ಮಂಗಳವಾರ, ಜೂಲೈ 7, 2020
23 °C

15 ನಿಮಿಷಕ್ಕೆ 150 ಸೆಲ್ಫಿ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

15 ನಿಮಿಷಕ್ಕೆ 150 ಸೆಲ್ಫಿ...!

ಬೆಂಗಳೂರು: ನೀವು ದಿನಕ್ಕೆ ಎಷ್ಟು ಬಾರಿ ಸ್ವಂತಿ (ಸೆಲ್ಫಿ) ತಗೋತೀರಿ? ಹಲವಾರು ಬಾರಿ ಎನ್ನುವುದು ನಿಮ್ಮ ಉತ್ತರ ಆಗಿದ್ದರೆ, ‘ನೀವು ದೀರ್ಘಕಾಲೀನ ಸೆಲ್ಫಿ ವ್ಯಸನದಿಂದ ಬಳಲುತ್ತಿದ್ದೀರಿ’ ಎಂದು ಎಚ್ಚರಿಸುತ್ತಾರೆ ನಿಮ್ಹಾನ್ಸ್‌ ವೈದ್ಯರು.

‘ಸೆಲ್ಫಿ ತೆಗೆದುಕೊಳ್ಳುವುದು ಒಂದು ಕಾಯಿಲೆ. ಇದು ಮನುಷ್ಯನ ಕ್ರಿಯಾತ್ಮಕ ಶಕ್ತಿಯನ್ನು ಕುಂದಿಸುತ್ತದೆ’ ಎಂದು ನಿಮ್ಹಾನ್ಸ್‌ನಲ್ಲಿರುವ ತಂತ್ರಜ್ಞಾನ ವ್ಯಸನ ಬಿಡಿಸುವ ಮತ್ತು ಆಪ್ತ ಸಮಾಲೋಚನಾ ಕೇಂದ್ರದ ಮನಶಾಸ್ತ್ರಜ್ಞ ಮನೋಜ್‌ ಕುಮಾರ್ ಶರ್ಮಾ ತಿಳಿಸಿದರು. ಇದರ ಗೀಳಿಗೆ ಒಳಗಾಗಿರುವವರಿಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

‘ಮೊಬೈಲ್‌ ಮತ್ತು ವಿಡಿಯೊ ಗೇಮ್‌ ಚಟ ಹೊಂದಿದವರಿಗೆ ನಾವು ಚಿಕಿತ್ಸೆ ನೀಡುತ್ತಿದ್ದೆವು. ಸ್ವಂತಿ ವ್ಯಸನ ಹೊಸ ವಿದ್ಯಮಾನ. ಆರು ತಿಂಗಳಲ್ಲಿ ಇಬ್ಬರು ಈ ಚಿಕಿತ್ಸೆಗೆ ಒಳಗಾಗಿದ್ದಾರೆ’ ಎಂದು ಮಾಹಿತಿ ನೀಡಿದರು.

‘16 ವರ್ಷದ ಹುಡುಗಿಯೊಬ್ಬಳು ಕಳೆದ ತಿಂಗಳು ಚಿಕಿತ್ಸೆಗೆ ಬಂದಿದ್ದಳು. ಅವಳು 15 ನಿಮಿಷದಲ್ಲಿ 150 ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಿದ್ದಳು. ಅದರಲ್ಲಿ ಒಂದನ್ನು ಆಯ್ದು ಸಾಮಾಜಿಕ ಜಾಲತಾಣಗಳಿಗೆ ಹಾಕುತ್ತಿದ್ದಳು. ದಿನದಲ್ಲಿ ನಾಲ್ಕೈದು ಬಾರಿ ಇದು ಪುನರಾವರ್ತನೆಯಾಗುತ್ತಿತ್ತು. ಏಕಾಂಗಿತನದಿಂದಾಗಿ ಆಕೆ ಈ ಗೀಳಿಗೆ ಒಳಗಾಗಿದ್ದಳು ಎನ್ನುವುದು ಸಮಾಲೋಚನೆಯಿಂದ ತಿಳಿಯಿತು’ ಎಂದು ವಿವರಿಸಿದರು.

‘ಮತ್ತೊಂದು ಪ್ರಕರಣದಲ್ಲಿ 21 ವರ್ಷದ ಯುವತಿಯೊಬ್ಬರು ದಿನಕ್ಕೆ ಸುಮಾರು 60 ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಚಿಕಿತ್ಸೆ ನಂತರ ಈಗ ಅದು 10ಕ್ಕೆ ಇಳಿಕೆಯಾಗಿದೆ’ ಎಂದು ಅವರು ತಿಳಿಸಿದರು.

‘ದೇಹದ ಸೌಂದರ್ಯಕ್ಕೆ ಸಂಬಂಧಿಸಿದ ಆತಂಕವನ್ನು ದೂರಮಾಡಲು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳನ್ನು ಪಡೆಯುವುದಕ್ಕಾಗಿ ಇತ್ತೀಚಿನ ದಿನಗಳಲ್ಲಿ ಬಹುತೇಕರು ತಂತ್ರಜ್ಞಾನದ ಮೊರೆ ಹೋಗಿದ್ದಾರೆ. ಸ್ವಂತಿಯನ್ನು ಈ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ’ ಎಂದರು.

ಸೆಲ್ಫಿಯಿಂದ ಉಂಟಾದ ಸಾವುಗಳನ್ನು ಕೂಡ ಈ ಕೇಂದ್ರವು ಗಂಭೀರವಾಗಿ ಪರಿಗಣಿಸಿದೆ. ಇದರ ವ್ಯಸನ ಬೇರೆ ಬೇರೆ ಮಾನಸಿಕ ಕಾಯಿಲೆಗಳ ಜೊತೆ ಥಳಕು ಹಾಕಿಕೊಂಡಿದೆ. ಈ ಆಯಾಮದಲ್ಲಿ ಇದನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಮನಶಾಸ್ತ್ರಜ್ಞ ಅನಿಷ್‌ ಖನ್ನಾ ಅವರು ‘ಸೆಲ್ಫಿ: ದಿ ಇಂಪ್ಲಿಕೇಷನ್‌ ಫಾರ್‌ ಸೈಕೊಪೆಥಾಲಜಿ ಎಕ್ಸ್‌ಪ್ರೆಸ್ ಆಫ್‌ ಬಾಡಿ ಡಯಾಮಾರ್ಫಿಕ್‌ ಡಿಸಾರ್ಡರ್‌’ ಎಂಬ ಅಧ್ಯಯನ ನಡೆಸಿದ್ದಾರೆ. ಈ ಅಧ್ಯಯನದಲ್ಲಿ ಶರ್ಮಾ ಅವರ ಕೊಡುಗೆಯೂ ಇದೆ. ಶೀಘ್ರದಲ್ಲೇ ಈ ಕುರಿತ ವೈಜ್ಞಾನಿಕ ವಿಶ್ಲೇಷಣಾ ವರದಿ ವೈದ್ಯಕೀಯ ನಿಯತಕಾಲಿಕವೊಂದರಲ್ಲಿ ಪ್ರಕಟವಾಗಲಿದೆ.‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.