ಸೋಮವಾರ, ಜೂಲೈ 6, 2020
28 °C

ಇಂಚಗೇರಿ ದಿಂಡಿ ಪಲ್ಲಕ್ಕಿ ಪಾದಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ದೇಶದ ಸೌಹಾರ್ದ ಪರಂಪರೆ ಕಾಪಾಡುವ ಮತ್ತು ಮಾನವೀಯ ಸಂದೇಶ ಸಾರುವ ಉದ್ದೇಶದಿಂದ ಕಲಬುರ್ಗಿ ಇಂಚಗೇರಿ ಶಾಖಾ ಮಠದ ಭಕ್ತಾದಿಗಳು ಇಂಡಿ ತಾಲ್ಲೂಕಿನ ಶ್ರೀ ಕ್ಷೇತ್ರ ಇಂಚಗೇರಿ ಮಠದವರೆಗೆ ದಿಂಡಿ ಪಲ್ಲಕ್ಕಿ ಪಾದಯಾತ್ರೆ ಕೈಗೊಂಡಿದ್ದಾರೆ.

ನಗರದ ಮಠದ ಆವರಣದಿಂದ ಪಾದಯಾತ್ರೆ ಆರಂಭಿಸಿರುವ ಭಕ್ತಾದಿಗಳು ಜ. 17ರಂದು ಇಂಚಗೇರಿ ಮಠಕ್ಕೆ ತಲುಪುವರು. ಮಾರ್ಗದುದ್ದಕ್ಕೂ ಆಯಾ ಗ್ರಾಮಗಳಲ್ಲಿ ಮಠದ ರೇವಣಸಿದ್ದೇಶ್ವರ ಮಹಾರಾಜರು ಪ್ರವಚನ ನಡೆಸಿಕೊಡುವರು.

‘ಜಾತಿ, ಧರ್ಮದ ಹೆಸರಿನಲ್ಲಿ ದೇಶದಲ್ಲಿ ಅಶಾಂತಿ ವಾತಾವರಣ ಸೃಷ್ಟಿಯಾಗಿದೆ. ಅಸಹನೆ ಮತ್ತು ಹಿಂಸಾಚಾರಕ್ಕೂ ಕಾರಣವಾಗಿದೆ. ಎಲ್ಲರೂ ಶಾಂತಿ, ಸೌಹಾರ್ದ ಮತ್ತು ಸಹಿಷ್ಣುತೆ ಪಾಲಿಸಿದ್ದಲ್ಲಿ, ಯಾವುದೇ ಅಡ್ಡಿ ಅತಂಕ ಮತ್ತು ಸಮಸ್ಯೆಗಳಿಲ್ಲದೇ ಬದುಕಬಹುದು ಎಂಬ ಸಂದೇಶ ಸಾರುವುದು ಪಾದಯಾತ್ರೆಯ

ಮುಖ್ಯ ಉದ್ದೇಶ’ ಎಂದು ಹಿರಿಯ ಭಕ್ತರಾದ ಜಿ.ಬಿ.ಮಂಗಳಗಟ್ಟಿ ತಿಳಿಸಿದರು.

‘ಮಠದ ಮಹಾರಾಜರಾದ ಭಾವುಸಾಹೇಬ, ಗಿರಿಮಲ್ಲೇಶ್ವರ, ಮಾಧವನಾಂದ ಪ್ರಭುಜಿ, ಗುರುಪುತ್ರೇಶ್ವರ ಮತ್ತು ಜಗನ್ನಾಥ ಅವರು ತಮ್ಮ ಕಾಲಾವಧಿಯಲ್ಲಿ ಸೌಹಾರ್ದ ಪರಂಪರೆ ಕಾಪಾಡಲು ಶ್ರಮಿಸಿದರು. ಸರ್ವಧರ್ಮ ಸಮಭಾವ ಎಂಬ ಭದ್ರ ಬುನಾದಿಯಡಿ ಮಠವನ್ನು ಕಟ್ಟಿ ಬೆಳೆಸಿದರು’ ಎಂದು ಅವರು ವಿವರಿಸಿದರು.

‘ಮಠದ ಹಿರಿಯರು, ಮಹಿಳೆಯರು ಮತ್ತು ಮಕ್ಕಳು ಪಾದಯಾತ್ರೆಯಲ್ಲಿ ಭಜನೆಗಳನ್ನು ಹಾಡುತ್ತ ಹೆಜ್ಜೆ ಹಾಕುವರು. ಎಷ್ಟೇ ಬಿಸಿಲಿದ್ದರೂ ಯಾವುದೇ ರೀತಿಯ ಸಮಸ್ಯೆ ಎದುರಾದರೂ ಪಾದಯಾತ್ರೆಯನ್ನು ಎಲ್ಲಿಯೂ ನಿಲ್ಲಿಸದೇ ದಿಂಡಿ ಮುಂದುವರೆಸುತ್ತೇವೆ. ಹಲವು ವರ್ಷಗಳಿಂದ ದಿಂಡಿ ನಡೆಸುತ್ತಿದ್ದೇವೆ’ ಎಂದು ಮಠದ ಭಕ್ತ ನಾಗೇಂದ್ರ ಹಾಸಿಲಕರ್ ತಿಳಿಸಿದರು.

‘ಅಥಣಿ, ಹುಬ್ಬಳ್ಳಿ ಮತ್ತು ಬೇರೆ ಬೇರೆ ಊರುಗಳಿಂದ ಪಾದಯಾತ್ರೆ ಆರಂಭಗೊಂಡಿದೆ. ವಿವಿಧ ಊರು, ಗ್ರಾಮಗಳ ಮೂಲಕ ಸಂಚರಿಸುತ್ತ ಭಕ್ತಾದಿಗಳು ಜ.17ಕ್ಕೆ ಇಂಚಗೇರಿ ಮಠ ತಲುಪುವರು’ ಎಂದು ಅವರು ಮಾಹಿತಿ ನೀಡಿದರು.

ಪಾದಯಾತ್ರೆ ಸಾಗುವ ಮಾರ್ಗ

ಹಡಗಿಲ್, ದೇವಲ ಗಾಣಗಾಪುರ, ಇಟಗಾ, ಅಂಕಲಗಿ, ನಾರಾಯಣಪುರ, ಯಾತನೂರು, ಸುಂಗಠಾಣ, ಕೊಂಡಗೂಳಿ, ಗೋಲಗೇರಿ, ವಂದಾಳ, ಹಂದಿಗನೂರ, ಕೋರವಾರ, ಮಡ್ಡಿಮಣ್ಣೂರ, ದೇವೂರ ತಾಂಡಾ, ಸಾತಿಹಾಳ, ರಬ್ಬಿನಾಳ, ಇಂಗಳೇಶ್ವರ, ಮಸಬಿನಾಳ, ಡೋಣೂರು, ಕುಮಟಗಿ, ಹೊನ್ನುಟಗಿ, ಅಲ್ಲಾಪುರ, ವಿಜಯಪುರ ಮತ್ತು ಇಂಚಗೇರಿ.

* * 

ಇಂಚಗೇರಿ ಮಠಕ್ಕೆ ಸರ್ವ ಧರ್ಮೀಯರು ಬರುತ್ತಾರೆ. ವರ್ಷಗಳಿಂದ ಮಠದಲ್ಲಿ ಸೌಹಾರ್ದ ಪರಂಪರೆ ಕಾಯ್ದುಕೊಂಡು ಬರಲಾಗುತ್ತಿದೆ.

ಜಿ.ಬಿ.ಮಂಗಳಗಟ್ಟಿ, ಭಕ್ತ, ಇಂಚಗೇರಿ ಮಠ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.