ಗುರುವಾರ , ಮಾರ್ಚ್ 4, 2021
19 °C

ಪಾದಚಾರಿಗಳ ಸುರಕ್ಷತೆಗೆ ಕೊನೆಗೂ ಸಿಕ್ತು ಆದ್ಯತೆ

ಚಂದ್ರಹಾಸ ಹಿರೇಮಳಲಿ Updated:

ಅಕ್ಷರ ಗಾತ್ರ : | |

ಪಾದಚಾರಿಗಳ ಸುರಕ್ಷತೆಗೆ ಕೊನೆಗೂ ಸಿಕ್ತು ಆದ್ಯತೆ

ಶಿವಮೊಗ್ಗ: ಸ್ಮಾರ್ಟ್‌ಸಿಟಿ ಕಿರೀಟ ಮುಡಿಗೇರಿಸಿಕೊಂಡಿರುವ ಶಿವಮೊಗ್ಗ ನಗರದಲ್ಲಿ ಶಿವಪ್ಪ ನಾಯಕ ಮಾರ್ಕೆಟ್‌ನಂತಹ ದೊಡ್ಡ ಮಹಲ್‌ಗಳು, ವಿಶಾಲವಾದ ರಸ್ತೆಗಳು ಇದ್ದರೂ ಪಾದಚಾರಿಗಳ ಓಡಾಟಕ್ಕೆ ಸೂಕ್ತ ವ್ಯವಸ್ಥೆ ಇದುವರೆಗೂ ಮರೀಚಿಕೆಯಾಗಿತ್ತು.

ಇದೇ ಮೊದಲ ಬಾರಿ ಪಾದಚಾರಿಗಳ ಸುರಕ್ಷಿತ ಓಡಾಟಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ನಗರ ಪಾಲಿಕೆ ಮುಂದಾಗಿದೆ. ವಾಹನದಟ್ಟಣೆ ಇರುವ ಸೇತುವೆ, ರಸ್ತೆ ಬದಿ ಪಾದಚಾರಿಗಳಿಗಾಗಿಯೇ ಪ್ರತ್ಯೇಕ ವಲಯ ನಿರ್ಮಿಸಲು ಕ್ರಮ ಕೈಗೊಂಡಿದೆ.

ಪ್ರಥಮ ಬಾರಿಗೆ ಭದ್ರಾವತಿ ಹೊರವಲಯದ ರಸ್ತೆಯಲ್ಲಿ ಇರುವ ತುಂಗಾ ನದಿ ಹೊಸ ಸೇತುವೆಯ ಮೇಲೆ ಎರಡೂ ಬದಿ ಪಾದಚಾರಿಗಳ ಓಡಾಟಕ್ಕೆ ಪ್ರತ್ಯೇಕ ಗ್ರಿಲ್‌ ಅಳವಡಿಸಲಾಗುತ್ತಿದೆ. ಸೇತುವೆಯ ಗೋಡೆಗಳ ಮಗ್ಗುಲಲ್ಲಿ ಇಬ್ಬರು ಓಡಾಡಲು ಸ್ಥಳಾವಕಾಶ ಕಲ್ಪಿಸಿ, ರಸ್ತೆ ಕಡೆಗೆ ಕಬ್ಬಿಣದ ಗ್ರಿಲ್‌ ಅಳವಡಿಸಲಾಗಿದೆ. ಇದರಿಂದ ವಾಹನ ದಟ್ಟಣೆಯ ಈ ಮಾರ್ಗದಲ್ಲಿ ವಾಹನಗಳು ಬಂದಾಗ ಜೀವ ಭಯದಿಂದ ಜನರು ಸಂಚರಿಸುವ ಪರಿಸ್ಥಿತಿಗೆ ಮುಕ್ತಿ ದೊರೆಯುತ್ತಿದೆ.

ಫುಟ್‌ಪಾತ್ ಇದ್ದರೂ ಸಿಗದ ಅವಕಾಶ: ನಗರದ ಬಹುತೇಕ ರಸ್ತೆಗಳಲ್ಲಿ ಫುಟ್‌ಪಾತ್ ಇದೆ. ಆದರೆ, ಬೀದಿಬದಿ ಪ್ಯಾಪಾರಿಗಳು, ದೊಡ್ಡದೊಡ್ಡ ವಾಣಿಜ್ಯ ಮಳಿಗೆಗಳು ಅಕ್ರಮಿಸಿಕೊಂಡಿದ್ದಾರೆ. ನೆಹರು ರಸ್ತೆ ಹೊರತುಪಡಿಸಿದರೆ ಉಳಿದ ಯಾವ ರಸ್ತೆಗಳಲ್ಲೂ ಪಾದಚಾರಿಗಳು ಸುಗಮವಾಗಿ ತಮಗೆ ಮೀಸಲಾದ ಮಾರ್ಗದಲ್ಲಿ ಓಡಾಡಲು ಸಾಧ್ಯವೇ ಆಗುವುದಿಲ್ಲ.

ಬಿ.ಎಚ್‌.ರಸ್ತೆ, ಕೋರ್ಟ್‌ ರಸ್ತೆ, ಸವಳಂಗ ರಸ್ತೆ, ಹೊಸ ತೀರ್ಥಹಳ್ಳಿ ರಸ್ತೆ, ಭದ್ರಾವತಿ ಹೊರವಲಯ ರಸ್ತೆ, ಕುವೆಂಪು ರಂಗಮಂದಿರ ರಸ್ತೆ ಸೇರಿದಂತೆ ಹಲವು ರಸ್ತೆಗಳು ವಿಶಾಲವಾಗಿದ್ದರೂ ಪಾದಚಾರಿಗಳಿಗೆ ಪೂರಕವಾಗಿಲ್ಲ. ಅಮೀರ್‌ ಆಹಮದ್‌ ವೃತ್ತ, ಗಾಂಧಿಬಜಾರ್‌ ವೃತ್ತ, ಕೆ.ಎಸ್‌.ಆರ್‌.ಟಿ.ಸಿ ಬಸ್‌ನಿಲ್ದಾಣ, ಖಾಸಗಿ ಬಸ್‌ನಿಲ್ದಾಣ ಹೈಟೆಕ್‌ಗೊಳಿಸಿದ್ದರೂ ನಡೆದು ಓಡಾಡುವರ ಸುರಕ್ಷತೆಗೆ ಗಮನ ಹರಿಸಿಲ್ಲ.

ಕೆಲವು ರಸ್ತೆಗಳಲ್ಲಿ ವಿಭಜಕಗಳನ್ನು ಒಳಗೊಂಡ ಚತುಷ್ಪಥ ರಸ್ತೆ ಇದ್ದು, ಎರಡೂ ಬದಿ ಫುಟ್‌ಪಾತ್ ನಿರ್ಮಿಸಲಾಗಿದೆ. ಆದರೆ, ಪಾದಚಾರಿಗಳು ಒಂದು ತುದಿಯಿಂದ ಇನ್ನೊಂದು ತುದಿಗೆ ಸರಾಗವಾಗಿ ಸಾಗಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅಲ್ಲಲ್ಲಿ ಫುಟ್‌ಪಾತ್‌ ವ್ಯಾಪಾರಿಗಳು ಜಾಗವನ್ನು ಅಕ್ರಮಿಸಿಕೊಂಡಿದ್ದಾರೆ. ಕೆಲವು ಭಾಗಗಳಲ್ಲಿ ಮರ, ವಿದ್ಯುತ್‌ ಕಂಬಗಳು ಫುಟ್‌ಪಾತ್‌ ಮೇಲೆ ನಿಂತಿವೆ. ಇನ್ನೂ ಕೆಲವೆಡೆ ಭಾಗಗಳಲ್ಲಿ ದಿಢೀರ್‌ ಎಂದು ಫುಟ್‌ಪಾತ್‌ ಅಂತ್ಯಗೊಂಡು ಅನಿವಾರ್ಯವಾಗಿ ಪಾದಚಾರಿಗಳು ರಸ್ತೆಗೆ ಇಳಿಯಬೇಕಾಗುತ್ತದೆ. ಎಷ್ಟೋ ಬಾರಿ ವಾಹನಗಳ ನಡುವೆ ಸರ್ಕಸ್‌ ಮಾಡುತ್ತಾ ನಡೆಯುವಾಗ ಅಪಘಾತಗಳೂ ಆಗಿವೆ.

ಹಲವು ರಸ್ತೆಗಳಲ್ಲಿ ಫುಟ್‌ಪಾತ್‌ಗಳೇ ಇಲ್ಲದ ಕಾರಣ ಪಾದಚಾರಿಗಳು ರಸ್ತೆಯ ಮೇಲೆ ನಡೆಯುವ ಅನಿವಾರ್ಯತೆ ಇದೆ. ಮಳೆಗಾಲದಲ್ಲಿ ವಾಹನಗಳು ಸಿಡಿಸುವ ಕೆಸರು, ನೀರಿಗೆ ಬಟ್ಟೆ ತೋಯ್ದು, ಕಚೇರಿ ಅಥವಾ ಇತರೆ ಕೆಲಸಕ್ಕೆ ಹೊರಟವರು ವಾಪಸ್‌ ಮನೆಗೆ ಹೋಗಿ, ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಾರೆ.

ಜೀವಕ್ಕಿಂತ ವ್ಯಾಪಾರವೇ ಮಿಗಿಲು

ಫುಟ್‌ಪಾತ್‌ ವ್ಯಾಪಾರದ ಕಿರಿಕಿರಿ ತಪ್ಪಿಸಿ ಪಾದಚಾರಿಗಳಿಗೆ ಅನುಕೂಲ ಕಲ್ಪಿಸಲು ಅಂದಿನ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಸಸ್ಯಾಹಾರಿ ಹಾಗೂ ಮಾಂಸಾಹಾರಿ ತಿನಿಸುಗಳ ಎರಡು ಪ್ರತ್ಯೇಕ ಅಂಗಳಕ್ಕೆ ಅವಕಾಶ ಕಲ್ಪಿಸಿದ್ದರು. ಹಾಗಾಗಿ, ಸಾರ್ವಜನಿಕರಿಗೆ ಎಲ್ಲ ತಿನಿಸುಗಳು ಒಂದೇ ಸೂರಿನಡಿ ಸಿಗುವಂತಾಗಿತ್ತು.

ಫುಟ್‌ಪಾತ್‌ ವ್ಯಾಪಾರಿಗಳಿಗೂ ನೆಲೆ ಸಿಕ್ಕಿತು. ಪಾದಚಾರಿಗಳಿಗೂ ಕಿರಿಕಿರಿ ತಪ್ಪಿತ್ತು. ಆದರೆ, ಈಚೆಗೆ ಎಲ್ಲ ಮಾರ್ಗಗಳಲ್ಲೂ ಮತ್ತೆ ಬೀದಿಬದಿ ವ್ಯಾಪಾರ ಜೋರಾಗಿದೆ. ಕಾನೂನು ಅವರ ಸಂರಕ್ಷಣೆಗೆ ಇದೆ. ಪಾದಚಾರಿಗಳ ಜೀವಕ್ಕೆ ಮಾತ್ರ ಬೆಲೆ ಇಲ್ಲವಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.