ಶನಿವಾರ, ಜೂಲೈ 4, 2020
21 °C

ಸರ್ಕಾರದ ಸಾಧನಾ ಸಮಾವೇಶ ಪ್ರಶ್ನಿಸಿ ಪಿಐಎಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಆಡಳಿತಾರೂಢ ರಾಜ್ಯ ಸರ್ಕಾರ ನಡೆಸುತ್ತಿರುವ ಸಾಧನಾ ಸಮಾವೇಶ ತಡೆ ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ.

ಹನುಮಂತನಗರದ ಕೀರ್ತಿವರ್ಧನ ಜೋಷಿ ಎಂಬುವರು ಸಲ್ಲಿಸಿರುವ ಈ ಅರ್ಜಿ ಶುಕ್ರವಾರ (ಜ.5) ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ.ರಮೇಶ್ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್ ಕುಮಾರ್ ಅವರ ವಿಭಾಗೀಯ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿದೆ.

‘ರಾಜ್ಯ ಸರ್ಕಾರ ತನ್ನ ನಾಲ್ಕೂವರೆ ವರ್ಷಗಳ ಸಾಧನೆಯ ಹೆಸರಿನಲ್ಲಿ ರಾಜ್ಯದ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ ಕಳೆದ ವರ್ಷದ ಡಿ.13ರಿಂದ ಸಮಾವೇಶ ನಡೆಸುತ್ತಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೊಕ್ಕಸದ ಹಣವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ’ ಎಂಬುದು ಅರ್ಜಿದಾರರ ಆರೋಪ.

‘ಈಗಾಗಲೇ ಹಲವೆಡೆ ನಡೆದಿರುವ ಸಮಾವೇಶಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳು ಹಾಗೂ ಸಾಧನೆಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ತಮ್ಮ ವಿರೋಧಿಗಳ ಟೀಕೆಗೆ ಈ ವೇದಿಕೆಗಳನ್ನು ಬಳಸಿಕೊಳ್ಳತೊಡಗಿದ್ದಾರೆ’ ಎಂದು ಆಕ್ಷೇಪಿಸಲಾಗಿದೆ.

‘ಸಿದ್ದರಾಮಯ್ಯ ಬೊಕ್ಕಸದ ಹಣವನ್ನು ತಮ್ಮ ಸ್ವಾರ್ಥ ಮತ್ತು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಇದು ಅಕ್ರಮ ಮತ್ತು ಕಾನೂನು ಬಾಹಿರ. ಆದ್ದರಿಂದ ಈ ಪ್ರಕರಣ ಇತ್ಯರ್ಥವಾಗುವವರೆಗೂ ಸಾಧನಾ ಸಮಾವೇಶಕ್ಕೆ ಹಣ ಬಿಡುಗಡೆ ಮಾಡದಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನಿರ್ದೇಶಿಸಬೇಕು’ ಎಂದು ಕೋರಲಾಗಿದೆ.

‘ಈಗಾಗಲೇ ಖರ್ಚು ಮಾಡಿರುವ ಹಣವನ್ನು ಸಿದ್ದರಾಮಯ್ಯ ಅವರಿಂದ ವಸೂಲು ಮಾಡಬೇಕು. ಸಾರ್ವಜನಿಕ ಹಣವನ್ನು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ವಿಚಾರಣೆ ನಡೆಸಬೇಕು’ ಎಂದೂ ಕೀರ್ತಿವರ್ಧನ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.