ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ‘ತಮಿಳು ವಿರೋಧಿ’ ಎಐಎಡಿಎಂಕೆ ವಾಗ್ದಾಳಿ

ಮಿತ್ರಪಕ್ಷದ ವಿರುದ್ಧವೇ ತಿರುಗುಬಾಣ
Last Updated 1 ಜೂನ್ 2022, 11:19 IST
ಅಕ್ಷರ ಗಾತ್ರ

ಚೆನ್ನೈ: ‘ಬಿಜೆಪಿಯು ತಮಿಳು ವಿರೋಧಿ’ಯಾಗಿದೆ ಎಂದು ಆರೋಪಿಸಿರುವ ಬಿಜೆಪಿಯ ಪ್ರಮುಖ ಮಿತ್ರಪಕ್ಷವಾದ ಎಐಎಡಿಎಂಕೆ, ರಾಜ್ಯದಲ್ಲಿ ಆ ಪಕ್ಷವು ಎಂದಿಗೂ ಬೆಳೆಯಲು ಸಾಧ್ಯವಿಲ್ಲ ಎಂದು ಹೇಳಿದೆ.

ಬುಧವಾರ ಇಲ್ಲಿ ಆಯೋಜಿಸಿದ್ದ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಎಡಿಎಂಕೆ ವಕ್ತಾರ ಸಿ. ಪೊನ್ನಯ್ಯನ್, ‘ಬಿಜೆಪಿ ಜತೆಗಿನ ಮೈತ್ರಿಯು ಕೇವಲ ಚುನಾವಣಾ ಹೊಂದಾಣಿಕೆಯಾಗಿದೆ. ಆ ಪಕ್ಷದ ಸಿದ್ಧಾಂತವು ಎಐಎಡಿಎಂಕೆಯ ಸಿದ್ಧಾಂತಕ್ಕೆ ಸಂಪೂರ್ಣ ವಿರುದ್ಧವಾಗಿದೆ. ನಮ್ಮ ಪಕ್ಷದ ತೀವ್ರ ವಿರೋಧದ ನಡುವೆಯೂ ಬಿಜೆಪಿಯು ನಿರಂತರವಾಗಿ ಹಿಂದಿ ಭಾಷೆಯನ್ನು ಹೇರುತ್ತಿದೆ’ ಎಂದು ಆರೋಪಿಸಿದ್ದಾರೆ.

‘ಬಿಜೆಪಿಯ ತಮಿಳು ಜನಾಂಗ ಮತ್ತು ಭಾಷಾ ವಿರೋಧವನ್ನು ನಾವು ಒಪ್ಪಿಕೊಳ್ಳುವುದಿಲ್ಲ. ಈ ಸಮಸ್ಯೆಗಳನ್ನು ಸೂಕ್ತವಾಗಿ ಬಗೆಹರಿಸಿಕೊಂಡಲ್ಲಿ ಮಾತ್ರ ಆ ಪಕ್ಷಕ್ಕೆ ರಾಜ್ಯದಲ್ಲಿ ಜಾಗ ಸಿಗಬಹುದು’ ಎಂದು ಅಭಿಪ್ರಾಯಪಟ್ಟ ಅವರು, ‘2024ರ ಲೋಕಸಭಾ ಚುನಾವಣೆಗೆ ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿಸುವಿರಾ’ ಎನ್ನುವ ಪ್ರಶ್ನೆಗೆ ‘ನನಗೆ ಗೊತ್ತಿಲ್ಲ’ ಎಂದು ಉತ್ತರಿಸಿದರು.

‘ಬಿಜೆಪಿಯ ಬೆಳವಣಿಗೆಯು ಎಐಎಡಿಎಂಕೆ, ರಾಜ್ಯ ಮತ್ತು ದ್ರಾವಿಡ ನೀತಿಗಳಿಗೆ ಒಳ್ಳೆಯದಲ್ಲ’ ಎಂದೂ ಪೊನ್ನಯ್ಯನ್ ಹೇಳಿದ್ದಾರೆ.

‘ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರಗಳ ಅವಧಿಗಿಂತಲೂ ಹೆಚ್ಚುಪಟ್ಟು ಹಿಂದಿ ಹೇರಿಕೆಯಾಗುತ್ತಿದೆ. ನಾವು ತಮಿಳು ಮತ್ತು ಇಂಗ್ಲಿಷ್‌ನ ದ್ವಿಭಾಷಾ ನೀತಿಗೆ ಬದ್ಧವಾಗಿದ್ದು, ಅದರ ಪರವಾಗಿ ದೃಢವಾಗಿ ನಿಲ್ಲುತ್ತೇವೆ. ಎಐಎಡಿಎಂಕೆಯು ತಮಿಳುನಾಡಿನಲ್ಲಿ ‘ನೀಟ್’ ಪರೀಕ್ಷೆಯನ್ನು ವಿರೋಧಿಸುತ್ತದೆ. ಆದರೆ, ಬಿಜೆಪಿಯು ಪರೀಕ್ಷೆಯ ಪರವಾಗಿದೆ. ಇದು ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿರುವ ಸೀಟುಗಳನ್ನು ಕಸಿದುಕೊಳ್ಳುವ ಮೂಲಕ ಉತ್ತರ ರಾಜ್ಯಗಳ ವಿದ್ಯಾರ್ಥಿಗಳ ಪರ ವಹಿಸುವ ಮನೋಭಾವವಾಗಿದೆ’ ಎಂದೂ ಅವರು ಆರೋಪಿಸಿದ್ದಾರೆ. ‌

‘ರಾಜ್ಯ ಸ್ವಾಯತ್ತತೆ’ ಎಂಬುದು ನಮ್ಮ ಪಕ್ಷದ ಮೂಲತತ್ವವಾಗಿದೆ. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ತೆರಿಗೆಗೆ ಸಂಬಂಧಿಸಿದಂತೆ ರಾಜ್ಯಗಳ ಹಕ್ಕುಗಳನ್ನು ಕಸಿದುಕೊಂಡು ರಾಜ್ಯ ಸರ್ಕಾರಗಳನ್ನು ಗ್ರಾಮ ಪಂಚಾಯಿತಿ ಮಟ್ಟಕ್ಕೆ ಇಳಿಸಿದೆ. ಅಷ್ಟೇ ಅಲ್ಲ ಕಾವೇರಿ ಸೇರಿದಂತೆ ಇತರ ಅಂತರರಾಜ್ಯಗಳ ನದಿ ನೀರಿನ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ ಬಿಜೆಪಿಯು ತಮಿಳುನಾಡಿನ ಬಗ್ಗೆ ಮಲತಾಯಿ ಧೋರಣೆಯನ್ನು ಅನುಸರಿಸುತ್ತಿದೆ’ ಎಂದೂ ಅವರು ದೂರಿದ್ದಾರೆ.

‘2009ರ ಯುದ್ಧದಲ್ಲಿ 1.5 ಲಕ್ಷ ತಮಿಳರ ಹತ್ಯಾಕಾಂಡದ ಹಿಂದಿದ್ದ ಶ್ರೀಲಂಕಾದ ಹಿಂದಿನ ಮಹಿಂದಾ ರಾಜಪಕ್ಸೆ ಸರ್ಕಾರವನ್ನು ಬಿಜೆಪಿಯು ಸಕ್ರಿಯವಾಗಿ ಬೆಂಬಲಿಸುತ್ತಿತ್ತು. ಆ ಯುದ್ಧದಿಂದ ಹಾನಿಗೊಳಗಾದ ತಮಿಳು ಕುಟುಂಬಗಳಿಗೆ ಇನ್ನೂ ಸೂಕ್ತ ಪರಿಹಾರ ದೊರೆತಿಲ್ಲ. ಶ್ರೀಲಂಕಾದಲ್ಲಿ ತಮಿಳರ ಹಕ್ಕುಗಳಿಗಾಗಿ ನಮ್ಮ ಪಕ್ಷವು ದೃಢವಾಗಿ ನಿಂತಿದೆ’ ಎಂದು ಹೇಳಿದ್ದಾರೆ.

ಬಿಜೆಪಿ ವಿರುದ್ಧ ಎಐಎಡಿಎಂಕೆ ನಾಯಕರೊಬ್ಬರು ಮಾಡಿದ ಮೊದಲ ಬಹಿರಂಗ ಟೀಕೆ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT