ಶನಿವಾರ, ಜೂಲೈ 4, 2020
23 °C

ಆತಂಕ ದೂರ ಮಾಡಿದ ಕಾವೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆತಂಕ ದೂರ ಮಾಡಿದ ಕಾವೇರಿ

ಬೆಂಗಳೂರು: ಕಾವೇರಿ ಜಲಾನಯನ ‍ಪ್ರದೇಶದಲ್ಲಿ ಕೆಲವು ದಿನಗಳಿಂದ ಉತ್ತಮ ಮಳೆಯಾಗುತ್ತಿರುವ ಕಾರಣ ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಜಲಾಶಯಗಳಲ್ಲಿ ನೀರಿನ ಮಟ್ಟ 51.77 ಟಿಎಂಸಿ ಅಡಿಗೆ ಏರಿದೆ. ಕುಡಿಯುವ ನೀರಿಗಾಗಿ ಈ ಜಲಾನಯನಗಳನ್ನೇ ಅವಲಂಬಿಸಿರುವ ನಗರದ ಜನರಿಗೆ ನಿರಾಳ ಭಾವ ಮೂಡಿದೆ.

ಕೆಆರ್‌ಎಸ್‌, ಹೇಮಾವತಿ, ಹಾರಂಗಿ, ಕಬಿನಿ ಜಲಾಶಯಗಳಲ್ಲಿ ನದಿ ಮಟ್ಟದ ನೀರು (ಸಿಲ್‌ ಲೆವೆಲ್) ಇದ್ದರೆ ಶಿವ ಸಮತೋಲನ ಜಲಾಶಯಕ್ಕೆ ಸರಾಗವಾಗಿ ನೀರು ಹರಿದು ಬರುತ್ತದೆ. ಅಲ್ಲಿಂದ ಪಂಪ್‌ ಮಾಡಿ ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ.ಈ ಜಲಾಶಯಗಳ ಒಟ್ಟು ನೀರಿನ ಸಂಗ್ರಹ 104.5 ಟಿಎಂಸಿ ಅಡಿ. ಜುಲೈನಲ್ಲಿ 20 ಟಿಎಂಸಿ ಅಡಿಯಷ್ಟೇ ನೀರಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ 47.8 ಟಿಎಂಸಿ ಅಡಿಯಷ್ಟು ನೀರಿತ್ತು.

ದಕ್ಷಿಣ ಒಳನಾಡಿನಲ್ಲಿ ಜೂನ್‌ನಲ್ಲಿ ವಾಡಿಕೆಗಿಂತ ಶೇ 37ರಷ್ಟು ಹಾಗೂ ಜುಲೈನಲ್ಲಿ ವಾಡಿಕೆಗಿಂತ ಶೇ 50ರಷ್ಟು ಕಡಿಮೆ ಮಳೆಯಾಗಿತ್ತು. ಆಗಸ್ಟ್‌ನಲ್ಲಿ ವಾಡಿಕೆಗಿಂತ ಶೇ 53ರಷ್ಟು ಹೆಚ್ಚುವರಿ ಮಳೆಯಾಗಿದೆ. ಕಳೆದ ತಿಂಗಳು ಮಲೆನಾಡು ಭಾಗದಲ್ಲೂ ವಾಡಿಕೆಯಷ್ಟು ಮಳೆಯಾಗಿದೆ. ಇದರಿಂದಾಗಿ ಈ ಜಲಾಶಯಗಳಿಗೆ ಸಾಕಷ್ಟು ಪ್ರಮಾಣದ ನೀರು ಹರಿದು ಬಂದಿದೆ.

ಕಾವೇರಿಯ ಐದು ಹಂತದ ಯೋಜನೆಗಳ ಮೂಲಕ ಬೇಸಿಗೆಯಲ್ಲಿ ನಗರಕ್ಕೆ 140 ಕೋಟಿ ಲೀಟರ್‌ ನೀರು ಸರಬರಾಜು ಮಾಡಲಾಗುತ್ತದೆ. ಮಳೆಗಾಲದಲ್ಲಿ ಬೇಡಿಕೆ ಸ್ವಲ್ಪ ಕಡಿಮೆ ಇರುತ್ತದೆ. ಜಲಮಂಡಳಿ ಪ್ರಸ್ತುತ 135 ಕೋಟಿ ಲೀಟರ್‌ ಪೂರೈಕೆ ಮಾಡುತ್ತಿದೆ. ನಗರಕ್ಕೆ ತಿಂಗಳಿಗೆ 1.5 ಟಿಎಂಸಿ ಅಡಿ ನೀರು ಅಗತ್ಯ ಇದೆ. ಅದರ ಪ್ರಕಾರ ಮೇ ಅಂತ್ಯದ ವರೆಗೆ 13 ಟಿಎಂಸಿ ಅಡಿ ನೀರು ಮೀಸಲಿಡಬೇಕಿದೆ.

ಜಲಮಂಡಳಿಯು ನಗರದ ಕೇಂದ್ರ ಭಾಗದ ಜನರಿಗೆ ಎರಡು ದಿನಕ್ಕೊಮ್ಮೆ ಕಾವೇರಿ ನೀರು ಕೊಡುತ್ತಿದೆ. ನಗರಕ್ಕೆ ಹೊಸದಾಗಿ ಸೇರ್ಪಡೆಯಾದ ನಗರಸಭೆ ಹಾಗೂ ಪುರಸಭೆಯ ಜನರಿಗೆ ಕಾವೇರಿ ನೀರು ಸಿಗುವುದು ನಾಲ್ಕೈದು ದಿನಕ್ಕೊಮ್ಮೆ ಮಾತ್ರ.

10 ಹಳ್ಳಿಗಳ ಜನರು ಈಗಲೂ ಕೊಳವೆಬಾವಿ ನೀರನ್ನು ನೆಚ್ಚಿಕೊಂಡಿದ್ದಾರೆ. ನಗರದಲ್ಲಿ ಕಳೆದ ತಿಂಗಳು ದಾಖಲೆಯ ಮಳೆಯಾಗಿದೆ. ಇದರಿಂದಾಗಿ ಅಂತರ್ಜಲ ಮಟ್ಟ ಏರಿದೆ. ಕೆರೆಕೊಳ್ಳಗಳಲ್ಲೂ ಸಾಕಷ್ಟು ಪ್ರಮಾಣದ ನೀರು ಸಂಗ್ರಹಗೊಂಡಿದೆ. ಇದರಿಂದಾಗಿ ಕಾವೇರಿ ಮೇಲಿನ ಅವಲಂಬನೆ ಸ್ವಲ್ಪ ಕಡಿಮೆಯಾಗಿದೆ.

‘ಕಳೆದ ವರ್ಷ ಜಲಾಶಯಗಳಲ್ಲಿ ಕನಿಷ್ಠ ಪ್ರಮಾಣದ ನೀರು ಸಂಗ್ರಹಗೊಂಡಿತ್ತು. ಇದರಿಂದಾಗಿ ಡೆಡ್‌ ಸ್ಟೋರೇಜ್‌ ನೀರನ್ನೂ ಬಳಸಿಕೊಳ್ಳಲು ಚಿಂತನೆ ನಡೆಸಲಾಗಿತ್ತು. ಈ ಸಲ ಪರಿಸ್ಥಿತಿ ಹಾಗಿಲ್ಲ. ಈ ತಿಂಗಳು ಸಹ ಒಳ್ಳೆಯ ಮಳೆಯಾಗುವ ಸೂಚನೆಗಳಿವೆ. ಈ ವರ್ಷ ಅಷ್ಟೇನೂ ಸಮಸ್ಯೆಯಾಗಲಿಕ್ಕಿಲ್ಲ’ ಎಂದು ಜಲಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ವಿಶ್ವಾಸ ವ್ಯಕ್ತಪಡಿಸುತ್ತಾರೆ.

‘ನಗರದ ನೀರಿನ ಬೇಡಿಕೆಗೆ ಸಂಬಂಧಿಸಿದಂತೆ ಅಕ್ಟೋಬರ್‌ನಲ್ಲಿ ನಾವು ಕ್ರಿಯಾಯೋಜನೆ ರೂಪಿಸುತ್ತೇವೆ. ನೀರಿನ ಮಿತ ಬಳಕೆಗೆ ಮೊದಲ ಆದ್ಯತೆ ನೀಡುತ್ತೇವೆ’ ಎಂದು ಅವರು ಹೇಳುತ್ತಾರೆ.

ಅಂಕಿ ಅಂಶಗಳು

* 135 ಕೋಟಿ ಲೀಟರ್‌ ನಗರದ ನಿತ್ಯದ ಕಾವೇರಿ ನೀರಿನ ಬೇಡಿಕೆ.

* 1.5 ಟಿಎಂಸಿ ಅಡಿ ನಗರಕ್ಕೆ ತಿಂಗಳಿಗೆ ಬೇಕಿರುವ ಕಾವೇರಿ ನೀರು.

* 13 ಟಿಎಂಸಿ ಅಡಿ ಮೇ ಅಂತ್ಯದ ವರೆಗೆ ಮೀಸಲಿಡಬೇಕಾದ ನೀರು.

*

ಜಲಾಶಯಗಳ ಸ್ಥಿತಿಗತಿ

ಹಾರಂಗಿ

ಎತ್ತರ (ಸಮುದ್ರ ಮಟ್ಟದಿಂದ) 2859 ಅಡಿ

ಸಾಮರ್ಥ್ಯ 8.07 ಟಿಎಂಸಿ ಅಡಿ

ಈಗಿನ ನೀರಿನ ಮಟ್ಟ 7.76 ಟಿಎಂಸಿ ಅಡಿ

2016ರ ಸೆಪ್ಟೆಂಬರ್‌ 1ರ ಮಟ್ಟ 6.81 ಟಿಎಂಸಿ ಅಡಿ

*

ಹೇಮಾವತಿ

ಎತ್ತರ (ಸಮುದ್ರ ಮಟ್ಟದಿಂದ) 2922 ಅಡಿ

ಸಾಮರ್ಥ್ಯ 35.76 ಟಿಎಂಸಿ ಅಡಿ

ಈಗಿನ ನೀರಿನ ಮಟ್ಟ 15.24 ಟಿಎಂಸಿ ಅಡಿ

2016ರ ಸೆಪ್ಟೆಂಬರ್‌ 1ರ ಮಟ್ಟ 17.03 ಟಿಎಂಸಿ ಅಡಿ

*

ಕೆಆರ್‌ಎಸ್‌

ಎತ್ತರ (ನೆಲ ಮಟ್ಟದಿಂದ) 124.80

ಸಾಮರ್ಥ್ಯ 45.05 ಟಿಎಂಸಿ ಅಡಿ

ಈಗಿನ ನೀರಿನ ಮಟ್ಟ 17.56 ಟಿಎಂಸಿ ಅಡಿ

2016ರ ಸೆಪ್ಟೆಂಬರ್‌ 1ರ ಮಟ್ಟ 13.28 ಟಿಎಂಸಿ ಅಡಿ

*

ಕಬಿನಿ


ಎತ್ತರ (ಸಮುದ್ರ ಮಟ್ಟದಿಂದ) 2284 ಅಡಿ

ಸಾಮರ್ಥ್ಯ 15.67 ಟಿಎಂಸಿ ಅಡಿ

ಈಗಿನ ನೀರಿನ ಮಟ್ಟ 11.21 ಟಿಎಂಸಿ ಅಡಿ

2016ರ ಸೆಪ್ಟೆಂಬರ್‌ 1ರ ಮಟ್ಟ 10.78 ಟಿಎಂಸಿ ಅಡಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.