ಸೋಮವಾರ, ಜೂನ್ 21, 2021
27 °C

‘ಏರ್‌ ಇಂಡಿಯಾ’ದ ಮಹಾರಾಜ ಮಾರಾಟಕ್ಕೆ

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

‘ಏರ್‌ ಇಂಡಿಯಾ’ದ ಮಹಾರಾಜ ಮಾರಾಟಕ್ಕೆ

ಕೋಟ್ಯಂತರ ರೂಪಾಯಿಗಳ ನಷ್ಟದಲ್ಲಿ ನಡೆಯುತ್ತಿರುವ ನಾಗರಿಕವಿಮಾನಯಾನ ಸಂಸ್ಥೆ ಏರ್‌ ಇಂಡಿಯಾವನ್ನು (ಎ.ಐ) ಖಾಸಗಿಯವರಿಗೆ ಮಾರಾಟ ಮಾಡಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಕೇಂದ್ರೋದ್ಯಮಗಳನ್ನು ಸರ್ಕಾರದ ನಿಯಂತ್ರಣದಿಂದ ಕೈಬಿಡುವ ಆರ್ಥಿಕ ಸುಧಾರಣಾ ಕ್ರಮ ಇದಾಗಿದೆ. ಖಾಸಗಿ ವಿಮಾನಯಾನ ಸಂಸ್ಥೆಗಳ ತೀವ್ರ ಸ್ಪರ್ಧೆಯಿಂದ ನಿರಂತರವಾಗಿ ಮುಗ್ಗರಿಸುತ್ತಿರುವ ಸಂಸ್ಥೆಗೆ ಇದು ಜೀವದಾನ ನೀಡಲಿದೆ.

‘ಮಹಾರಾಜ’ ಲಾಂಛನದಿಂದ ಗುರುತಿಸಿಕೊಂಡು 85 ವರ್ಷಗಳ ಇತಿಹಾಸ ಹೊಂದಿದ ವಿಮಾನಯಾನ ಸಂಸ್ಥೆ ಇದು. ಈಗ ಸಂಸ್ಥೆಯಲ್ಲಿನ ತನ್ನ ಶೇ 76ರಷ್ಟು ಪಾಲು ಬಂಡವಾಳವನ್ನು ಮಾರಾಟ ಮಾಡುವುದು ಕೇಂದ್ರದ ಇರಾದೆ.

ತನ್ನ ಒಡೆತನದಲ್ಲಿ ಇರುವ ಸಂಸ್ಥೆಯ ಖಾಸಗೀಕರಣ ಪ್ರಕ್ರಿಯೆಯನ್ನು2019ರ ಸಾರ್ವತ್ರಿಕ ಚುನಾವಣೆಗೂ ಮುಂಚೆಯೇ ಪೂರ್ಣಗೊಳಿಸುವುದು ಸರ್ಕಾರದ ಉದ್ದೇಶ. ‘ವಿಮಾನಯಾನ ನಿರ್ವಹಿಸುವುದು ಸರ್ಕಾರದ ಕೆಲಸ ಅಲ್ಲ’ ಎನ್ನುವ ನಿಲುವಿಗೆ ಸರ್ಕಾರ ಬಂದಿದೆ. ₹ 53 ಸಾವಿರ ಕೋಟಿಗಳಷ್ಟು ನಷ್ಟದಲ್ಲಿ ಇರುವ ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ಯಾರು ಸ್ಪಂದಿಸಲಿದ್ದಾರೆ ಎನ್ನುವುದು ಕುತೂಹಲದ ಸಂಗತಿಯಾಗಿದೆ.

ಖರೀದಿದಾರರ ಪಾಲಿಗೆ ‘ಮಹಾರಾಜ’ ಆಕರ್ಷಕವಾಗಿಯೇ ಇರಲಿದ್ದಾನೆ. ಶೇ 76ರಷ್ಟು ಪಾಲು ಬಂಡವಾಳ ಖರೀದಿಯು ಸಂಸ್ಥೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಖಾಸಗಿಯವರಿಗೆ ಅವಕಾಶ ಮಾಡಿಕೊಡಲಿದೆ. ಸಂಸ್ಥೆಯ ಒಟ್ಟು ಸಾಲದ ಶೇ 50ರಷ್ಟನ್ನು ಸರ್ಕಾರ ತಾನೇ ಭರಿಸಲು ನಿರ್ಧರಿಸಿದೆ. ಸಂಸ್ಥೆಯಲ್ಲಿ ಸರ್ಕಾರ ಶೇ 24ರಷ್ಟು ಪಾಲು ಬಂಡವಾಳ ಉಳಿಸಿಕೊಳ್ಳಲು ನಿರ್ಧರಿಸಿದೆ. ಖಾಸಗೀಕರಣದ ಹೊರತಾಗಿಯೂ ಸರ್ಕಾರದ ಹಸ್ತಕ್ಷೇಪ ಇರುವ ಸಾಧ್ಯತೆಗೆ ಇದು ಇಂಬು ನೀಡುತ್ತದೆ.

ಇದು ಯಾರ ಶಿಫಾರಸು?

ಸರ್ಕಾರದ ‘ಚಿಂತಕರ ಚಾವಡಿ’ಯಾಗಿರುವ ನೀತಿ ಆಯೋಗವು ಖಾಸಗೀಕರಣದ ಪ್ರಸ್ತಾವ ಮುಂದಿಟ್ಟಿತ್ತು. ಸಂಸ್ಥೆಯ ಹಣಕಾಸು ಪರಿಸ್ಥಿ

ತಿಯು ಸುಧಾರಿಸಲಾಗದ ಮಟ್ಟ ತಲುಪಿದ ಕಾರಣಕ್ಕೆ ಈ ಸಲಹೆ ನೀಡಲಾಗಿತ್ತು. ನಿರಂತರವಾಗಿ ನಷ್ಟದಲ್ಲಿ ನಡೆಯುತ್ತಿರುವ ಸಂಸ್ಥೆಗೆ, ಈಗಾಗಲೇ ಹಣಕಾಸಿನ ಕೊರತೆ ಎದುರಿಸುತ್ತಿರುವ ಸರ್ಕಾರದ ನೆರವು ಮುಂದುವರೆಸುವುದು ಲಾಭಕರವಲ್ಲ ಎಂದು ಹೇಳಿತ್ತು. 2017ರ ಮೇ 12ರಂದು ಸಲ್ಲಿಸಿದ್ದ ವರದಿಯಲ್ಲಿ ಈ ಶಿಫಾರಸು ಮಾಡಲಾಗಿತ್ತು.

ಸ್ಥಾಪಕರು ಯಾರು?

ಟಾಟಾ ಸನ್ಸ್‌ನ ಉದ್ಯಮಿ ಜೆಆರ್‌ಡಿ ಟಾಟಾ ಅವರು 1932ರಲ್ಲಿ ಟಾಟಾ ಏರ್‌ಲೈನ್ಸ್‌ ಸ್ಥಾಪಿಸಿದ್ದರು. ಇವರು ದೇಶದ ಮೊದಲ ಪೈಲಟ್‌ ಕೂಡ ಹೌದು. ಕರಾಚಿಯಿಂದ ಮುಂಬೈವರೆಗೆ ದೇಶದ ಮೊದಲ ವಿಮಾನ ಹಾರಾಟ ನಡೆಸಿದ ಹೆಗ್ಗಳಿಕೆಯೂ ಇವರ ಹೆಸರಿನಲ್ಲಿ ಇದೆ. ದ್ವಿತೀಯ ಮಹಾಯುದ್ಧದ ಸಂದರ್ಭದಲ್ಲಿ ಟಾಟಾ ಏರ್‌ಲೈನ್ಸ್‌, ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಪಬ್ಲಿಕ್‌ ಲಿಮಿಟೆಡ್‌ ಕಂಪನಿಯಾಗಿ ಇದನ್ನು ಪರಿವರ್ತಿಸಿತ್ತು. ಆ ನಂತರ ಸಂಸ್ಥೆಯ ಹೆಸರನ್ನು ‘ಏರ್‌ ಇಂಡಿಯಾ’ ಎಂದು ಬದಲಿಸಿತ್ತು.

ರಾಷ್ಟ್ರೀಕರಣ

ಕೇಂದ್ರ ಸರ್ಕಾರವು 1953ರಲ್ಲಿ ಟಾಟಾ ಸನ್ಸ್‌ನಿಂದ ಗರಿಷ್ಠ ಷೇರುಗಳನ್ನು ಖರೀದಿಸಿ ಸಂಸ್ಥೆಯನ್ನು ತನ್ನ ಒಡೆತನಕ್ಕೆ ಪಡೆದಿತ್ತು. ಜೆಆರ್‌ಡಿ ಟಾಟಾ ಅವರು 1977ರವರೆಗೂ ‘ಏರ್‌ ಇಂಡಿಯಾ’ದ ಅಧ್ಯಕ್ಷರಾಗಿ ಮುಂದುವರೆದಿದ್ದರು. ಈಗ ಮತ್ತೆ ಖಾಸಗೀಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದೆ. ಈ ಪ್ರಕ್ರಿಯೆ ಅಂತಿಮಗೊಳಿಸಲು ಹಣಕಾಸು ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು.

ನಷ್ಟದ ಕಾರಣ?

2007ರಲ್ಲಿ ಇಂಡಿಯನ್‌ ಏರ್‌ಲೈನ್ಸ್‌ ಮತ್ತು ಏರ್‌ ಇಂಡಿಯಾ ವಿಲೀನಗೊಳಿಸಲಾಗಿತ್ತು. ಬೇಕಾಬಿಟ್ಟಿಯಾಗಿ ವಿಮಾನಗಳನ್ನು ಖರೀದಿಸಲಾಗಿತ್ತು. ಅಲ್ಲಿಂದಾಚೆಗೆ ಸಂಸ್ಥೆಯು ಯಾವತ್ತೂ ಲಾಭದ ಹಾದಿಗೆ ಮರಳಿರಲಿಲ್ಲ. ಸರ್ಕಾರದ ಪಾಲಿಗೆ ಇದೊಂದು ಬಿಳಿಯಾನೆಯಾಗಿತ್ತು. ಸಂಸ್ಥೆಗೆ ಯಾವತ್ತೂ ಪ್ರಯಾಣಿಕರ ಕೊರತೆ ಎದುರಾಗಿಲ್ಲ. ಸಿಬ್ಬಂದಿಯನ್ನು ದಕ್ಷ ರೀತಿಯಲ್ಲಿ ಬಳಕೆ ಮಾಡಿಕೊಳ್ಳದ ಕಾರಣಕ್ಕೆ ಪ್ರಯಾಣಿಕರಿಂದ ಬರುವ ವರಮಾನವೂ ಹೆಚ್ಚಳಗೊಂಡಿರಲಿಲ್ಲ. ಲಾಭದಾಯಕವಲ್ಲದ ಮಾರ್ಗದಲ್ಲಿನ ವಿಮಾನಗಳ ಹಾರಾಟವೂ ನಷ್ಟಕ್ಕೆ ಕೊಡುಗೆ ನೀಡಿದೆ. ಶೇ 86ರಷ್ಟು ಮಾರುಕಟ್ಟೆ ಪಾಲು ಹೊಂದಿರುವ ಖಾಸಗಿ ವಿಮಾನಯಾನ ಸಂಸ್ಥೆಗಳು ಲಾಭದಲ್ಲಿ ಮುನ್ನಡೆದಿರುವಾಗ, ಏರ್‌ ಇಂಡಿಯಾ ಮಾತ್ರ ಸತತವಾಗಿ ನಷ್ಟದಲ್ಲಿ ಸಾಗುತ್ತಿದೆ.

ಸಿಬ್ಬಂದಿಯಲ್ಲಿ ಕಾಣದ ವೃತ್ತಿಪರತೆ, ಸರ್ಕಾರದ ಹಸ್ತಕ್ಷೇಪ, ಸಕಾಲದಲ್ಲಿ ವಿಮಾನಗಳು ಹಾರಾಟ ನಡೆಸದಿರುವುದೂ ನಷ್ಟದ ಬಾಬತ್ತು ಹೆಚ್ಚಿಸಿದ್ದವು. ಸ್ವಾಧೀನ ಪ್ರಕ್ರಿಯೆ ನಂತರವೂ ಸಮನ್ವಯ ಕಂಡುಬರದಿದ್ದರೆ ಈ ಖಾಸಗೀಕರಣ ಪ್ರಯತ್ನವೂ ನಿರೀಕ್ಷಿತ ಫಲ ನೀಡದೇ ಹೋದೀತು ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ.

ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗಿತ್ತೇ?

ಹೌದು. 2012ರಲ್ಲಿ ಯುಪಿಎ ಸರ್ಕಾರ ₹ 32 ಸಾವಿರ ಕೋಟಿಗಳ ಪರಿಹಾರ ಕೊಡುಗೆ ನೀಡಿತ್ತು. ಈ ನೆರವಿನ ಬಳಿಕವೂ ಸಂಸ್ಥೆಯು ನಷ್ಟದ ನಂಟು ಕಳಚಿಕೊಳ್ಳಲು ವಿಫಲವಾಗಿತ್ತು. ಪ್ರತಿವರ್ಷ ಸಾಲದ ಹೊರೆ ಬೆಟ್ಟದಂತೆ ಬೆಳೆಯುತ್ತಲೇ ಸಾಗಿತ್ತು.

ಬ್ರ್ಯಾಂಡ್‌ನ ಗತಿ ಏನು?

ಬಹುಶಃ ‘ಏರ್‌ ಇಂಡಿಯಾ’ ಹೆಸರು ಉಳಿಯಲಿದೆ. ಸಂಸ್ಥೆಯ ಮೇಲಿನ ನಿಯಂತ್ರಣವು ಭಾರತದ ಸಂಸ್ಥೆಯ ವಶದಲ್ಲಿಯೇ ಇರಲಿದೆ. ಲಾಂಛನ ‘ಮಹಾರಾಜ’ನಿಗೆ ಯಾವ ಗತಿ ಕಾದಿದೆಯೋ ತಿಳಿಯದು.

ಖರೀದಿಗೆ ಆಸಕ್ತಿ ತೋರಿಸಿದವರು ದೇಶಿ ವಿಮಾನ ಯಾನ ಸಂಸ್ಥೆ ಇಂಡಿಗೊದ ಇಂಟರ್‌ಗ್ಲೋಬ್‌ ಏವಿಯೇಷನ್‌, ಟಾಟಾ ಸನ್ಸ್‌, ನರೇಶ್‌ ಗೋಯೆಲ್‌ ಒಡೆತನದ ಜೆಟ್‌ ಏರ್‌ವೇಸ್‌ (ಇಂಡಿಯಾ), ಕತಾರ್‌ ಏರ್‌ವೇಸ್‌ಗಳು ಖರೀದಿಸಲು ಆಸಕ್ತಿ ತೋರಿಸಿವೆ.

ಅಂಗಸಂಸ್ಥೆಗಳನ್ನು ಖರೀದಿಸಲು ಟರ್ಕಿಯ ಸೆಲೆಬಿ ಏವಿಯೇಷನ್‌ ಹೋಲ್ಡಿಂಗ್‌, ಬರ್ಡ್‌ ಗ್ರೂಪ್‌, ಮೆಂಜಿಸ್‌ ಏವಿಯೇಷನ್‌, ಲೈವ್‌ವೆಲ್‌ ಏವಿಯೇಷನ್‌ ಸರ್ವಿಸಸ್‌ ಮುಂದೆ ಬಂದಿವೆ.

ಮಾರಾಟ ವಿಧಾನ ಯಾವುದು?

ಸಂಸ್ಥೆಯನ್ನು ಖಾಸಗಿಯವರಿಗೆ ಬಿಕರಿ ಮಾಡುವ ಸ್ವರೂಪ ಇನ್ನೂ ಸ್ಪಷ್ಟಗೊಂಡಿಲ್ಲ. ಲಾಭದಲ್ಲಿ ಇರುವ ಅಂಗಸಂಸ್ಥೆಗಳಾದ ಅಗ್ಗದ ವಿಮಾನಯಾನ ಸಂಸ್ಥೆ ಎ.ಐ ಎಕ್ಸ್‌ಪ್ರೆಸ್‌, ಸರಕು ನಿರ್ವಹಣೆ ವಿಭಾಗ ಎ.ಐ ಟ್ರಾನ್ಸ್‌ಪೋರ್ಟ್‌ ಮತ್ತು ವಿಮಾನ ನಿಲ್ದಾಣದ ಸೇವೆ ಒದಗಿಸುವ ಎ.ಐ ಎಸ್‌ಎಟಿಎಸ್‌, ಎ.ಐಗೆ ಸೇರಿದ ಭೂಮಿ ಮತ್ತು ಕಚೇರಿ ಕಟ್ಟಡಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುವುದೇ ಎನ್ನುವುದು ಖಚಿತಪಟ್ಟಿಲ್ಲ.

ತಾತ್ವಿಕ ಒಪ್ಪಿಗೆ

ಕೇಂದ್ರ ಸಚಿವ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿಯು 2017ರ ಜೂನ್‌ 28ರಂದು ಎ.ಐ ಮತ್ತು ಅದರ ಐದು ಅಂಗಸಂಸ್ಥೆಗಳ ಷೇರು ವಿಕ್ರಯಕ್ಕೆ ತಾತ್ವಿಕ ಸಮ್ಮತಿ ನೀಡಿತ್ತು.

ಸ್ವಾಧೀನ ಲಾಭದಾಯಕವೇ?

ಖಂಡಿತವಾಗಿಯೂ ಹೌದು. ಸಂಸ್ಥೆಯು ಅಂತರರಾಷ್ಟ್ರೀಯ ಹಾರಾಟ ಸಂದರ್ಭಗಳಲ್ಲಿ ವಿದೇಶಿ ನಿಲ್ದಾಣಗಳಲ್ಲಿ ಹೊಂದಿರುವ ಆಗಮನ ಮತ್ತು ನಿರ್ಗಮನದ ನಿರ್ದಿಷ್ಟ ಸಮಯ (international slots), ದ್ವಿಪಕ್ಷೀಯ ಹಕ್ಕುಗಳು ಮತ್ತು ಇತರ ಸಂಪತ್ತು ಎ.ಐ ಸ್ವಾಧೀನಪಡಿಸಿಕೊಳ್ಳುವ ಸಂಸ್ಥೆಗೆ ಹೆಚ್ಚು ಲಾಭದಾಯಕವಾಗಿರಲಿವೆ.

ದೇಶಿ ವಿಮಾನಯಾನ ರಂಗದ ಮೇಲಿನ ಪರಿಣಾಮಗಳೇನು?

ಶೇ 39.8ರಷ್ಟು ಪಾಲು ಹೊಂದಿರುವ ಇಂಡಿಗೊ, ಎ.ಐ ಖರೀದಿಸುವಲ್ಲಿ ಅಥವಾ ಅಂತರರಾಷ್ಟ್ರೀಯ ಹಾರಾಟವನ್ನಷ್ಟೇ ಸ್ವಾಧೀನಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರೆ ಗಮನಾರ್ಹ ಪ್ರಯೋಜನ ಪಡೆಯಲಿದೆ. ‘ಇಂಟರ್‌ನ್ಯಾಷನಲ್‌ ಸ್ಲಾಟ್ಸ್‌’ ಯಾವುದೇ ವಿಮಾನಯಾನ ಸಂಸ್ಥೆಗೆ ಸುಲಭವಾಗಿ ಸಿಗುವುದಿಲ್ಲ.

ಒಂದು ವೇಳೆ ಎ.ಐ, ಶೇ 16.8ರಷ್ಟು ಪಾಲು ಹೊಂದಿರುವ ಜೆಟ್‌ ಏರ್‌ವೇಸ್‌ ‍ಪಾಲಾದರೆ, ಇಂಡಿಗೊದ ಮಾರುಕಟ್ಟೆ ಪಾಲನ್ನು ಕಬಳಿಸಲಿದೆ.

ಸುಸೂತ್ರವಾಗಿರಲಿದೆಯೇ?

ಇಲ್ಲ. ಮಾರಾಟ ಪ್ರಕ್ರಿಯೆ ಹಲವಾರು ಗೋಜಲುಗಳನ್ನು ಒಳಗೊಂಡಿದೆ. ಎಲ್ಲಕ್ಕಿಂತ ಹೆಚ್ಚಾಗಿ ಖರೀದಿಗೆ ಮುಂದೆ ಬರುವ ಸಂಸ್ಥೆಯು ₹ 53 ಸಾವಿರ ಕೋಟಿಗಳಷ್ಟು ನಷ್ಟದಲ್ಲಿನ ಅರ್ಧದಷ್ಟು ಹೊರೆ ಹೊರಲು ಸಿದ್ಧವಾಗಿರಬೇಕಾಗಿದೆ. ಮಾರಾಟ ಮತ್ತು ಸ್ವಾಧೀನ ಪ್ರಕ್ರಿಯೆಗೆ 12 ರಿಂದ 18 ತಿಂಗಳು ಸಮಯ ಬೇಕಾಗಲಿದೆ. ಆದರೆ, ಕೇಂದ್ರ ಸರ್ಕಾರ ಅವಸರಿಸುತ್ತಿದೆ. 2019ರ ಸಾರ್ವತ್ರಿಕ ಚುನಾವಣೆ ಮೊದಲೇ ಈ ಪ್ರಕ್ರಿಯೆ ಪೂರ್ಣಗೊಳಿಸಲು ಉದ್ದೇಶಿಸಿದೆ.

ಸಂಸದೀಯ ಸಮಿತಿಯ ಅಪಸ್ವರ

ಷೇರು ವಿಕ್ರಯಕ್ಕೆ ಇದು ಸೂಕ್ತ ಸಮಯ ಅಲ್ಲ. ಸಂಸ್ಥೆಯ ಪುನಶ್ಚೇತನ ಮತ್ತು ಸಾಲ ತೀರಿಸಲು ಐದು ವರ್ಷಗಳವರೆಗೆ ಕಾಲಾವಕಾಶವನ್ನು ಏಕೆ ನೀಡಬಾರದು ಎಂದು ಸಂಸದೀಯ ಸಮಿತಿಯು ಸರ್ಕಾರವನ್ನು ಕೇಳಿತ್ತು. 2012 ರಿಂದ 2022ರವರೆಗೆ ಸಂಸ್ಥೆಯ ಪುನಶ್ಚೇತನ ಮತ್ತು ಆರ್ಥಿಕ ಪುನರ್‌ರಚನೆ ಯೋಜನೆ (ಎಫ್‌ಆರ್‌ಪಿ) ಜಾರಿಯಲ್ಲಿದೆ. ವಿವಿಧ ರೀತಿಯಲ್ಲಿ ಸುಧಾರಣೆ ಕಾಣುತ್ತಿದೆ. ಅತ್ಯಂತ ಅಪಾಯಕಾರಿ ಸ್ಥಿತಿಯಿಂದ ಹೊರಬರುತ್ತಿದೆ. ಹೀಗಾಗಿ ಈ ಯೋಜನೆಗಳ ಅವಧಿ ಮುಗಿದ ಬಳಿಕ ಸಂಸ್ಥೆಯ ಸ್ಥಿತಿಗತಿ ಪರಿಶೀಲನೆ ನಡೆಸಿ ಅದರಂತೆ ಕ್ರಮ ಕೈಗೊಳ್ಳಬಹುದು ಎಂದು ಸಲಹೆ ನೀಡಿತ್ತು. ಅಂಗ ಸಂಸ್ಥೆಗಳಾದ ಏರ್‌ ಇಂಡಿಯಾ ಟ್ರಾನ್ಸ್‌ಪೋರ್ಟ್‌ ಸರ್ವೀಸಸ್ ಲಿಮಿಟೆಡ್‌, ಏರ್‌ ಇಂಡಿಯಾ ಎಸ್‌ಎಟಿಎಸ್‌ ಏರ್‌ಪೋರ್ಟ್‌ ಸರ್ವೀಸ್‌ ಪ್ರೈವೇಟ್‌ ಲಿಮಿಟೆಡ್‌, ಅಲಯನ್ಸ್‌ ಏರ್‌ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಲಾಭದಲ್ಲಿದ್ದು, ಅವುಗಳ ಷೇರುವಿಕ್ರಯ ಮಾಡದಂತೆ ತಿಳಿಸಿತ್ತು.

ನಷ್ಟದ ಸುಳಿಗೆ ಸಿಲುಕಿ ಬಸವಳಿದಿರುವ ‘ಮಹಾರಾಜ’ ಯಾರ ತೆಕ್ಕೆಗೆ ಹೋಗಲಿದ್ದಾನೆ ಎನ್ನುವುದನ್ನು ಕುತೂಹಲದಿಂದ ಎದುರು ನೋಡಬೇಕಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.