ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಲಿತಾಂಶ ವಿಶ್ಲೇಷಣೆ | ಗುಲಬರ್ಗಾ– ತಂದೆಯ ಸೋಲಿನಲ್ಲಿ ಮಗನ ಮೋಹವೂ ಕೆಲಸ ಮಾಡಿತೆ?

Last Updated 4 ಜೂನ್ 2019, 9:09 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯಲ್ಲಿ ಘಟನಾನುಘಟಿಗಳೆಲ್ಲ ಮಣ್ಣು ಮುಕ್ಕಿದ್ದಾರೆ. ಹಾಗೆ ಸೋಲು ಕಂಡ ಪ್ರಮುಖ ನಾಯಕರಲ್ಲಿ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಒಬ್ಬರು. ಗುಲಬರ್ಗಾಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು, ಬಿಜೆಪಿಯ ಡಾ. ಉಮೇಶ್ ಜಾಧವ್ ಎದುರು ಸೋಲನುಭವಿಸಿದ್ದಾರೆ. ಸೋಲಿಗೆ ಕಾರಣಗಳ ಕುರಿತು ‘ಪ್ರಜಾವಾಣಿ’ ಸುದ್ದಿ ಸಂಪಾದಕ ಸುದೇಶ್ ದೊಡ್ಡಪಾಳ್ಯ ಹಾಗೂ ಸಹಾಯಕ ಸಂಪಾದಕ ಎನ್. ಉದಯ ಕುಮಾರ್ ಅವರ ವಿಶ್ಲೇಷಣೆ ಇಲ್ಲಿದೆ.

ಉದಯ್: 1972ರಿಂದ ಇಲ್ಲಿವರೆಗೆ 12 ಚುನಾವಣೆಗಳನ್ನು ಎದುರಿಸಿರುವ ಮಲ್ಲಿಕಾರ್ಜುನ ಖರ್ಗೆ, ಸತತಒಂಬತ್ತು ಬಾರಿ ವಿಧಾನಸಭೆಗೆ, ಎರಡು ಬಾರಿ ಸಂಸತ್ತಿಗೆ ಆಯ್ಕೆಯಾಗಿದ್ದರು. ಇಂಥ ಸೋಲೇ ಕಂಡರಿಯದ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಈ ಚುನಾವಣೆ ಲಕ್ಷ ಮತಗಳ ಅಂತರದ ಸೋಲಿನ ಕಹಿ ಉಣಬಡಿಸಿದೆ. ಕಾರಣ ಏನಿರಬಹುದು?

ಸುದೇಶ್: ದೇಶದ ಪ್ರತಿಷ್ಠಿತಕ್ಷೇತ್ರಗಳಲ್ಲಿಕಲ್ಬುರ್ಗಿ ಕ್ಷೇತ್ರವೂ ಒಂದು. ಕಾಂಗ್ರೆಸ್‌ನ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸ್ಪರ್ಧಿಸಿದ ಕಾರಣದಿಂದ ಅದು ಪ್ರತಿಷ್ಠಿತ ಕ್ಷೇತ್ರವಾಯಿತು. ಖರ್ಗೆ ಅವರು ಸತತವಾಗಿ ಒಂಬತ್ತು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. 2 ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. ಮೊದಲ ಬಾರಿಗೆ ಸಂಸತ್ತಿಗೆ ಆಯ್ಕೆಯಾದಾಗ, ರೈಲ್ವೆ ಹಾಗೂ ಕಾರ್ಮಿಕ ಖಾತೆಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ನಂತರ ಬದಲಾದ ಸನ್ನಿವೇಶದಲ್ಲಿ ಅನಿವಾರ್ಯವಾಗಿ ವಿರೋಧಪಕ್ಷದಲ್ಲಿ ಕೂರಬೇಕಿತ್ತು.ಇದೇ ವೇಳೆ ಕಾಂಗ್ರೆಸ್‌ ಪಕ್ಷಕ್ಕೆ ಸಂಸತ್ತಿನಲ್ಲಿ ಪಕ್ಷವನ್ನು ಮುನ್ನಡೆಸಲು ಸಮರ್ಥ ನಾಯಕರು ಬೇಕಿತ್ತು. ಧೀರ್ಘ ಕಾಲದ ರಾಜಕೀಯ ಅನುಭವ, ರಾಜ್ಯ ಮತ್ತು ರಾಷ್ಟ್ರಕಾಣದ ಬಗ್ಗೆ ತಿಳಿದಿದ್ದ, ಹಿಂದಿ, ಉರ್ದು, ಇಂಗ್ಲಿಷ್ ಹೀಗೆ ಬಹುಭಾಷೆಗಳಲ್ಲಿ ಪ್ರವೀಣರಾಗಿದ್ದ ಖರ್ಗೆ ಅವರನ್ನು ಸಂಸದೀಯ ನಾಯಕರನ್ನಾಗಿ ಮಾಡಿತು. ಸಂಸತ್ತಿಗೆ ಆಯ್ಕೆಯಾಗಿ ಹೋದ ಖರ್ಗೆ ಅವರು, ತಾನು ಏನೆಂದು ಸಂಸತ್ತಿಗೆ ತೋರಿಸಿದರು. ಪ್ರಧಾನಿ ಮೋದಿ ಅವರನ್ನು ಸಮರ್ಥವಾಗಿ ಎದುರಿಸಲು, ಹೋಮ್‌ ವರ್ಕ್‌ ಮಾಡಿಕೊಂಡು ಹೋಗುತ್ತಿದ್ದರು. ಇವೆಲ್ಲ ಅವರಿಗೆ ರಾಜ್ಯದಿಂದ ರಾಷ್ಟ್ರಮಟ್ಟದ ನಾಯಕರಾಗಿ ಬೆಳೆಯಲು ಸಾಧ್ಯವಾಯಿತು.

ಉದಯ್‌: ರಾಜದಿಂದ ರಾಷ್ಟ್ರಮಟ್ಟದ ನಾಯಕರಾಗಿ ಬೆಳೆದ ಪ್ರಕ್ರಿಯೆಯೇ ಮುಳುವಾಯಿತೇನೋ ?

ಸುದೇಶ್:ರಾಹುಲ್ ಸಮಾವೇಶದಲ್ಲಿ ‘ನನ್ನನ್ನು ಸೋಲಿಸಲು ಗಲ್ಲಿಯಿಂದ ದಿಲ್ಲಿ ಲೀಡರ್‌ ತನಕ ಜತೆಯಾಗಿದ್ದಾರೆ’ಎಂದು ಹೇಳಿದ್ದರು. ಮೋದಿ ಅವರು, ಸಂಸತ್ತಿನಲ್ಲಿ ನಡೆದ ಮಾತಿನ ಚಕಮಕಿಯಲ್ಲಿ ‘ನೀವು ಮುಂದಿನ ಸಂಸತ್ತಿನಲ್ಲಿರಲ್ಲ’ ಎಂದು ಹೇಳಿದ್ದರು. ಅದೇ ರೀತಿ ಮೋದಿ–ಷಾ ಇಬ್ಬರು ಸೇರಿ, ಮಲ್ಲಿಕಾರ್ಜುನ ಖರ್ಗೆಯವರನ್ನು ಟಾರ್ಗೆಟ್ ಮಾಡಿ, ಈ ಚುನಾವಣೆಯಲ್ಲಿ ಸೋಲಿಸಿದ್ದಾರೆ ಎನ್ನಿಸುತ್ತದೆ.

ಉದಯ್: ಮೋದಿ ಮತ್ತು ಅಮಿತ್ ಷಾಗೆ ಖರ್ಗೆ ಅವರನ್ನು ಸೋಲಿಸಲೇಬೇಕೆಂಬ ಜಿದ್ದು ಏಕೆ?

ಸುದೇಶ್: ಸಂಸತ್ತಿನಲ್ಲಿ ನಮ್ಮನ್ನು ಸಮರ್ಥವಾಗಿ ಎದುರಿಸುವವರು ಇರಬಾರದು ಎಂಬ ಅಭಿಪ್ರಾಯದಿಂದ, ಖರ್ಗೆ ಅವರ ಸೋಲನ್ನು ಬಯಸಿರಬಹುದು. ಏಕೆಂದರೆ, ಖರ್ಗೆ ಅವರಿಗೆ ಅಂಥ ಚಾಕಚಕ್ಯತೆ, ತಿಳಿವಳಿಕೆ ಇತ್ತು. ಜತೆಗೆ, ಸ್ಥಳೀಯ ಕಲ್ಬುರ್ಗಿಯಲ್ಲಿನ ರಾಜಕಾರಣ ಕೂಡ ಬದಲಾಗಿತ್ತು. ಸತತವಾಗಿ ಗೆದ್ದಿರುವ ಖರ್ಗೆಯವರನ್ನು ಸೋಲಿಸಬೇಕೆಂಬ ಸ್ಥಳೀಯ ರಾಜಕಾರಣವೂ ಅವರ ಸೋಲಿಗೆ ಕಾರಣ ಇರಬಹುದು.

ಉದಯ್: ಹಿಂದೆ ಸಂಸತ್ತಿನಲ್ಲಿ ಹೇಗಿತ್ತೆಂದರೆ, ಔದಾರ್ಯದ ರಾಜಕಾರಣವಿತ್ತು. ನೆಹರು ಅಂಥವರು, ‘ವಾಜಪೇಯಿಯಂಥ ನಾಯಕರು ಆರಿಸಿ ಬಂದು, ಸಂಸತ್ತಿಗೆ ಬರಬೇಕು. ಇಂಥವರು ಇದ್ದಾಗ ಪ್ರಜಾಪ್ರಭುತ್ವದ ಹಿರಿಮೆ ಹೆಚ್ಚುತ್ತದೆ’. ಇದೆಲ್ಲ ಮರೆಯಾಯಿತು ಎನ್ನಿಸುತ್ತದೆಯೋ.

ಸುದೇಶ್: ‘ಎಲ್ಲಿ ಶಕ್ತಿ ಹೆಚ್ಚಾಗುತ್ತದೋ, ಅಲ್ಲಿ ಸರ್ವಾಧಿಕಾರಿ ಧೋರಣೆ ಬೆಳೆಯಬಹುದು. ಅಲ್ಲಿನ ಜನರು ಹಿಟ್ಲರ್ ತರಹದ ಭಾವನೆಗಳಿವೆ ಎಂದು ಮಾತನಾಡಿಕೊಳ್ಳುತ್ತಾರೆ. ಬಹುಶಃ ಸಮರ್ಥವಾದ, ಗಟ್ಟಿ ಧ್ವನಿಯನ್ನು ಉಡುಗಿಸಿದರೆ, ನಾವು ಸ್ಥಳೀಯವಾಗಿ ಬೆಳೆಯಬಹುದು ಎಂಬ ರಾಜಕಾರಣ ಕೂಡ ಖರ್ಗೆಗೆ ಮುಳುವಾಗಿರಬಹುದು. ಆದರ,ಎ ನೀವು ಹೇಳುತ್ತಿರುವುದು ಹಿಂದಿನ ರಾಜಕಾರಣ.

ಉದಯ್: ಮಲ್ಲಿಕಾರ್ಜುನ ಖರ್ಗೆ ಅವರು ಹೈ–ಕ ಭಾಗಕ್ಕೆ ವಿಶೇಷ ಸ್ಥಾನ ತಂದುಕೊಡಲು ಪ್ರಯತ್ನಿಸಿದವರಲ್ಲಿ ಒಬ್ಬರು. ಸೆಂಟ್ರಲ್ ಯೂನಿರ್ವರ್ಸಿಟಿ, ಇಎಸ್ಐ ಆಸ್ಪತ್ರೆ ತರುವಂತಹ ಕಾರ್ಯಗಳಲ್ಲೂ ಅವರ ಪಾತ್ರವಿದೆ ಎಂದು ನೀವೇ ಆರಂಭದಲ್ಲಿ ಹೇಳಿದ್ದಿರಿ. ಆದರೆ, ಈ ಅಭಿವೃದ್ಧಿ ಕಾರ್ಯಗಳು ಯಾಕೆ ಅವರ ಕೈ ಹಿಡಿಯಲಿಲ್ಲ?

ಸುದೇಶ್: ಕಲ್ಬುರ್ಗಿ ಜಿಲ್ಲೆಯಲ್ಲಿ ಖರ್ಗೆ ಅವರು ಕೈಗೊಂಡ ಅಭಿವೃದ್ಧಿ ಪರ ಕೆಲಸಗಳ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ನಾನು ಇತ್ತೀಚೆಗೆ ಅವರನ್ನು ಸಂದರ್ಶನ ಮಾಡುವಾಗ ಹೇಳುತ್ತಿದ್ದರು. ‘ನಾನು ನನ್ನ ಕೆಲಸಕ್ಕೆ ಕೂಲಿ ಕೇಳುತ್ತಿದ್ದೇನೆ. ನಾನು ಕೆಲಸ ಮಾಡಿದ್ದೇನೆ. ಕೂಲಿ ಕೊಡಿ’ ಎಂದು.

ನನಗಂತೂ ಇತ್ತೀಚೆಗೆ ಅಭಿವೃದ್ಧಿ ಹಾಗೂ ಮಾಡಿದ ಕೆಲಸಗಳು ಚುನಾವಣೆಯ ಗೆಲುವಿಗೆ ನೆರವಾಗುತ್ತವೆ, ಅವು ಮಾತನಾಡುತ್ತವೆ ಎಂದು ನನಗನ್ನಿಸುತ್ತಿಲ್ಲ. ಎಲ್ಲ ಚುನಾವಣೆಯಲ್ಲೂ ಸ್ಥಳೀಯ ರಾಜಕಾರಣವೇ ಮುಖ್ಯವಾಗುತ್ತವೆ ಎನ್ನಿಸುತ್ತದೆ. ಅಭಿವೃದ್ಧಿ ಕೆಲಸಕ್ಕಾಗಿ ಗೆಲ್ಲುವುದಾಗಿದ್ದರೆ, ಖರ್ಗೆ ಗೆಲ್ಲಬೇಕಿತ್ತು. ಈಗ ಉಮೇಶ್ ಜಾಧವ್ ಹೇಳಿಕೊಳ್ಳಲು ಅಂಥ ರಾಜಕೀಯದ ಹಿನ್ನೆಲೆ ಏನೂ ಇಲ್ಲ. ಈಗಷ್ಟೇ ಐದು ವರ್ಷದಿಂದ ರಾಜಕಾರಣ ಮಾಡುತ್ತಿದ್ದಾರೆ. ಅಂಥವರು ಗೆದ್ದಿದ್ದಾರೆ ಎಂದರೆ, ಅದು ಸ್ಥಳೀಯ ರಾಜಕೀಯವೇ ಕಾರಣ.

ಉದಯ್‌: ಉಮೇಶ್ ಜಾಧವ್ ಅವರು ಅಷ್ಟು ಚಿರಪರಿಚಿತರಲ್ಲ. ರಾಜಕೀಯ ಹಿನ್ನೆಲೆ ಇರುವುದೇ ಐದು ವರ್ಷ. ಹಿಂದೆ ಚಿಂಚೋಳಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದೂ ಕಾಂಗ್ರೆಸ್‌ನಿಂದಲೇ. ಅಲ್ಲಿಂದ ಗೆದ್ದು ಬಂದ ಆಪರೇಷನ್ ಕಮಲಕ್ಕೊಳಗಾಗಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು, ಬಿಜೆಪಿ ಸೇರಿದರು. ಈ ಕೊನೆ ಕ್ಷಣದ ತಂತ್ರಗಾರಿಕೆ ಹೇಗೆ ಫಲಕೊಟ್ಟಿದೆ ?

ಸುದೇಶ್: ಇದು ಆರು ತಿಂಗಳಿನಿಂದ ನಡೆದಂತಹ ತಂತ್ರಗಾರಿಕೆ. ಆಗಿನಿಂದಲೇ ಖರ್ಗೆ ಅವರನ್ನು ಸೋಲಿಸಬೇಕೆಂಬ ತಂತ್ರಗಾರಿಕೆ ನಡೆಯುತ್ತಿತ್ತು. 2018ರ ವಿಧಾನಸಭಾ ಚುನಾವಣೆಯಲ್ಲಿ ಕೆಲವು ಬದಲಾವಣೆಗಳಾದವು. ಕಾಂಗ್ರೆಸ್‌ನಲ್ಲಿದ್ದ ಮಾಲಿಕಯ್ಯ ಗುತ್ತೇದಾರ್ ಬಿಜೆಪಿ ಸೇರಿದರು. ಚಿಂಚನಸೂರಸೋತ ಮೇಲೆ ಬಿಜೆಪಿ ಸೇರಿದರು. ಮಾಲಕರೆಡ್ಡಿ ಕೂಡ ಸೋತಮೇಲೆ ಬಿಜೆಪಿ ಸೇರಿದರು. ಮೊದಲು ಹೇಗಿತ್ತೆಂದರೆ, ಖರ್ಗೆ ಅವರು 2009ರಲ್ಲಿ ಎಂಪಿ ಎಲೆಕ್ಷನ್‌ಗೆ ನಿಂತಾಗ ಕೇವಲ 13 ಸಾವಿರ ಮತಗಳ ಅಂತರದಿಂದ ಗೆದ್ದಿದ್ದರು. ಆಗ ರೇವುನಾಯಕ ಬೆಳಮಗಿ ಸಚಿವರಾಗಿದ್ದರು. ‘ಅವರು ನಾನು ಗೆದ್ದರೆ ಸಚಿವ ಸ್ಥಾನ ಹೋಗುತ್ತದೆ’ ಎಂಬ ಕಾರಣಕ್ಕೆ ಸರಿಯಾಗಿ ಮಾಡಲಿಲ್ಲ. 2014ರಲ್ಲಿ ಖರ್ಗೆ ಅವರು ಚುನಾವಣೆಗೆ ನಿಂತು ಗೆದ್ದಾಗ, ರೇವುನಾಯಕ ಬೆಳಮಗಿ ಕ್ಯಾಂಡಿಡೇಟ್ ಆಗಿದ್ದರು. ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡರು ಎಂಬ ಆರೋಪವೂ ಇದೆ.

ಉದಯ್‌: ಖರ್ಗೆ – ಧರ್ಮಸಿಂಗ್ ಹೊಂದಾಣಿಕೆ ರಾಜಕಾರಣ ಮಾಡಿಕೊಂಡಿದ್ದರು ಎಂಬ ಆರೋಪ ಇದೆ. ಇದು ಎಷ್ಟರಮಟ್ಟಿಗೆ ಸತ್ಯ?

ಸುದೇಶ್: ನಾನು ಚುನಾವಣೆ ಸಮೀಕ್ಷೆಗಾಗಿ ಓಡಾಡುವಾಗ, ಈ ಆರೋಪಗಳನ್ನು ಕೇಳಿದ್ದೇನೆ. ಆದರೆ, ಖರ್ಗೆಯವರ ಮೇಲೆ ಅಂಥ ಆರೋಪಗಳು ಕೇಳಿಬಂದಿರಲಿಲ್ಲ. ಆದರೆ, ಈ ಬಾರಿಯ ಚುನಾವಣೆ ವೇಳೆ ಮೊದಲ ಬಾರಿಗೆ ಗಟ್ಟಿಯಾದ ಪ್ರತಿರೋಧ, ಆರೋಪಗಳು ವ್ಯಕ್ತವಾದವು. ಖರ್ಗೆ ಅವರ ಮೇಲೆ ₹50 ಸಾವಿರ ಕೋಟಿ ಆಸ್ತಿ ಇದೆ ಎಂದು ಆರೋಪ ಕೇಳಿಬಂತು. ಅವರನ್ನು ಲಿಂಗಾಯತ ವಿರೋಧಿ ಎಂದು ಪದೇ ಪದೇ ಹೇಳುತ್ತಿದ್ದರು. ಅದೆಲ್ಲ ಜನರ ಮನಸಲ್ಲಿ ಉಳಿಯಿತು.‌

ಇನ್ನೊಂದು ವಿಷಯ ಏನೆಂದರೆ; ಖರ್ಗೆಯವರದ್ದು 50 ವರ್ಷ ರಾಜಕೀಯದ ಅನುಭಯ. ಆದರೆ, ಇವತ್ತಿನ ಯುವಕರಿಗೆ ಖರ್ಗೆಯವರು ಏನು ಅಂತ ಗೊತ್ತಿಲ್ಲ. ಇದೂ ಕೂಡ ಅವರ ಹಿನ್ನೆಡೆಗೆ ಕಾರಣವಾಗಿರಬಹುದು.

ಉದಯ್‌: ಬಹುಶಃ ಖರ್ಗೆ ಅವರ ಈ ಕಾಲದ ಯುವಕರಿಗೆ ಕನೆಕ್ಟ್ ಆಗದಿದ್ದೇ ಸೋಲಿಗೆ ಕಾರಣ ಎಂದು ವಿಶ್ಲೇಷಿಸಬಹುದೇ?

ಸುದೇಶ್: ನಾನು ಹಿಂದಿನ ಮತ್ತು ಈಗಿನ ಚುನಾವಣೆಯನ್ನು ಗಮನಿಸಿದ್ದೇನೆ. ಆ ಪ್ರಕಾರ, ಬಿಜೆಪಿಯ ಪ್ರತಿ ಕಾರ್ಯಕರ್ತನೂ ಚುನಾವಣೆಯಲ್ಲಿ ನಾನೇ ಅಭ್ಯರ್ಥಿ ಎನ್ನವಂತೆ, ವಾಲಂಟಿಯರ್ ಆಗಿ ಕೆಲಸ ಮಾಡುತ್ತಿದ್ದರು. ಬಿಜೆಪಿಯವರು ಈ ಬಾರಿ ಚುನಾವಣೆಯಲ್ಲಿ ಕಲ್ಬುರ್ಗಿ ಕ್ಷೇತ್ರಕ್ಕೆ ಎಂಎಲ್‌ಸಿ ರವಿಕುಮಾರ್ ಅವರನ್ನು ಉಸ್ತುವಾರಿಯಾಗಿ ನೇಮಿಸಿದ್ದರು. ಅವರು, ಕಾರ್ಯಕರ್ತರಿಗೆ ಪ್ರತಿ ದಿನ ಅಸೈನ್‌ಮೆಂಟ್ ಹಾಕುತ್ತಿದ್ದರು. ಆ ಕೆಲಸ ಮಾಡಿ, ಅದನ್ನು ಮಾಡಿದ್ದೇನೆ ಎಂದು ವಾಟ್ಸ್ ಅಪ್ ನಲ್ಲಿ ಹಾಕಿ ಹೇಳಬೇಕಿತ್ತು. ಇಂಥ ಕಟ್ಟು ನಿಟ್ಟಿನ ಕೆಲಸದ ಜತೆಗೆ ಈ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ನಡೆದ ಜಾತಿ ಧೃವೀಕರಣವೂ ಸೇರಿಕೊಂಡಿತು. ನಾನು ಚುನಾವಣಾ ಸುತ್ತಾಟದಲ್ಲಿ ಕಂಡಿದ್ದೇನೆಂದರೆ, ಆ ಭಾಗದ ಲಂಬಾಣಿ ಸಮುದಾಯದ ಶೇ 90ರಷ್ಟು ಮಂದಿ ಬಿಜೆಪಿಯ ಜಾಧವ್ ಅವರಿಗೆ ಓಟ್ ಮಾಡಿದ್ದಾರೆ ಎನ್ನಿಸುತ್ತದೆ.

ಉದಯ್‌: ಈ ಬಾರಿ ಜಾತಿ ರಾಜಕಾರಣ ಪ್ರಮುಖ ಪಾತ್ರವಹಿಸಿದೆ ಎನ್ನಿಸುತ್ತದಾ?

ಸುದೇಶ್: ಈ ಬಾರಿ ಜಾತಿ ರಾಜಕಾರಣ ಹೇಗೆ ಕೆಲಸ ಮಾಡಿದೆ ಎನ್ನುವುದಕ್ಕೆ ಒಂದು ಉದಾಹರಣೆ ಹೇಳ್ತೀನಿ. ಖರ್ಗೆ ಅವರು ಯಾವತ್ತೂ ಜಾತಿ ಸಮಾವೇಶ ಮಾಡಿದವರಲ್ಲ. ಈ ಬಾರಿ ಜಾತಿ ಸಮಾವೇಶ ಮಾಡಿದರು. ಪ್ರತಿ ದಿನದ ಶೆಡ್ಯೂಲ್ ನಲ್ಲಿ ಒಂದು ಜಾತಿ ಸಭೆ ಇರುತ್ತಿತ್ತು. ಅವರಿಗೆ ಜಾತಿಯ ಭಯ ಎಷ್ಟಿತ್ತೆಂದರೆ, ವೀರಶೈವ – ಲಿಂಗಾಯತ ಸಭೆ ಮಾಡಿದ್ದರು. ಕಬ್ಬಲಿಗರ ಜಾತಿ ಸಮಾವೇಶ ಮಾಡಿದ್ದರು. ಗಾಣಿಗ ಸಮುದಾಯದ್ದೂ ಮಾಡಿದರು.

ಉದಯ: ಹಾಗಾದರೆ ಅವರಿಗೆ ಜಾತಿ ರಾಜಕಾರಣ ಹೊಡೆತ ಕೊಡುವ ಸೂಚನೆ ಇತ್ತು. ತನ್ನ ಕಾಲ ಕೆಳಗಿನ ನೆಲ ಬಿರುಕು ಬಿಡುತ್ತದೆ ಎಂಬ ಭಯ ಕಾಡಿತ್ತಾ ಅವರಿಗೆ?

ಸುದೇಶ್: ಖಂಡಿತಾ ಕಾಡಿತ್ತು ಎನ್ನಿಸುತ್ತದೆ. ಅವರು ಈ ಬಾರಿಯ ಚುನಾವಣೆಯಲ್ಲಿ ಯಾವ ರೀತಿ ಪ್ರಚಾರ ಮಾಡಿದ್ದರು ಎಂದರೆ, ಪಕ್ಕದ ರಾಯಚೂರಿನಲ್ಲಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಮಾವೇಶದಲ್ಲಿ ಭಾಷಣ ಮಾಡಲು ಬಂದಿದ್ದರೆ, ಆ ಕಾರ್ಯಕ್ರಮಕ್ಕೆ ಖರ್ಗೆ ಹೋಗಲು ಸಾಧ್ಯವಾಗಲಿಲ್ಲ. ಅಷ್ಟು ಬಿಸಿ ಶೆಡ್ಯೂಲ್‌ನಲ್ಲಿ ಪ್ರಚಾರ ಮಾಡಿದರು.‌

ಇವತ್ತಿನ ಸೋಲಿಗೆ ಇನ್ನೊಂದು ಮಹತ್ವದ ಕಾರಣವೆಂದರೆ; ಅವರು 1972ರಿಂದ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದು ಗುರುಮಟ್ಕಲ್ ಕ್ಷೇತ್ರದಿಂದ. ಅದೇ ಕ್ಷೇತ್ರದಲ್ಲಿ 9 ಬಾರಿ ಆಯ್ಕೆಯಾದರು. ಸಂಸತ್ತಿಗೆ ಹೋದರು. ಅದೆಲ್ಲ ಹಳೆ ವಿಷಯ. ನಂತರ ಕ್ಷೇತ್ರ ಪುನರ್ವಿಂಗಡಣೆಯಾಯಿತು. ಚಿತ್ತಾಪುರ ಕ್ಷೇತ್ರದಲ್ಲಿ ಚುನಾವಣೆಗೆ ನಿಂತು ಗೆದ್ದರು. ನಂತರ ರಾಜೀನಾಮೆ ನೀಡಿ, ಎಂಪಿ ಆದರು. ಅಲ್ಲೀಗ ಚಿತ್ತಾಪುರ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿ ನಾಗನಗೌಡ ಕಂದಕೂರು ಶಾಸಕರಾಗಿದ್ದಾರೆ. ಈ ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿರುವ ನಾಗನೌಡ ಕಂದಕೂರು, ಯಾವುದೋ ಪುರಾತನ ವೈಮನಸ್ಸಿನಿಂದ ಖರ್ಗೆ ಅವರನ್ನು ಈ ಬಾರಿ ಬೆಂಬಲಿಸಲಿಲ್ಲ.

ಉದಯ್‌: ಅದೇನದು, ಹಳೇ ವೈಮನಸ್ಸು?

ಸುದೇಶ್: ಇನ್ನೇನಿಲ್ಲ. ಅದು ಮೇಲ್ವರ್ಗ (ಅಪ್ಪರ್ ಕಾಸ್ಟ್) ಮತ್ತು ಅನ್‌ಟಚಬಲ್‌ ನಡುವಿನ ದ್ವೇಷ ಅಷ್ಟೇ. ಅವರು ನಾಗನಗೌಡರ ಮೇಲೆ ಅಟ್ರಾಸಿಟಿ ಕೇಸ್ ಹಾಕಿ, ಊರು ಬಿಡುವ ಹಾಗೆ ಮಾಡಿದ್ದರು. ಊಟ ಮಾಡುತ್ತಿದ್ದಾಗ ಪೊಲೀಸರು ಬಂದು ಎಳೆದುಕೊಂಡು ಹೋಗಿದ್ದರು. ಹೀಗಾಗಿ ಅವರನ್ನು ಈ ಚುನಾವಣೆಯಲ್ಲಿ ಬೆಂಬಲಿಸಲಿಲ್ಲ. ಒಂದೊಮ್ಮೆ ಆ ಗುರುಮಟ್ಕಲ್ ಕ್ಷೇತ್ರ ಖರ್ಗೆ ಕೈ ಹಿಡಿದಿದ್ದರೆ, ಈ ಬಾರಿಯ ಚುನಾವಣೆಯಲ್ಲಿ ಅವರು ಸೋಲುವುದು ಕಷ್ಟವಾಗುತ್ತಿತ್ತು. ಆದರೆ, ಇವರಿಬ್ಬರ ನಡುವಿನ ಪುರಾತನ ವೈಮನಸ್ಸು ಸೋಲಿಗೆ ಕಾರಣವಾಯಿತು.

ಉದಯ್: ಖರ್ಗೆ ಅವರದ್ದು ಪುತ್ರ ವ್ಯಾಮೋಹ ಎಂದ ಉಮೇಶ್ ಜಾಧವ್ ಆರೋಪ ಮಾಡುತ್ತಿದ್ದರು? ಪ್ರಿಯಾಂಕ ಖರ್ಗೆ ಅವರಿಗೆ ಸಚಿವ ಸ್ಥಾನ ಕೊಡಿಸಲು ನಮ್ಮ ಭವಿಷ್ಯವನ್ನು ಬಲಿಕೊಟ್ಟರು ಎಂದು ದೂರಿದ್ದರು. ಹಾಗಾದರೆ ಖರ್ಗೆ ಅವರು ಆಲದಮರದ ತರಹ ಬೆಳೆದು, ತನ್ನ ನೆರಳಲ್ಲಿ ಯಾರನ್ನೂ ಬೆಳೆಯಲು ಅವಕಾಶ ಕೊಡುತ್ತಿರಲಿಲ್ಲವೇ ?

ಇದು ಬಹಳ ಮುಖ್ಯವಾದ ಅಂಶ. ನಾನು ಅವರನ್ನು ಆಲದಮರ ಎಂದೇ ಭಾವಿಸಿದ್ದೆ. 2018ರ ಚುನಾವಣೆಯಲ್ಲಿ ಪ್ರಿಯಾಂಕ್ ಖರ್ಗೆ ಸೋಲಿಸಲು ಅನೇಕರು ಪಣತೊಟ್ಟಿದ್ದರು. ಈ ಕಾರಣಕ್ಕಾಗಿಯೇ ಹಿಂದಿನ ಚುನಾವಣೆಯಲ್ಲಿ 32 ಸಾವಿರ ಅಂತರದಲ್ಲಿ ಗೆದ್ದಿದ್ದ ಪ್ರಿಯಾಂಕ್‌ ಖರ್ಗೆ, ಅಷ್ಟೆಲ್ಲ ಅಭಿವೃದ್ಧಿ ಕಾರ್ಯಗಳನ್ನು ಮಾಡಿ, ನಂತರದ ಚುನಾವಣೆಯಲ್ಲಿ ಕೇವಲ 4 ಸಾವಿರ ಮತಗಳಿಂದ ಗೆದ್ದಿದ್ದು.

ಉದಯ್: ಹಾಗಾದರೆ, ತಂದೆಯ ಸೋಲಿನಲ್ಲಿ, ಮಗನ ಮೋಹವೂ ಕೆಲಸ ಮಾಡಿತೆ? ಪ್ರಿಯಾಂಕ್ ನಡೆ ಆಕ್ರಮಣಕಾರಿಯಾಗಿತ್ತೆ? ಏಕೆಂದರೆ ಮಲ್ಲಿಕಾರ್ಜುನ ಖರ್ಗೆ ಸಂಯಮದ ನಡೆಯುಳ್ಳವರು. ವೈಯಕ್ತಿಕ ಟೀಕೆ ತಂಟೆಗೆ ಹೋಗುತ್ತಿರಲಿಲ್ಲ. ಪ್ರಿಯಾಂಕ್ ಏನಾದರೂ ಅಟ್ಯಾಕ್ ಮಾಡುವ ಸ್ವಭಾವವೇ?

ಸುದೇಶ್: ಅಲ್ಲಿ ದೊಡ್ಡ ಖರ್ಗೆ, ಚಿಕ್ಕ ಖರ್ಗೆ ಎಂದೇ ಇಬ್ಬರನ್ನು ಜನ ಕರೆಯುತ್ತಿದ್ದರು. ದೊಡ್ಡ ಖರ್ಗೆಗೆ ಇದ್ದ ಪ್ರಬುದ್ಧತೆ, ಚಿಕ್ಕ ಖರ್ಗೆಗೆ ಇರಲಿಲ್ಲ. ಇದು ಬಹಳ ಮುಖ್ಯವಾಗಿರುವಂಥದ್ದು.

ಉದಯ್: ಕರ್ನಾಟಕದ ಮಟ್ಟಿಗೆ ಬಹುದೊಡ್ಡ ರಾಜಕಾರಣಿ ಎಂದು ಪರಿಗಣಿಸಿದ ಸಂಸದೀಯ ಪಕ್ಷದ ನಾಯಕನಾಗಿ ಖರ್ಗೆ ಅವರಿಗೆ ಅನಿರೀಕ್ಷಿತವಾಗಿ ಸೋಲಾಗಿದೆ. ಈ ಸೋಲಿಗೆ ಕಾರಣಗಳನ್ನು ಸುದೇಶ್ ಕಟ್ಟಿಕೊಟ್ಟಿದ್ದಾರೆ. ಸುದೇಶ್ ನಿಮಗೆ ಧನ್ಯವಾದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT