ಶುಕ್ರವಾರ, ಫೆಬ್ರವರಿ 26, 2021
25 °C

ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕಿ

ಟಿ.ಎಚ್‌. ಪಂಚಾಕ್ಷರಯ್ಯ Updated:

ಅಕ್ಷರ ಗಾತ್ರ : | |

ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕಿ

ಗುಬ್ಬಿ: ಕಳೆದ ಮೂರ್ನಾಲ್ಕು ತಿಂಗಳಿಂದ ಗುಬ್ಬಿ ತಾಲ್ಲೂಕಿನ ಸಿ.ಎಸ್.ಪುರ ಕೆರೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಎತೇಚ್ಛವಾಗಿ// ನಡೆಯುತ್ತಿದೆ. ಈ ಚಿತ್ರಣ ಕಾಣುತ್ತಿದ್ದರೂ ಅಧಿಕಾರಿಗಳು ಮರಳು ಸಾಗಣೆ ತಡೆಯಲು ಮುಂದಾಗಿಲ್ಲ ಎಂಬುದು ಸ್ಥಳೀಯರ ಆರೋಪ.

ಕೆರೆಯ ಅಂಗಳದೊಳಗೆ ಎಲ್ಲೆಂದರಲ್ಲಿ ಬೇಕಾಬಿಟ್ಟಿ ಗುಂಡಿತೋಡಿ ಮರಳು ಸ್ವಾವ// ಮಾಡಿದ್ದಾರೆ. ಗೋಡು ತೋಡಿ ಎಲ್ಲೆಂದರಲ್ಲಿ ಕೆರೆಯೊಳಗೆ ಸುರಿದಿದ್ದಾರೆ. ಮೂವತ್ತು ಅಡಿಗೂ ಆಳದ ಗುಂಡಿಗಳು ಇಲ್ಲಿವೆ. ಹಗಲು ಹೊತ್ತು ಮಣ್ಣು ಸರಿಸಿ ಮರಳಿದ// ಪದರ ಪತ್ತೆ ಮಾಡಿ ರಾತ್ರಿ ಹೊತ್ತು ಮರಳು ಸಾಗಣೆ ಮಾಡುತ್ತಿದ್ದಾರೆ. ಹುಲ್ಲೇಕೆರೆ, ಅಂಕಳಕೊಪ್ಪ, ಹೊರಕೆರೆ, ಸಿ.ಎಸ್.ಪುರ, ಚೆನ್ನೇನಹಳ್ಳಿ, ಚಿಣ್ಣನಾಯಕನಪಾಳ್ಯ, ಗದ್ದೇಹಳ್ಳಿ ಗ್ರಾಮದೊಳಗಿನ ರಸ್ತೆಯಲ್ಲಿ ನಿತ್ಯ ರಾತ್ರಿ ಮರಳು ಸಾಗಣೆ ಮಾಡುವ ಟ್ರ್ಯಾಕ್ಟರ್, ಲಾರಿಗಳ ಓಡಾಟ ಹೆಚ್ಚು ಇದೆ.

‘ಈ ಭಾಗದಲ್ಲಿ ಅಂತರ್ಜಲ ಕುಸಿಯುತ್ತಿರುವ ಬಗ್ಗೆ ಅಳಲು ಸಾಕಷ್ಟು ಮಂದಿಯಲ್ಲಿ ಇದೆ. ಪದೇ ಪದೇ ಕೊಳವೆಬಾವಿ ಕೊರೆಸಿ ನೀರಿಲ್ಲವೆಂದು ತಣ್ಣಗಾದ ರೈತರ ನೋವು ಕೂಡ ಇದೆ. ಆದರೆ ಕೆರೆಯ ಅಂಗಳದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ ನಿಲ್ಲಿಸಿ ಎಂದು ಒತ್ತಾಯಿಸುವ ಮಂದಿಯ ಬಾಯಿ ಮುಚ್ಚಿಸುವ ಪ್ರಯತ್ನ ವ್ಯವಸ್ಥಿತವಾಗಿ ನಡೆಯುತ್ತಿದೆ’ ಎಂದು ಚೆನ್ನೇನಹಳ್ಳಿ ಗ್ರಾಮದ ರೈತ ಮಹಿಳೆಯೊಬ್ಬರು ತಿಳಿಸಿದರು.

ಹಗಲಿನಲ್ಲಿ ಇಲ್ಲಿ ದನ, ಎಮ್ಮೆ, ಕುರಿಗಳು ಮೇಯುತ್ತವೆ. ತೋಟಕ್ಕೆ ಗೋಡುಮಣ್ಣು ಸಾಗಣೆ ನೆಪದಲ್ಲಿ ಮರಳು ಗಣಿಗಾರಿಕೆ ನಡೆಸಲು ಅಣಿ ಮಾಡಿಕೊಳ್ಳುತ್ತಾರೆ. ರಾತ್ರಿ ಹೊತ್ತು ಟ್ರ್ಯಾಕ್ಟರ್, ಜೆಸಿಬಿ ಯಂತ್ರ ಬಳಸಿಕೊಂಡು ಮರಳು ದೋಚುತ್ತಾರೆ. ಬೆಳಗಾಗುವುದರೊಳಗೆ ಮತ್ತೆ ಕೆರೆಯೊಳಗೆ ಮೌನ. ಇಲ್ಲಿನ ಬೃಹತ್ ಗುಂಡಿಯೊಳಗಿನ ರಾಡಿಯಲ್ಲಿ ದನ, ಎಮ್ಮೆಗಳು ಸಿಕ್ಕಿಕೊಂಡು ಸಾವನ್ನಪ್ಪಿವೆ. ರಾಸುಗಳನ್ನು ಮೇಯಿಸಲು ತೆರಳುವ ಮಂದಿ ಮನೆಗೆ ಬರುವವರಿಗೆ ಜೀವಭಯ ಕಾಡುತ್ತದೆ. ರಾಸು ಸಮೇತ ರಾಸು ಮೇಯಿಸುವ ಮಂದಿ ಸಂಜೆಗೆ ಮನೆಗೆ ಬಂದರೆ ನಿಟ್ಟುಸಿರು ಬಿಡುತ್ತಾರೆ.

ಮರಗಳು ಸಾಗಣೆಗೆ ಅನುಕೂಲವಾಗಲೆಂದು ಚೆನ್ನೇನಹಳ್ಳಿ-ಸಿ.ಎಸ್.ಪುರಕೆರೆ ಸಂಪರ್ಕಿಸುವ ರಸ್ತೆಯ ಗುಂಡಿಗಳನ್ನು ಮುಚ್ಚಿ ಸಮತಟ್ಟು ಮಾಡಿಕೊಂಡಿದ್ದಾರೆ. ಆದರೆ ಸ್ಥಳೀಯರಿಗೆ ಸಣ್ಣ–ಪುಟ್ಟ ಮನೆ ಕಟ್ಟಿಕೊಳ್ಳಲು ಮರಳು ಸಿಕ್ಕುತ್ತಿಲ್ಲ. ಮಳೆ ನೀರು ಹರಿದ ರಸ್ತೆ ಜಾಡಿನಲ್ಲಿ ಮರಳು ಗುಡಿಸಿಕೊಂಡು ಮನೆಕಟ್ಟಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ‘ಅನೇಕ ಸಲ ಈ ಬಗ್ಗೆ ಸಿ.ಎಸ್.ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಇಲ್ಲಿಂದ ಗುಬ್ಬಿ, ತುಮಕೂರು ಗ್ರಾಮಾಂತರ, ಕುಣಿಗಲ್, ತುರುವೇಕೆರೆಯ ತಾಲ್ಲೂಕಿನ ಗಡಿಗಳ ಹಳ್ಳಿಗಳಿಗೆ ಸಿ.ಎಸ್.ಪುರ ಕೆರೆಯ ಮರಳು ಅಕ್ರಮವಾಗಿ ಸಾಗಣೆ ಆಗುತ್ತಿದೆ’ ಎಂದು ಸಿ.ಎಸ್.ಪುರದ ರೈತ ಶ್ರೀನಿವಾಸಮೂರ್ತಿ ‘ಪ್ರಜಾವಾಣಿ‘ ಬಳಿ ದೂರಿದರು.

ಸಕ್ಕರೆಯಂತಿರುವ ಪೆಡಸಾದ ಮರಳಿನ ರುಚಿಯನ್ನು ತುಮಕೂರು, ಕುಣಿಗಲ್, ಹೆಬ್ಬೂರು, ಬೆಂಗಳೂರಿನ ಗುತ್ತಿಗೆದಾರರು ನೋಡಿದ್ದಾರೆ. ನಿಮಗೆ ಮರಳು ಬೇಕೆ? ಅಲ್ಲಿ ಗುಂಡಿ ಇವೆ. ಹೋಗಿ ನೋಡಿ ಎಂದು ಬೊಟ್ಟು ಮಾಡಿ ತೋರಿಸಿದರು ಕೆರೆಯ ಅಂಗಳದಲ್ಲಿ ತೆಂಗಿನ ಕಾಯಿ ಚಚ್ಚಿಕೊಂಡು ಕವರುತ್ತಿದ್ದ ದನ ಮೇಯಿಸುತ್ತಿದ್ದ ಮಕ್ಕಳು.

ಸೀಗೆಹಳ್ಳಿ, ಕಲ್ಲೂರು ಮಾರ್ಗವಾಗಿ ತುರುವೇಕೆರೆ ತಾಲ್ಲೂಕು, ಕುಣಿಗಲ್ ತಾಲ್ಲೂಕುಗಳಿಗೆ ಇಲ್ಲಿನ ಮರಳು ಅಕ್ರಮವಾಗಿ ಸಾಗಣೆ ಆಗುತ್ತಿದೆ. ಕೆಲವರು ಮನೆಯ ಅಂಗಳದಲ್ಲಿ ಮರಳು ಸಂಗ್ರಹಸಿಕೊಂಡು, ಲಾರಿಯವರಿಗೆ ಮಾರುತ್ತಿದ್ದಾರೆ. ಪೊಲೀಸ್ ಇಲಾಖೆಯೊಟ್ಟಿಗೆ ಮರಳು ಅಕ್ರಮ ಸಾಗಣೆ ತಡೆಗಟ್ಟಬೇಕಿದ್ದ ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಕೈಚೆಲ್ಲಿ ಕುಳಿತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೇಲ್ನೋಟಕ್ಕೆ ಮರಳು ಸಾಗಣೆಗೆ ಬಿಗಿ ಇದ್ದಂತೆ ಕಂಡರೂ, ದಂಧೆ ಜೀವಂತವಾಗಿರುವುದಕ್ಕೆ ಹಲವು ಪ್ರತ್ಯಕ್ಷ ಸಾಕ್ಷಿಗಳು ಇಲ್ಲಿವೆ. ಕೆಲ ಅಧಿಕಾರಿಗಳು ಇದಕ್ಕೆ ಸಹಕಾರ ನೀಡುತ್ತಿರುವುದು ಸಾರ್ವಜನಿಕರ ನಡುವೆ ಗುಟ್ಟಾಗಿ ಉಳಿದಿಲ್ಲ. ಸ್ಥಳೀಯರ ಬಳಕೆಗೆ ಮರಳು ಸಿಗುತ್ತಿಲ್ಲ. ದುಬಾರಿ ಬೆಲೆಯ ಯಾನದ ನಡುವೆ ನಮ್ಮ ಕೆರೆಯ ಮರಳನ್ನೇ ನಾವು ಬಳಸಿಕೊಳ್ಳದಂತಾಗಿದೆ.

ಒಂದು ಟ್ರ್ಯಾಕ್ಟರ್ ಲೋಡಿಗೆ ₹ 4 ಸಾವಿರ, ಲಾರಿಯಾದರೆ ₹ 30 ಸಾವಿರ ಹಣ ಕೊಡಬೇಕು. ದೂರದ ಊರು, ನಗರಗಳಿಗೆ ಮರಳು ಬೇಕಾದರೆ ದುಪ್ಪಟ್ಟು ಬೆಲೆ ತೆತ್ತಬೇಕು. ವಸತಿ ಯೋಜನೆ, ಶೌಚಾಲಯ ನಿರ್ಮಾಣ, ದನದಕೊಟ್ಟಿಗೆ ನಿರ್ಮಾಣ, ಸಿಸ್ಟನ್‌ಗಳ ನಿರ್ಮಾಣಕ್ಕೆ ಮರಳಿನ ಬೇಡಿಕೆ ಹೆಚ್ಚಿದೆ. ಸ್ಥಳೀಯ ಕೆರೆಯಿಂದ ಮರಳು ನಮಗೆ ಸಿಗುತ್ತಿಲ್ಲ. ಜೆಲ್ಲಿ ಪೌಡರ್ ಬಳಸಿ ಮನೆ ಕಟ್ಟಿಕೊಳ್ಳುವಂತಾಗಿದೆ ಎಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫಲಾನುಭವಿಗಳು ಪಿಸುಗುಟ್ಟುತ್ತಿದ್ದಾರೆ.

ಎಲ್ಲ ಸಮಸ್ಯೆಯ ನಡುವೆ ಮರಳು ಅಭಾವ ಸೃಷ್ಟಿಯಾಗಿದೆ. ಬಡ-ಮಧ್ಯಮ ವರ್ಗದ ಜನರು ಮನೆ ಕಟ್ಟಲು ಪರದಾಡುತ್ತಿದ್ದು, ಅಕ್ರಮ ಮರಳು ಸಾಗಣೆಗೆ ಕಡಿವಾಣ ಹಾಕಿ ಇದಕ್ಕೊಂದು ಯೋಜನೆಯನ್ನು ಸರ್ಕಾರ ರೂಪಿಸಬೇಕು ಎನ್ನುತ್ತಾರೆ ಕೆರೆಯ ಅಂಚಿನ ಗ್ರಾಮಸ್ಥರು.

* * 

ಐದಾರು ಕಡೆ ಮರಳು ಸಂಗ್ರಹಣೆ ಮಾಡಿಕೊಂಡು, ಬೆಂಗಳೂರು ಕಡೆಗೆ ಮರಳು ಸಾಗಣೆ ಮಾಡುತ್ತಾರೆ. ಈ ಮರಳು ದಂಧೆಗೆ ಕಡಿವಾಣ ಹಾಕೋರು ಯಾರು.

ರಂಗಪ್ಪಜ್ಜ, ಚೆನ್ನೇನಹಳ್ಳಿ ಗ್ರಾಮಸ್ಥ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.