ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಗಲಭೆಗಾಗಿ ಸ್ವಂತದ ₹1.5 ಕೋಟಿಯನ್ನು ಕಪ್ಪುಹಣವಾಗಿಸಿದ್ದ ಎಎಪಿ ಕೌನ್ಸಿಲರ್‌

Last Updated 27 ಸೆಪ್ಟೆಂಬರ್ 2020, 5:04 IST
ಅಕ್ಷರ ಗಾತ್ರ

ದೆಹಲಿ: ಎಎಪಿಯಿಂದ ಅಮಾನತುಗೊಂಡಿರುವ ಕೌನ್ಸಿಲರ್‌ ತಾಹಿರ್‌ ಹುಸೇನ್‌ ದೆಹಲಿ ಗಲಭೆಗೆ ಹಣ ಪೂರೈಸಲು ತನ್ನಸ್ವಂತದ ₹1.5 ಕೋಟಿ ಹಣವನ್ನು ಕಪ್ಪು ಹಣವಾಗಿ ಪರಿವರ್ತಿಸಿದ್ದ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ (ಚಾರ್ಜ್‌ಶೀಟ್‌ನಲ್ಲಿ) ಉಲ್ಲೇಖಿಸಲಾಗಿದೆ.

ಸಿಎಎ ವಿರುದ್ಧ ಫೆಬ್ರವರಿಯಲ್ಲಿ ದೆಹಲಿಯಲ್ಲಿ ನಡೆದಿದ್ದ ಪ್ರತಿಭಟನೆಯು ಗಲಭೆ ಸ್ವರೂಪ ಪಡೆದುಕೊಂಡಿತ್ತು. ಇದರಲ್ಲಿ 53 ಮಂದಿ ಮೃತಪಟ್ಟಿದ್ದರು.

ಹೈಸ್ಕೂಲ್‌ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿರುವ ತಾಹಿರ್‌ ಹುಸೇನ್‌, ದೆಹಲಿ ಘರ್ಷಣೆಯ ಪ್ರಮುಖ ಸಂಚುಕೋರರಾದ ಉಮರ್‌ ಖಾಲಿದ್‌ ಅವರಂಥವರಿಂದ ಪ್ರಭಾವಿತನಾಗಿದ್ದ ಎಂದೂ ಸೆ.16ರಂದು ಸಲ್ಲಿಸಲಾಗಿರುವ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಎಎಪಿಯಿಂದ ಈಗಾಗಲೇ ಅಮಾನತುಗೊಂಡಿರುವ ತಾಹಿರ್‌ ಹುಸೇನ್ ಗಲಭೆಯ ಸಂದರ್ಭದಲ್ಲಿ ಗುಪ್ತಚರ ದಳದ ಸಿಬ್ಬಂದಿ ಅಂಕಿತ್ ಶರ್ಮಾ ಅವರ ಹತ್ಯೆಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾನೆ. ಇದಲ್ಲದೇ,ದೆಹಲಿ ಗಲಭೆಗಾಗಿ ಪಿತೂರಿ ನಡೆಸಿದ್ದಾರೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿರುವ 15 ಜನರ ಪಟ್ಟಿಯಲ್ಲಿ ತಾಹಿರ್‌ ಹುಸೇನ್‌ ಹೆಸರನ್ನೂ ಸೇರಿಸಲಾಗಿದೆ.

ಡಿಸೆಂಬರ್‌ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಗಳು ಕಡಿಮೆ ಜನರನ್ನು ಒಳಗೊಂಡಿತ್ತು. ಅಲ್ಲದೆ, ದೊಡ್ಡ ಸಮೂಹ ಸೇರಿಸಲು ಸಂಚುಕೋರರಿಗೆ ಯಾವುದೇ ಮಾರ್ಗ ಕಾಣದಾದಾಗ ಉಮರ್ ಖಾಲಿದ್ ಮತ್ತು ಖಾಲಿದ್ ಸೈಫಿ ಎಂಬುವವರು ತಾಹಿರ್‌ ಹುಸೇನ್‌ನನ್ನು ಸಂಪರ್ಕಿಸಿದ್ದರು. ಜನವರಿ 8ರಂದು ಶಾಹಿನ್‌ ಬಾಗ್‌ನ ಇತರ 8 ಮಂದಿ ಪ್ರತಿಭಟನಾಕಾರರೊಂದಿಗೆ ದೆಹಲಿಯ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ಕಚೇರಿಯಲ್ಲಿ ಉಮರ್ ಖಾಲಿದ್ ಮತ್ತು ಖಾಲಿದ್ ಸೈಫಿ ಕೌನ್ಸಿಲರ್‌ ತಾಹಿರ್‌ ಹುಸೇನ್‌ನನ್ನು ಭೇಟಿಯಾಗಿದ್ದರು.

ಹೀಗೆ ತನ್ನನ್ನು ಭೇಟಿಯಾದವರಿಗೆ ತಾಹಿರ್‌ ಹುಸೇನ್ ಹಣಬಲ, ತೋಳ್ಬಲ್ ಮತ್ತು ಸಮುದಾಯದ ಬಲವನ್ನು ಒದಗಿಸಿದ್ದ. ಪಿತೂರಿ ಮಾಡುತ್ತಿದ್ದವರಿಗೆ ತಾಹಿರ್‌ ಹುಸೇನ್‌ನ ಈ ನೆರವು ಅಗತ್ಯವಾಗಿ ಬೇಕಾಗಿತ್ತು. ಪಿತೂರಿಗೆ ತಾಹಿರ್‌ ಹುಸೇನ್ ಪ್ರಧಾನ ಅಸ್ತ್ರವಾಗಿದ್ದ ಎಂದು ಚಾರ್ಜ್ ಶೀಟ್ ಹೇಳಿಕೊಂಡಿದೆ.

ಮಧ್ಯವರ್ತಿಗಳ ಜಾಲದ ಮೂಲಕ ತಾಹಿರ್‌ ಹುಸೇನ್‌ ತನ್ನ ₹1.5 ಕೋಟಿ ಹಣವನ್ನೇ ಕಪ್ಪುಹಣವಾಗಿ ಪರಿವರ್ತಿಸಿ ಗಲಭೆಕೋರರಿಗೆ ಒದಗಿಸಿರುವುದು ವಿಶೇಷ ಪ್ರಕರಣವಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಹೇಳಲಾಗಿದೆ. ಸಂಬಂಧಿತ ಬ್ಯಾಂಕ್‌ ಖಾತೆಗಳ ವಿಶ್ಲೇಷಣೆಯಿಂದ, ಸಾರ್ವಜನಿಕ ಸಾಕ್ಷಿಯಿಂದಇದು ದೃಢವಾಗಿದೆ ಎಂದು ತನಿಖಾ ತಂಡ ಹೇಳಿದೆ.

ರಾಹುಲ್ ಸೋಲಂಕಿ ಎಂಬುವವರ ಕೊಲೆಗೆ ಬಳಸಿದ ಪಿಸ್ತೂಲ್ ಖರೀದಿಸಲು ಇದೇ ತಾಹಿರ್‌ ಹುಸೇನ್‌ ಹಣ ಒದಗಿಸಿದ್ದ. ಇದರೊಂದಿಗೆ, ವಿದ್ಯಾರ್ಥಿ ಹೋರಾಟಗಾರ್ತಿ ಗುಲ್ಫಿಶಾ ಮೂಲಕ ಮಹಿಳಾ ಗುಂಪು 'ಪಿಂಜ್ರಾ ಟಾಡ್' ಗೆ ತಾಹಿರ್‌ ಹುಸೇನ್‌ ಹಣ ಪೂರೈಸಿದ್ದ. ಚಾಂದ್ ಬಾಗ್‌ನಲ್ಲಿ ನಡೆದ ಹಿಂಸಾಚಾರ ಮತ್ತು ಅದರಲ್ಲಿ ಸಂಭವಿಸಿದ್ದ ಹೆಡ್ ಕಾನ್‌ಸ್ಟೆಬಲ್ ರಟ್ಟನ್ ಲಾಲ್ ಅವರ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಇಬ್ಬರು ವ್ಯಕ್ತಿಗಳಿಗೆ ಹಣಕಾಸು ಒದಗಿಸಿದ ಆರೋಪವೂ ತಾಹಿರ್‌ ಹುಸೇನ್‌ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT