ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಲ್‌ ಕೃಷ್ಣ ಅಡ್ವಾಣಿ: ಪ್ರಧಾನಿಗಿರಿ ದಕ್ಕದ ಮುತ್ಸದ್ಧಿಗೆ ‘ಭಾರತರತ್ನ’ ಗರಿ

Published 3 ಫೆಬ್ರುವರಿ 2024, 15:45 IST
Last Updated 3 ಫೆಬ್ರುವರಿ 2024, 15:45 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಅತ್ಯುನ್ನತ ‘ಭಾರತರತ್ನ’ ಪ್ರಶಸ್ತಿ ಪುರಸ್ಕೃತರ ಪಟ್ಟಿಗೆ ಹೊಸ ಸೇರ್ಪಡೆ ಲಾಲ್‌ ಕೃಷ್ಣ ಅಡ್ವಾಣಿ. ಸ್ವಾತಂತ್ರ್ಯಾ ನಂತರದ ದೇಶದ ರಾಜಕಾರಣ ಮತ್ತು ಅಧಿಕಾರದ ಹೊಸ್ತಿಲವರೆಗೆ ಬಿಜೆಪಿಯ ಏರುಹಾದಿಯಲ್ಲಿ ಉಲ್ಲೇಖಿಸಬೇಕಾದ ಪ್ರಮುಖ ಹೆಸರು.

ಈಗ 96 ವರ್ಷ ವಯಸ್ಸಿನ ಎಲ್.ಕೆ.ಅಡ್ವಾಣಿ ಅವರು 90ರ ದಶಕದಲ್ಲಿ ಹಲವರ ಪಾಲಿನ ‘ಹಿಂದೂ ಹೃದಯ ಸಾಮ್ರಾಟ’ ಆಗಿದ್ದವರು. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ದೊಡ್ಡ ಧ್ವನಿ ಮೊಳಗಿಸಿ, ಭದ್ರ ತಳಹದಿಯನ್ನು ಒದಗಿಸಿದ ರಥಯಾತ್ರೆಯ ಸಾರಥಿ.

ಪ್ರಸ್ತುತ, ಅಯೋಧ್ಯೆಯ ರಾಮಮಂದಿರದಲ್ಲಿ ಬಾಲರಾಮನ ಪ್ರತಿಷ್ಠಾಪನೆಯಾದ ಕೆಲವೇ ದಿನಗಳಲ್ಲಿ ಅತ್ಯುನ್ನತ ಪ್ರಶಸ್ತಿಗೆ ಅಡ್ವಾಣಿ ಅವರ ಹೆಸರು ಘೋಷಣೆಯಾಗಿದೆ. ಇದು ಕಾಕತಾಳೀಯವೇನೂ ಅಲ್ಲ. ಅಡ್ವಾಣಿ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಸಚಿವ ಸಂಪುಟದಲ್ಲಿ ಉಪಪ್ರಧಾನಿ ಆಗಿದ್ದವರು.

ಪಕ್ಷದಲ್ಲಿ ಪ್ರಭಾವಿ ಮತ್ತು ಉನ್ನತ ನಾಯಕರಾಗಿದ್ದರೂ ಪ್ರಧಾನಿಯಾಗುವ ಗುರಿ ಈಡೇರದ ಹಿರಿಯ ಮುತ್ಸದ್ಧಿಗೆ, ಈಗ ‘ಭಾರತರತ್ನ’ ಪ್ರಶಸ್ತಿಯ ಗರಿ ದಕ್ಕಿದೆ. ರಾಜಕೀಯ ನೇಪಥ್ಯಕ್ಕೆ ಸರಿದಿದ್ದ ಲಾಲ್‌ ಕೃಷ್ಣ ಅಡ್ವಾಣಿ ಈ ಮೂಲಕ ಮತ್ತೆ ಸುದ್ದಿಯ ಕೇಂದ್ರವಾಗಿದ್ದಾರೆ. ಈ ಪ್ರಶಸ್ತಿಗೆ ಪಾತ್ರರಾದ 50ನೇ ಮಹನೀಯರು ಎಂಬ ಹಿರಿಮೆಗೆ ಅವರು ಪಾತ್ರರಾಗಿದ್ದಾರೆ.

ರಥಯಾತ್ರೆ ಸೇರಿದಂತೆ ಹೋರಾಟದ ಛಲದಿಂದಾಗಿ ಪಕ್ಷದ ವಲಯದಲ್ಲಿ ಹಿಂದುತ್ವದ ಬದ್ಧ ಪ್ರತಿಪಾದಕ, ‘ಲೋಹ ಪುರುಷ’ ಎಂದೇ ಗುರುತಿಸಿಕೊಂಡಿದ್ದ ಅಡ್ವಾಣಿ ನವೆಂಬರ್ 8, 1927ರಂದು ಅವಿಭಜಿತ ಭಾರತದ ಕರಾಚಿಯಲ್ಲಿ (ಈಗಿನ ಪಾಕಿಸ್ತಾನ) ಜನಿಸಿದರು.

ಬಿಜೆಪಿಯ ಸ್ಥಾಪಕ ಸದಸ್ಯ

ಕರಾಚಿಯ ಸೇಂಟ್ ಪ್ಯಾಟ್ರಿಕ್ ಪ್ರೌಢಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಮುಂದೆ ಸಿಂಧ್‌ ಪ್ರಾಂತ್ಯದ ಹೈದರಾಬಾದ್‌ನ ಡಿ.ಜಿ.ನ್ಯಾಷನಲ್ ಕಾಲೇಜಿನಲ್ಲಿ ಪದವಿ, ಬಳಿಕ ಬಾಂಬೆಯ (ಈಗಿನ ಮುಂಬೈ) ಸರ್ಕಾರಿ ಕಾಲೇಜಿನಲ್ಲಿ ಕಾನೂನು ಶಿಕ್ಷಣ ಪಡೆದರು. 1947ರಲ್ಲಿ ಆರ್‌ಎಸ್‌ಎಸ್‌ ಸೇರಿದ ಅವರು, ರಾಜಸ್ಥಾನದಲ್ಲಿ ಸಂಘದ ಉಸ್ತುವಾರಿ ವಹಿಸಿಕೊಂಡರು.

ಅಡ್ವಾಣಿ ಬಿಜೆಪಿಯ ಸ್ಥಾಪಕ ಸದಸ್ಯರೂ ಹೌದು. ಶ್ಯಾಂ ಪ್ರಸಾದ್ ಮುಖರ್ಜಿ ಅವರು 1951ರಲ್ಲಿ ಆರ್‌ಎಸ್‌ಎಸ್‌ ರಾಜಕೀಯ ಘಟಕವಾಗಿ ಭಾರತೀಯ ಜನಸಂಘ ಸ್ಥಾಪಿಸಿದಾಗ ಅಡ್ವಾಣಿ ಅದರ ರಾಜಸ್ಥಾನ ಘಟಕದ ಕಾರ್ಯದರ್ಶಿಯಾದರು. 1970ರಲ್ಲಿ ದೆಹಲಿಗೆ ಸ್ಥಳಾಂತರಗೊಂಡರು.

ರಾಮಮಂದಿರ ನಿರ್ಮಾಣಕ್ಕೆ ಬುನಾದಿ ಹಾಕಿದ ರಥಯಾತ್ರೆಗೂ ಮೊದಲು ದೆಹಲಿಯಲ್ಲಿದ್ದು, ಪಕ್ಷವನ್ನು ಬಲಪಡಿಸುವಲ್ಲಿ ಕೊಡುಗೆ ನೀಡಿದರು. ಮುಂದೆ ರಥಯಾತ್ರೆ ಕೈಗೊಂಡಾಗ, ಅದರ ಸಂಘಟನೆಯ ಮುಂಚೂಣಿಯಲ್ಲಿ ಇದ್ದವರು ಈಗಿನ ಪ್ರಧಾನಿ ನರೇಂದ್ರ ಮೋದಿ. 

ರಾಮಮಂದಿರ ಹೋರಾಟದ ಅಸ್ತ್ರ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂಬುದನ್ನು 1989ರ ಬಳಿಕ ಹೋರಾಟದ ಅಸ್ತ್ರವಾಗಿಸಿಕೊಂಡರು. ಲೋಕಸಭೆಯಲ್ಲಿ ಆಗ ಬಿಜೆಪಿ ಸಂಖ್ಯೆ ಕೇವಲ ಎರಡು. 1990ರಲ್ಲಿ ಕೈಗೊಂಡ ರಾಮರಥ ಯಾತ್ರೆಯು ಪಕ್ಷದ ಬೇರುಗಳು ಆಳ–ಅಗಲ ವಿಸ್ತರಿಸಲು ನೆರವಾಯಿತು.

ರಥಯಾತ್ರೆ ಸಮಾಪ್ತಿಗೊಳ್ಳಲು ಅಯೋಧ್ಯೆ ತಲುಪಿದಾಗ, 1992ರಲ್ಲಿ ಬಾಬರಿ ಮಸೀದಿ ನೆಲಸಮಗೊಳಿಸಿದ ಘಟನೆಯೂ ನಡೆಯಿತು. ‘ಅದು ನನ್ನ ಜೀವನದ ನೋವಿನ ದಿನ’ ಎಂದು ಅಡ್ವಾಣಿ ಮುಂದೊಮ್ಮೆ ಹೇಳಿಕೊಂಡಿದ್ದರು. 

ಹಿಂದೆ, 1995ರಲ್ಲಿ ಇಡೀ ಪಕ್ಷ ತಮಗೆ ಬೆಂಬಲವಾಗಿದ್ದರೂ, ಪಕ್ಷದ ಪ್ರಧಾನಿ ಸ್ಥಾನದ ಅಭ್ಯರ್ಥಿಯಾಗಿ ವಾಜಪೇಯಿ ಹೆಸರನ್ನು ಅಡ್ವಾಣಿ ಅವರೇ ಉಲ್ಲೇಖಿಸಿದ್ದರು. ಅವರ ಈ ನಡೆ ‘ಪಕ್ಷವೇ ಮೊದಲು’ ಎಂಬ ನಿರ್ಧಾರಕ್ಕೆ ಪೂರಕವಾಗಿತ್ತು ಎಂದು ನಾಯಕರೊಬ್ಬರು ಸ್ಮರಿಸಿದರು. 

ಜಿನ್ನಾ ಹೊಗಳಿದ್ದೇ ಹಳಸಿತು ಆರ್‌ಎಸ್‌ಎಸ್‌ ಬಾಂಧವ್ಯ

2005ರಲ್ಲಿ ಹುಟ್ಟೂರೂ ಆಗಿದ್ದ ಪಾಕಿಸ್ತಾನದ ಕರಾಚಿಗೆ ಭೇಟಿ ನೀಡಿದ್ದರು. ಪಾಕಿಸ್ತಾನದ ಸ್ಥಾಪಕ ಎಂದು ಗುರುತಿಸಲಾಗುವ ಎಂ.ಎ.ಜಿನ್ನಾ ಅವರ ಬಗೆಗೆ ಆಗ ಮೆಚ್ಚುಗೆಯ ಮಾತನಾಡಿದ್ದರು. ಅವರನ್ನು ಹಿಂದೂ–ಮುಸ್ಲಿಂ ಏಕತೆಯ ರಾಯಭಾರಿ ಎಂದಿದ್ದರು. ಈ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಿಂದುತ್ವದ ಪ್ರತಿಪಾದಕ ಎಂಬ ಅವರ ಹಿರಿಮೆಗೆ ಧಕ್ಕೆ ತಂದಿತು. ಆರ್‌ಎಸ್ಎಸ್‌ ಬಾಂಧವ್ಯ ಹಳಸಲೂ ಕಾರಣವಾಯಿತು.

2009ರ ಚುನಾವಣೆಯಲ್ಲಿ ಬಿಜೆಪಿಯ ಪ್ರಧಾನಿ ಸ್ಥಾನದ ಅಭ್ಯರ್ಥಿಯಾಗಿದ್ದರೂ ಅದಕ್ಕೆ ಆರ್‌ಎಸ್‌ಎಸ್‌ ಬೆಂಬಲ ಇರಲಿಲ್ಲ. ಮುಂದೆ ಆರ್‌ಎಸ್‌ಎಸ್‌ 2014ರ ಚುನಾವಣೆ ವೇಳೆಗೆ ಮೋದಿಯವರನ್ನೇ ಮುಂಚೂಣಿಗೆ ತರುವ ಮೂಲಕ ಅಡ್ವಾಣಿ ಇಳಿಹಾದಿ ಆರಂಭವಾಯಿತು.

ಅಗ ಮೋದಿ ವಿರುದ್ಧ ಬಹಿರಂಗವಾಗಿಯೇ ಅಡ್ವಾಣಿ ಅಸಮಾಧಾನ ಹೊರಹಾಕಿದ್ದರು. ಆದರೆ, ಆ ವೇಳೆಗೆ ಪಕ್ಷ ಬಹುತೇಕ ಮೋದಿ ಪರವಾಗಿ ಹೊರಳಿತ್ತು. ಅಡ್ವಾಣಿ ಪ್ರಾಬಲ್ಯ ಕುಗ್ಗಿತ್ತು. ಅದು ರಾಜಕೀಯವಾಗಿ ಮೋದಿಯವರ ಏರುಹಾದಿ ಮತ್ತು ಅಡ್ವಾಣಿಯವರ ಇಳಿಹಾದಿಯ ಅವಧಿ. 

ಹಿಂದೆ ಈ ಇಬ್ಬರದೂ ಗುರು–ಶಿಷ್ಯನ ಬಾಂಧವ್ಯ. ಆದರೆ, 2014ರ ನಂತರ ಮೋದಿ ಮತ್ತು ಅಡ್ವಾಣಿ ಮುಖಾಮುಖಿಯಾದುದು ಕಡಿಮೆ. ಮಾತುಕತೆ ನಡೆದದ್ದೂ ಕಡಿಮೆ. ಈಗ ಪ್ರಧಾನಿ, ತಮ್ಮ ಎರಡನೇ ಅವಧಿಯ ಅಂತ್ಯದಲ್ಲಿ ‘ಭಾರತರತ್ನ’ ಪ್ರಶಸ್ತಿ ಘೋಷಿಸಿ ವ್ಯಕ್ತಿತ್ವ ಕೊಂಡಾಡಿದ್ದಾರೆ.

ಅಡ್ವಾಣಿ ಅವರಿಗೆ ಭಾರತರತ್ನ ಪ್ರಶಸ್ತಿ ಸಂದಿರುವುದು ನನಗೆ ಖುಷಿ ನೀಡಿದೆ. ರಾಷ್ಟ್ರದ ಅಭಿವೃದ್ಧಿಗೆ ಅವರು ಅಗಣಿತ ಕೊಡುಗೆ ನೀಡಿದ್ದಾರೆ. ನನ್ನ, ಅವರ ರಾಜಕೀಯ ಸಿದ್ಧಾಂತಗಳು ಭಿನ್ನವಾಗಿದ್ದವು. ಆದರೆ, ಅವರೊಬ್ಬ ಉತ್ತಮ ಸಂಸದೀಯ ಪಟುವಾಗಿದ್ದರು.
- ಶರದ್‌ ಪವಾರ್, ಅಧ್ಯಕ್ಷ, ರಾಷ್ಟ್ರೀಯವಾದಿ ಕಾಂಗ್ರೆಸ್‌ ಪಕ್ಷ (ಎನ್‌ಸಿಪಿ)
ರಾಷ್ಟ್ರ ನಿರ್ಮಾಣದಲ್ಲಿ ಅಡ್ವಾಣಿ ಅವರ ಕೊಡುಗೆ ಮರೆಯಲಾಗದ್ದು ಹಾಗೂ ಉತ್ತೇಜನಕಾರಿ ಯಾದುದು. ಅಟಲ್‌ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಅಡ್ವಾಣಿಯವರ ಜೊತೆಗೂಡಿ ಕೆಲಸ ಮಾಡಿದ್ದೇನೆ. ದೇಶದ ಗೌರವಾನ್ವಿತ ಮುತ್ಸದ್ಧಿಗಳಲ್ಲಿ ಅವರೂ ಒಬ್ಬರು.
-ನಿತೀಶ್ ಕುಮಾರ್, ಮುಖ್ಯಮಂತ್ರಿ, ಬಿಹಾರ
ಉಪ ಪ್ರಧಾನಿ ಸೇರಿದಂತೆ ವಿವಿಧ ಸಾಂವಿಧಾನಿಕ ಹೊಣೆಗಾರಿಕೆ ನಿಭಾಯಿಸಿರುವ ಎಲ್‌.ಕೆ.ಅಡ್ವಾಣಿ ಅವರು ದೇಶದ ಭದ್ರತೆ, ಏಕತೆ, ಸೌಹಾರ್ದಕ್ಕೆ ಸಾಟಿಯಿಲ್ಲದ ಸೇವೆ ಸಲ್ಲಿಸಿದ್ದಾರೆ. ಈ ಪ್ರಶಸ್ತಿ ಅವರಿಗಷ್ಟೇ ಅಲ್ಲ, ದೇಶದ ಕೋಟ್ಯಂತರ ಜನರಿಗೆ ಸಂದ ಗೌರವವಾಗಿದೆ.
-ಅಮಿತ್‌ ಶಾ, ಕೇಂದ್ರ ಗೃಹ ಸಚಿವ
ಎಲ್‌.ಕೆ.ಅಡ್ವಾಣಿ ಅವರು 2002ರಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿ ಮೋದಿ ಅವರ ಕುರ್ಚಿಯನ್ನು ಉಳಿಸಿದ್ದರು. ಮೋದಿ ಒಬ್ಬ ‘ಅತ್ಯುತ್ತಮ ಕಾರ್ಯಕ್ರಮ ಸಂಘಟಕ’ ಎಂದೂ ಅವರು ಆಗ ಬಣ್ಣಿಸಿದ್ದರು.
- ಜೈರಾಂ ರಮೇಶ್, ಕಾಂಗ್ರೆಸ್‌ ಮುಖಂಡ
ಹಲವು ವರ್ಷ ಕಾಲ, ಹಲವಾರು ರೀತಿಯಲ್ಲಿ ಅಡ್ವಾಣಿಯವರು ಭಾರತದ ವಿಕಸನಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಸರ್ಕಾರ ಮತ್ತು ಸಾರ್ವಜನಿಕ ಬದುಕಿನಲ್ಲಿನ ಅವರ ನಾಯಕತ್ವವು ಅನುಕರಣೀಯ.
-ಎಸ್‌.ಜೈಶಂಕರ್, ವಿದೇಶಾಂಗ ವ್ಯವಹಾರಗಳ ಸಚಿವ
ಕೇಂದ್ರದಲ್ಲಿ ತನ್ನ ಅವಧಿ ಅಂತ್ಯವಾಗುವ ಮೊದಲು ಬಿಜೆಪಿ ಈ ಪ್ರಶಸ್ತಿಗೆ ಅಡ್ವಾಣಿಯವರನ್ನು ಆಯ್ಕೆ ಮಾಡಿದೆ. ತನ್ನ ಮತಬ್ಯಾಂಕ್‌ ಛಿದ್ರಗೊಳ್ಳಬಾರದು ಎಂಬುದೇ ಇದರ ಹಿಂದಿನ ಉದ್ದೇಶ. ಇದನ್ನು ಅವರ ಮೇಲಿನ ಗೌರವದಿಂದ ನೀಡಿದ್ದಲ್ಲ. ಭಾರತರತ್ನ ಪ್ರಶಸ್ತಿಗೆ ತನ್ನದೇ ಗೌರವವಿದೆ. ಆದರೆ, ಅದನ್ನು ಪಕ್ಷದ ಮತಗಳನ್ನು ಭದ್ರಪಡಿಸಿಕೊಳ್ಳಲೆಂದೇ ಈಗ ನೀಡಲಾಗಿದೆ,
-ಅಖಿಲೇಶ್ ಯಾದವ್, ಸಮಾಜವಾದಿ ಪಕ್ಷದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT