ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊರಳು ಹಾದಿಯಲ್ಲಿ ದಲಿತ ರಾಜಕಾರಣ?

Last Updated 13 ಏಪ್ರಿಲ್ 2018, 19:40 IST
ಅಕ್ಷರ ಗಾತ್ರ

ದಲಿತ ಪದದ ಅರ್ಥ ಒಡೆದದ್ದು ಹೋಳಾದದ್ದು ಚೆದುರಿದ್ದು. ದಲಿತರಂತೆ ಭಾರತದಲ್ಲಿ ಅವರ ರಾಜಕಾರಣವೂ ಹೆಚ್ಚು ಕಡಿಮೆ ಒಡೆದು ಚೆದುರಿದ್ದೇ ಆಗಿದೆ. ಹಿಂದೂ ಸಮಾಜದಲ್ಲಿ ಎಲ್ಲ ಕಾಲಕ್ಕೂ ಅವರು ನಿಕೃಷ್ಟರು. ಹಿಂದುತ್ವದ ಹಿತ್ತಿಲಿನಲ್ಲಿ ಅಂದಿನಿಂದ ಇಂದಿನವರೆಗೆ ಶಂಬೂಕರ ಕೊರಳುಗಳು, ಏಕಲವ್ಯರ ಹೆಬ್ಬೆರಳುಗಳು ರಾಶಿ ಬಿದ್ದಿವೆ. ಮೇಲು ಕೀಳಿನ ನಂಜನ್ನೇ ಉಸಿರಾಡುವ ಹಿಂದೂ ಹೆಸರಿನ ರಾಷ್ಟ್ರದೇಹದ ದಾಹ ಮತ್ತು ಹಸಿವು ಇಂಗುವ ಸೂಚನೆಗಳೇ ಇಲ್ಲ. ಭಕ್ಷಿಸಿದಷ್ಟೂ ಬೇಡುವ ಬಕಾಸುರನಾಗಿ ಗಹಗಹಿಸಿದೆ. ಹಿತ್ತಿಲಿನಲ್ಲಿ ಶತಮಾನಗಳಿಂದ ರಾಶಿ ಬಿದ್ದ ಅಸ್ಥಿಗಳು. ಆದರೆ ಅಂಗಳದ ತುಂಬೆಲ್ಲ ಸಿಂಗಾರದ ರಂಗೋಲೆಗಳು.

ಹಾಗೆ ನೋಡಿದರೆ ಹಿತ್ತಿಲಿನ ಅಕರಾಳ ವಿಕರಾಳವನ್ನು ಹಿಂದುತ್ವದ ಮುಖಕ್ಕೆ ರಾಚಿದ ಮೊದಲ ದಲಿತ ರಾಜಕಾರಣಿ ಬಾಬಾಸಾಹೇಬರೇ. ಅವರು ಮಾಡಿದ ಕೆಚ್ಚಿನ ಪರಿಶುದ್ಧ ರಾಜಕಾರಣವೇ ದಲಿತ ಸಮುದಾಯಕ್ಕೆ ದನಿಯನ್ನೂ, ರಟ್ಟೆಗಳಿಗೆ ಕಸುವನ್ನೂ ಕೊಟ್ಟಿದೆ. ಆಗ ಬದುಕಿದ್ದಾಗ ಅವರನ್ನು ನಿಂದಿಸಿದ ಹಿಂದುತ್ವ, ಈಗ ಅವರಿಗೆ ಭವ್ಯ ಸ್ಮಾರಕಗಳನ್ನು ಕಟ್ಟಿಸಿ ಕೊಂಡಾಡುವ ಬೂಟಾಟಿಕೆಯಲ್ಲಿ ತೊಡಗಿದೆ. ಇತ್ತೀಚೆಗೆ ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ದಲಿತ ಚರಿತ್ರೆಯ ತಿರಸ್ಕಾರಕ್ಕೆ ಟೊಂಕ ಕಟ್ಟಿದ ಶಕ್ತಿಗಳ ಎಳೆ ಬಿಡಿಸಿ ವಿಶ್ಲೇಷಿಸಿದರೆ ಈ ಕಠೋರ ಸತ್ಯ ನಗ್ನವಾಗುವುದು. ಮುಖ್ಯಧಾರೆಯ ಪಕ್ಷಗಳು ದಲಿತರನ್ನು ಅಧಿಕಾರ ಗಳಿಕೆಯ ಚದುರಂಗಕ್ಕೆ ದಾಳಗಳನ್ನಾಗಿ ಬಳಸತೊಡಗಿವೆ. ಶಾಸನಸಭೆಗಳು ಮತ್ತು ಸಂಸತ್ತಿನಲ್ಲಿ ಕುಳಿತುಕೊಳ್ಳುತ್ತಿರುವ ದೊಡ್ಡ ಸಂಖ್ಯೆಯ ದಲಿತ ಪ್ರತಿನಿಧಿಗಳು ದಲಿತ ರಾಜಕಾರಣದಿಂದ ಗೆದ್ದವರಲ್ಲ. ಬದಲಾಗಿ ಸವರ್ಣೀಯ ಪ್ರಾಬಲ್ಯದ ಮುಖ್ಯಧಾರೆಯ ಪಕ್ಷಗಳ ನೆರಳುಗಳು. ಈ ಪಕ್ಷಗಳ ಒಳಗಿನ ರಾಜಕಾರಣ ಸ್ವಾರ್ಥದ್ದೇ ವಿನಾ ದಲಿತರಿಗೆ ಅಧಿಕಾರ ವರ್ಗಾವಣೆಯ ಉದ್ದೇಶದ್ದಲ್ಲ.

1970ರ ದಶಕಗಳ ತನಕ ದಲಿತ ರಾಜಕೀಯ ಆಶೋತ್ತರಗಳು ಭಾರತೀಯ ರಿಪಬ್ಲಿಕನ್ ಪಾರ್ಟಿಯ ಮೂಲಕ ಮತ್ತು ಕಾಂಗ್ರೆಸ್ ಪಕ್ಷದ ಪರಿಶಿಷ್ಟ ನಾಯಕರ ಮುಖಾಂತರ ಹೊರದಾರಿ ಕಂಡುಕೊಳ್ಳುತ್ತಿದ್ದವು. ಆಂತರಿಕ ಕಚ್ಚಾಟದಿಂದಾಗಿ ರಿಪಬ್ಲಿಕನ್ ಪಾರ್ಟಿಯ ರಾಜಕಾರಣ ಪರಿಣಾಮಕಾರಿ ಎನಿಸಲಿಲ್ಲ. ಮುಖ್ಯಧಾರೆಯ ರಾಜಕೀಯ ಪಕ್ಷಗಳು ದಲಿತರನ್ನು ಮತಬ್ಯಾಂಕುಗಳಾಗಿ ಬಳಸಿದ್ದೇ ಹೆಚ್ಚು. ಎರಡೂ ಪಕ್ಷಗಳಿಂದ ನಿರಾಸೆಗೊಂಡ ದಲಿತ ಯುವಜನ, ಅಮೆರಿಕೆಯ ‘ಬ್ಲ್ಯಾಕ್ ಪ್ಯಾಂಥರ್’ ಆಂದೋಲನದಿಂದ ಸ್ಫೂರ್ತಿ ಪಡೆದರು. ಇನ್ನು ಕೆಲವರು ಸಂಸದೀಯ ಜನತಂತ್ರದ ಹಾದಿಯಲ್ಲಿ ನಡೆದು ಅಧಿಕಾರ ಹಿಡಿಯುವ ನಡುವಣ ಕಾನ್ಶಿರಾಂ ಮಾರ್ಗ ಅನುಸರಿಸಿದರು.

1972ರಲ್ಲಿ ಮುಂಬೈ ನೆಲದಲ್ಲಿ ದಲಿತ್ ಪ್ಯಾಂಥರ್ ಆಂದೋಲನದ ಬೀಜ ನೆಟ್ಟವರು ನಾಮದೇವ ಧಸಾಳ್ ಮತ್ತು ಜೆ.ವಿ.ಪವಾರ್. ಬಾಬಾ ಸಾಹೇಬರೊಂದಿಗೆ ಬೌದ್ಧ ಮತ ಸೇರಿದ್ದ ಮಹಾರ್ ಕುಟುಂಬಗಳಿಗೆ ಸೇರಿದ ಓದು ಬರಹ ಬಲ್ಲ ಯುವಜನರೇ ಮುಖ್ಯವಾಗಿ ಈ ಆಂದೋಲನದಲ್ಲಿದ್ದರು. ಈ ಆಂದೋಲನ ಅಲ್ಪಾಯುವಾಗಿತ್ತು. ದಲಿತರ ಏಳಿಗೆಗಾಗಿ ಬಹುಜನ ಸಮಾಜ ಪಕ್ಷ ಅಧಿಕಾರ ಹಿಡಿದರೆ, ಪ್ಯಾಂಥರ್ ಪಕ್ಷ ಪ್ರತಿಭಟನೆ ಮತ್ತು ಆಂದೋಲನದ ಹಾದಿಯನ್ನು ಆರಿಸಿಕೊಂಡಿತ್ತು. ತನ್ನ ಕಾರ್ಯಸೂಚಿಯನ್ನು ದಲಿತ ಸಮುದಾಯಗಳಿಗಷ್ಟೇ ಸೀಮಿತಗೊಳಿಸಿಕೊಂಡಿತು. ತೀವ್ರ ಪೊಲೀಸ್ ದಮನಕ್ಕೆ ತುತ್ತಾಯಿತು. ಜನತಾಂತ್ರಿಕ ಸಂಸ್ಥೆಗಳು ಮತ್ತು ಚುನಾವಣೆಗಳನ್ನು ಸಿನಿಕತನದಿಂದ ಕಂಡು ದೂರ ಇರಿಸಿತು. ಹೀಗಾಗಿ ಕ್ರಮೇಣ ಕರಗಿ ಹೋಯಿತು. ಆದರೆ ನಿರ್ಗಮನಕ್ಕೆ ಮುನ್ನ ದಲಿತ ಪ್ರಜ್ಞೆಯನ್ನು ಬಡಿದೆಚ್ಚರಿಸಿ ಬಹುಜನ ಸಮಾಜ ಪಕ್ಷದ ನೆಲವನ್ನು ಹದಗೊಳಿಸಿತ್ತು.

ಕಾಂಗ್ರೆಸ್ ಬಲ ಮತ್ತು ಶಿವಸೇನೆಯ ತೋಳ್ಬಲವನ್ನು ಯುವ ಪ್ಯಾಂಥರ್‌ಗಳು ನಿರ್ಭಯವಾಗಿ ಎದುರಿಸಿದ್ದರು. ಕೇಂದ್ರ ಸಚಿವರಾಗಿದ್ದ ಜಗಜೀವನರಾಂ ಅವರನ್ನು ದಲಿತ ಊಸರವಳ್ಳಿ ಎಂದು ಬಣ್ಣಿಸಿ ಅವರ ಮುಂಬೈ ಭೇಟಿಯನ್ನು ಪ್ರತಿಭಟಿಸಿದಾಗ, ಮನಸ್ಮೃತಿ ಮತ್ತು ಭಗವದ್ಗೀತೆಯ ಪ್ರತಿಗಳಿಗೆ ಸಾಂಕೇತಿಕವಾಗಿ ಬೆಂಕಿ ಇಟ್ಟಾಗ ಪ್ಯಾಂಥರ್‌ಗಳು ದೊಡ್ಡ ಸಂಖ್ಯೆಯಲ್ಲಿ ಬಂಧನಕ್ಕೀಡಾಗಿದ್ದರು. ಭೀಮಾ ಕೋರೆಗಾಂವ್‌ನಲ್ಲಿ ದಲಿತ ಶೌರ್ಯವನ್ನು ಆಚರಿಸಿದ್ದು, ಅಂಬೇಡ್ಕರ್ ಅವರ ಸಮಾಧಿಯ ಜಾಗ ಚೈತ್ಯಭೂಮಿಯಲ್ಲಿ ಅವರ ಪುಣ್ಯತಿಥಿಯಂದು ಭಾರೀ ರ‍್ಯಾಲಿ ನಡೆಸಿದ ಚಟುವಟಿಕೆಗಳು ಮಹಾರಾಷ್ಟ್ರದ ಉದ್ದಗಲದಲ್ಲಿ ದಲಿತ ಯುವಜನರನ್ನು ಹುರಿದುಂಬಿಸಿ ಆಂದೋಲನದತ್ತ ಸೆಳೆದು ತಂದವು. ಹುಟ್ಟಿದ ಎರಡೇ ವರ್ಷಗಳಲ್ಲಿ ಪ್ರಭಾವಿ ಶಕ್ತಿಯಾಗಿ ಹೊರಹೊಮ್ಮಿತು. ಅಷ್ಟೇ ತ್ವರಿತವಾಗಿ ಪ್ಯಾಂಥರ್ಸ್ ನಾಯಕತ್ವದಲ್ಲಿ ಒಡಕುಗಳು ಮೂಡಿದವು. ಜಾತಿ ನಿರ್ಮೂಲನೆಯ ಸಂಘರ್ಷದಲ್ಲಿ ತೊಡಗುವುದೇ ಅಥವಾ ಕಮ್ಯುನಿಸಂ ದಾರಿ ತುಳಿಯುವುದೇ ಎಂಬ ಇಬ್ಬಂದಿ ಎದ್ದಿತು. ಪ್ರಚಾರ, ಪ್ರಾಬಲ್ಯಕ್ಕಾಗಿ ನಾಯಕರ ನಡುವೆ ಜಗ್ಗಾಟ, ಅಸೂಯೆ ಕಂಡು ಬಂದಿತು. 1977ರ ಹೊತ್ತಿಗೆ ಮೂರು ಬಣಗಳಾಗಿ ಒಡೆಯಿತು. ಪ್ಯಾಂಥರ್ಸ್ ಎಂದು ಹೇಳಿಕೊಳ್ಳುತ್ತಿದ್ದ ಗುಂಪುಗಳ ದುರ್ಮಾರ್ಗಿ ಚಟುವಟಿಕೆಗಳನ್ನು ಅಡಗಿಸಲು 1977ರಲ್ಲಿ ಪಕ್ಷವನ್ನು ವಿಸರ್ಜಿಸಲಾಯಿತು.

ಪ್ಯಾಂಥರ್ಸ್ ಆಂದೋಲನದ ಮಿತಿಗಳು ಕಾನ್ಶಿರಾಂ ಅವರನ್ನು ಮುನ್ನೆಲೆಗೆ ತಂದವು. ಆ ನಂತರದ ನಾಲ್ಕು ದಶಕಗಳ ಕಾಲ ಭಾರತದ ರಾಜಕಾರಣವನ್ನು ಪ್ರಭಾವಿಸಿದ ರಾಂ, ದಲಿತ ದಾರ್ಶನಿಕ ಮತ್ತು ಅತ್ಯುತ್ತಮ ಸಂಘಟಕ ಎಂದು ಹೆಸರಾದರು. 'ರಾಜಕೀಯ ಅಧಿಕಾರವೇ ವಿಮೋಚನೆಯ ಕೀಲಿ ಕೈ' ಎಂಬ ಅಂಬೇಡ್ಕರ್ ಸೂತ್ರವಾಕ್ಯವನ್ನು ಕಾರ್ಯರೂಪಕ್ಕೆ ಇಳಿಸಿದರು. ಉತ್ತರಪ್ರದೇಶದ ಸಾಧಾರಣ ದಲಿತ ಕುಟುಂಬದ ಮಗಳು ಮಾಯಾವತಿ ಅವರನ್ನು ಗುರುತಿಸಿ ಬೆಳೆಸಿದರು ಕಾನ್ಶಿರಾಂ. ಮಾಯಾವತಿಯವರ ಅದ್ವಿತೀಯ ರಾಜಕೀಯ ಸಾಹಸಗಾಥೆಗೆ ಮೊದಲ ಮಾತು ಬರೆದರು. ತಮ್ಮ ಗುರು ರೂಪಿಸಿದ ದಲಿತ ರಾಜಕಾರಣದ ಏಳುಬೀಳುಗಳ ನಡುವೆ ನಾಲ್ಕು ಬಾರಿ ಮುಖ್ಯಮಂತ್ರಿಯಾದರು ಮಾಯಾವತಿ. ಪ್ರಧಾನಮಂತ್ರಿ ಹುದ್ದೆಯನ್ನು ಕನಸುವ ಎತ್ತರ ಮುಟ್ಟಿದರು. 2012 ಮತ್ತು 2017ರ ವಿಧಾನಸಭಾ ಚುನಾವಣೆಗಳು ಮತ್ತು 2014ರ ಲೋಕಸಭಾ ಚುನಾವಣೆಯ ಹೀನಾಯ ಪರಾಭವ ಮಾಯಾವತಿಯವರನ್ನು ಹಣ್ಣು ಮಾಡಿದೆ. ಹೊಸ ರಾಜಕೀಯ ಸಮೀಕರಣಗಳ ಮೂಲಕ ಮರುಹುಟ್ಟನ್ನು ಶೋಧಿಸಬೇಕಾದ ಕಠಿಣ ಸವಾಲು ಅವರೆದುರು ನಿಂತಿದೆ. ಅವರ ಆತ್ಮಚರಿತ್ರೆ ಬರೆದಿರುವ ಹಿರಿಯ ಪತ್ರಕರ್ತ ಅಜಯ್ ಬೋಸ್ ಪ್ರಕಾರ 'ಬೆಹೆನ್‌ಜೀ', ಉತ್ತರಪ್ರದೇಶ ಮತ್ತು ಭಾರತ ರಾಜಕಾರಣದಲ್ಲಿ ಈ ಹಿಂದೆ ಏರಿದ್ದ ಎತ್ತರವನ್ನು ಪುನಃ ಏರುವುದು ದುಸ್ಸಾಧ್ಯ.

ಮುಖ್ಯಮಂತ್ರಿಯಾಗಿ ಉತ್ತರಪ್ರದೇಶದ ಮೂರು ಅಸ್ಥಿರ ದೋಸ್ತಿ ಸರ್ಕಾರಗಳನ್ನು ಅವರು ನಡೆಸಿದರು. 1995-2003ರ ನಡುವೆ ಮೂರು ತಿಂಗಳು, ಆರು ತಿಂಗಳು, 16 ತಿಂಗಳ ಅಲ್ಪಾಯಸ್ಸಿನ ಸರ್ಕಾರಗಳ ನಂತರ 2007ರಲ್ಲಿ ಪೂರ್ಣಬಹುಮತ ಪಡೆದು ಐದು ವರ್ಷಗಳ ಪೂರ್ಣಾವಧಿ ಪೂರೈಸಿದರು. ಆದರೆ ಈ ಪೂರ್ಣಬಹುಮತ ಗಳಿಕೆಗೆ ಅವರು ತಾವು ನಂಬಿದ ಸಿದ್ಧಾಂತಗಳನ್ನು ತೆಳುವಾಗಿಸಿ ಒಪ್ಪಂದ ಮಾಡಿಕೊಳ್ಳಬೇಕಾಯಿತು. ಬಹುಜನ ಸಮಾಜದ ನೆಲೆಯನ್ನು ಸರ್ವಜನ ಸಮಾಜಕ್ಕೆ ವಿಸ್ತರಿಸಬೇಕಾಯಿತು. ಮೇಲ್ಜಾತಿಗಳು, ಅದರಲ್ಲೂ ವಿಶೇಷವಾಗಿ ಬ್ರಾಹ್ಮಣ ಮತಗಳನ್ನು ಆಹ್ವಾನಿಸಬೇಕಾಯಿತು.

ಈ ನಡೆಯನ್ನು ಚತುರ ಸಾಮಾಜಿಕ ಸಮೀಕರಣದ ‘ಮಳೆಬಿಲ್ಲು ಮೈತ್ರಿಕೂಟ’ ಎಂದು ಸಮೂಹ ಮಾಧ್ಯಮಗಳು ವ್ಯಾಖ್ಯಾನ ಮಾಡಿದವು. ಆದರೆ ಈ ಸಾಮಾಜಿಕ ಸಮೀಕರಣವನ್ನು ಅಜಯ್ ಬೋಸ್ ‘ವಿಕಾರ’ ಎಂದು ಕರೆದರು. ಉತ್ತರಪ್ರದೇಶದ ಬ್ರಾಹ್ಮಣ ಸಮುದಾಯದ ಅವಕಾಶವಾದಿ ಕೈಚಳಕ ಮತ್ತು ರಾಜಕೀಯ ಅನುಕೂಲದ ಪರಿಣಾಮ ಎಂದು ತಳ್ಳಿ ಹಾಕಿದರು. ಯಾದವರು, ಜಾಟರು, ಠಾಕೂರರ ರಾಜಕೀಯ ಪ್ರಾಬಲ್ಯವು ಬ್ರಾಹ್ಮಣರ ಅಭದ್ರತೆಯನ್ನು ಹಿಂದೆಂದೂ ಇಲ್ಲದಷ್ಟು ಹೆಚ್ಚಿಸಿದ್ದ ದಿನಗಳು. ದಲಿತರು ಮತ್ತು ಮುಸ್ಲಿಂ ಮತನೆಲೆಗಳನ್ನು ಕಳೆದುಕೊಂಡು ಕಾಂಗ್ರೆಸ್ ಕುಸಿದ ನಂತರ ಬ್ರಾಹ್ಮಣರು ಬಿಜೆಪಿಯತ್ತ ನಡೆದಿದ್ದರು. ಆದರೆ ಬಿಜೆಪಿಯ ಆಡಳಿತ ಸೂತ್ರಗಳು ಕಲ್ಯಾಣಸಿಂಗ್ ಮತ್ತು ವಿನಯ್‌ ಕಟಿಯಾರ್ ಅವರಂತಹ ಹಿಂದುಳಿದ ವರ್ಗಗಳ ನಾಯಕರು ಮತ್ತು ಆ ನಂತರ ರಾಜನಾಥ್‌ ಸಿಂಗ್ ಅವರಂತಹ ಠಾಕೂರ್ ಕೈಯಲ್ಲೇ ಉಳಿದವು. ಅಟಲ್ ಬಿಹಾರಿ ವಾಜಪೇಯಿ ಎಂಬ ಬ್ರಾಹ್ಮಣರ ಕಟ್ಟಕಡೆಯ ಆಶೆಯೂ 2004ರ ಚುನಾವಣೆಗಳ ನಂತರ ಮಸುಕಾಗಿ ಹೋಯಿತು. ಮಾಯಾವತಿಯವರ ಕಾನೂನು ಸಲಹೆಗಾರರಾಗಿದ್ದ ಸತೀಶ್ ಮಿಶ್ರ ಹಠಾತ್ತನೆ ನಿರ್ಣಾಯಕ ರಾಜಕೀಯ ಸಲಹೆಗಾರನ ಪಾತ್ರ ಧರಿಸಿದರು. ಏಕಾಂಗಿ ಭಾವನೆ ಆವರಿಸಿದ್ದ ಬ್ರಾಹ್ಮಣ ಸಮುದಾಯದ ಜೊತೆ ಬಿಎಸ್‌ಪಿ ಕೈ ಕಲೆಸಿದರೆ, ಶೇ 10ರಷ್ಟು ಬ್ರಾಹ್ಮಣ ಮತಗಳ ಜೊತೆಗೆ ವೈಶ್ಯರೂ ಸೇರುತ್ತಾರೆ. ಈ ಎರಡೂ ಸಮುದಾಯಗಳ ಸೇರ್ಪಡೆ ಬಿಎಸ್‌ಪಿಯೆಡೆಗೆ ಸಕಾರಾತ್ಮಕ ವಾತಾವರಣ ಸೃಷ್ಟಿಸುತ್ತದೆಂದು ಮಾಯಾವತಿಯವರಲ್ಲಿ ವಿಶ್ವಾಸ ಮೂಡಿಸಿದರು ಮಿಶ್ರ.

‘ತಿಲಕ್ ತರಾಜೂ ಔರ್ ತಲ್ವಾರ್, ಇನ್ಕೋ ಮಾರೋ ಜೂತೇ ಚಾರ್’ (ಬ್ರಾಹ್ಮಣ ಬನಿಯಾ ಮತ್ತು ಠಾಕೂರ್, ಇವರಿಗೆ ಬೀಳಲಿ ಚಪ್ಪಲಿಯೇಟು) ಎಂಬ ಬಿಎಸ್‌ಪಿ ಘೋಷಣೆ ಬದಲಾಯಿತು. ‘ಹಾಥೀ ನಹಿ ಗಣೇಶ್ ಹೈ ಬ್ರಹ್ಮ ವಿಷ್ಣು ಮಹೇಶ್ ಹೈ’ (ಆನೆಯಲ್ಲ ಗಣೇಶ, ಬ್ರಹ್ಮ–ವಿಷ್ಣು–ಮಹೇಶ) ಎಂಬ ಹೊಸ ಘೋಷಣೆ ಬಿಎಸ್‌ಪಿಯನ್ನು ಗೆಲುವಿನ ಗುರಿ ಮುಟ್ಟಿಸಿತು. ದಲಿತನ ಮಗಳು ಬ್ರಾಹ್ಮಣರಿಂದ ಬೇಷರತ್ ಬೆಂಬಲ ಗಳಿಸಿದ ಬೆಳವಣಿಗೆ ದಲಿತರ ಎದೆ ಉಬ್ಬಿಸಿತ್ತು. ಗೆಲ್ಲುವ ಆನೆಯನ್ನು ಬೆರಗಿನಿಂದ ನೋಡಿದ ಇತರೆ ಹತ್ತಾರು ಸಣ್ಣಪುಟ್ಟ ಜಾತಿಗಳೂ ಬಿಎಸ್‌ಪಿ ಬೆಂಬಲಕ್ಕೆ ನಿಂತಿದ್ದವು. ಮುಲಾಯಂ 'ಜಂಗಲ್ ರಾಜ್'ನ್ನು ಮಾಯಾವತಿ ಬುಡಮೇಲು ಮಾಡಿ ಅಧಿಕಾರಕ್ಕೆ ಬಂದ ನಂತರ ಬ್ರಾಹ್ಮಣ- ವೈಶ್ಯ ಸಮುದಾಯಗಳ ಅಭದ್ರತೆ ದೂರವಾಗಿ, ಅಗತ್ಯ ತೀರಿತ್ತು. ಹೊಸ ಸಾಮಾಜಿಕ ಸಮೀಕರಣ ಹಳಸಿತು. 2009ರ ಲೋಕಸಭಾ ಚುನಾವಣೆಗಳಲ್ಲಿ ಬಿಎಸ್‌ಪಿ ಸಾಧನೆ ಕಳಪೆಯಾಯಿತು. ಐವತ್ತಕ್ಕೂ ಹೆಚ್ಚು ಸ್ಥಾನ ಗಳಿಸಿ ತೃತೀಯರಂಗದ ಪ್ರಧಾನಿಯಾಗುವ ಮಾಯಾವತಿಯವರ ಕನಸು ಈಡೇರಲಿಲ್ಲ. 2012ರ ವಿಧಾನಸಭಾ ಚುನಾವಣೆಗಳಲ್ಲಿ ಅಖಿಲೇಶ್ ಮೋಡಿಯ ಮುಂದೆ ಮಾಯಾವತಿ ಸೋತರು. ಆ ನಂತರ ಅವರದು ಸತತ ಇಳಿಜಾರಿನ ಹಾದಿಯ ಪಯಣ.

(ಜಿಗ್ನೇಶ್‌ ಮೆವಾನಿ)

ಶುರುವಿನ ದಿನಗಳಲ್ಲಿ ಮಾಯಾವತಿಯವರ ದಲಿತ ಬೆಂಬಲ ಅವರದೇ ಜಾತಿಯ ಚಮ್ಮಾರರಿಗೆ ಸೀಮಿತ ಆಗಿತ್ತು. ಉತ್ತರಪ್ರದೇಶದ ದಲಿತರ ಪೈಕಿ ಚಮ್ಮಾರರ ಜನಸಂಖ್ಯಾ ಪ್ರಮಾಣ ಶೇ 55. ಕಾಲಕ್ರಮೇಣ ಇತರೆ ದಲಿತ ಜಾತಿಗಳಾದ ಪಾಸಿ ಧೋಬಿ, ಕೋರಿ, ಖಾಟಿಕ್, ಧಾನುಕ್, ವಾಲ್ಮೀಕಿ... ಬಿಎಸ್‌ಪಿಗೆ ಒಲಿದು ಮಾಯಾ ಅವರ ದಲಿತ ಬೆಂಬಲ ಶೇ 85ಕ್ಕೆ ಹಿಗ್ಗಿತ್ತು. ಆದರೆ 2017ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಅವರ ಮತಗಳ ನೆಲೆ ಕೇವಲ ಅವರದೇ ಜಾತಿಯ ಜಾಟವ ಜನಾಂಗಕ್ಕೆ ಕುಸಿದಿತ್ತು. ಒಂದೆಡೆ ಆಶೋತ್ತರಗಳ ಕನಸುಗಳನ್ನು ಹರವಿದ ಬಿಜೆಪಿ, ಮತ್ತೊಂದೆಡೆ ದಲಿತ ಉಪಜಾತಿಗಳ ನಡುವೆ ಕಂದಕ ತೋಡುವ ತಂತ್ರ ಅನುಸರಿಸಿ ಗೆದ್ದಿತು. ಮಾಯಾವತಿ ನೆಲದ ವಾಸ್ತವದಿಂದ ದೂರವಾಗತೊಡಗಿದ್ದರು. ಗೆಲುವಿನ ಹೊಸ ಹೊಳಹುಗಳು ಒಣಗಿ ಹೋಗಿದ್ದವು. ದೇಶದ ಅತಿ ದೊಡ್ಡ ರಾಜ್ಯದ ದಲಿತರಿಗೊಂದು ಅಸ್ಮಿತೆಯನ್ನು ಗಳಿಸಿಕೊಡುವಲ್ಲಿ ಮಾಯಾವತಿ ಯಶಸ್ಸು ಕಂಡಿದ್ದರು. ಆದರೆ ಪಕ್ಷದ ಮೇಲೆ ಏಕವ್ಯಕ್ತಿಯ ಉಕ್ಕಿನ ಹಿಡಿತ ಹೊಂದಿರುವ ಅವರು ಅಧಿಕಾರ ಹಂಚಿಕೆಯಲ್ಲಾಗಲಿ, ವಿಕೇಂದ್ರೀಕರಣದಲ್ಲಾಗಲಿ ನಂಬಿಕೆ ತೋರಿಲ್ಲ. ಸೈದ್ಧಾಂತಿಕ ಚಾಂಚಲ್ಯ, ರಾಜಕೀಯ ಅವಕಾಶವಾದಿತನ, ಆಸ್ತಿಪಾಸ್ತಿ ಸಂಪಾದನೆ, ಭೂಸುಧಾರಣೆ ಕುರಿತ ಮೌನ... ಸಾಮಾಜಿಕ ಕ್ರಾಂತಿಗೆ ಪೂರಕ ಅಲ್ಲ ಎಂಬ ಟೀಕೆಯನ್ನು ಅವರು ದಲಿತ ಬುದ್ಧಿಜೀವಿ ವರ್ಗದಿಂದ ಎದುರಿಸಿದ್ದಾರೆ. ಈ ಟೀಕೆ ಎಷ್ಟರಮಟ್ಟಿಗೆ ಸಕಾರಣ ಅಥವಾ ವಿನಾಕಾರಣ ಎಂಬುದು ಮತ್ತೊಂದು ಚರ್ಚೆಯ ವಸ್ತು ಆದೀತು. ಅಸ್ಮಿತೆಯ ಆಚೆಗೆ ಆಶೋತ್ತರಗಳತ್ತ ನೋಡಲಾರಂಭಿಸಿದ ದಲಿತ ಸಮುದಾಯಗಳ ಯುವಪೀಳಿಗೆ ಬೆಹೆನ್‌ಜೀ ಬಗೆಗೆ ಭ್ರಮನಿರಸನ ತಳೆದು ದೂರ ಸರಿದಿತ್ತು.

ಅಂಬೇಡ್ಕರ್‌ವಾದಿ ರಾಜಕಾರಣವು ಮಾಯಾವತಿಯವರ ಆಚೆಗೂ ವಿಸ್ತರಿಸಿ ಸಾಗತೊಡಗಿದೆ. ಉತ್ತರಪ್ರದೇಶದ ಭೀಮ್ ಆರ್ಮಿಯ ಚಂದ್ರಶೇಖರ ಆಜಾದ್ (ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಉತ್ತರ ಪ್ರದೇಶ ಸರ್ಕಾರದಿಂದ ಬಂಧಿತರಾಗಿ ಜೈಲಿನಲ್ಲಿದ್ದಾರೆ) ಮತ್ತು ಗುಜರಾತಿನ ಅಸ್ಮಿತೆ- ಭೂ ಹೋರಾಟದ ಜಿಗ್ನೇಶ್ ಮೆವಾನಿ ಎಂಬ ಹೊಸ ತಾರೆಗಳು ದಲಿತ ದಿಗಂತದಲ್ಲಿ ಮಿನುಗತೊಡಗಿವೆ. ಗುಜರಾತಿನ ಊನಾ, ಮಹಾರಾಷ್ಟ್ರದ ಭೀಮಾ ಕೋರೆಗಾಂವ್ ಹಾಗೂ ಇದೀಗ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಲಗೊಳಿಸಿದ ಸುಪ್ರೀಂ ಕೋರ್ಟ್ ತೀರ್ಪು ಹೊಸ ಎಚ್ಚರಕ್ಕೆ ದಲಿತಲೋಕದ ಕಣ್ಣು ತೆರೆಸಿವೆ. ಹೊಸ ಮಂಥನ ನಡೆದಿದೆ. ತಳೆಯಲಿರುವ ರಾಜಕೀಯ ನಿಲುವು ಮತ್ತು ಚುನಾವಣಾ ಹಾದಿ ಇನ್ನೂ ನಿಚ್ಚಳವಿಲ್ಲ. ಮೀಸಲಾತಿ ಸೌಲಭ್ಯವು ಗ್ರಾಮೀಣ ಭಾರತದ ಬಹುದೊಡ್ಡ ದಲಿತ ಸಮುದಾಯದ ಬದುಕುಗಳನ್ನು ಬದಲಿಸಲಿಲ್ಲ ಎಂಬ ಸತ್ಯಾಂಶವನ್ನು ತಿಳಿದ ಅಂಬೇಡ್ಕರ್, ತಮ್ಮ ಕಡೆಯ ದಿನಗಳಲ್ಲಿ ಭೂ ಹೋರಾಟಗಳ ದಾರಿ ತೋರಿದ್ದರು. ಜಿಗ್ನೇಶ್ ಮೆವಾನಿ ಆ ಮಾರ್ಗದಲ್ಲೇ ನಡೆಯುತ್ತಿದ್ದಾರೆ. ಸಹಾರಣಪುರ ಕೋಮು ಗಲಭೆಗಳ ನಂತರ ಭೀಮ್ ಆರ್ಮಿ ಕಟ್ಟಿದ ಪ್ರತಿಭಟನೆ ಹೊಸ ದಲಿತ ನಾಯಕತ್ವದ ಹೊಳಹುಗಳನ್ನು ಮುಂದೆ ಮಾಡಿದೆ. ಹೋಳಾಗಿರುವ ದಲಿತರು ಒಗ್ಗಟ್ಟಾದಷ್ಟೂ ದಲಿತ ವಿರೋಧಿ ಶಕ್ತಿಗಳು ಒಗ್ಗೂಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT