ಸೋಮವಾರ, ಆಗಸ್ಟ್ 3, 2020
26 °C

ಕೊಪ್ಪಳ: ಗವಿಮಠದ ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಭಕ್ತ ಸಾಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ಗವಿಮಠದ ಗವಿಸಿದ್ದೇಶ್ವರ ಮಹಾರಥೋತ್ಸವಕ್ಕೆ ಭಕ್ತ ಸಾಗರ

ಕೊಪ್ಪಳ: ಇಲ್ಲಿಯ ಗವಿಮಠದ ಗವಿಸಿದ್ದೇಶ್ವರ ಮಹಾರಥೋತ್ಸವ ಬುಧವಾರ ಅಪಾರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನಡೆಯಿತು. ಸಂಜೆ 6 ಗಂಟೆ ವೇಳೆಗೆ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಧ್ವಜಾರೋಹಣ ನೆರವೇರಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು.

ಚೀಕೇನಕೊಪ್ಪದ ಶರಣರು ಮತ್ತು ತಂಡ ‘ಜಯ ಗವಿಸಿದ್ದೇಶ, ಜಯ ಗವಿಸಿದ್ದೇಶ...’ ಎಂದು ಜಯಘೋಷದ ಹಾಡುಗಳನ್ನು ಹಾಡುತ್ತಿದ್ದಂತೆಯೇ ಜಾತ್ರಾ ಮೈದಾನದಲ್ಲಿ ಸೇರಿದ್ದ ಭಕ್ತರು ಗವಿಸಿದ್ದೇಶ್ವರನ ಉತ್ಸವ ಮೂರ್ತಿ ಹೊತ್ತಿದ್ದ ಮಹಾರಥವನ್ನು ಎಳೆದರು. ವಾದ್ಯ ಮೇಳಗಳು, ಭಕ್ತರ ಹರ್ಷೋದ್ಗಾರ ರಥದ ಚಲನೆಗೆ ಸಾಥ್‌ ನೀಡಿದವು.

ಈ ಬಾರಿ ರಥವು ಪಾದಗಟ್ಟೆಯಿಂದ ವಸ್ತು ಪ್ರದರ್ಶನ ಅಂಗಣದವರೆಗೆ ಚಲಿಸಿ ಬಳಿಕ ಮೂಲ ಸ್ಥಳಕ್ಕೆ ವಾಪಸಾಯಿತು. ಜಾತ್ರಾ ಮೈದಾನ, ಗವಿಮಠದ ಗುಡ್ಡ, ಶಿಕ್ಷಣ ಸಂಸ್ಥೆಗಳ ಕಟ್ಟಡಗಳ ಮೇಲೆ ನಿಂತ ಜನರು ರಥೋತ್ಸವದ ಅಪೂರ್ವ ನೋಟವನ್ನು ಕಣ್ತುಂಬಿಕೊಂಡರು.

ರಥೋತ್ಸವ ಉದ್ಘಾಟಿಸಿದ ಅಣ್ಣಾ ಹಜಾರೆ ಮಾತನಾಡಿ, ‘ಸುಮ್ಮನೆ ಕುಳಿತರೆ ಜ್ಞಾನ ಬರುವುದಿಲ್ಲ. ಪ್ರಾಮಾಣಿಕತೆ, ಶುದ್ಧ, ಸಾತ್ವಿಕ ಜೀವನ, ಕಷ್ಟಗಳನ್ನು ಎದುರಿಸುವ ಶಕ್ತಿ ಇರಬೇಕು. ನನ್ನ 80ನೇ ವಯಸ್ಸಿನಲ್ಲಿ ಇಲ್ಲಿಗೆ ಬರುವ ಭಾಗ್ಯ ಸಿಕ್ಕಿತು. ಇಷ್ಟೊಂದು ಪ್ರಮಾಣದ ಜನ ಸಂಖ್ಯೆಯನ್ನು ಎಲ್ಲಿಯೂ ನೋಡಿಲ್ಲ’ ಎಂದರು.

ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, 'ಕತ್ತಲೆಯನ್ನು ಬೈಯುವ ಬದಲು ಅದು ಕಳೆಯಬೇಕಾದರೆ ದೀಪ ಹಚ್ಚಬೇಕು. ಅದೇ ರೀತಿ ಕೆಟ್ಟದ್ದನ್ನು ಕಳೆಯಬೇಕಾದರೆ ಒಳ್ಳೆಯ ಕೆಲಸಗಳನ್ನು ಮಾಡುತ್ತಲೇ ಸಾಗಬೇಕು ವಿನಾ ಕೆಟ್ಟದ್ದನ್ನು ಬೈಯುವ ಮೂಲಕ ಅಲ್ಲ. ಮನಸ್ಸಿನಲ್ಲಿ ಪ್ರೇಮ, ಸದ್ವಿಚಾರದ ದೀಪಗಳೇ ಗುಡಿಯೊಳಗಿನ ಬೆಳಕಾಗುತ್ತವೆ' ಎಂದರು.

ಜಾತ್ರೆಯ ಅಂಗವಾಗಿ ಚಲನ ಚಿತ್ರೋತ್ಸವ, ಕರಾಟೆ, ತೋಟಗಾರಿಕೆ ಇಲಾಖೆಯ ಫಲಪುಷ್ಪ ಪ್ರದರ್ಶನ, ಕೃಷಿ ಮೇಳ, ಜ.4ರಿಂದ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. 15 ದಿನಗಳಿಂದ ನಿರಂತರ ದಾಸೋಹ ನಡೆದಿದೆ. ರಥೋತ್ಸವದ ಬಳಿಕ ಕೈಲಾಸ ಮಂಟಪದಲ್ಲಿ ಅನುಭಾವಿಗಳ ಅಮೃತ ಚಿಂತನಗೋಷ್ಠಿ ನಡೆಯಿತು. ಗಾಯಕಿ ಬಿ.ಜಯಶ್ರೀ ಅವರಿಂದ ಗಾನತರಂಗ, ಮತ್ತೂರು ಶ್ರೀನಿಧಿ ಅವರಿಂದ ವಯೋಲಿನ್‌ ವಾದನ, ವಿಲಾಸ್‌ ನಾಯಕ್‌ ಅವರಿಂದ ಚಿತ್ರ ತರಂಗ ಪ್ರಸ್ತುತಿ ನಡೆಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.