ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

200 ವರ್ಷಗಳ ಹಿಂದೆಯೇ ವರದಕ್ಷಿಣೆ ವಿರುದ್ಧ ಆಜ್ಞೆ ಹೊರಡಿಸಿದ್ದ ತಿರುವಾಂಕೂರು ರಾಣಿ

Published 18 ಫೆಬ್ರುವರಿ 2024, 7:23 IST
Last Updated 18 ಫೆಬ್ರುವರಿ 2024, 7:23 IST
ಅಕ್ಷರ ಗಾತ್ರ

ತಿರುವನಂತಪುರ: ಇತ್ತೀಚಿನ ದಿನಗಳಲ್ಲಿ ವರದಕ್ಷಿಣೆಯ ಹೆಸರಿನಲ್ಲಿ ಕ್ರೂರ ಹಿಂಸೆ ಮತ್ತು ಕಿರುಕುಳದಂತಹ ಪ್ರಕರಣಗಳು ಸಾಮಾನ್ಯ ಎಂಬಂತಾಗಿದೆ. ಆದರೆ ಸುಮಾರು 200 ವರ್ಷಗಳ ಹಿಂದೆಯೇ, ದಕ್ಷಿಣ ಭಾರತದ ರಾಣಿಯೊಬ್ಬರು ತಿರುವಾಂಕೂರು ರಾಜ್ಯದಲ್ಲಿ (ಹಿಂದಿನ ರಾಜಪ್ರಭುತ್ವದ ಅವಧಿ) ವರದಕ್ಷಿಣೆ ಕಿರುಕುಳವನ್ನು ನಿಯಂತ್ರಿಸಲು ಕ್ರಮ ಕೈಗೊಂಡಿದ್ದರು ಎಂದು ಹಳೆಯ ದಾಖಲೆಗಳಿಂದ ಬಹಿರಂಗಗೊಂಡಿದೆ.

1815-29ರ ಅವಧಿಯಲ್ಲಿ ತಿರುವಾಂಕೂರನ್ನು (ಈಗಿನ ದಕ್ಷಿಣ ಕೇರಳ) ಆಳಿದ್ದ ರಾಣಿ ಈ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದರು.

ರಾಣಿ ಗೌರಿ ಪಾರ್ವತಿ ಬಾಯಿ ಅವರು ಬ್ರಾಹ್ಮಣ ಸಮುದಾಯದ ಮಹಿಳೆಯರನ್ನು ವಿವಾಹವಾಗಲು ಇದ್ದ ಅತಿಯಾದ ವರದಕ್ಷಿಣೆ ಬೇಡಿಕೆಯನ್ನು ಪ್ರಶ್ನಿಸಿದ್ದರು. ಅಲ್ಲದೇ 1823ರಲ್ಲಿ ಅದರ ಮೊತ್ತವನ್ನು ಮಿತಿಗೊಳಿಸಿ ಆದೇಶ ಹೊರಡಿಸಿದ್ದರು.

ವರದಕ್ಷಿಣೆಯನ್ನು ಸಂಪೂರ್ಣವಾಗಿ ನಿಷೇಧಿಸದಿದ್ದರೂ ಸಹ, ಅಸ್ತಿತ್ವದಲ್ಲಿರುವ ಸಾಮಾಜಿಕ ಆಚರಣೆಯಲ್ಲಿ ಮಧ್ಯಪ್ರವೇಶಿಸಿ ತನ್ನ ರಾಜ್ಯದ ಮಹಿಳೆಯರ ಪರವಾಗಿ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದರಿಂದ ಈ ಆದೇಶ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂದು ಇತಿಹಾಸಕಾರರು ಹೇಳುತ್ತಾರೆ.

ಮಹತ್ವ ಪಡೆದ ರಾಜಾಜ್ಞೆ

ಇತ್ತೀಚಿನ ವರ್ಷಗಳಲ್ಲಿ ದೇಶದಾದ್ಯಂತ ಮಹಿಳೆಯರ ಮೇಲೆ ಹಲ್ಲೆ, ವರದಕ್ಷಿಣೆ ಸಂಬಂಧಿತ ಸರಣಿ ಆತ್ಮಹತ್ಯೆ ಘಟನೆಗಳು ಹೆಚ್ಚುತ್ತಿರುವ ನಡುವೆ ಎರಡು ಶತಮಾನಗಳಷ್ಟು ಹಳೆಯದಾದ ಈ ರಾಜಾಜ್ಞೆಯು ಕೇರಳದಲ್ಲಿ ಮಹತ್ವ ಪಡೆದುಕೊಂಡಿದೆ.

ರಾಣಿಯ 19ನೇ ಶತಮಾನದಲ್ಲಿ ಹೊರಡಿಸಿದ ರಾಜಾಜ್ಞೆ , ಈಗ ರಾಜ್ಯ ದಾಖಲೆಗಳಲ್ಲಿ ಲಭ್ಯವಿದೆ. ಎರಡು ಶತಮಾನಗಳ ಹಿಂದೆಯೇ ದೇಶದ ಈ ಭಾಗದಲ್ಲಿ ವರದಕ್ಷಿಣೆ ಪಿಡುಗು ಆಳವಾಗಿ ಬೇರೂರಿತ್ತು ಎಂಬುವುದನ್ನೂ ಸೂಚಿಸುತ್ತದೆ.

19ನೇ ಶತಮಾನದಲ್ಲಿ ಆಗಿನ ಸಾಮಾಜಿಕ ಆಚರಣೆಗಳ ಬಗ್ಗೆ ತಿಳಿದಿದ್ದ ರಾಣಿ ಪಾರ್ವತಿ ಬಾಯಿ ಅವರು, ರಾಜಪ್ರಭುತ್ವದಲ್ಲಿ ಚಾಲ್ತಿಯಲ್ಲಿರುವ ಪದ್ಧತಿಯಂತೆ ಸಮುದಾಯದ ಹೆಣ್ಣುಮಕ್ಕಳನ್ನು 10-14 ವರ್ಷ ವಯಸ್ಸಿನೊಳಗೆ ವಿವಾಹವಾಗಬೇಕು ಎಂದೂ ಹೇಳಿದ್ದರು .

ವರದಕ್ಷಿಣೆಯಾಗಿ 1000-2000 ಪಣಂ ( ಹಣ) ಬೇಡಿಕೆಯಿರುವುದರಿಂದ ಸಮುದಾಯದ ಅನೇಕ ಕುಟುಂಬಗಳಿಗೆ ತಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಅವರು ಹೇಳಿದ್ದರು.

ವರದಕ್ಷಿಣೆಯಾಗಿ 700ಕ್ಕಿಂತ ಹೆಚ್ಚು 'ಕಲ್ಯಾಣ ಪಣಂ' ನೀಡಬಾರದು ಅಥವಾ ಬೇಡಿಕೆಯಿಡಬಾರದು ಎಂದು ಅವರು ಕಟ್ಟುನಿಟ್ಟಿನ ಆದೇಶ ನೀಡಿದ್ದರು .

ಸಮುದಾಯದ ಪ್ರತಿಯೊಬ್ಬರೂ ರಾಜಮನೆತನದ ಆಡಳಿತದ ನಿರ್ಧಾರವನ್ನು ಪಾಲಿಸಬೇಕೆಂದೂ, ಅದನ್ನು ಉಲ್ಲಂಘಿಸುವವರನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು ಹಾಗೂ ಕಾನೂನಿನ ಪ್ರಕಾರ ಶಿಕ್ಷಿಸಲಾಗುವುದು ಎಂದು ಆದೇಶದಲ್ಲಿ ಹೇಳಲಾಗಿತ್ತು.

‘ಮಹತ್ವದ ದಾಖಲೆ'
ತಿರುವಾಂಕೂರಿನಲ್ಲಿ ವರದಕ್ಷಿಣೆ ಪದ್ಧತಿಯ ಪ್ರಾಬಲ್ಯವನ್ನು ಸಾಬೀತುಪಡಿಸಲು ಹೆಚ್ಚಿನ ಐತಿಹಾಸಿಕ ದಾಖಲೆಗಳು ಲಭ್ಯವಿಲ್ಲದ ಕಾರಣ ರಾಣಿಯ ಆಜ್ಞೆಯು ಗಮನಾರ್ಹವಾದುದು ಎಂದು ಹೆಸರಾಂತ ಇತಿಹಾಸಕಾರ ಟಿ.ಪಿ ಶಂಕರನ್‌ಕುಟ್ಟಿ ಹೇಳಿದ್ದಾರೆ. ಈ ಆದೇಶದಲ್ಲಿ , ಬ್ರಾಹ್ಮಣ ಸಮುದಾಯದಲ್ಲಿ ಪ್ರಚಲಿತದಲ್ಲಿರುವ ವರದಕ್ಷಿಣೆ ಪದ್ಧತಿಯ ಬಗ್ಗೆ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ ಮತ್ತು ಆದ್ದರಿಂದ ಇದನ್ನು ‘ಮಹತ್ವದ ದಾಖಲೆ' ಎಂದು ಪರಿಗಣಿಸಬಹುದು ಎಂದು ಅವರು ತಿಳಿಸಿದ್ದಾರೆ.

‘ಸಾಮಾನ್ಯವಾಗಿ, ಅಂದಿನ ರಾಜರು ಮತ್ತು ರಾಣಿಯರು ಇಂತಹ ನಿರ್ಧಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ . ಆ ಅರ್ಥದಲ್ಲಿ, ರಾಜಾಜ್ಞೆಗೆ ಹೆಚ್ಚಿನ ಮಹತ್ವವಿದೆ' ಎಂದು ಇಲ್ಲಿನ ವಿಶ್ವವಿದ್ಯಾಲಯ ಕಾಲೇಜಿನ ಇತಿಹಾಸ ವಿಭಾಗದ ಮಾಜಿ ಮುಖ್ಯಸ್ಥ ಶಂಕರನ್‌ಕುಟ್ಟಿ ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಕನಿಷ್ಠ ಕೆಲವು ಬದಲಾವಣೆಗಳನ್ನು ಮಾಡಲು ವರದಕ್ಷಿಣೆ ಕೇಳುವುದು ಅಥವಾ ಸ್ವೀಕರಿಸುವುದನ್ನು ಗಂಭೀರ ಅಪರಾಧ ಎಂದು ಪರಿಗಣಿಸಲಾಗಿದೆ. ಈ ಬಗ್ಗೆ ಕಠಿಣ ಕಾನೂನು ಮತ್ತು ಪ್ರಚಾರವು ಅತ್ಯಗತ್ಯ ಎಂದು ಹಿರಿಯ ಸಿಪಿಐ (ಎಂ) ನಾಯಕಿ ಹಾಗೂ ಮಾಜಿ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅಭಿಪ್ರಾಯಪಟ್ಟಿದ್ದಾರೆ.

ವರದಕ್ಷಿಣೆ ಪಿಡುಗಿನ ವಿರುದ್ಧ ಹೋರಾಡಲು ದೇಶದಲ್ಲಿ ಕಾನೂನುಗಳ ಕೊರತೆಯಿಲ್ಲ. ಆದರೆ ಸಮಾಜದ ಮನೋಭಾವ ಬದಲಾಗದಿದ್ದರೆ ಅವುಗಳಿಂದ ಯಾವುದೇ ಪ್ರಯೋಜನವಿಲ್ಲ ಎಂದೂ ಅವರು ಹೇಳಿದ್ದಾರೆ.

ಸಂಸತ್‌ನಲ್ಲಿ ಕಾನೂನುಗಳನ್ನು ಅಂಗೀಕರಿಸಿದರೆ ಸಾಕಾಗುವುದಿಲ್ಲ. ಅವುಗಳ ಸಕಾರಾತ್ಮಕ ಪರಿಣಾಮಗಳನ್ನು ಒಪ್ಪಿಕೊಳ್ಳುವ ಮಾನಸಿಕ ಸ್ಥಿತಿ ಸಮಾಜದ ಜನರಲ್ಲಿ ಬರಬೇಕು
ಶೈಲಜಾ, ಮಾಜಿ ಆರೋಗ್ಯ ಸಚಿವೆ

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ ಕೇರಳ ರಾಜ್ಯ ಅಸ್ತಿತ್ವಕ್ಕೆ ಬಂದ ನಂತರ 1961ರಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಲಾಯಿತು.

2021ರಲ್ಲಿ, ಗವರ್ನರ್ ಆರಿಫ್ ಮೊಹಮ್ಮದ್ ಖಾನ್ ಅವರು ಈ ಪಿಡುಗನ್ನು ಬೇರುಸಹಿತ ಕಿತ್ತೊಗೆಯಲು ಉಪವಾಸ ಸತ್ಯಾಗ್ರಹ ಕೈಗೊಂಡಿದ್ದರು.

ಮಹಿಳೆಯರ ಮೇಲಿನ ವರದಕ್ಷಿಣೆ ದೌರ್ಜನ್ಯಗಳ ವಿರುದ್ಧದ ಕ್ರಮಗಳ ಭಾಗವಾಗಿ ರಾಜ್ಯ ಪೊಲೀಸರು ‘Say No to Dowry' ಯಂತಹ ಅಭಿಯಾನಗಳನ್ನು ಪ್ರಾರಂಭಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT