ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಳೆಕೆರೆ ಸಂರಕ್ಷಣೆಗೆ ಯುವಕರ ಅಭಿಯಾನ

ಕೆರೆ ಸ್ವರೂಪಕ್ಕೆ ಧಕ್ಕೆ ಬೇಡ l ಒತ್ತುವರಿ ತೆರವುಗೊಳಿಸಿ l ಹೆಚ್ಚಿನ ನೀರು ಹರಿಸಿ
Last Updated 20 ಮೇ 2018, 6:26 IST
ಅಕ್ಷರ ಗಾತ್ರ

ದಾವಣಗೆರೆ: ಚನ್ನಗಿರಿಯ ಸೂಳೆಕೆರೆ (ಶಾಂತಿಸಾಗರ) ಏಷ್ಯಾ ಖಂಡದಲ್ಲಿ ಎರಡನೇ ಅತಿ ದೊಡ್ಡ ಕೆರೆ. ಈ ಐತಿಹಾಸಿಕ ಕೆರೆಗೆ ನೀರಿನ ಕೊರತೆ ಒಂದು ಕಡೆಯಾದರೆ, ಒತ್ತುವರಿ ಭೂತ, ಉಸಿರುಗಟ್ಟಿಸುವ ಹೂಳು ಮತ್ತೊಂದು ಕಡೆ. ಕೃಷಿ, ಕುಡಿಯುವ ನೀರು ಎಲ್ಲದಕ್ಕೂ ಇದರ ಮೇಲೆ ಅವಲಂಬನೆ. ಇವೆಲ್ಲದರಿಂದ ಕೆರೆ ಅಸ್ತಿತ್ವಕ್ಕೆ ಈಗ ಧಕ್ಕೆ ಎದುರಾಗಿದೆ. ಇದನ್ನು ಮನಗಂಡು ಚನ್ನಗಿರಿಯ ಕೆಲವು ಯುವಕರು ಕೆರೆ ಸಂರಕ್ಷಣೆಗೆ ಮುಂದಾಗಿದ್ದಾರೆ.

ಪ್ರತಿ ಬೇಸಿಗೆಯಲ್ಲಿ ಸೂಳೆಕೆರೆ ನೀರಿಲ್ಲದೆ ಬತ್ತುವುದು ಸಾಮಾನ್ಯ ಸಂಗತಿಯಾಗಿದೆ. ಈ ಕೆರೆಯಲ್ಲಿ ಮತ್ತೆ ಸಮೃದ್ಧ ಜೀವಜಲ ಕಾಣಬೇಕು ಎಂದು ಚನ್ನಗಿರಿ ಯುವಕರು ಸಂಘಟಿತರಾಗಿದ್ದಾರೆ. ಪರಿಸರ ಕಾಳಜಿಯ ಹಲವು ಹಿರಿಯರು, ಕಿರಿಯರು ಅಭಿಯಾನಕ್ಕೆ ಕೈಜೋಡಿಸಿದ್ದಾರೆ.

‘ಖಡ್ಗ ಸಂಘ ಕರ್ನಾಟಕ’ ಹೆಸರಿನಲ್ಲಿ ಸಂಘಟಿತರಾಗಿರುವ ಯುವಕರು ‘ಕೆರೆ ಸಂರಕ್ಷಿಸಿ, ಪರಿಸರ ಉಳಿಸಿ’ ಎಂಬ ಆಂದೋಲನವನ್ನು ಆರಂಭಿಸಿದ್ದಾರೆ. ಇದಕ್ಕಾಗಿ ಸೂಳೆಕೆರೆ ಅಚ್ಚುಕಟ್ಟಿನ ಪ್ರದೇಶಗಳಿಗೆ ತೆರಳಿ ಕೆರೆಯ ಅಳಿವು–ಉಳಿವಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸರ್ಕಾರಿ ಇಲಾಖೆಗಳಿಗೆ ಭೇಟಿ ನೀಡಿ ಕೆರೆಯನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂದು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ.

6,650 ಎಕರೆ ವಿಸ್ತಾರದ ಕೆರೆ ಈಗ 5 ಸಾವಿರ ಎಕರೆಗೆ ಕುಗ್ಗಿದ್ದು ಹೇಗೆ? ಸುಮಾರು 10 ಲಕ್ಷ ರೈತರು ಅವಲಂಬಿತರಾಗಿರುವ ಈ ಕೆರೆ ಪ್ರತಿ ಬೇಸಿಗೆಯಲ್ಲಿ ತಳ ಕಾಣುವುದು ಏಕೆ? ಎಂದು ಜನಪ್ರತಿನಿಧಿಗಳನ್ನೂ ಪ್ರಶ್ನಿಸುತ್ತಿದ್ದಾರೆ.

ಸೂಳೆಕೆರೆಯನ್ನು ಹೇಗೆ ಅಭಿವೃದ್ಧಿಪಡಿಸಬೇಕು ಎಂಬ ಬಗ್ಗೆಯೂ ತಮ್ಮದೇ ಆದ ಕಲ್ಪನೆಗಳನ್ನು ಈ ಯುವಕರು ಹೊಂದಿದ್ದಾರೆ. ಕೆರೆಯ ಒಟ್ಟು ಮೂಲ ವಿಸ್ತೀರ್ಣದಂತೆ ಸರ್ವೆ ನಡೆಸಿ ವೈಜ್ಞಾನಿಕವಾಗಿ ಗಡಿಯನ್ನು ಗುರುತಿಸಿ ತಂತಿಬೇಲಿ ಅಥವಾ ಕಂಬಗಳನ್ನು ಹಾಕಬೇಕು. ಹೂಳು ತೆಗೆಸಿ ಸಂಗ್ರಹಣಾ ಸಾಮರ್ಥ್ಯವನ್ನು 1.6 ಟಿಎಂಸಿ ಅಡಿಯಿಂದ 4 ಟಿಎಂಸಿ ಅಡಿಗೆ ಹೆಚ್ಚಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ.

ಸಿದ್ದನನಾಲಾ ಮತ್ತು ಬಸವನ ನಾಲಾಗಳನ್ನು ಆಧುನೀಕರಣ ಗೊಳಿಸುವುದರ ಮೂಲಕ ಕೆರೆಯ ಅಚ್ಚುಕಟ್ಟು ಪ್ರದೇಶದ ಎಲ್ಲಾ ಹೊಲ, ಗದ್ದೆ, ತೋಟಗಳಿಗೆ ನಿರಂತರವಾಗಿ ನೀರು ಹರಿಸಬೇಕು. ಕೆರೆ ಒತ್ತುವರಿ ಮಾಡಿಕೊಂಡವರು ಯಾರೇ ಆಗಿದ್ದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸಾಸ್ವೆಹಳ್ಳಿ ಏತ ನೀರಾವರಿ ಕಾಮಗಾರಿಯನ್ನು ಶೀಘ್ರವಾಗಿ ಮುಗಿಸಬೇಕು. ಕೆರೆಯನ್ನು ಅವಲಂಬಿಸಿದ ಯಾವುದೇ ರೈತರು ಟ್ಯಾಂಕರ್, ಪಂಪ್‌ಗಳ ಮೂಲಕ ನೀರನ್ನು ಎತ್ತದೆ ಕೆರೆಯ ನೀರನ್ನು ಸ್ವಾಭಾವಿಕವಾಗಿ ಪಡೆಯಬೇಕು ಎಂಬುದು ಈ ಸಂಘದ ಪ್ರಮುಖ ಉದ್ದೇಶಗಳು.

ಸೂಳೆಕೆರೆಯ ನೀರಿನ ಮೂಲಗಳಾದ ಹಿರೇಹಳ್ಳ ಮತ್ತು ಮಾವಿನಹೊಳೆ ಕೆರೆಗಳನ್ನು ನವೀಕರಣಗೊಳಿಸಬೇಕು ಎಂಬುದು ಸಂಘದ ಇನ್ನೊಂದು ಪ್ರಮುಖ ಬೇಡಿಕೆ.

ಹೊನ್ನೇಮರದಳ್ಳಿಯ ಬಿ.ಆರ್‌. ರಘು, ಹರಿಹರ ಬೆಳ್ಳೂಡಿಯ ಕೆ.ಸಿ. ಬಸವರಾಜ್, ಲಿಂಗದಹಳ್ಳಿಯ ಬಿ. ಚಂದ್ರಹಾಸ, ನಲ್ಲೂರಿನ ಸೈಯದ್, ಜಿ.ಕೆ. ಹಳ್ಳಿಯ ಕೃಷ್ಣಪ್ಪ ಗೌಡ್ರು, ಚನ್ನಗಿರಿಯ ಟಿ.ಕುಬೇಂದ್ರ ಸ್ವಾಮಿ, ದೊಡ್ಡಘಟ್ಟದ ಷಣ್ಮುಖಪ್ಪ ಅಭಿಯಾನ ತಂಡದ ಪ್ರಮುಖ ಉತ್ಸಾಹಿಗಳು.

ಯುವಕರ ಅಭಿಯಾನಕ್ಕೆ ನೀವೂ ಕೈಜೋಡಿಸಬೇಕೇ? ಸಂಘದ ಅಧ್ಯಕ್ಷ ಬಿ.ಆರ್‌.ರಘು ಮೊ: 99724 14251 ಸಂಪರ್ಕಿಸಿ, ಮಾಹಿತಿ ಪಡೆಯಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT