ಮೂವರು ಹುಡುಗರು ರೈಲು ಹಳಿಯ ಮೇಲೆ ನಟ್ಟು ಮತ್ತು ಬೋಲ್ಟುಗಳನ್ನು ಕೀಳುತ್ತಿರುವ ವಿಡಿಯೊ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಇದು ಭಾರತದ ವಿಡಿಯೊ ಆಗಿದ್ದು, ಮುಸ್ಲಿಂ ಬಾಲಕರು ರೈಲು ಹಳಿಯನ್ನು ಹಾಳು ಮಾಡುತ್ತಿದ್ದಾರೆ ಎಂದು ಪ್ರತಿಪಾದನೆ ಮಾಡಲಾಗುತ್ತಿದೆ. ಇದೇ ವಿಡಿಯೊ ಅನ್ನು ಕೋಮು ಭಾವನೆಗಳನ್ನು ಕೆರಳಿಸುವ ರೀತಿ ಹಲವರು ಹಂಚಿಕೊಳ್ಳುತ್ತಿದ್ದಾರೆ. ನಿರ್ದಿಷ್ಟ ಕೋಮಿನ ಜನ ರೈಲು ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ. ಆದರೆ, ಇದು ಸುಳ್ಳು ಸುದ್ದಿ.
ವಿಡಿಯೊ ಅನ್ನು ಗೂಗಲ್‌ನಲ್ಲಿ ರಿವರ್ಸ್ ಇಮೇಜ್ ಸರ್ಚ್‌ಗೆ ಒಳಪಡಿಸಿದಾಗ, ಫೇಸ್‌ಬುಕ್ ಮತ್ತು ಯುಟ್ಯೂಬ್‌ನಲ್ಲಿ ಇದೇ ವಿಡಿಯೊ ಅನ್ನು ಹಿಂದೆ ಹಲವರು ಹಂಚಿಕೊಂಡಿರುವುದು ಕಂಡುಬಂತು. ಇದೇ ವಿಡಿಯೊ 2023ರ ಡಿಸೆಂಬರ್ 6ರಂದು ‘ಕರಾಚಿ ಎಕ್ಸ್‌ಪೋಸರ್’ ಎನ್ನುವ ಮಾಧ್ಯಮದ ಫೇಸ್‌ಬುಕ್ ಖಾತೆಯಲ್ಲೂ ಅಪ್‌ಲೋಡ್ ಆಗಿದೆ. ‘ಕರಾಚಿಯ ಬೋಟ್ ಬೇಸಿನ್ ಚೌಕಿಯಲ್ಲಿ ಕೆಲವು ಬಾಲಕರು ರೈಲು ಹಳಿಯ ಮೇಲಿನ ನಟ್ಟು, ಬೋಲ್ಟುಗಳನ್ನು ಕಿತ್ತು ಮಾರುತ್ತಿದ್ದಾರೆ, ಇದು ಕಾನೂನುವಿರೋಧಿ ಕೃತ್ಯವಾಗಿದೆ’ ಎಂದು ಅದರಲ್ಲಿ ಉಲ್ಲೇಖಿಸಲಾಗಿದೆ. 2023ರ ಪಾಕಿಸ್ತಾನದ ವಿಡಿಯೊ ಅನ್ನು ಭಾರತದ ವಿಡಿಯೊ ಎಂದು ಹಂಚಿಕೊಳ್ಳುತ್ತಿರುವ ಕೆಲವರು, ಇದಕ್ಕೆ ಕೋಮು ಬಣ್ಣ ಬಳಿಯುತ್ತಿದ್ದಾರೆ. ಈ ಬಗ್ಗೆ ಬೂಮ್ ಫ್ಯಾಕ್ಟ್ ಚೆಕ್ ಪ್ರಕಟಿಸಿದೆ.