ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹತ್ಯೆಗೂ ಮುನ್ನ ಮಗನಿಗೆ ಕೆಮ್ಮಿನ ಸಿರಪ್ ನೀಡಿದ್ದ ಸುಚನಾ ಸೇಠ್: ಪೊಲೀಸರ ಮಾಹಿತಿ

Published 10 ಜನವರಿ 2024, 9:32 IST
Last Updated 10 ಜನವರಿ 2024, 9:32 IST
ಅಕ್ಷರ ಗಾತ್ರ

ಪಣಜಿ: ‘ಮೈಂಡ್‌ಫುಲ್‌ ಎ.ಐ ಲ್ಯಾಬ್‌’ ಹೆಸರಿನ ನವೋದ್ಯಮ ಕಂಪನಿಯ ಮಹಿಳಾ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸುಚನಾ ಸೇಠ್‌ (39) ಅವರು ಮಗನನ್ನು ಹತ್ಯೆ ಮಾಡುವುದಕ್ಕೂ ಮುನ್ನ ಕೆಮ್ಮಿನ ಸಿರಪ್ ನೀಡಿರುವ ಸಾಧ್ಯತೆ ಇದೆ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ನಾಲ್ಕು ವರ್ಷದ ಮಗ ಚಿನ್ಮಯ್‌ನನ್ನು ಕೊಲೆ ಮಾಡಿ ಮೃತದೇಹವನ್ನು ಸೂಟ್‌ಕೇಸ್‌ಗೆ ತುಂಬಿ ಕಾರಿನಲ್ಲಿ ಗೋವಾದಿಂದ ಬೆಂಗಳೂರಿನತ್ತ ಸಾಗಿಸುತ್ತಿದ್ದ ವೇಳೆ ಐಮಂಗಲ ಠಾಣೆಯ ಪೊಲೀಸರು ಬಂಧಿಸಿದ್ದರು.

ಗೋವಾ ಪೊಲೀಸರ ಸೂಚನೆಯ ಮೇರೆಗೆ ಕಾರಿನ ಚಾಲಕ ಆರೋಪಿಯನ್ನು ಕರ್ನಾಟಕ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಹೆಚ್ಚಿನ ವಿಚಾರಣೆಗೆ ಗೋವಾಕ್ಕೆ ಕರೆದೊಯ್ದಿದ್ದು, ವಿಚಾರಣೆ ನಡೆದುತ್ತಿದ್ದಾರೆ.

ಆರೋಪಿ ಉಳಿದಿದ್ದ ಹೋಟೆಲ್‌ನ ಕೊಠಡಿಯಲ್ಲಿ ಕೆಮ್ಮಿನ ಸಿರಪ್‌ನ ಎರಡು ಖಾಲಿ ಬಾಟಲಿಗಳು ಪತ್ತೆಯಾಗಿವೆ. ಆರೋಪಿಯು ಮಗನಿಗೆ ಹೆಚ್ಚಿನ ಪ್ರಮಾಣದ ಔಷಧಿ ನೀಡಿರಬಹುದು ಎಂದು ಶಂಕಿಸಲಾಗಿದ್ದು, ಇದು ಪೂರ್ವ ಯೋಜಿತ ಕೊಲೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಉಸಿರುಕಟ್ಟಿಸಿ ಕೊಲೆ ಮಾಡಿದ ಶಂಕೆ

ಚಿತ್ರದುರ್ಗ: ಮೃತ ಬಾಲಕನ ಮುಖ ಹಾಗೂ ಎದೆಯಲ್ಲಿ ಊತ ಕಾಣಿಸಿಕೊಂಡಿದ್ದು, ಕುತ್ತಿಗೆ ಭಾಗದಲ್ಲಿ ಉಸಿರುಕಟ್ಟಿಸಿ ಕೊಲೆ ಮಾಡಿದ ಸಾಧ್ಯತೆ ಇದೆ ಎಂದು ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯ ಡಾ.ಕುಮಾರ್‌ ನಾಯ್ಕ ಅವರು ತಿಳಿಸಿದ್ದಾರೆ.

ಹಿರಿಯೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮಂಗಳವಾರ ರಾತ್ರಿ ಮರಣೋತ್ತರ ಪರೀಕ್ಷೆ ಮುಗಿಸಿದ ಬಳಿಕ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

‘ಕುತ್ತಿಗೆ ಭಾಗವನ್ನು ಬಿಗಿಹಿಡಿದು ಉಸಿರುಕಟ್ಟಿಸಲಾಗಿದೆ. ದಿಂಬು ಬಳಸಿ ಕೃತ್ಯ ಎಸಗಿರಬಹುದು. ಕೊಲೆಯಾದ ಬಳಿಕ ಮೂಗು ಹಾಗೂ ಬಾಯಿಯಿಂದ ರಕ್ತ ಹೊರಬಂದಿದೆ. ದೇಹದ ಯಾವುದೇ ಭಾಗದಲ್ಲಿ ಗಾಯದ ಗುರುತುಗಳಿಲ್ಲ. ಬಾಲಕ ಮೃತಪಟ್ಟು 36 ಗಂಟೆಗೂ ಹೆಚ್ಚು ಸಮಯ ಕಳೆದಿದೆ’ ಎಂದು ಹೇಳಿದ್ದಾರೆ.

ಮೃತ ಬಾಲಕನ ತಂದೆ ವೆಂಕಟರಮಣ್‌ ಇಂಡೊನೇಷ್ಯಾದಿಂದ ಮಂಗಳವಾರ ಸಂಜೆ ಹಿರಿಯೂರಿಗೆ ಬಂದರು. ಶವಾಗಾರಕ್ಕೆ ತೆರಳಿ ಪುತ್ರನ ಮೃತದೇಹ ಕಂಡು ಭಾವುಕರಾದರು. ಐಮಂಗಲ ಠಾಣೆ ಹಾಗೂ ಗೋವಾ ಪೊಲೀಸರ ಸಮ್ಮುಖದಲ್ಲಿ ವೈದ್ಯರು ಮರಣೋತ್ತರ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದರು. ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಬಾಲಕನ ಮೃತದೇಹವನ್ನು ವೆಂಕಟರಮಣ್‌ಗೆ ಹಸ್ತಾಂತರಿಸಲಾಗಿತ್ತು.

ಬೆಂಗಳೂರಿನಲ್ಲಿ ಚಿನ್ಮಯ್ ಅಂತ್ಯಕ್ರಿಯೆ

ತಾಯಿಯಿಂದಲೇ ಹತನಾದ ನಾಲ್ಕು ವರ್ಷದ ಬಾಲಕ ಚಿನ್ಮಯ್ ಅಂತ್ಯಕ್ರಿಯೆ ಇಲ್ಲಿನ ಹರಿಶ್ಚಂದ್ರ ಘಾಟ್‌ನಲ್ಲಿ ಇಂದು(ಬುಧವಾರ) ನಡೆಯಿತು.

ಅಂತಿಮ ವಿಧಿ ವಿಧಾನವನ್ನು ತಂದೆ ವೆಂಕಟರಮಣ್‌ ನೆರವೇರಿಸಿದ್ದು, ಅಂತ್ಯಕ್ರಿಯೆ ವೇಳೆ ಕುಟುಂಬದ ಸದಸ್ಯರು ಹಾಜರಿದ್ದರು. ಮಗನ ಮೃತದೇಹ ಮಣ್ಣು ಮಾಡುವ ವೇಳೆ ತಂದೆ ವೆಂಕಟರಮಣ್‌ ತೀವ್ರ ಭಾವುಕರಾದರು. ಕುಟುಂಬ ಸದಸ್ಯರು ಅವರನ್ನು ಸಮಾಧಾನ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT