ಮಂಗಳವಾರ, 14 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಚಗುಳಿತನ: ರಾಜ್ಯಕ್ಕೆ ಅಗ್ರಸ್ಥಾನ

ದೆಹಲಿಯ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್‌ನ ಸಮೀಕ್ಷೆಯಲ್ಲಿ ಬಹಿರಂಗ
Last Updated 27 ಏಪ್ರಿಲ್ 2017, 19:41 IST
ಅಕ್ಷರ ಗಾತ್ರ

ನವದೆಹಲಿ: ಸಣ್ಣ ಸರ್ಕಾರಿ ಸೇವೆಗಳನ್ನು ಪಡೆಯಲು ಕಳೆದ ವರ್ಷ ಅತಿ ಹೆಚ್ಚು ಲಂಚಗುಳಿತನ ಅನುಭವಕ್ಕೆ ಬಂದಿರುವ 20 ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ.

ನೋಟು ರದ್ದತಿ ಕ್ರಮದಿಂದಾಗಿ ದೇಶದಲ್ಲಿ ಲಂಚಗುಳಿತನ ತಗ್ಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಹಾಗೆಂದು ಬಿಜೆಪಿ ಆಡಳಿತದ ಮಹಾರಾಷ್ಟ್ರ, ಜಾರ್ಖಂಡ್‌, ಛತ್ತೀಸ್ ಗಡ ಮತ್ತು ರಾಜಸ್ತಾನ ಈ ಸಮೀಕ್ಷೆಯಲ್ಲಿ ಬಹಳ ಹಿಂದೇನೂ ಬಿದ್ದಿಲ್ಲ. ಸಾರ್ವಜನಿಕರ ಗ್ರಹಿಕೆ, ಅನುಭವ ಹಾಗೂ ಅಂದಾಜು ಅಂಶಗಳನ್ನು ಆಧರಿಸಿ ದೆಹಲಿಯ ಸೆಂಟರ್ ಫಾರ್ ಮೀಡಿಯಾ ಸ್ಟಡೀಸ್ ನಡೆಸಿರುವ ‘2017ರ ಸಿ.ಎಂ.ಎಸ್- ಇಂಡಿಯಾ ಲಂಚಗುಳಿತನ ಸಮೀಕ್ಷೆ’ಯಲ್ಲಿ ಈ ಅಂಶ ಹೊರಬಿದ್ದಿದೆ.

ಈ ಸಂಸ್ಥೆಯು ನಡೆಸಿದ ಹನ್ನೊಂದನೆಯ ಸುತ್ತಿನ ಈ ವಾರ್ಷಿಕ ಸಮೀಕ್ಷೆಯ ಪ್ರಕಾರ ಕಳೆದ ಒಂದು ವರ್ಷದ ಅವಧಿಯಲ್ಲಿ ಲಂಚಗುಳಿತನ ಹೆಚ್ಚಿದೆ ಎಂದು 20 ರಾಜ್ಯಗಳ ಶೇ43ರಷ್ಟು ಕುಟುಂಬಗಳು ಹೇಳಿವೆ. 2005ರಲ್ಲಿ ಇದೇ ಸಂಸ್ಥೆಯು ನಡೆಸಿದ್ದ ಇಂತ­ಹುದೇ ಸಮೀಕ್ಷೆಯಲ್ಲಿ ಲಂಚಗುಳಿತನ ಹೆಚ್ಚಿದೆಎಂದು ದೂರಿದ್ದ ಕುಟುಂಬಗಳ ಪ್ರಮಾಣ ಶೇ 73ರಷ್ಟಿತ್ತು. 2005ರ ಶೇ 73ರ ಪ್ರಮಾಣಕ್ಕೆ ಹೋಲಿಸಿ­ದರೆ 20016ರ ಹೊತ್ತಿಗೆ ಲಂಚಗುಳಿತನ ಶೇ 43ಕ್ಕೆ ತಗ್ಗಿದೆ.

ಕಳೆದ ಒಂದು ವರ್ಷದ ಅವಧಿಯಲ್ಲಿ ಸರ್ಕಾರಿ ಸೇವೆ ಪಡೆಯಲು ನೀಡಬೇಕಾದ ಲಂಚದ ಪ್ರಮಾಣ ಹೆಚ್ಚಿದೆ ಎಂಬ ಗ್ರಹಿಕೆ ವ್ಯಕ್ತವಾಗಿರುವ ರಾಜ್ಯಗಳು- ಒಡಿಶಾ (ಶೇ 68), ಕರ್ನಾಟಕ (ಶೇ 65), ಜಾರ್ಖಂಡ್ (ಶೇ 59), ಬಿಹಾರ (ಶೇ 59), ಹಾಗೂ ಛತ್ತೀಸ್‌ಗಡ (ಶೇ 56). ಸಮೀಕ್ಷೆಗೆ ಒಳಪಡಿಸಿದ ಅರ್ಧಕ್ಕಿಂತ ಹೆಚ್ಚು ಮಂದಿ ಈ ಗ್ರಹಿಕೆ ಹೊಂದಿದ್ದಾರೆ.

ಮಧ್ಯಪ್ರದೇಶ, ಆಂಧ್ರ ಹಾಗೂ ಅಸ್ಸಾಂಗಳಲ್ಲಿ ಸಮೀಕ್ಷೆಗೆ ಒಳಪಡಿಸಿದವರ ಪೈಕಿ, ‘ಲಂಚಗುಳಿತನ ಏರಿಯೂ ಇಲ್ಲ, ತಗ್ಗಿಯೂ ಇಲ್ಲ’ ಎಂದು ಅರ್ಧಕ್ಕಿಂತಲೂ ಹೆಚ್ಚು ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

20 ರಾಜ್ಯಗಳ ಬಹುತೇಕ ಎಲ್ಲ ಕುಟುಂಬಗಳೂ ಸೇವೆ ಪಡೆಯಲು ಸರ್ಕಾರಿ ನೌಕರರಿಗೆ ಲಂಚ ತೆರದೇ ಬೇರೆ ದಾರಿಯೇ ಇರಲಿಲ್ಲ. ಲಂಚ ನೀಡ­ಲಾಗದ್ದಕ್ಕೆ ಸೇವೆಯನ್ನು ನಿರಾಕರಿಸಿದ ಪಟ್ಟಿಯ ಮೊದಲ ಮೂರು ಇಲಾಖೆಗಳು ಭೂ ದಾಖಲೆ, ವಸತಿ ಹಾಗೂ ಪೊಲೀಸ್ ಇಲಾಖೆ. ಕುಟುಂಬಗಳು ನೀಡಿರುವ ಕನಿಷ್ಠ ಮತ್ತು ಗರಿಷ್ಠ ಲಂಚದ ಮೊತ್ತ ಅನುಕ್ರಮವಾಗಿ ₹ 20,000 ಮತ್ತು ₹ 50 ,000. ಸರ್ಕಾರಿ ಶಾಲೆಯ ಪ್ರವೇಶ ಅರ್ಜಿ ನಮೂನೆ ಪಡೆಯಲು ₹ 20  ತೆತ್ತರೆ, ಸರ್ಕಾರಿ ಶಾಲೆಯಲ್ಲಿ ಪ್ರವೇಶ ಗಳಿಕೆಗೆ ಮತ್ತು ನ್ಯಾಯಾಲಯದಲ್ಲಿ ಕೇಸಿನ ಶೀಘ್ರ ವಿಚಾರಣೆ ದಿನಾಂಕ ಪಡೆಯಲು ₹ 50 ಸಾವಿರ ವರೆಗಿನ ಲಂಚ ನೀಡಿರುವ ಕುಟುಂಬಗಳಿವೆ.

ಶಾಲಾ ಪ್ರವೇಶಕ್ಕೆ ಅತಿ ಹೆಚ್ಚು ಲಂಚ (₹ 50 ಸಾವಿರ) ನೀಡಲಾಗಿರುವ ರಾಜ್ಯ ಮಹಾರಾಷ್ಟ್ರ. ಸಾಲದ ಅರ್ಜಿಗೆ ₹ ಹತ್ತು  ಮತ್ತು ಶಾಲಾ ಪ್ರವೇಶ ಅರ್ಜಿ ನಮೂನೆ ಪಡೆಯಲು ₹ 20 ಅತಿ ಕಡಿಮೆ ಲಂಚದ ಮೊತ್ತಗಳನ್ನು ನೀಡಲಾಗಿರುವ ರಾಜ್ಯಗಳು ಅನುಕ್ರಮವಾಗಿ ಜಾರ್ಖಂಡ ಮತ್ತು ಕರ್ನಾಟಕ.
ಕರ್ನಾಟಕದಲ್ಲಿ ಸಮೀಕ್ಷೆಗೆ ಒಳಪಡಿಸಿದ ಕುಟುಂಬಗಳಿಗೆ ಸೇರಿದ ಶೇ 65 ಮಂದಿಯ ಪ್ರಕಾರ ಕಳೆದ ವರ್ಷ ಲಂಚಗುಳಿತನ ಹೆಚ್ಚಿತ್ತು. ಶೇ 35ರಷ್ಟು ಮಂದಿಯ ಪ್ರಕಾರ ಲಂಚಗುಳಿತನ ಮೊದಲಿದ್ದಷ್ಟೇ ಇತ್ತು. ಕರ್ನಾಟಕದ ಶೇ 77ರಷ್ಟು ಕುಟುಂಬಗಳು ಲಂಚಗುಳಿತನದ ಬಾಧೆಯನ್ನು ಅನುಭವಿಸಿವೆ. ಇಂತಹ ಕುಟುಂಬಗಳ ಪ್ರಮಾಣ ಆಂಧ್ರ­ಪ್ರದೇಶದಲ್ಲಿ (ಶೇ 74), ತಮಿಳು­ನಾಡಿನಲ್ಲಿ ಶೇ 68, ಮಹಾರಾಷ್ಟ್ರದಲ್ಲಿ ಶೇ57, ಜಮ್ಮು-ಕಾಶ್ಮೀರದಲ್ಲಿ ಶೇ 44 ಹಾಗೂ ಗುಜರಾತಿನಲ್ಲಿ ಶೇ 37.

ಪ್ರತಿ ರಾಜ್ಯದಲ್ಲೂ ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳನ್ನು ಒಳಗೊಂಡ ಎರಡು ಜಿಲ್ಲೆಗಳ 150 ಕುಟುಂಬಗಳ ಗ್ರಹಿಕೆ-ಅನುಭವವನ್ನು ಆಧರಿಸಿ ಈ ನಿರ್ಣಯಕ್ಕೆ ಬರಲಾಗಿದೆ. ಎರಡು ಜಿಲ್ಲೆಗಳ ಪೈಕಿ ಒಂದು ಆಯಾ ರಾಜ್ಯ ರಾಜಧಾನಿಗೆ ಸೇರಿರುತ್ತದೆ.

ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸಗಡ, ದೆಹಲಿ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು-ಕಾಶ್ಮೀರ, ಜಾರ್ಖಂಡ, ಕರ್ನಾ­ಟಕ, ಕೇರಳ, ಮಧ್ಯಪ್ರದೇಶ, ಮಹಾ­ರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ತಾನ, ತಮಿಳುನಾಡು, ಉತ್ತರಪ್ರದೇಶ ಹಾಗೂ ಪಶ್ಚಿಮ ಬಂಗಾಳದ ಕುಟುಂಬಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು. ನೋಟು ರದ್ದತಿಯ ಕಾರಣ ಲಂಚಗುಳಿತನ ತಗ್ಗಿತೆಂದು ಅರ್ಧಕ್ಕಿಂತ ಹೆಚ್ಚು ಕುಟುಂಬಗಳು (ಶೇ 56) ಅಭಿಪ್ರಾಯಪಟ್ಟಿವೆ.

ಪೊಲೀಸ್ ಇಲಾಖೆಯಲ್ಲಿ ಹೆಚ್ಚು

ಕಳೆದ ಒಂದು ವರ್ಷದಲ್ಲಿ ಲಂಚದ ಪ್ರಮಾಣ ಜಾಸ್ತಿಯಾಗಿದೆ ಎಂಬ ಸಾರ್ವಜನಿಕ ಗ್ರಹಿಕೆ ಪೊಲೀಸ್ ಇಲಾಖೆಯ ಕುರಿತದ್ದು ಎಂದು ಸಮೀಕ್ಷೆ ತಿಳಿಸಿದೆ. ಆನಂತರದ ಸ್ಥಾನ ಸಾರ್ವಜನಿಕ ವಿತರಣಾ ವ್ಯವಸ್ಥೆ, ವಿದ್ಯುಚ್ಛಕ್ತಿ ಇಲಾಖೆ ಹಾಗೂ ನ್ಯಾಯಾಂಗ ಸೇವೆಗಳದ್ದು.

ಲಂಚದ ಪ್ರಮಾಣ ಮೊದಲಿದ್ದಷ್ಟೇ ಸ್ಥಿರವಾಗಿದೆ ಎಂದು ಮೂರನೆಯ ಎರಡರಷ್ಟು ಮಂದಿ ಹೇಳಿದ ರಾಜ್ಯ ಮಧ್ಯಪ್ರದೇಶವೊಂದೆ. ಪಂಜಾಬ್, ಉತ್ತರ­ಪ್ರದೇಶ, ಪಶ್ಚಿಮ ಬಂಗಾಳ, ಹರಿಯಾಣ ಹಾಗೂ ಹಿಮಾಚಲ ಪ್ರದೇಶದಲ್ಲಿ  ಕಳೆದ ಒಂದು ವರ್ಷದ ಅವಧಿಯಲ್ಲಿ ತಗ್ಗಿದೆ ಎಂದು ಅರ್ಧಕ್ಕಿಂತ ಹೆಚ್ಚು ಮಂದಿ ಭಾವಿಸಿದ್ದಾರೆ.

ನೋಟು ರದ್ದತಿಯ ಅವಧಿಯಲ್ಲಿ ಲಂಚ ತಗ್ಗಿತು ಎಂದು ಭಾವಿಸಿದ ಕುಟುಂಬಗಳ ಸಂಖ್ಯೆ ಕರ್ನಾಟಕದಲ್ಲಿ ಶೇ 61. ಮೊದಲಿನಷ್ಟೇ ಇತ್ತು ಎಂದವರು ಶೇ 28 ಮತ್ತು ಹೆಚ್ಚಿತು ಎಂದವರು ಶೇ 11. ಮೋದಿ ನೇತೃತ್ವದ ಸರ್ಕಾರ ಸಾರ್ವಜನಿಕ ಸೇವೆಗಳಲ್ಲಿ ಲಂಚಗುಳಿತನ ತಗ್ಗಿಸಲು ಬದ್ಧವಾಗಿದೆ ಎಂದು ಶೇ 40ರಷ್ಟು ಮಂದಿ, ತಕ್ಕಮಟ್ಟಿಗೆ ಮಾತ್ರದ ಬದ್ಥತೆ ಇದು ಎಂಬುದು ಉಳಿದ ಶೇ 40ರಷ್ಟು ಮಂದಿಯ ಅನಿಸಿಕೆ.

ಅತಿ ಲಂಚದ ರಾಜ್ಯಗಳು
* ಕರ್ನಾಟಕ        (ಶೇ 77)
* ಆಂಧ್ರಪ್ರದೇಶ  (ಶೇ 74)
* ತಮಿಳುನಾಡು  (ಶೇ 68)
* ಮಹಾರಾಷ್ಟ್ರ      (ಶೇ 57)
* ಜಮ್ಮು-ಕಾಶ್ಮೀರ (ಶೇ 44)
* ಪಂಜಾಬ್         (ಶೇ 42)
ಮಿತ ರಾಜ್ಯಗಳು
* ಹಿಮಾಚಲಪ್ರದೇಶ (ಶೇ3)
* ಕೇರಳ (ಶೇ 4)

ಅಂಕಿ–ಅಂಶ

₹6,350 ಕೋಟಿಗಳಲ್ಲಿ
ಕಳೆದ ವರ್ಷ 20 ರಾಜ್ಯಗಳಲ್ಲಿ ನೀಡಲಾದ ಒಟ್ಟು ಲಂಚ

₹20,500
2005ರಲ್ಲಿ ನೀಡಲಾಗಿದ್ದ ಲಂಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT