ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

WFI Election: ಬ್ರಿಜ್‌ಭೂಷಣ್ ಆಪ್ತ ಅಧ್ಯಕ್ಷರಾಗದಂತೆ ಬಜರಂಗ್, ವಿನೇಶಾ ಪ್ರಯತ್ನ

Published 11 ಆಗಸ್ಟ್ 2023, 4:55 IST
Last Updated 11 ಆಗಸ್ಟ್ 2023, 4:55 IST
ಅಕ್ಷರ ಗಾತ್ರ

ನವದೆಹಲಿ: ಬ್ರಿಜ್‌ಭೂಷಣ್‌ ಶರಣ್‌ ಸಿಂಗ್‌ ಅವರ ಆಪ್ತ ಸಂಜಯ್‌ ಸಿಂಗ್‌ ಅವರು ಭಾರತೀಯ ಕುಸ್ತಿ ಫೆಡರೇಷನ್‌ನ (ಡಬ್ಲ್ಯುಎಫ್‌ಐ) ಅಧ್ಯಕ್ಷರಾಗದಂತೆ ಮಾಡಲು ಕುಸ್ತಿಪಟುಗಳಾದ ಬಜರಂಗ್‌ ಪೂನಿಯಾ, ವಿನೇಶಾ ಫೋಗಟ್ ಹಾಗೂ ಸಾಕ್ಷಿ ಮಲಿಕ್‌ ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಬ್ಲ್ಯುಎಫ್‌ಐ ಅಧ್ಯಕ್ಷ ಸ್ಥಾನಕ್ಕೆ ಶನಿವಾರ (ಆಗಸ್ಟ್‌ 12ರಂದು) ಚುನಾವಣೆ ನಡೆಯಲಿದ್ದು, ಸಂಜಯ್‌ ಸಿಂಗ್‌ ಮತ್ತು 2010ರ ಕಾಮನ್‌ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತೆ ಅನಿತಾ ಶೊರಾಣ್ ನಡುವೆ ನೇರ ಪೈಪೋಟಿ ಇದೆ.

ಬ್ರಿಜ್‌ಭೂಷಣ್‌ ಸಿಂಗ್‌ ಅವರು ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ಎರಡು ತಿಂಗಳು ಪ್ರತಿಭಟನೆ ನಡೆಸಿದ್ದ ಆರು ಮಂದಿ ಕುಸ್ತಿಪಟುಗಳು, ಅನಿತಾಗೆ ಬೆಂಬಲ ಸೂಚಿಸಿದ್ದಾರೆ.

ಅನಿತಾ ಅವರು ಬ್ರಿಜ್‌ಭೂಷಣ್‌ ವಿರುದ್ಧದ ಪ್ರಕರಣದ ಸಾಕ್ಷಿಗಳಲ್ಲಿ ಒಬ್ಬರಾಗಿದ್ದಾರೆ.

ಕುಸ್ತಿಪಟುಗಳು ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ಅವರನ್ನು ಗುರುವಾರ ಬೆಳಿಗ್ಗೆ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಗೃಹ ಸಚಿವ ಅಮಿತ್‌ ಶಾ ಅವರನ್ನೂ ಭೇಟಿ ಮಾಡುವ ವಿಶ್ವಾಸದಲ್ಲಿದ್ದಾರೆ ಎಂದು ಬಜರಂಗ್‌, ವಿನೇಶಾ ಮತ್ತು ಸಾಕ್ಷಿ ಅವರ ನಿಕಟವರ್ತಿಯೊಬ್ಬರು ಪಿಟಿಐಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಡಬ್ಲ್ಯುಎಫ್‌ಐ: ಸಂಜಯ್–ಅನಿತಾ ಪೈಪೋಟಿ

'ಅಮಿತ್‌ ಶಾ ಅವರು ಕುಸ್ತಿಪಟುಗಳಿಗೆ ಇಂದು ಸಮಯ ನೀಡುವ ವಿಶ್ವಾಸವಿದೆ. ಸಂಸತ್‌ ಅಧಿವೇಶನದ ಬಳಿಕ ಗೃಹ ಸಚಿವರು ಕುಸ್ತಿಪಟುಗಳನ್ನು ಭೇಟಿ ಮಾಡಲಿದ್ದಾರೆ. ಬ್ರಿಜ್‌ಭೂಷಣ್‌ ಬಣದ ಸಂಜಯ್‌ ಸಿಂಗ್‌ ಡಬ್ಲ್ಯುಎಫ್‌ಐ ಅಧ್ಯಕ್ಷರಾಗುವ ಬಗ್ಗೆ ಕುಸ್ತಿಪಟುಗಳು ತಮ್ಮ ಕಳವಳವನ್ನು ಮನವರಿಕೆ ಮಾಡಿಕೊಡಲಿದ್ದಾರೆ. ಬ್ರಿಜ್‌ಭೂಷಣ್‌ ಸಂಬಂಧಿಕರು, ಆಪ್ತರು ಡಬ್ಲ್ಯುಎಫ್‌ಐ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂಬ ಬೇಡಿಕೆ ಇಡಲಿದ್ದಾರೆ' ಎಂದು ತಿಳಿಸಿದ್ದಾರೆ.

'ಸಂಜಯ್‌ ಸಿಂಗ್‌ ಅವರು ಬಿಜೆಪಿ ನಾಯಕ ಬ್ರಿಜ್‌ಭೂಷಣ್‌ಗೆ ಆಪ್ತರಷ್ಟೇ ಅಲ್ಲ ಉದ್ಯಮದಲ್ಲಿ ಪಾಲುದಾರರೂ ಹೌದು. ಇದರಿಂದ ಸಂಜಯ್‌ ಅಧ್ಯಕ್ಷರಾದರೆ ಬಿಜ್‌ಭೂಷಣ್‌ ವಿರುದ್ಧ ಪ್ರತಿಭಟನೆ ನಡೆಸಿದ್ದ ಕುಸ್ತಿಪಟುಗಳಿಗೆ ಹಿನ್ನಡೆಯಾಗಲಿದೆ. ಹೀಗಾದಲ್ಲಿ ಸಂಜಯ್‌ ಸಿಂಗ್‌ ಚುನಾವಣೆಗೆ ಸ್ಪರ್ಧಿಸುವುದು ಬ್ರಿಜ್‌ ಭೂಷಣ್‌ ಅವರ ಪುತ್ರನೇ ಚುನಾವಣೆಗೆ ಸ್ಪರ್ಧಿಸುವುದಕ್ಕೆ ಸಮ‘ ಎಂದು ಹೆಸರು ಹೇಳಲಿಚ್ಛಿಸದ ವ್ಯಕ್ತಿ ಅಭಿಪ್ರಾಯಪಟ್ಟಿದ್ದಾರೆ.

ಡಬ್ಲ್ಯುಎಫ್‌ಐ ಆಡಳಿತ ಮಂಡಳಿಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ನಾಯಕ ಬ್ರಿಜ್‌ಭೂಷಣ್‌ ಅವರ ಯಾವೊಬ್ಬ ಸಂಬಂಧಿಯೂ ಸ್ಪರ್ಧಿಸುವುದಿಲ್ಲ ಎಂದು ಕ್ರೀಡಾ ಸಚಿವರು ಕುಸ್ತಿಪಟುಗಳಿಗೆ ಈಗಾಗಲೇ ಭರವಸೆ ನೀಡಿದ್ದಾರೆ. ಅದರಂತೆ ಬ್ರಿಜ್‌ಭೂಷಣ್‌, ಅವರ ಮಗ ಕರಣ್ ಮತ್ತು ಅಳಿಯ ವಿಶಾಲ್ ಸಿಂಗ್ ಅವರು ಕಣಕ್ಕಿಳಿದಿಲ್ಲ. ವಿಶಾಲ್ ಸಿಂಗ್ ಬಿಹಾರ ಕುಸ್ತಿ ಸಂಸ್ಥೆಯ ಮುಖ್ಯಸ್ಥರಾಗಿದ್ದಾರೆ.

'ಒಡಿಶಾ ಕುಸ್ತಿ ಸಂಸ್ಥೆಯ ಪ್ರತಿನಿಧಿಯಾಗಿ ಕಣದಲ್ಲಿದಲ್ಲಿರುವ ಹಾಗೂ ಹರಿಯಾಣ ಪೊಲೀಸ್‌ ಅಧಿಕಾರಿಯಾಗಿರುವ ಅನಿತಾ ಶೊರಾಣ್ ಡಬ್ಲ್ಯುಎಫ್‌ಐ ಅಧ್ಯಕ್ಷರಾಗಬೇಕು ಎಂದು ಬಯಸಿರುವ ಕುಸ್ತಿಪಟುಗಳು, ಗೃಹ ಸಚಿವರ ಭೇಟಿಗೆ ಅವಕಾಶ ಸಿಕ್ಕರೆ ಈ (ಮೇಲಿನ) ಎಲ್ಲ ಮಾಹಿತಿಯನ್ನು ವಿವರಿಸಲಿದ್ದಾರೆ' ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT