ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿವನ ನಿರ್ಲಕ್ಷ್ಯ: ಪ್ರವಾಸಿಗರ ಆಕ್ರೋಶ

ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಅಣೆಕಟ್ಟೆ ಕೆಳಭಾಗದ ವಿಹಾರ ವನದ ದುಸ್ಥಿತಿ
Last Updated 17 ಏಪ್ರಿಲ್ 2018, 6:52 IST
ಅಕ್ಷರ ಗಾತ್ರ

ಹಿರಿಯೂರು: ಹಿರಿಯೂರು ಕ್ಷೇತ್ರವನ್ನು ಪ್ರತಿನಿಧಿಸಿದ್ದ ಕೆ.ಎಚ್. ರಂಗನಾಥ ಅವರು ಅರಣ್ಯ ಸಚಿವರಾಗಿದ್ದ ಸಂದರ್ಭದಲ್ಲಿ (2004ರ ಏಪ್ರಿಲ್ 26) ಉದ್ಘಾಟನೆಯಾಗಿದ್ದ ತಾಲ್ಲೂಕಿನ ವಾಣಿವಿಲಾಸ ಜಲಾಶಯದ ಅಣೆಕಟ್ಟೆಯ ಕೆಳಭಾಗದಲ್ಲಿರುವ ‘ಪ್ರಕೃತಿ ವಿಹಾರ ವನ’ ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಹಾಳಾಗಿದೆ.

ಐದಾರು ವರ್ಷಗಳ ಹಿಂದೆ ವನದ ಒಳಗೆ ಜೋಡಿಗಳು, ಸ್ನೇಹಿತರು, ಕುಟುಂಬದ ಸದಸ್ಯರು ಕಾಲಿಟ್ಟರೆ ಹೊರಗೆ ಬರಲು ಮನಸ್ಸೇ ಬರುತ್ತಿರಲಿಲ್ಲ. ಅಲ್ಲಿನ ರಾಶಿ ವನ, ಅಶೋಕವನ, ಮಾದರಿ ಗ್ರಾಮ, ನಂದನವನ, ಗುಲಾಬಿ ತೋಟ, ಜಪಾನೀಸ್ ಉದ್ಯಾನವನ, ಬೃಹತ್ ಪಂಚಾಯತ್ ವನ, ಸಪ್ತ ಸ್ವರ ವನ, ತ್ರಿಫಲವನ, ಗಾರ್ಡನ್ ಆಫ್ ಹಾರ್ಮೊನಿ, ತಾವರೆ, ನೆಲ್ಲಿ, ಅಳಲು ಗಿಡಗಳ ವನ, ಪುಟಾಣಿ ಮಕ್ಕಳ ಆಟಿಕೆಯ ವನ ಎಲ್ಲವೂ ಒಂದನ್ನೊಂದು ಮೀರಿಸುವಂತೆ ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತಿದ್ದವು ಎಂದು ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಪೆರಿಸ್ವಾಮಿ ಸ್ಮರಿಸುತ್ತಾರೆ.

ವಾಣಿವಿಲಾಸ ಜಲಾಶಯ ನೋಡಲು ಬರುತ್ತಿದ್ದ ಪ್ರವಾಸಿಗರು ನೀರಿಲ್ಲದ ಜಲಾಶಯ ನೋಡಿ ಬೇಸರಗೊಂಡು, ಅಣೆಕಟ್ಟೆಯ ಕೆಳಗಿರುವ ಈ ವಿಹಾರ ವನದ ಒಳಗೆ ಪ್ರವೇಶಿಸಿ, ತಮ್ಮೆಲ್ಲ ಬೇಸರವನ್ನು ಮರೆಯುತ್ತಿದ್ದರು. ಪಂಚಾಯ್ತಿ ವನದ ನೆರಳಲ್ಲಿ ಕುಳಿತು ಗುಡ್ಡದ ಬುಡದಿಂದ ಜಲಾಶಯದ ರಸ್ತೆವರೆಗಿನ ಫರ್ಲಾಂಗು ದೂರ ಹರಡಿದ್ದ ವನದ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದರು. ಆದರೆ ಈಗಿನ ದೃಶ್ಯ ನೋಡಿದರೆ ಆಡಳಿತ ನಡೆಸುವವರ ನಿರ್ಲಕ್ಷ್ಯ ಎಂಥದೆಂದು ಗೊತ್ತಾಗುತ್ತದೆ ಎಂದು ಗ್ರಾಮ ಪಂಚಾಯ್ತಿಯ ಮತ್ತೊಬ್ಬ ಸದಸ್ಯ ಉಮೇಶ್ ಆರೋಪಿಸುತ್ತಾರೆ.

ಪ್ರಕೃತಿವನದ ನಿರ್ವಹಣೆ ಕೈಬಿಟ್ಟಿರುವ ಕಾರಣ ಗುಲಾಬಿ ಹೂಗಳು ಕಾಣುತ್ತಿಲ್ಲ. ವನದಲ್ಲಿರುವ ಅರಣ್ಯ ಮಾಹಿತಿ ಮತ್ತು ತರಬೇತಿ ಕೇಂದ್ರದಲ್ಲಿ ಯಾವ ಕಾರ್ಯಕ್ರಮಗಳೂ ನಡೆಯುತ್ತಿಲ್ಲ. ರಸ್ತೆ ಬದಿಯಲ್ಲಿ ನಿರ್ಮಿಸಿದ್ದ ಅಲಂಕಾರಿಕ ಗಿಡಗಳ ಕೊಂಬೆಗಳನ್ನು ಕತ್ತರಿಸದ ಕಾರಣ ಪೈಪೋಟಿ ನಡೆಸುವಂತೆ ಹುಲ್ಲು–ಮುಳ್ಳುಗಳು ಬೆಳೆದಿವೆ. ಒಟ್ಟಾರೆ ಐದಾರು ವರ್ಷ ಉಳುಮೆ ಮಾಡದೆ ಬಿಟ್ಟ ಹೊಲದಂತೆ ಇಡೀ ವನ ಕಾಣುತ್ತಿದೆ ಎಂದು ಅವರು ಹೇಳುತ್ತಾರೆ.

ಒತ್ತಾಯ:

ಪ್ರಕೃತಿವನ ನಿರ್ವಹಣೆಗೆ ನೀರಿನ ಕೊರತೆ ಇಲ್ಲ. ಜನರೇಟರ್ ಕೊಠಡಿ, ಜನರೇಟರ್ ವ್ಯವಸ್ಥೆ ಇದೆ. ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಸಮಿತಿ ಈ ವನದ ನಿರ್ವಹಣೆ ಮಾಡುತ್ತದೆ ಎಂಬ ಮಾತಿದೆ. ಏ. 17ರಿಂದ ವಾಣಿವಿಲಾಸ ಜಲಾಶಯದ ಅಣೆಕಟ್ಟೆಯ ರಕ್ಷಕಿ ಎಂದೇ ಕರೆಯಲಾಗುವ ಕಣಿವೆ ಮಾರಮ್ಮ ದೇವಿಯ ಜಾತ್ರಾ ಮಹೋತ್ಸವ ಆರಂಭವಾಗಲಿದ್ದು, ಏ. 24ರಂದು ನಡೆಯುವ ಬ್ರಹ್ಮರಥೋತ್ಸವಕ್ಕೆ ಸಾವಿರಾರು ಭಕ್ತರು ಸೇರುತ್ತಾರೆ. ಆ ವೇಳೆಗೆ ವನದಲ್ಲಿ ಬೆಳೆದಿರುವ ಹುಲ್ಲು, ಮುಳ್ಳಿನ ಗಿಡ ತೆಗೆಸಿ, ತಂತಿ ಬೇಲಿಯನ್ನು ಸರಿಪಡಿಸುವ ಕೆಲಸವನ್ನು ಜಿಲ್ಲಾಧಿಕಾರಿಗಳು ಮಾಡಿಸಬೇಕು. ನಂತರ ಅಗತ್ಯ ಅನುದಾನ ಬಿಡುಗಡೆ ಮಾಡಿ, ಮೊದಲಿನಂತೆ ಸುಂದರಗೊಳಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹ.

ಕಾಯುವವರೇ ಇಲ್ಲ

ಪ್ರಕೃತಿ ವನ ಆರಂಭವಾದ ಸಂದರ್ಭದಲ್ಲಿ ಮುಖ್ಯದ್ವಾರದ ಮೂಲಕ ಮಾತ್ರ ಒಳಗೆ ಪ್ರವೇಶಿಸಲು ಅವಕಾಶವಿತ್ತು. ಉಳಿದಂತೆ ಇಡೀ ವನದ ಸುತ್ತ ಬಿಗಿಯಾದ ತಂತಿಬೇಲಿ ಅಳವಡಿಸಿ, ಹಗಲು–ರಾತ್ರಿ ಕಾವಲುಗಾರರನ್ನು ನೇಮಿಸಿದ್ದರು. ಈಗ ಬೇಲಿಯೂ ನೆಟ್ಟಗೆ ಉಳಿದಿಲ್ಲ. ಕಾಯುವವರೂ ಇಲ್ಲವಾಗಿ ಎಲ್ಲೆಂದರಲ್ಲಿ ವನದ ಒಳಗೆ ನುಗ್ಗಿ ಬರುವಂತಾಗಿದ್ದು, ಅನೈತಿಕ ಚಟುವಟಿಕೆಗೆ ಹೇಳಿ ಮಾಡಿಸಿದ ತಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಸುವರ್ಣ ಬಸವರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT