ಭಾನುವಾರ, ಮಾರ್ಚ್ 7, 2021
29 °C

ವಿಕಾಸ ಸೌಧ ಪಾರಂಪರಿಕ ಕಟ್ಟಡ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಕಾಸ ಸೌಧ ಪಾರಂಪರಿಕ ಕಟ್ಟಡ!

ಬೆಂಗಳೂರು: ವಿಕಾಸ ಸೌಧ ಹಾಗೂ ಇತ್ತೀಚೆಗೆ ನಿರ್ಮಾಣಗೊಂಡ ಇತರ ಕಟ್ಟಡಗಳನ್ನು ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ದ ನಿರ್ಧಾರಕ್ಕೆ ತಜ್ಞರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಪಾರಂಪರಿಕ ತಾಣಗಳ ಪಟ್ಟಿಗೆ ಸೇರಲು ಅರ್ಹವಾಗಿರುವ ಕಟ್ಟಡಗಳನ್ನು 2031ರ ವೇಳೆಗೆ ಪಾರಂಪರಿಕ ಸ್ಥಾನಮಾನ ನೀಡಲು ಬಿಡಿಎ ಯೋಜನೆ ರೂಪಿಸುತ್ತಿದೆ. ಬಿಡಿಎ ಸಿದ್ಧಪಡಿಸಿರುವ ಪಟ್ಟಿಯಲ್ಲಿ, ವಿಕಾಸ ಸೌಧ 91ನೇ ಸ್ಥಾನದಲ್ಲಿದೆ.

ಭಾರತೀಯ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯ ರಾಷ್ಟ್ರೀಯ ಪ್ರತಿಷ್ಠಾನ (ಇಂಟ್ಯಾಕ್‌)ವು 1985ರಲ್ಲಿ ರೂಪಿಸಿರುವ ಪಟ್ಟಿಯನ್ನೇ ಪರಿಗಣಿಸಿರುವುದಾಗಿ ಬಿಡಿಎ ತಿಳಿಸಿದೆ.

ಇತಿಹಾಸ ತಜ್ಞರು ಈ ವಿಚಾರವಾಗಿ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಆಧುನಿಕ ಸರ್ಕಾರಿ ಕಟ್ಟಡಗಳಾದ ‘ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿ’, ಅರಮನೆ ರಸ್ತೆಯಲ್ಲಿರುವ ‘ವೆಂಕಟರಮಣ ಕಲ್ಯಾಣ ಮಂಟಪ‘, ಕೆ. ಆರ್‌ ರಸ್ತೆಯಲ್ಲಿರುವ ‘ಅಬಕಾರಿ ಇಲಾಖೆಯ ಉಪ ಆಯುಕ್ತರ ಕಚೇರಿ‘ ಕಟ್ಟಡಗಳನ್ನು ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸುವುದರ ಕುರಿತು ಆಕ್ಷೇಪ ವ್ಯಕ್ತವಾಗಿದೆ.

‘ಇವುಗಳ ಬದಲು ಸೆಂಟ್ರಲ್‌ ಜೈಲು, ಮಹಾರಾಣಿ ಕಾಲೇಜು ಕಟ್ಟಡ, ಬನ್ನಪ್ಪ ಉದ್ಯಾನಗಳು ಪಾರಂಪರಿಕ ತಾಣಗಳ ಪಟ್ಟಿಗೆ ಸೇರಲು ಅರ್ಹವಾಗಿವೆ’ ಎಂದು ಹೆಸರು ಹೇಳಲು ಇಚ್ಚಿಸದ ಇಂಟ್ಯಾಕ್‌ನ ಸದಸ್ಯರೊಬ್ಬರು ತಿಳಿಸಿದ್ದಾರೆ.

‘ವಿಕಾಸ ಸೌಧವು,  ವಿಧಾನ ಸೌಧದ ಪ್ರತಿಕೃತಿ ಅಷ್ಟೇ. ಈ ಕಟ್ಟಡಕ್ಕೆ ಯಾವುದೇ ಇತಿಹಾಸ ಅಥವಾ ಅಸ್ಮಿತೆ ಇಲ್ಲ. ಪಾರಂಪರಿಕ ಕಟ್ಟಡಗಳನ್ನು ಗುರುತಿಸುವುದರಲ್ಲಿ ಬಿಡಿಎ ಸೋತಿರುವುದನ್ನು ಈ ಪಟ್ಟಿ ಸ್ಪಷ್ಟಪಡಿಸುತ್ತದೆ’ ಎಂದು ಇತಿಹಾಸಕಾರ ಅರುಣ್‌ ಪ್ರಸಾದ್‌ ಹೇಳಿದ್ದಾರೆ.

‘ವಿಕಾಸ ಸೌಧ 2004ರಲ್ಲಿ ನಿರ್ಮಾಣಗೊಂಡಿದ್ದು, ಆ ಜಾಗದಲ್ಲಿ ಮೊದಲು ಸರ್ಕಾರಿ ಮುದ್ರಣಾಲಯ ಇತ್ತು. ವಿಕಾಸ ಸೌಧ ನಿರ್ಮಾಣಕ್ಕಾಗಿ 2000ರಲ್ಲಿ ಮುದ್ರಣಾಲಯವನ್ನು ಕೆಡವಲಾಯಿತು. ಸರ್ಕಾರ ಮುದ್ರಣಾಲಯ ಕಟ್ಟಡವನ್ನು ಉಳಿಸಿಕೊಳ್ಳಬಹುದಿತ್ತು‘ ಎಂದು ಅರುಣ್‌ ತಿಳಿಸಿದ್ದಾರೆ.

‘ಪಾರಂಪರಿಕ ಎಂದು ಕರೆಸಿಕೊಳ್ಳಲು ಯಾವುದೇ ಕಟ್ಟಡಕ್ಕೆ ಕನಿಷ್ಠ 100 ವರ್ಷಗಳು ತುಂಬಿರಬೇಕು. ಜತೆಗೆ ಶೈಲಿ, ವಿನ್ಯಾಸ ವಿಶಿಷ್ಟವಾಗಿದ್ದು, ಐತಿಹಾಸಿಕವಾಗಿ ಮಹತ್ವದ್ದಾಗಿರಬೇಕು’ ಎಂದು ಬೆಂಗಳೂರು ವೃತ್ತದ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಸರ್ವೇಕ್ಷಣಾಧಿಕಾರಿ,  ಕೆ, ಮೂರ್ತೇಶ್ವರಿ ಹೇಳಿದ್ದಾರೆ.

‘ಕಟ್ಟಡಕ್ಕೆ 100 ವರ್ಷಗಳು ತುಂಬದಿದ್ದಲ್ಲಿ,  60 ವರ್ಷಗಳಾದರೂ ಆಗಿರಬೇಕು ಹಾಗೂ ತನ್ನದೇ ವೈಶಿಷ್ಟ್ಯ ಹೊಂದಿರಬೇಕು’ ಎಂದಿದ್ದಾರೆ.

ಬಳ್ಳಾರಿ ರಸ್ತೆಯಲ್ಲಿರುವ ‘ಪಾರ್ಸಿ ಟಾಂಬ್‌ ಆಫ್ ಸೈಲೆನ್ಸ್‌‘ ಅನ್ನು  ಪಾರಂಪರಿಕ ಕಟ್ಟಡಗಳ ಪಟ್ಟಿಯಲ್ಲಿ ಸೇರಿಸಬಹುದಿತ್ತು. ಆ ಪ್ರದೇಶದಲ್ಲಿ ಬೃಹತ್‌ ಕಟ್ಟಡಗಳು ತಲೆ ಎತ್ತಿವೆ. ಆದರೆ ಅವುಗಳ ನಡುವೆಯೂ ‘ಟಾಂಬ್‌ ಆಫ್‌ ಸೈಲೆನ್ಸ್‌’ ಎಲ್ಲರ ಗಮನ ಸೆಳೆಯುತ್ತದೆ’  ಎಂದು ಇತಿಹಾಸಕಾರರು ಅಭಿಪ್ರಾಯ ಪಟ್ಟಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.