ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪಹೃತರ ಬಿಡುಗಡೆಗೆ ಸಹನೆಯ ನಡೆ ಅಗತ್ಯ

Last Updated 7 ಮೇ 2018, 19:30 IST
ಅಕ್ಷರ ಗಾತ್ರ

ಅಫ್ಗಾನಿಸ್ತಾನದ ಉತ್ತರದಲ್ಲಿರುವ ಬಘ್ಲಾನ್‌ ಪ್ರಾಂತ್ಯದಲ್ಲಿ ಆರ್‌ಪಿಜಿ ಉದ್ಯಮ ಗುಂಪಿನ, ಕೆಇಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಏಳು ಮಂದಿ ಭಾರತೀಯ ಎಂಜಿನಿಯರ್‌ಗಳು ಮತ್ತು ಒಬ್ಬ ಅಫ್ಗಾನ್‌ ಚಾಲಕನನ್ನು ಶಸ್ತ್ರಧಾರಿಗಳ ಗುಂಪೊಂದು ಅಪಹರಿಸಿರುವುದುದುರದೃಷ್ಟಕರ ಘಟನೆ. ಈ ಭಾರತೀಯರು ಅಲ್ಲಿನ ವಿದ್ಯುತ್‌ ಸ್ಥಾವರದಲ್ಲಿ ಕೆಲಸ ಮಾಡುತ್ತಿದ್ದು, ವಿದ್ಯುತ್‌ ಘಟಕವೊಂದರ ಭೇಟಿಗೆ ಪ್ರಯಾಣಿಸುತ್ತಿದ್ದಾಗ, ವಾಹನವನ್ನು ತಡೆದು ಅಪಹರಣ ಮಾಡಲಾಗಿದೆ. ಈ ಕೃತ್ಯಕ್ಕೆ ತಾನೇ ಹೊಣೆ ಎಂದು ಈವರೆಗೆ ಯಾವುದೇ ಉಗ್ರ ಸಂಘಟನೆ ಬಹಿರಂಗವಾಗಿ ಹೇಳಿಲ್ಲವಾದರೂ, ಅಫ್ಗಾನಿಸ್ತಾನ ಸರ್ಕಾರವು ತಾಲಿಬಾನ್ ಉಗ್ರ ಶಹೀನ್‌ ಈ ಅಪಹರಣ ನಡೆಸಿದ್ದಾನೆ ಎಂದು ಶಂಕೆವ್ಯಕ್ತಪಡಿಸಿದೆ. ಅಪಹರಣ ನಡೆಸಿದ ಉಗ್ರರ ಜತೆಗೆ ಸರ್ಕಾರಕ್ಕೆ ಯಾವುದೇ ಸಂಪರ್ಕ ಸಾಧಿಸಲು ಸಾಧ್ಯವಾಗಿಲ್ಲ. ‘ಆದರೆ ಉಗ್ರರ ಬಗ್ಗೆ ಮಾಹಿತಿಯುಳ್ಳ ಸ್ಥಳೀಯ ಬುಡಕಟ್ಟು ಹಿರಿಯರ ಜತೆಗೆ ಸಂಪರ್ಕ ಸಾಧಿಸಿದ್ದು, ಅಪಹೃತರ ಬಿಡುಗಡೆಗೆ ಎಲ್ಲ ಯತ್ನಗಳನ್ನು ನಡೆಸುತ್ತಿದ್ದೇವೆ’ ಎಂದು ಅಫ್ಗಾನ್‌ ಸರ್ಕಾರದ ವಕ್ತಾರರು ತಿಳಿಸಿದ್ದಾರೆ. ಅಪಹೃತರ ಬಿಡುಗಡೆಯ ಪ್ರಯತ್ನದಲ್ಲಿ ಅಫ್ಗಾನ್‌ ಸರ್ಕಾರದ ಸಂಪರ್ಕದಲ್ಲಿ ಇರುವುದಾಗಿ ಭಾರತ ಸರ್ಕಾರವೂ ತಿಳಿಸಿದೆ. ಸರ್ಕಾರಿ ನೌಕರರೆಂದು ತಪ್ಪಾಗಿ ತಿಳಿದು ಈ ಭಾರತೀಯ ನೌಕರರ ಅಪಹರಣವಾಗಿದೆ ಎಂಬ ವರದಿಯೂ ಇದೆ.

ಹಲವು ವರ್ಷಗಳ ಯುದ್ಧ ಮತ್ತು ಅಂತಃಕಲಹದ ಬಳಿಕವೂ ಅಫ್ಗಾನಿಸ್ತಾನದಲ್ಲಿ ಮತಾಂಧತೆಯ ಛಾಯೆ ಕಡಿಮೆಯಾಗಿಲ್ಲ ಎನ್ನುವುದು ವಿಷಾದದ ಸಂಗತಿ. ಅಮೆರಿಕದ ಸೇನೆಯ ನೆರವಿನಿಂದ ಮುಜಾಹಿದೀನ್‌ ನೆಲೆಗಳನ್ನು ನಾಶಗೊಳಿಸಲು ಕಳೆದ ಒಂದು ದಶಕದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಅಲ್ಲಿ ಬಳಸಲಾಗಿದೆ. ಈ ದಾಳಿಗಳಲ್ಲಿ ಸಾವಿರಾರು ಅಫ್ಗನ್‌ ನಾಗರಿಕರೂ ಹತರಾಗಿದ್ದಾರೆ. ಅಲ್ಲಿನ ಸಮ್ಮಿಶ್ರ ಸಂಸ್ಕೃತಿಯೂ ಆಘಾತ ಅನುಭವಿಸಿದೆ. ಹಮೀದ್‌ ಕರ್ಜೈ ಪ್ರಧಾನಿಯಾಗಿ ಹೊಸ ಪ್ರಜಾಪ್ರಭುತ್ವವಾದಿ ಸರ್ಕಾರ ರಚನೆಯಾದ ಆರಂಭದಲ್ಲಿ ಪರಿಸ್ಥಿತಿ ಸ್ವಲ್ಪಮಟ್ಟಿಗೆ ಸುಧಾರಿಸಿತ್ತು. ಆದರೆ ಈಗ ದೇಶದ ಉತ್ತರದ ಹಲವು ಪ್ರಾಂತ್ಯಗಳಲ್ಲಿಉಗ್ರಗಾಮಿಗಳ ನಿಯಂತ್ರಣ ಹೆಚ್ಚಾಗಿರುವ ವರದಿಗಳಿವೆ. ಕಾಬೂಲ್‌ನಲ್ಲಿ ಇತ್ತೀಚೆಗೆ ನಡೆದ ಬಾಂಬ್‌ ದಾಳಿಯಲ್ಲಿ ಹತ್ತು ಮಂದಿ ಪತ್ರಕರ್ತರು ಬಲಿಯಾದದ್ದೂ ಅಲ್ಲಿನ ಪರಿಸ್ಥಿತಿ ಎಷ್ಟು ಚಿಂತಾಜನಕವಾಗಿದೆ ಎನ್ನುವುದಕ್ಕೆ ಸಾಕ್ಷಿ. ಮತಾಂಧತೆಯ ಭಾವನೆ ಕಡಿಮೆಯಾಗುವ ಬದಲಾಗಿ ಜನಾಂಗೀಯ ದ್ವೇಷ ಇನ್ನಷ್ಟು ಹೆಚ್ಚಾಗಿರುವುದು ಆತಂಕಕಾರಿ ಸಂಗತಿ. ಅಫ್ಗಾನಿಸ್ತಾನದಲ್ಲಿ ಭಾರತ ಮತ್ತು ಚೀನಾ ಜಂಟಿ ಆರ್ಥಿಕ ಯೋಜನೆ ಆರಂಭಿಸಲು ತೀರ್ಮಾನ ಕೈಗೊಂಡ ಕೆಲವೇ ದಿನಗಳಲ್ಲಿ ಈ ಅಪಹರಣ ಕೃತ್ಯ ನಡೆದಿರುವ ಹಿನ್ನೆಲೆಯಲ್ಲಿ ಭಾರತವೂ ಎಚ್ಚರಿಕೆಯ ರಾಜತಾಂತ್ರಿಕ ಹೆಜ್ಜೆಗಳನ್ನು ಇಡುವ ಅಗತ್ಯವಿದೆ. ಅಪಹೃತರನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಸಹನೆಯಿಂದ ಮತ್ಸದ್ದಿತನದ ಕ್ರಮಗಳಿಗೆ ಮುಂದಾಗಬೇಕು. 2016ರಲ್ಲಿ ಹೀಗೆಯೇ ಅಲ್ಲಿ ಸಂತ್ರಸ್ತರ ನೆರವಿನ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮಹಿಳೆಯೊಬ್ಬರನ್ನು ಅಪಹರಿಸಿದ್ದ ಉಗ್ರರು, 40 ದಿನಗಳ ಬಳಿಕ ಬಿಡುಗಡೆ ಮಾಡಿದ್ದರು. ಕೆಇಸಿ ಇಂಟರ್‌ ನ್ಯಾಷನಲ್‌, ಅಪ್ಘಾನಿಸ್ತಾನದ ವಿದ್ಯುತ್‌ ಪೂರೈಕೆ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಅತಿದೊಡ್ಡ ಭಾರತೀಯ ಕಂಪನಿಯಾಗಿದ್ದು, ನೂರಾರು ಭಾರತೀಯರು ಅಲ್ಲಿ ಕೆಲಸ ಮಾಡುತ್ತಿದ್ದಾರೆ. ಅಲ್ಲಿ ದುಡಿಯುತ್ತಿರುವ ಎಲ್ಲ ಭಾರತೀಯರಿಗೆ ಪೂರ್ಣ ರಕ್ಷಣೆ ಒದಗಿಸುವ ನಿಟ್ಟಿನಲ್ಲಿಯೂ ಭಾರತ ಮತ್ತು ಅಫ್ಗಾನಿಸ್ತಾನ ಸರ್ಕಾರಗಳು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT