ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಕಸಭಾ ಅಧಿವೇಶನ: ಸಂವಿಧಾನ ಪುಸ್ತಕ ಹಿಡಿದು ಸಂಸತ್ ಪ್ರವೇಶಿಸಿದ ‘ಇಂಡಿಯಾ’ ನಾಯಕರು

Published 24 ಜೂನ್ 2024, 7:45 IST
Last Updated 24 ಜೂನ್ 2024, 7:45 IST
ಅಕ್ಷರ ಗಾತ್ರ

ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನಕ್ಕೆ ಇಂಡಿಯಾ ಮೈತ್ರಿಕೂಟದ ನಾಯಕರು ಜೊತೆಯಾಗಿ ಸಂಸತ್‌ ಪ್ರವೇಶಿಸುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಈ ವೇಳೆ ಎಲ್ಲ ನಾಯಕರು ಸಂವಿಧಾನ ಪುಸ್ತಕವನ್ನು ಹಿಡಿದುಕೊಂಡಿದ್ದರು.

ನಂತರ ಸಂಸತ್ ಭವನದ ಮುಂದೆ ಜಮಾಯಿಸಿದ ನಾಯಕರು, ‘ನಾವು ಸಂವಿಧಾನ ಉಳಿಸುತ್ತೇವೆ’, ‘ಪ್ರಜಾಪ್ರಭುತ್ವ ಉಳಿಸಿ’, 'ಲಾಂಗ್‌ ಲೈವ್ ಕಾನ್‌ಸ್ಟಿಟ್ಯೂಷನ್‌’ ಎಂಬ ಘೋಷಣೆಗಳನ್ನು ಕೂಗಿದರು.

ಸಂವಿಧಾನ ಉಳಿಸಲು ಜನರು ವಿರೋಧ ಪಕ್ಷಗಳನ್ನು ಬೆಂಬಲಿಸಿದ್ದಾರೆ ಎಂದು ಈ ಬಾರಿಯ ಚುನಾವಣಾ ಫಲಿತಾಂಶಗಳು ತೋರಿಸುತ್ತವೆ ಎಂದು ‘ಇಂಡಿಯಾ‘ ನಾಯಕರು ಹೇಳಿದರು.

ಸುದ್ದಿಸಂಸ್ಥೆ ಎಎನ್‌ಐ ಜತೆ ಮಾತನಾಡಿದ ರಾಹುಲ್ ಗಾಂಧಿ, ‘ಸಂವಿಧಾನ ಉಳಿಸಲು ನಾವು ಕಟಿಬದ್ಧರಾಗಿದ್ದೇವೆ. ಆದ್ದರಿಂದ ಪ್ರಮಾಣ ವಚನ ಸ್ವೀಕರಿಸುವ ಮುನ್ನ ಸಂವಿಧಾನ ಪುಸ್ತಕ ಹಿಡಿದಿದ್ದೇವೆ. ಯಾವ ಶಕ್ತಿಯು ಭಾರತದ ಸಂವಿಧಾನವನ್ನು ಮುಟ್ಟಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನಾವು ಸಾರುತ್ತಿದ್ದೇವೆ’ ಎಂದರು.

ಇಂದು ಬೆಳಿಗ್ಗೆ 11 ಗಂಟೆಗೆ 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸೇರಿದಂತೆ ನೂತನವಾಗಿ ಆಯ್ಕೆಯಾದ ಸಂಸದರು ಪ್ರಮಾಣ ವಚನ ಸ್ವೀಕರಿಸಿದರು.

ಜೂನ್‌ 26ರಂದು ಲೋಕಸಭಾ ಸ್ಪೀಕರ್‌ ಆಯ್ಕೆ ನಡೆಯಲಿದ್ದು, 27ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಭಯ ಸದನಗಳ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT