ಪೂರ್ವಾಪರಗಳನ್ನೂ, ಉಭಯಪಕ್ಷಗಳ ವಾದ– ಪ್ರತಿವಾದಗಳನ್ನೂ ತೂಕ ಮಾಡಲು ತಕ್ಕಡಿ; ಶಾಸನಬದ್ಧ ಕಾನೂನನ್ನು ಕಾರ್ಯರೂಪಕ್ಕೆ ತರುವುದಕ್ಕೆ, ಕಾರ್ಯಗತವಾಗದಿದ್ದರೆ ದಂಡಿಸುವುದಕ್ಕೆ ಕತ್ತಿ; ನಿಷ್ಪಕ್ಷಪಾತವನ್ನು ಕಣ್ಣಿನ ಪಟ್ಟಿ ಸಂಕೇತಿಸುತ್ತದೆ.
 
ಭಾರತೀಯ ನ್ಯಾಯಾಂಗ ವ್ಯವಸ್ಥೆಯ ನ್ಯಾಯದೇವತೆಗೆ ಇನ್ನೂ ಎರಡು ಭುಜಗಳನ್ನು ಸೇರಿಸಬೇಕಾದ ಅನಿವಾರ್ಯ ಇಂದು ಬಂದೊದಗಿದೆ. ಒಂದರಲ್ಲಿ ಗಡಿಯಾರವನ್ನು ಹಿಡಿದು ಮತ್ತೊಂದರಲ್ಲಿ ಅಭಯಮುದ್ರೆಯನ್ನು ತೋರಿಸಬೇಕಾಗಿದೆ. ನಿಗದಿತ ಸಮಯಕ್ಕೆ ನ್ಯಾಯ ದೊರಕಿಸಿಕೊಡುವುದು ನ್ಯಾಯಾಂಗಕ್ಕೆ ಸಾಧ್ಯವಾಗದಿರುವ ಸಂಗತಿ ಜನಸಾಮಾನ್ಯರಿಗೆ ತಿಳಿದೇ ಇದೆ.
 
ಈ ಕಾರಣದಿಂದಲೇ ‘ಕೋರ್ಟನ್ನು ಸುತ್ತಿಸುತ್ತೇನೆ’ ಎಂಬ ಬೆದರಿಕೆಯ ಮಾತು ಜನಸಾಮಾನ್ಯರ ನಡುವೆ ಬರುವುದನ್ನು ಸಾಮಾನ್ಯವಾಗಿ ಕೇಳುತ್ತೇವೆ. ಸಕಾಲದಲ್ಲಿ ಪ್ರಕರಣಗಳು ಇತ್ಯರ್ಥಗೊಳ್ಳುತ್ತವೆ ಎಂಬ ಆಶ್ವಾಸನೆ ನೀಡಲು ಗಡಿಯಾರ! ಸುಲಭ ಸರಳ ಕ್ರಮದಲ್ಲಿ ನ್ಯಾಯ ದೊರಕಿಸಿಕೊಡುವೆನೆಂದು ಭರವಸೆ ನೀಡಲು ಅಭಯಮುದ್ರೆ! 
 
ಇಂದು ಮೊಕದ್ದಮೆ ದಾಖಲಿಸುವಾಗ ಅದು ಯಾವಾಗ ಅಂತ್ಯಗೊಳ್ಳುತ್ತದೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಈ ಖಚಿತತೆ ಇರದೆ ನ್ಯಾಯಾಲಯಗಳ ಮೇಲಿನ ಭರವಸೆ ಇಳಿಮುಖವಾಗುತ್ತಿದೆ. ಪ್ರಕರಣದ ಅಂತ್ಯದ ಮಾತು ಹಾಗಿರಲಿ, ಆ ಪ್ರಕರಣ ಹಲವು ಹಂತಗಳನ್ನು ದಾಟಿ ಬರಲು (ನೋಟಿಸ್‌, ಸಾಕ್ಷ್ಯ, ವಾದ ಮಂಡನೆ) ನಿರ್ದಿಷ್ಟವಾಗಿ ಇಷ್ಟು ದಿನಗಳು ಹಿಡಿಯುತ್ತವೆ ಎಂದು ಹೇಳಲು ಸಹ ಸಾಧ್ಯವಿಲ್ಲದ ಪರಿಸ್ಥಿತಿ ಇದೆ.
 
ಕೆಲವು ದಿನಗಳ ಹಿಂದಷ್ಟೇ ಸುಪ್ರೀಂ ಕೋರ್ಟ್‌, ಕ್ರಿಮಿನಲ್ ಪ್ರಕರಣಗಳಿಗೆ ಕಾಲಮಿತಿಯನ್ನು ಸೂಚಿಸಿದೆ. ಕಳೆದ ಮೂವತ್ತು ವರ್ಷಗಳಿಂದಲೂ ಇಂತಹ ಸೂಚನೆಗಳನ್ನು ನೀಡಲಾಗುತ್ತಿದೆ. ಸಿವಿಲ್ ಪ್ರಕರಣಗಳನ್ನು ವಿಲೇವಾರಿ ಮಾಡಲು ಕಾಲಮಿತಿಯನ್ನು ವಿಧಿಸುವ ನಿಯಮವಿದೆ.
 
‘The Karnataka Case Flow Management Rules, 2005’ ಪ್ರಕಟಪಡಿಸಿ ಒಂದು ದಶಕವೇ ಕಳೆದಿದೆ.  ಪ್ರಕರಣಗಳನ್ನು ಕಾಲಮಿತಿಯಲ್ಲಿ ವಿಚಾರಣೆ ನಡೆಸಲು ಅನುವಾಗಿಸುವ ಇಂತಹ  ನಿಯಮವು 15ಕ್ಕೂ ಹೆಚ್ಚು ಹೈಕೋರ್ಟ್‌ಗಳಲ್ಲಿ ಜಾರಿಗೆ ಬಂದಿದೆ. ಆದರೆ ಪಾಲನೆಯಾಗುತ್ತಿಲ್ಲ.   
 
ಸುಪ್ರೀಂ ಕೋರ್ಟ್‌ ತೀರ್ಪು, ಪಾಲನೆಯಾಗದ ನಿಯಮ ಹಾಗೂ ಕೋರ್ಟುಗಳ ದೈನಂದಿನ ಕಾರ್ಯ ಚಟುವಟಿಕೆಗಳ ನಡುವಿನ ವೈರುಧ್ಯಗಳನ್ನು ಗಮನಿಸಿದರೆ  ಅಚ್ಚರಿಯಾಗದಿರದು. ಶಾಸನವಿಧಿಗಳನ್ನು ಎತ್ತಿ ಹಿಡಿಯಲು ಮೀಸಲಿರುವ ನ್ಯಾಯಾಲಯಗಳೇ ನಿಯಮಗಳ ಉಲ್ಲಂಘನೆ ಮಾಡುತ್ತಿವೆ! ಇಲ್ಲಿ ನಾವು ಆರೋಪ ಹೊರಿಸುವುದಕ್ಕೂ ಮುನ್ನ ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ಅವಲೋಕಿಸಬೇಕಾಗಿದೆ. ಈ ನಿಯಮಾವಳಿಗಳನ್ನು ಕಾರ್ಯಗತಗೊಳಿಸಲು ವಿಫಲವಾಗಿರುವುದು ಆಡಳಿತ, ಕಾರ್ಯ ನಿರ್ವಹಣೆ ಸಾಮರ್ಥ್ಯದ ಕೊರತೆಯಿಂದ.
 
ಎಂತಹ ದಕ್ಷ ನ್ಯಾಯಾಧೀಶರೇ ಇರಲಿ, ನ್ಯಾಯಾಲಯಗಳ ದೈನಂದಿನ ಕಾರ್ಯಗಳು ಅವರ ಕೆಲಸದ ವೇಳೆಯ ಬಹುಪಾಲನ್ನು ಕಬಳಿಸುತ್ತವೆ. ಅಧೀನ ನ್ಯಾಯಾಲಯಗಳಲ್ಲಿ ಪ್ರತಿದಿನ ಸರಿಸುಮಾರು 80ರಿಂದ 100 ಪ್ರಕರಣಗಳನ್ನು ವಿಚಾರಣೆಗೆ ಕರೆಯಲಾಗುತ್ತದೆ. ಇದರಲ್ಲಿ ಹತ್ತೋ ಇಪ್ಪತ್ತೋ ಪ್ರಕರಣಗಳನ್ನು ಕೈಗೆತ್ತಿಕೊಳ್ಳಬಹುದು.
 
ಇಲ್ಲಿನ ನ್ಯಾಯಾಧೀಶರು ಕೋರ್ಟಿನ ಸರಿಸುಮಾರು ಶೇ 45ರಷ್ಟು ಸಮಯವನ್ನು ಮುಂದೂಡಿಕೆ, ನೋಟಿಸ್, ಸಮನ್ಸ್‌ ಜಾರಿಗೇ ವ್ಯಯಿಸುತ್ತಾರೆ. ಒಂದು ಅಂದಾಜಿನಂತೆ, ವರ್ಷಕ್ಕೆ ಸುಮಾರು ₹ 100- 150 ಕೋಟಿಯನ್ನು ಇಂತಹ ಚಟುವಟಿಕೆಗಳಿಗೆ ವ್ಯಯಿಸಲಾಗುತ್ತಿದೆ. ಹೀಗಿದ್ದಾಗ ಸುಧಾರಣೆಗೆ ಬೇಕಾದ ಸಮಯ, ಉತ್ಸಾಹ ಎಲ್ಲಿಂದ ಬರಬೇಕು? ಈ ನಿಟ್ಟಿನಲ್ಲಿ ನ್ಯಾಯಾಂಗ ತನ್ನ ಸುಧಾರಣೆಗೆಂದೇ ಕೆಲವು ದಕ್ಷ ಆಡಳಿತಗಾರರನ್ನು ಮೀಸಲಿಟ್ಟು, ಅಗತ್ಯ ಸಂಪನ್ಮೂಲಗಳನ್ನು ಒದಗಿಸಿಕೊಡಬೇಕು.
 
ನ್ಯಾಯಾಂಗದ ಸುಧಾರಣೆಗೆ ಸಂಬಂಧಿಸಿ ಈವರೆಗೆ ಚರ್ಚಿಸಿದ, ಸೂಚಿಸಿದ, ಕಾರ್ಯರೂಪಕ್ಕಿಳಿಸಿದ ಕ್ರಮಗಳಿಗಿಂತ ಮೊಕದ್ದಮೆಗಳ ನಿರ್ವಹಣೆಯ ನಿಯಮ (Case Flow Management Rules) ಭಿನ್ನವಾಗಿದೆ.
 
ಸಾಮಾನ್ಯವಾಗಿ ನ್ಯಾಯಾಂಗದ ಸುಧಾರಣೆಯೆಂದರೆ ಕೋರ್ಟುಗಳ ಸಂಖ್ಯೆಯನ್ನು ಹೆಚ್ಚಿಸುವಂಥ, ಅಧಿಕ ನ್ಯಾಯಾಧೀಶರನ್ನು ನೇಮಕ ಮಾಡುವಂತಹ ಅಧಿಕ ಸಂಪನ್ಮೂಲಗಳನ್ನು ಬೇಡುವ ಕ್ರಮಗಳೇ ಆಗಿರುತ್ತವೆ. ನ್ಯಾಯಾಲಯಗಳು  ಪ್ರಕರಣಗಳನ್ನು ನಿರ್ವಹಿಸುವ ರೀತಿಯ ಬಗ್ಗೆ ಕಾನೂನು ಪಂಡಿತರು ಹೆಚ್ಚು ಗಮನ ಹರಿಸಿಲ್ಲ. ಆದರೆ ಈ ನಿಯಮ ಪ್ರಥಮ ಬಾರಿಗೆ ನ್ಯಾಯಾಲಯಗಳ ದೈನಂದಿನ ಚಟುವಟಿಕೆಗಳ ಬಗೆಗೆ ಗಮನ ಹರಿಸುತ್ತದೆ. 
 
ಕರ್ನಾಟಕ ಮೊಕದ್ದಮೆಗಳ ನಿರ್ವಹಣೆಯ ನಿಯಮ– 2006ರಲ್ಲಿ ಕೋರ್ಟು ದಿನಂಪ್ರತಿ ಹೀಗೆ ಕೆಲಸ ಮಾಡಬೇಕೆಂದು ಸ್ಥೂಲವಾಗಿ ವಿವರಿಸಲಾಗಿದೆ.
1. ಬಾಕಿ ಸಿವಿಲ್ ಮೊಕದ್ದಮೆಗಳನ್ನು ವಿವಾದದ ವಿಷಯಾನುಸಾರ ಆದ್ಯತೆ ಮೇರೆಗೆ (Track) ವಿಂಗಡಿಸಲಾಗುತ್ತದೆ. 
2. ಮೊದಲ ಆದ್ಯತೆಯ ಮೊಕದ್ದಮೆಗಳನ್ನು 9 ತಿಂಗಳೊಳಗೆ, 2ನೇ ಆದ್ಯತೆಯ ಮೊಕದ್ದಮೆಗಳನ್ನು 12 ತಿಂಗಳೊಳಗೆ, 3 ಹಾಗೂ 4ನೇ ಆದ್ಯತೆಯ ಮೊಕದ್ದಮೆಗಳನ್ನು 24 ತಿಂಗಳೊಳಗೆ ವಿಲೇವಾರಿ ಮಾಡಲು ಯತ್ನಿಸಬೇಕು. 
3. ಸಮನ್ಸ್ ನೀಡುವ ಕ್ರಮದಲ್ಲಿ ಸರಳೀಕರಣ ಪಾಲನೆಯಾಗಬೇಕು.
4. ಪ್ರಕರಣಗಳನ್ನು ವಿವಿಧ ಹಂತಗಳಲ್ಲಿ ಖಚಿತವಾಗಿ ಪ್ರತ್ಯೇಕಿಸುವುದು. 
5. ಪ್ರತಿಯೊಂದು ನ್ಯಾಯಾಲಯ ಎರಡು ವಿಚಾರಣಾ ಪಟ್ಟಿಗಳನ್ನು ಸಿದ್ಧಪಡಿಸಬೇಕು: ಪ್ರಾಥಮಿಕ ಹಂತದಲ್ಲಿರುವ (ನೋಟಿಸ್, ಸಮನ್ಸ್, ಹಾಜರಾಗುವಿಕೆ ಇತ್ಯಾದಿ) ಪ್ರಕರಣಗಳೆಲ್ಲ ಪಟ್ಟಿ ಒಂದರಲ್ಲಿ, ಸಾಕ್ಷಿ, ವಾದ, ಪ್ರತಿವಾದದಂತಹ ಹಂತಗಳಲ್ಲಿ ಇರುವವೆಲ್ಲವೂ ಪಟ್ಟಿ ಎರಡರಲ್ಲಿ.
6. ಪಟ್ಟಿ ಒಂದರಲ್ಲಿರುವ ಪ್ರಕರಣಗಳನ್ನು ಕೋರ್ಟಿನ ಸಿಬ್ಬಂದಿ ವರ್ಗದವರೇ ನಿಭಾಯಿಸಬಹುದು. ಪಟ್ಟಿ ಎರಡರಲ್ಲಿರುವ ಕೇಸುಗಳನ್ನು ನ್ಯಾಯಾಧೀಶರು ಆಲಿಸಬೇಕು. 
7. ಪಟ್ಟಿ ಎರಡರಲ್ಲಿ ದಿನಕ್ಕೆ ಹತ್ತಕ್ಕಿಂತ ಹೆಚ್ಚು ಪ್ರಕರಣಗಳಿರಬಾರದು!
 
ಕೋರ್ಟುಗಳ ಬಗ್ಗೆ ಸಾಮಾನ್ಯ ಜ್ಞಾನ ಇರುವವರಿಗೂ ಈ ನಿಯಮವು ಎಷ್ಟು ತರ್ಕಬದ್ಧ ಹಾಗೂ ಉಪಯುಕ್ತ ಎಂದು ತಿಳಿಯುತ್ತದೆ. ಇದನ್ನು ಹತ್ತು ವರ್ಷಗಳಾದರೂ ಪಾಲಿಸದೇ ಇರುವುದು ನಮ್ಮ ದುರದೃಷ್ಟ. ಮತ್ತೊಂದು ಅಹಿತಕರ ಸಂಗತಿಯೆಂದರೆ, ಇಂತಹ ನಿಯಮವು ದೇಶದ ಬಹುತೇಕ ರಾಜ್ಯಗಳಲ್ಲಿದೆ. ಆದರೆ ಎಲ್ಲಿಯೂ ಪಾಲನೆಯಾಗುತ್ತಿಲ್ಲ.
 
ಕಾನೂನು ಸಂಶೋಧನಾ ಸಂಸ್ಥೆಯಾದ ‘ದಕ್ಷ್‌’ನ ಅಂದಾಜಿನಂತೆ, ಅಧೀನ ನ್ಯಾಯಾಲಯಗಳಲ್ಲಿನ ಸುಮಾರು 40  ಸಾವಿರ ಮೊಕದ್ದಮೆಗಳನ್ನು  ಆದ್ಯತೆ ಅನುಸಾರ ವಿಂಗಡಿಸಿ, ಎಷ್ಟು ದಿನಗಳಿಂದ ಬಾಕಿ ಇವೆ ಮತ್ತು ಮೊಕದ್ದಮೆಗಳ ನಿರ್ವಹಣೆ ನಿಯಮದಲ್ಲಿನ ಕಾಲಮಿತಿಯನ್ನು ಹೋಲಿಸಿ ನೋಡಿದರೆ ವಾಸ್ತವದ ಅರಿವಾಗುತ್ತದೆ.
 
ಹೈಕೋರ್ಟ್‌ಗಳು ಇಂತಹ ಜನಸ್ನೇಹಿ ನಿಯಮವನ್ನು ಹೇಗೆ ಕಾರ್ಯರೂಪಕ್ಕೆ ತರಬಹುದೆಂದು ಆಲೋಚಿಸಬೇಕಾಗಿದೆ. ನ್ಯಾಯದೇವತೆಯ ಮಂದಿರ ಸಂಪೂರ್ಣವಾಗಿ ಜೀರ್ಣವಾಗುವುದಕ್ಕಿಂತ ಮುಂಚೆಯೇ ಜೀರ್ಣೋದ್ಧಾರ ನಡೆಯಬೇಕಾಗಿದೆ. ಎರಡು ಹೊಸ ಭುಜಗಳ ಜೋಡಣೆಯ ಬಗ್ಗೆ ಪ್ರಸ್ತಾಪ ಬಂತು.

ವಾಸ್ತವದಲ್ಲಿ ಈ ಎರಡು ತತ್ವಗಳು ಅಮೂರ್ತವಾಗಿ ನ್ಯಾಯಾಂಗದ ಆದರ್ಶಗಳಲ್ಲಿ ಇದ್ದೇ ಇವೆ. ಅವನ್ನು ಸ್ಫುಟವಾಗಿ ಪ್ರಕಟಪಡಿಸಬೇಕಾದ ಅನಿವಾರ್ಯ ಬಂದಿದೆ. ಈ ಬಾಧ್ಯತೆಯನ್ನು ಹೊರಲು, ದೀಕ್ಷೆ ತೊಡಲು ತಕ್ಕ ಸಂಕಲ್ಪಶಕ್ತಿ ಬೇಕಾಗಿದೆ. ನ್ಯಾಯದೇವತೆಯ ಮರುಕಲ್ಪನೆಯಾಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT